ಒಕ್ಕೂಟ ಸರ್ಕಾರ ಪಿಎಂ ಪೋಷಣ್ ಯೋಜನೆಯಡಿ ಶಾಲಾ ಮಕ್ಕಳಿಗೆ ಮತ್ತಷ್ಟು ಪೌಷ್ಟಿಕಾಂಶ ಕಲ್ಪಿಸಿಕೊಡುವ ಉದ್ದೇಶದಿಂದ ಅಡುಗೆಗೆ ಡಬಲ್ ಸಾಲ್ಟ್ ಮತ್ತು ಜೇನುತುಪ್ಪವನ್ನು ಬಳಸುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿತ್ತು. ಆದರೆ, ಲಭ್ಯತೆಯ ಕೊರತೆಯನ್ನು ಉಲ್ಲೇಖಿಸಿರುವ ರಾಜ್ಯ ಸರ್ಕಾರ ಮಧ್ಯಾಹ್ನದ ಬಿಸಿಯೂಟದಲ್ಲಿ‘ಡಬಲ್ ಸಾಲ್ಟ್’ ಮತ್ತು ‘ಜೇನುತುಪ್ಪ ನೀಡಲು’ ಸಾಧ್ಯವಿಲ್ಲ ಎಂದು ಹೇಳಿದೆ.
ಉಪ್ಪು(ಡಬಲ್ ಸಾಲ್ಟ್) ರಾಜ್ಯದಲ್ಲಿ ಸಿಗುವುದೇ ಇಲ್ಲ ಮತ್ತು ಜೇನುತುಪ್ಪವಿದ್ದರೂ ಶಾಲಾ ಮಕ್ಕಳಿಗೆ ನೀಡುವಷ್ಟು ಅಗಾಧ ಪ್ರಮಾಣದಲ್ಲಿ ದೊರೆಯುವುದಿಲ್ಲ ಎಂದು ರಾಜ್ಯ ಸರ್ಕಾರ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದೆ ಎಂದು ವರದಿಯಾಗಿದೆ.
ಏನಿದು ಡಬಲ್ ಸಾಲ್ಟ್?
ಸೋಡಿಯಂ, ಪೊಟ್ಯಾಷಿಯಂ, ಅಮೋನಿಯ ಮತ್ತಿತರ ಲವಣಾಂಶಗಳು ಜಾಸ್ತಿ ಹೊಂದಿರುವ, ಅಂದರೆ ಒಂದಕ್ಕಿಂತ ಹೆಚ್ಚು ಲವಣಗಳಿರುವ ಉಪ್ಪನ್ನು ಡಬಲ್ ಸಾಲ್ಟ್ ಎಂದು ಹೇಳಲಾಗುತ್ತದೆ. ಪ್ರಸ್ತುತ ಒಡಿಶಾ ರಾಜ್ಯದಲ್ಲಿ ಮಾತ್ರ ಡಬಲ್ ಸಾಲ್ಟ್ ಬಳಕೆಯಲ್ಲಿದೆ ಎಂದು ತಿಳಿದು ಬಂದಿದೆ. ಜೊತೆಗೆ ಜೇನುತುಪ್ಪದಲ್ಲಿ ಹೆಚ್ಚಿನ ಪ್ರಮಾಣ ಪೌಷ್ಟಿಕಾಂಶ ಇರುವುದರಿಂದ ಅದನ್ನು ನೀಡಿ ಎಂದು ಕೇಂದ್ರ ಸರ್ಕಾರ ತಿಳಿಸಿತ್ತು, ಆದರೆ ರಾಜ್ಯ ಸರ್ಕಾರವು ಅಷ್ಟೊಂದು ಅಗಾಧ ಪ್ರಮಾಣದಲ್ಲಿ ದೊರೆಯುವುದಿಲ್ಲ ಎಂದು ಹೇಳಿಕೊಂಡಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಮಣಿಪುರ ಹಿಂಸಾಚಾರ:ತನಿಖೆ ಮೇಲ್ವಿಚಾರಣೆಗೆ ತ್ರಿಸದಸ್ಯ ಸಮಿತಿ ರಚಿಸಿದ ಸುಪ್ರೀಂ ಕೋರ್ಟ್
ಈ ಬಗ್ಗೆ ಜನಶಕ್ತಿ ಮೀಡಿಯಾ ಜೊತೆಗೆ ಮಾತನಾಡಿದ ಆಹಾರ ತಜ್ಞೆ ಪಲ್ಲವಿ ಇಡೂರು ಅವರು, “ಮಕ್ಕಳಿಗೆ ಆಹಾರ ನೀಡುವಾಗ ಯಾವುದೆ ಅತಿಯಾದ ಕಂಟೆಂಟ್‌ನ ಅವಶ್ಯಕತೆ ಇರುವುದಿಲ್ಲ. ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಶುದ್ಧ ಜೇನು ತುಪ್ಪ ಸಿಗುವುದು ಕೂಡಾ ಕಷ್ಟಕರ ವಿಷಯ. ಸರ್ಕಾರ ಇದನ್ನು ಜಾರಿಗೆ ತಂದರೆ ಕಲಬೆರಕೆ ಮಾರಾಟ ಮಾಡುವವರ ಕೈಗೆ ಇವು ಸಿಗುತ್ತದೆ. ಇದರಿಂದ ಅವರು ಉದ್ಧಾರ ಆಗುತ್ತಾರೆಯೆ ವಿನಃ ಬೇರೇನು ಸಾಧ್ಯವಿಲ್ಲ” ಎಂದು ತಿಳಿಸಿದರು.
“ಇಗಾಗಲೆ ಇರುವ ಸೋಡಿಯಂ ಉಪ್ಪೆ ಮಕ್ಕಳಿಗೆ ಸಾಕಾಗುತ್ತದೆ. ಆದರೆ ಡಬ್ಬಲ್ ಸಾಲ್ಟ್ ಅನ್ನು ಮಕ್ಕಳ ಆಹಾರದಲ್ಲಿ ಬಳಸುವ ಉದ್ದೇಶ ಮಾರುಕಟ್ಟೆ ಬೆಳೆಸುವ ಹುನ್ನಾರ ಇದ್ದರೂ ಇರಬಹುದು. ಮುಖ್ಯವಾಗಿ ಬೆಳೆಯುವ ಮಕ್ಕಳಿಗೆ ಬೇಕಾಗಿರುವುದು ಒಳ್ಳೆಯ ಪ್ರೊಟೀನ್ ಮತ್ತು ಕೊಬ್ಬಿನ ಅಂಶದ ಆಹಾರಗಳು. ಅದನ್ನು ಬಿಟ್ಟು ಸಕ್ಕರೆ ಅಂಶವಿರುವ ಜೇನು ತುಪ್ಪವನ್ನು ನೀಡಿದರೆ ಮಕ್ಕಳಲ್ಲಿ ಸಕ್ಕರೆ ಅಂಶ ಜಾಸ್ತಿಯಾಗುತ್ತದೆ ಎಂಬುವುದನ್ನು ಬಿಟ್ಟರೆ ಬೇರೇನು ಲಾಭವಿಲ್ಲ” ಎಂದು ಹೇಳಿದರು.
“ಜೇನಿನಲ್ಲಿ ಇರುವ ಇತರ ವಿಟಮಿನ್‌ಗಳು ಬೇರೆ ಆಹಾರದಲ್ಲೂ ಸಿಗುತ್ತದೆ. ಅದಕ್ಕೆ ಜೇನು ತುಪ್ಪವೆ ಆಗಬೇಕೆಂದಿಲ್ಲ. ಒಳ್ಳೆಯ ತರಕಾರಿ ಮತ್ತು ಮೊಟ್ಟೆ ನೀಡಿದರೂ ಅವುಗಳಲ್ಲಿ ಮಕ್ಕಳಿಗೆ ಬೇಕಾದ ಪೋಷಕಾಂಶಗಳು ಸಿಗುತ್ತವೆ. ನಾವು ದಿನನಿತ್ಯ ಬಳಸುವ ಆಹಾರವನ್ನು ಮಕ್ಕಳಿಗೆ ನೀಡಬೇಕಿದೆ. ಜೇನು ತಪ್ಪವನ್ನು ಎಷ್ಟು ಬೇಕೊ ಅಷ್ಟು ತಿಂದರೆ ಅಷ್ಟೆ ಚಂದ. ಒಳ್ಳೆಯ ನ್ಯೂಟ್ರಿಯನ್‌ಗಳು ಆಹಾರದಲ್ಲಿ ಜೇನು ತುಪ್ಪವನ್ನು ಹೊರಗಿಡುತ್ತಾರೆ” ಎಂದು ತಿಳಿಸಿದರು.
ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆ ವಿರುದ್ಧ ನಿರ್ಣಯ ಅಂಗೀಕರಿಸಿದ ಕೇರಳ; ದೇಶದಲ್ಲೆ ಮೊದಲು!
ಈ ಬಗ್ಗೆ ಮಾತನಾಡಿದ ಬಿಸಿಯೂಟ ಕಾರ್ಮಿಕರ ಸಂಘದ ನಾಯಕಿ ಮಾಲಿನಿ ಮೇಸ್ತಾ ಸಿ ಅವರು ಮಾತನಾಡಿ,”ವಾಸ್ತವದಲ್ಲಿ ಶಾಲಾ ಮಕ್ಕಳಿಗೆ ಬಿಸಿಯೂಟ ಬೇಕಾದ್ರೆ ಮಾಡಿ ಇಲ್ಲವೆಂದರೆ ಬಿಟ್ಟು ಬಿಡಿ ಎಂಬಂತೆ ಕೇಂದ್ರ ಸರ್ಕಾರ ವರ್ತಿಸುತ್ತಿದೆ. ಈ ಯೋಜನೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಜಂಟಿ ಯೋಜನೆ ಆಗಿದ್ದು ಕ್ರಮವಾಗಿ 40% ಮತ್ತು 60% ಅನುದಾನ ನೀಡಬೇಕಿತ್ತು. ಆದರೆ ಕೇಂದ್ರ ಸರ್ಕಾರ ಇದನ್ನು ನೀಡುತ್ತಿಲ್ಲ. ಹೆಚ್ಚು ಕಡಿಮೆ ಎಲ್ಲವನ್ನೂ ರಾಜ್ಯ ಸರ್ಕಾರ ನೀಡುತ್ತಿದೆ. ಈ ರೀತಿಯಾಗಿ ಕೇಂದ್ರ ಸರ್ಕಾರ ವರ್ತಿಸಬಾರದು ಎಂಬುವುದು ನಮ್ಮ ಆಗ್ರಹ” ಆಗಬಾರದು ಎಂದು ಹೇಳಿದರು.
“ಯೋಜನೆ ಪ್ರಾರಂಭವಾದ 2008ರಿಂದ ಕೇಂದ್ರ ಸರ್ಕಾರ ಬಿಸಿಯೂಟ ಕಾರ್ಮಿಕರಿಗೆ 1 ರೂ. ಕೂಡಾ ಹೆಚ್ಚು ಮಾಡಿಲ್ಲ. ಹೊಸದಾಗಿ ಜೇನು ತುಪ್ಪ ಮತ್ತು ಡಬಲ್ ಸಾಲ್ಟ್ ನೀಡಬೇಕು ಎನ್ನುವುದರಲ್ಲಿ ಕೇಂದ್ರ ಸರ್ಕಾರದ ಪಾತ್ರ ಏನು ಎಂಬವುದು ಕೂಡಾ ಮುಖ್ಯವಾಗಿದೆ. ಕೇವಲ ಮಕ್ಕಳಿಗೆ ಅವುಗಳನ್ನು ನೀಡಬೇಕು ಎಂದು ಮಾತ್ರ ಹೇಳುವುದಲ್ಲ, ಅವುಗಳಿಗೆ ಬೇಕಾದ ಅನುದಾನ ಕೂಡಾ ಬಿಡುಗಡೆ ಮಾಡಬೇಕಿದೆ. ಈ ಹಿಂದೆ ವಾರದಲ್ಲಿ 2 ಬಾರಿ ನೀಡುತ್ತೇನೆ ಎಂದಿದ್ದ ಸರ್ಕಾರ ಒಂದು ಬಾರಿ ಮಾತ್ರ ಮೊಟ್ಟೆಯನ್ನು ನೀಡುತ್ತಿವೆ” ಎಂದು ಹೇಳಿದರು.
“ಜೇನು ತುಪ್ಪ ಅಗಾಧ ಪ್ರಮಾಣದಲ್ಲಿ ಸಿಗುವುದಿಲ್ಲ ಎನ್ನವುದು ಒಂದು ನೆಪವಷ್ಟೆ. ರಾಜ್ಯದ ಎಲ್ಲಾ ಕಡೆಯಲ್ಲೂ ಜೇನು ಸಾಕಾಣಿಕೆ ಮಾಡಲಾಗುತ್ತಿದೆ. ಅದಕ್ಕೆ ಒಂದಷ್ಟು ಪ್ರೂತ್ಸಾಹ ನೀಡಿದರೆ ಅವುಗಳ ಉತ್ಪಾದನೆ ಹಚ್ಚಾಗುತ್ತದೆ. ಕಲಬೆರಕೆ ಜೇನು ಆಗದಂತೆ ನೋಡಿಕೊಳ್ಳಲು ಆಹಾರ ಸಮಿತಿ ಇದ್ದೇ ಇರುತ್ತದೆ. ಜೇನನ್ನು ಪರೀಕ್ಷೆ ಮಾಡಿ ಕೊಂಡುಕೊಳ್ಳುವುದಕ್ಕೆ ಸರ್ಕಾರಕ್ಕೆ ದೊಡ್ಡ ಕೆಲಸವೇನೂ ಅಲ್ಲ. ಈಗ ಹಾಲಿನ ಹುಡಿಯನ್ನು ಕೂಡಾ ಪರೀಕ್ಷೆ ಮಾಡಿಕೊಡುವಂತೆ ಜೇನನ್ನು ಕೂಡಾ ಹಾಗೆಯೆ ಕೊಡಬೇಕು. ನಮ್ಮ ಮಕ್ಕಳ ಆರೋಗ್ಯ ದೃಷ್ಠಿಯಿಂದ ಪ್ರಯೋಜನ ಆಗುತ್ತದೆ ಎಂದಾದರೆ ಜೇನು ಮತ್ತು ಡಬಲ್ ಸಾಲ್ಟ್ ನೀಡಲೇ ಬೇಕು” ಎಂದು ಹೇಳಿದರು.
ಇದನ್ನೂ ಓದಿ: ನೈಜರ್‌ನಲ್ಲಿ ಮಿಲಿಟರಿ ಕ್ಷಿಪ್ರಕ್ರಾಂತಿಗೆ ಜನ ಬೆಂಬಲ ಏಕೆ ?!
ಕರ್ನಾಟಕದಲ್ಲಿ ಪ್ರಸ್ತುತ ಐಯೋಡಿನ್ ಉಪ್ಪು ಲಭ್ಯವಿದ್ದು, ಬಿಸಿಯೂಟ ತಯಾರಿಕೆಯಲ್ಲಿ ಬಳಸಲಾಗುತ್ತಿದೆ. ಆದರೆ, ಡಬಲ್ ಸಾಲ್ಟ್ ರಾಜ್ಯದಲ್ಲಿ ಬಳಕೆಯಲ್ಲಿ ಇಲ್ಲದೇ ಇರುವುದರಿಂದ ಖರೀದಿಗೆ ಸಿಗುತ್ತಿಲ್ಲ. ಹೀಗಾಗಿ ಈ ಸೂಚನೆಯ ಅನುಷ್ಠಾನ ಸಾಧ್ಯವಿಲ್ಲ ಎಂದು ಶಿಕ್ಷಣ ಇಲಾಖೆಯ ಮಧ್ಯಾಹ್ನ ಉಪಹಾರ ಯೋಜನೆ ವಿಭಾಗವು ಕೇಂದ್ರ ಸರಕಾರಕ್ಕೆ ಸ್ಪಷ್ಟಪಡಿಸಿದೆ ಎಂದು ವಿಜಯಕರ್ನಾಟಕ ವರದಿ ಉಲ್ಲೇಖಿಸಿದೆ.
ವಿಡಿಯೊ ನೋಡಿ: ಧರ್ಮಸ್ಥಳ, ಉಜಿರೆಯಲ್ಲಿ 463 ಅಸಹಜ ಸಾವು – ಖಾವಂದರಿಂದ ಮಾನವ ಹಕ್ಕುಗಳ ಉಲ್ಲಂಘನೆ – ನರೇಂದ್ರ ನಾಯಕ್ ನೇರ ಆರೋಪ