ಬೆಂಗಳೂರು: ಕೆಲವು ದಿನಗಳ ಹಿಂದೆಯಷ್ಟೇ ದೇಶದಲ್ಲಿ ‘ಡಾನಾ’ ಚಂಡಮಾರುತ ಅಬ್ಬರಿಸಿತ್ತು. ಇದರ ಬೆನ್ನಲ್ಲೆ ಇದೀಗ ಮತ್ತೊಂದು ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಚಂಡಮಾರುತದಿಂದ ಕರ್ನಾಟಕ ತಮಿಳುನಾಡು ಆಂಧ್ರಪ್ರದೇಶ ಹಾಗೂ ಒಡಿಶಾ ರಾಜ್ಯದ ಜನರಲ್ಲಿ ಆತಂಕ ಶುರುವಾಗಿದೆ. ಹವಾಮಾನ ಇಲಾಖೆ ಕರ್ನಾಟಕಕ್ಕೆ ಮುಂದಿನ ನಾಲ್ಕು ದಿನ ಯಾವ ಮುನ್ಸೂಚನೆ ಕೊಟ್ಟಿದೆ.
ಬೆಂಗಳೂರಿನಲ್ಲಿ ಆಗಾಗ ಮೋಡಕವಿದ ವಾತಾವರಣ ಕಂಡು ಬಂದರೂ ಸಹಿತ ದಿನವಿಡೀ ಬಿಸಿಲಿನ ವಾತಾವರಣ ಕಂಡು ಬರಲಿದೆ. ಒಂದರಡು ಕಡೆಗಳಲ್ಲಿ ತುಂತುರು ಮಳೆ ಆಗಬಹುದು ಎಂದು ಹೇಳಲಾಗಿದೆ.
ನವೆಂಬರ್ 7ರವರೆಗೆ ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಮತ್ತು ದಕ್ಷಿಣ ಒಳನಾಡಿನ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಇದರ ಹೊರತು ಎಲ್ಲಿಯೂ ಗಂಭೀರ ಸ್ವರೂಪದ ಲಕ್ಷಣಗಳು ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಎರಡು ಮೂರು ದಿನಗಳ ಹಿಂದಷ್ಟೇ ತಡರಾತ್ರಿ ಭರ್ಜರಿ ಮಳೆ ಸುರಿದಿದೆ. ಇದೀಗ ಮುಂದಿನ ನವೆಂಬರ್ 7ರವರೆಗೆ ಯಾವುದೇ ಮಳೆ ಅಬ್ಬರ, ಆರ್ಭಟ ಕಂಡು ಬರುವುದಿಲ್ಲ ಎಂದು ಹೇಳಲಾಗಿದೆ.
ಬದಲಾಗಿ ಉತ್ತರ ಒಳನಾಡಿನ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಹಾವೇರಿ, ಗದಗ, ಕೊಪ್ಪಳ, ರಾಯಚೂರು, ಯಾದಿಗಿರಿ, ಬೀದರ್ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಬಹುತೇಕ ಎಲ್ಲ ಪ್ರದೇಶದಲ್ಲಿ ಒಣ ಹವೆ, ಶುಷ್ಕ ವಾತಾವರಣ ಮುಂದುವರಿಯಲಿದೆ ಎಂದು ಮುನ್ಸೂಚನೆ ನೀಡಿದೆ.
ಸೈಕ್ಲೋನ್ ಆಗಿ ಪರಿವರ್ತನೆಗೊಂಡರೆ ಮತ್ತೆ ಪ್ರವಾಹ ಸಾಧ್ಯತೆ!
ಈ ಚಂಡಮಾರುತ ಪರಿಚಲನೆಯು ತೀವ್ರಗೊಂಡ ಸ್ಪಷ್ಟ ಸೈಕ್ಲೋನ್ ಆಗಿ ಪರಿವರ್ತನೆಗೊಂಡರೆ ಮತ್ತೆ ಕೇರಳ, ತಮಿಳುನಾಡು, ಆಂಧ್ರ ಕರಾವಳಿ ಭಾಗ ಹಾಗೂ ಕರ್ನಾಟಕದ ದಕ್ಷಿಣ ಭಾಗದಲ್ಲಿ ಅತೀವ ಮಳೆ, ಪ್ರವಾಹ ಸೃಷ್ಟಿಯಾಗುವ ಸಾಧ್ಯತೆ ಇದೆ. ಈ ಹವಾಮಾನ ವೈಪರಿತ್ಯದ ಬಗ್ಗೆ ಈಗಲೇ ಏನು ಹೇಳಲು ಸಾಧ್ಯವಿಲ್ಲ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.