ಹಾಸನ: ರಾಜ್ಯದ 9 ವಿಶ್ವವಿದ್ಯಾಲಯಗಳನ್ನು ಮುಚ್ಚಲು ಹೊರಟಿರುವ ರಾಜ್ಯ ಸರ್ಕಾರದ ನಡೆಯನ್ನು ವಿರೋಧಿಸಿ ಹಾಗೂ ವಿವಿಗಳನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು ಎಂದು ಆಗ್ರಹಿಸಿ ಎಸ್.ಎಫ್.ಐ. ನೇತೃತ್ವದಲ್ಲಿ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲಿಸಿದರು. ಹೊಸ
ನಗರದ ಗಂಧದ ಕೋಠಿ ಆವರಣದಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಆರ್.ಸಿ. ರಸ್ತೆ, ಬಿ.ಎಂ. ರಸ್ತೆ ಮೂಲಕ ಜಿಲ್ಲಾಧಿಕಾರಿ ಕಛೇರಿ ಆವರಣಕ್ಕೆ ಬಂದರು. ಇದೆ ವೇಳೆ ಜಿಲ್ಲಾ ಕಾರ್ಯದರ್ಶಿ ರಮೇಶ್ ಮಾಧ್ಯಮದೊಂದಿಗೆ ಮಾತನಾಡಿ, ರಾಜ್ಯದಲ್ಲಿ ೯ ಹೊಸ ವಿಶ್ವವಿದ್ಯಾಲಯಗಳನ್ನು ಮುಚ್ಚಲು ರಾಜ್ಯ ಸರಕಾರದ ಸಚಿವ ಸಂಪುಟದ ಉಪ ಸಮಿತಿ ತೀರ್ಮಾನಿಸಿದೆ. ಸರಕಾರದ ಈ ನಡೆ ವಿದ್ಯಾರ್ಥಿ ವಿರೋಧಿ ನಡೆಯಾಗಿದೆ. ಹೊಸ
ರಾಜ್ಯದ ಹಿಂದುಳಿದ ಜಿಲ್ಲೆಗಳಲ್ಲಿ ಸ್ಥಾಪನೆಗೊಂಡಿರುವ ವಿಶ್ವವಿದ್ಯಾಲಯಗಳು ಮುಚ್ಚುವುದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ, ಹೆಣ್ಣು ಮಕ್ಕಳ ಉನ್ನತ ಶಿಕ್ಷಣಕ್ಕೆ ಅಷ್ಟೇ ಅಲ್ಲದೆ ಪ್ರಾದೇಶಿಕವಾಗಿ ಅಯಾ ಜಿಲ್ಲೆಗಳ ಸರ್ವಾಂಗೀಣ ಅಭಿವೃದ್ಧಿಗೆ ಮಾರಕವಾಗಬಹುದು. ಹಾಗಾಗಿ ರಾಜ್ಯ ಸರಕಾರ ವಿ.ವಿ ಗಳನ್ನು ಮುಚ್ಚುವ ತೀರ್ಮಾನವನ್ನು ರದ್ದುಪಡಿಸಿ ಯಥಾ ಸ್ಥಿತಿಯಲ್ಲಿ ವಿ.ವಿಗಳನ್ನು ಮುಂದುವರೆಸಬೇಕೆಂದು ಒತ್ತಾಯಿಸುತ್ತದೆ.
ಇದನ್ನೂ ಓದಿ: ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಕೆ, ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ – ಕೆ.ಜೆ.ಜಾರ್ಜ್
2023 ರಲ್ಲಿ ಅಂದಿನ ಬಿಜೆಪಿ ಸರಕಾರ ರಾಜ್ಯದಲ್ಲಿ ಹೊಸ ವಿಶ್ವ ವಿದ್ಯಾಲಯಗನ್ನು ಪ್ರಾರಂಭ ಮಾಡಿತ್ತು ಆದರೆ ಅಂದಿನ ಸರ್ಕಾರ ಅಗತ್ಯ ಅನುದಾನ ಹಾಗೂ ವಿಶ್ವವಿದ್ಯಾಲಯ ಸ್ಥಾಪಿಸಲು ಬೇಕಾದ ಸೌಲಭ್ಯಗಳನ್ನು ಒದಗಿಸದೇ ಏಕಾಏಕಿ ಪ್ರಾರಂಭಿಸಿತು. ನಂತರ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೇಸ್ ಸರಕಾರವು ಕೂಡ ಕಳೆದ ಎರಡು ವರ್ಷದಿಂದ ಯಾವುದೇ ಅನುದಾನ ನೀಡಲಿಲ್ಲ. ಇಂತಹ ಸಂಕಷ್ಟಮಯ ಪರಿಸ್ಥಿತಿಯಲ್ಲಿಯೂ ಕೂಡ ಕಾರ್ಯ ನಿರ್ವಹಿಸಿಕೊಂಡು ಬರುತ್ತಿರುವ ವಿಶ್ವವಿದ್ಯಾಲಯಗಳನ್ನು ಮುಚ್ಚಲು ರಾಜ್ಯ ಸರಕಾರ ತೀರ್ಮಾನಿಸಿರುವುದು ಯಾವುದೇ ರೀತಿಯಲ್ಲಿ ಸಮರ್ಥನೀಯವಲ್ಲ ಎಂದರು.
ಕೂಡಲೇ ಈ ಆದೇಶ ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ ವಿಶ್ವ ವಿದ್ಯಾಲಯದ ಉಳಿವಿಗಾಗಿ ರಾಜ್ಯವ್ಯಾಪಿ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆಂದು ಎಚ್ಚರಿಸಿದರು.
ಉಪನ್ಯಾಸಕರಾದ ಡಾ. ಮಹೇಶ್ ಮಾಧ್ಯಮದೊಂದಿಗೆ ಮಾತನಾಡಿ, ಸರಕಾರ ಮುಚ್ಚಲು ಹೊರಟಿರುವ ಈ ವಿ.ವಿ ಗಳಿಗೆ ಪೂರ್ಣಕಾಲಿಕ ಉಪನ್ಯಾಸಕರು, ಬೋದಕೇತರ ಸಿಬ್ಬಂದಿ ನೇಮಕ, ಗ್ರಾಂಥಾಲಯ, ಪ್ರಯೋಗಾಲಯ, ಹಾಸ್ಟೇಲ್, ಅನುದಾನ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಸರಕಾರ ಒದಗಿಸಬೇಕಿತ್ತು. ಈ ಸೌಕರ್ಯಗಳನ್ನು ಒದಗಿಸದಿರುವ ಸ್ಥಿತಿಯಲ್ಲಿಯೂ ಹಲವು ಪ್ರಮುಖ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಅಗತ್ಯವಿರುವ ಉನ್ನತ ಶಿಕ್ಷಣ ಪಡೆಯಲು ವಿವಿಧ ಶೈಕ್ಷಣಿಕ ಚಟುವಟಿಕೆಗಳೊಂದಿಗೆ ಮುನ್ನಡೆಯುತ್ತಿವೆ.
ಈಗಾಗಲೇ ಈ ವಿವಿಯಲ್ಲಿ ಓದುತ್ತಿರುವ ಸಾವಿರಾರು ವಿದ್ಯಾರ್ಥಿಗಳು, ನೂರಾರು ಬೋದಕ ಮತ್ತು ಬೋದಕೇತರ ವರ್ಗ ಮತ್ತು ಈ ವಿ.ವಿಗಳಿಗೆ ಸೇರ್ಪಡೆಯಾಗಿರುವ ನೂರಾರು ಪದವಿ ಕಾಲೇಜುಗಳು ಮತ್ತು ಸಾವಿರಾರು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಅತಂತ್ರವಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣವನ್ನು ಕೇವಲ ಲಾಭದ ದೃಷ್ಟಿಯಲ್ಲಿ ನೋಡದೆ ಮಾನವ ಸಂಪನ್ಮೂಲ ಅಭಿವೃದ್ಧಿಯ ದೃಷ್ಟಿಯಿಂದ ಈ ಎಲ್ಲಾ ವಿಶ್ವವಿದ್ಯಾಲಯಗಳಿಗೂ ಹೆಚ್ಚಿನ ಅನುಧಾನ ಬಿಡುಗಡೆ ಮಾಡಿ ವಿವಿಗಳನ್ನು ಉಳಿಸಬೇಕಾಗಿದೆ ಎಂದು ಒತ್ತಾಯಿಸಿದರು.
ವಿಶ್ವ ವಿದ್ಯಾಲಯಗಳನ್ನು ಬಲಿಷ್ಠಪಡಿಸುವ ಬದಲು ಮುಚ್ಚುವ ತೀರ್ಮಾನವು ಆಯಾ ಜಿಲ್ಲೆಯ ಬಡ ಹಾಗೂ ಮದ್ಯಮ ವರ್ಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ವಂಚಿಸುವುದಾಗಿದೆ. ಹಾಗಾಗಿ ಸಚಿವ ಸಂಪುಟದ ಉಪಸಮಿತಿ ತೆಗೆದುಕೊಂಡಿರುವ ನಿರ್ಧಾರವನ್ನು ಸರಕಾರ ಯಾವುದೇ ಕಾರಣ ನೀಡದೇ ಕೂಡಲೇ ಹಿಂಪಡೆಯಬೇಕು.
ರಾಜ್ಯ ಸರಕಾರ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಹಾಗೂ ಬೌದ್ದಿಕ ಸ್ವಾವಲಂಬನೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ವಿವಿಗಳಿಗೆ ಅಗತ್ಯ ಕ್ರಮಗಳನ್ನು ಕೈಗೊಂಡು ಬಲಪಡಿಸಬೇಕು.ಮತ್ತು ವಿಶ್ವ ವಿದ್ಯಾಲಯಗಳಲ್ಲಿ ಉಪನ್ಯಾಸಕರನ್ನು ನೇಮಕಾತಿ ಮಾಡಬೇಕು ಹಾಗೂ ಅನುದಾನವನ್ನು ನೀಡುವ ಮೂಲಕ ವಿಶ್ವ ವಿದ್ಯಾಲಯಗಳನ್ನು ಬಲಪಡಿಸಬೇಕು ಮತ್ತು ಸಂಪುಟ ಉಪಸಮಿತಿಯ ತೀರ್ಮಾನವನ್ನು ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳಿಗೆ ಕೂಡಲೇ ಹಿಂಪಡೆಯಬೇಕು ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಎಸ್.ಎಫ್.ಐ. ಜಿಲ್ಲಾ ಕಾರ್ಯದರ್ಶಿ ರಮೇಶ್ ಹಾಸನ್, ಸಹ ಕಾರ್ಯದರ್ಶಿ ವಿವೇಕ್, ರಾಜ್ಯ ಉಪಾಧ್ಯಕ್ಷರು ಬಸವರಾಜ ಗುಳೆದಾಳ್, ಡಿವೈ.ಎಫ್.ಐ, ಎಂ.ಜಿ. ಪೃಥ್ವಿ, ಮುಖಂಡರು ಜಯಲಕ್ಷ್ಮಿ, ಸೌಮ್ಯ, ಧರ್ಮ, ಉಪನ್ಯಾಸಕರಾದ ಡಾ. ಮಹೇಶ್, ಡಾ. ಲೋಕೇಶ್ ಇನ್ನಿತರು ಉಪಸ್ಥಿತರಿದ್ದರು.
ಇದನ್ನೂ ನೋಡಿ: ಇಂಗ್ಲೀಷ್ ಕಲಿಯೋಣ | “Wh” ಪ್ರಶ್ನೆಗಳ ರಚನೆ ಹೇಗೆ? | ತೇಜಸ್ವಿನಿ |#whquestions| Spokenenglish |Janashakthi