ಮುಂಬೈ: ಮಹಿಳೆಯರು ಬಟ್ಟೆ ಧರಿಸದಿದ್ದರೂ ಅಂದವಾಗಿ ಕಾಣುತ್ತಾರೆಂದು ಯೋಗ ಗುರು ಬಾಬಾ ರಾಮದೇವ್ ನೀಡಿದ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿ ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗ ನೋಟಿಸ್ ಜಾರಿ ಮಾಡಿದೆ.
ಶುಕ್ರವಾರ(ನವೆಂಬರ್ 25) ಥಾಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬಾಬಾ ರಾಮದೇವ್ ”ಮಹಿಳೆಯರು ಸೀರೆ ಉಟ್ಟರೆ ಸುಂದರ, ಸಲ್ವಾರ್ ಕಮೀಜ್ ಧರಿಸಿದರೆ ಅತಿ ಸುಂದರ, ಏನೂ ಧರಿಸದಿದ್ದರೆ ಇನ್ನೂ ಚೆಂದ ಕಾಣಿಸ್ತಾರೆ,” ಎಂದು ಹೇಳುವ ಮೂಲಕ ಯೋಗ ಗುರು ಬಾಬಾ ರಾಮದೇವ್ ವಿವಾದ ಹುಟ್ಟುಹಾಕಿದ್ದಾರೆ.
ಮಹಿಳೆಯರ ಕುರಿತಾಗಿನ ಈ ವಿವಾದಿತ ಹೇಳಿಕೆಗೆ ಸ್ಪಷ್ಟನೆ ನೀಡುವಂತೆ ಆಯೋಗ ಕೇಳಿದ್ದು, ಉತ್ತರಿಸಲು ಮೂರು ದಿನಗಳ ಕಾಲಾವಕಾಶ ನೀಡಿದೆ.
ರಾಮದೇವ್ ಮಾತನಾಡಿರುವ ವಿಡಿಯೊ ಸದ್ಯ ಎಲ್ಲೆಡೆ ಹರಿದಾಡುತ್ತಿದ್ದು, ಈ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಪತ್ನಿ ಅಮೃತಾ ಮತ್ತು ಮುಖ್ಯಮಂತ್ರಿ ಏಕನಾಥ ಶಿಂದೆ ಪುತ್ರ ಹಾಗೂ ಸಂಸದ ಶ್ರೀಕಾಂತ್ ಶಿಂದೆ ಕೂಡ ಹಾಜರಿದ್ದರು.
ರಾಮದೇವ್ ಆಡಿದ ಮಾತಿನ ವಿಡಿಯೊ ಸಾಮಾಜಿಕ ಜಾಲ ತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಮಹಿಳಾ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ ದಿಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್, ”ಮಹಿಳೆಯರ ಬಗ್ಗೆ ಹಗುರ ಹೇಳಿಕೆ ನೀಡಿರುವ ರಾಮದೇವ್ ಕೂಡಲೇ ಕ್ಷಮೆ ಕೇಳಬೇಕು” ಎಂದು ಆಗ್ರಹಿಸಿದ್ದಾರೆ.
ವೇದಿಕೆಯಲ್ಲಿದ್ದ ಅಮೃತಾ ಫಡಣವೀಸ್ ಏಕೆ ಹೇಳಿಕೆಯನ್ನು ವಿರೋಧಿಸಲಿಲ್ಲ ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್ ಪ್ರಶ್ನಿಸಿದ್ದಾರೆ.
2011ರಲ್ಲಿ ರಾಮ್‌ದೇವ್ ಅವರನ್ನು ಬಂಧಿಸಲು ಪೊಲೀಸರು ತೆರಳಿದ್ದಾಗ, ಅವರಿಂದ ತಪ್ಪಿಸಿಕೊಳ್ಳುವ ನಾಟಕೀಯ ಪ್ರಯತ್ನದಲ್ಲಿ ರಾಮ್‌ದೇವ್ ಅವರು ಮಹಿಳೆಯರಂತೆ ಸಲ್ವಾರ್ ಕಮೀಜ್ ಧರಿಸಿದ್ದ ಘಟನೆಯನ್ನು ಉಲ್ಲೇಖಿಸಿ ಟಿಎಂಸಿ ಸಂಸದೆ ಮೋಹಿತ್ರಾ, ಪತಂಜಲಿ ಬಾಬಾ ಏಕೆ ರಾಮಲೀಲಾ ಮೈದಾನದಿಂದ ಮಹಿಳೆಯ ಬಟ್ಟೆಯಲ್ಲಿ ಓಡಿಹೋಗಿದ್ದರು ಎಂಬುದು ನನಗೆ ಈಗ ಗೊತ್ತಾಗಿದೆ. ಅವರು ಸೀರೆ, ಸಲ್ವಾರ್ ಮತ್ತು… ಇಷ್ಟಪಡುತ್ತಾರೆ’ ಎಂದು ವ್ಯಂಗ್ಯವಾಡಿದ್ದಾರೆ.