ಮೈಸೂರು: ಯೋಚನೇನಾದ್ರು ಮಾಡ್ತೀದ್ದೀರೇನ್ರಿ ನೀವು.. ಯಾವ್ ಇವ್ ಪ್ರತಾಪ್ ಸಿಂಹ ಇಂತವೆಲ್ಲಾ..? ಛೀ..ಏನ್ ಬಾಯಿಗೆ ಬಂದಂಗೆ ಮಾತಡೋದೇ ನೀವು..ಅಲ್ಲ ದಯವಿಟ್ಟು ಅ ತರಹದೆಲ್ಲಾ ನಿಲ್ಸಿ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಬಗ್ಗೆ ಏಕವಚನದಲ್ಲೇ ಬಿಜೆಪಿ ಪರಿಷತ್ ಸದಸ್ಯ ಎಚ್ . ವಿಶ್ವನಾಥ್ ಟೀಕಾ ಪ್ರಹಾರ ನಡೆಸಿದ್ದಾರೆ .
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ವಕ್ತಾರರು ಬಾಯಿಗೆ ಬಂದ ರೀತಿ ಮಾತನಾಡುತ್ತಿದ್ದಾರೆ. ನಾಯಕರು ಇದಕ್ಕೆ ಕಡಿವಾಣ ಹಾಕಬೇಕು. ಈ ಬಗ್ಗೆ ಆರ್ ಎಸ್ಎಸ್ ನಾಯಕರು ಪತ್ರಿಕಾಗೋಷ್ಠಿಯಲ್ಲಿ ಹೇಳಬೇಕು. ಎಲ್ಲಾ ಮಸೀದಿಗಳಲ್ಲೂ ಶಿವಲಿಂಗಗಳಿರುವುದಿಲ್ಲ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಮೋಹನ್ ಭಾಗವತ್ ಹೇಳಿಕೆ ಸ್ವಾಗತಾರ್ಹ. ಮಸೀದಿಗಳಿಗೆ ಸಂಬಂಧಿಸಿದಂತೆ ಇರುವ ವಿವಾದಗಳನ್ನು ನ್ಯಾಯಾಲಯದ ಮೂಲಕ ಬಗೆಹರಿಸಿಕೊಳ್ಳೋಣ. ಮೋಹನ್ ಭಾಗವತ್ ಅವರ ಹೇಳಿಕೆಯ ಹಿಂದೆ ಒಳ್ಳೆಯ ಉದ್ದೇಶವಿದೆ. ಮೋಹನ್ ಭಾಗವತ್ ಹೇಳಿಕೆಯನ್ನು ಕಟ್ಟರ್ ಆರ್‌ಎಸ್‌ಎಸ್ ವಾದಿಗಳು ಏಕೆ ಸ್ವಾಗತಿಸುತ್ತಿಲ್ಲ? ಸಂಸದರಾದ ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ ಏಕೆ ತುಟಿ ಬಿಚ್ಚುತ್ತಿಲ್ಲ ? ನೀವು ಮೋಹನ್ ಭಾಗವತ್ ಹೇಳಿಕೆಯನ್ನು ವಿರೋಧಿಸುತ್ತೀರಾ? ಭಾಗವತ್ ಕುಣಿಯುವುದನ್ನು ನಿಲ್ಲಿಸಿ ಎಂದರೂ ನೀವು ಏಕೆ ಕುಣಿಯುತ್ತಿದೀರಾ? ಬೆಂಕಿ ಹಚ್ಚುವುದನ್ನು ನಿಲ್ಲಿಸಿ ಎಂದು ಮೋಹನ್ ಭಾಗವತ್ ಹೇಳಿದ್ದಾರೆ. ಆದರೂ ನೀವು ಬೆಂಕಿ ಹಚ್ಚುವುದನ್ನು ನಿಲ್ಲಿಸುತ್ತಿಲ್ಲ. ಸದ್ಯಕ್ಕೆ ರಾಜ್ಯದ ಪರಿಸ್ಥಿತಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗಿದೆ. ಈ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಇಲ್ಲಿ ಆಡಳಿತದಲ್ಲಿರುವುದು ಬಿಜೆಪಿ ಸರ್ಕಾರವೇ ಹೊರತು, ಆರ್‌ಎಸ್‌ಎಸ್ ಸರ್ಕಾರವಲ್ಲ. ನಾವು 17 ಮಂದಿ ಬಿಜೆಪಿ ಸರ್ಕಾರ ಬೆಂಬಲಿಸಿ ಬಂದವರು. ನಾವು ಆರ್‌ಎಸ್‌ಎಸ್ ಬೆಂಬಲಿಸಿ ಬಂದವರಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.