ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ 545 ಪಿಎಸ್ಐ ನೇರ ನೇಮಕಾತಿಯಲ್ಲಿನ ಅಕ್ರಮಗಳ ಕುರಿತು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲು ರಾಜ್ಯದ ಆಡಳಿತದ ಕಾಂಗ್ರೆಸ್ ಸರ್ಕಾರ ಜುಲೈ-21 ಶುಕ್ರವಾರ ಆದೇಶ ಹೊರಡಿಸಿದೆ.
ಈ ಸಂಬಂಧ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರ ನೇತೃತ್ವದಲ್ಲಿ ಏಕಸದಸ್ಯ ತನಿಖಾ ಆಯೋಗ ರಚಿಸಲಾಗಿದೆ. ಹಗರಣ ಕುರಿತ ವರದಿಯನ್ನು ಮೂರು ತಿಂಗಳಲ್ಲಿ ನೀಡುವಂತೆ ಆಯೋಗವನ್ನು ಸರ್ಕಾರ ಕೋರಿದೆ.
ಇದನ್ನೂ ಓದಿ:ಸದನದಲ್ಲಿ ಪ್ರತಿಧ್ವನಿಸಿದ ‘ಹಗರಣ’ – ಆಡಳಿತ ವಿಪಕ್ಷದ ನಡುವೆ ಜಟಾಪಟಿ
2021ರ ಜನವರಿ 21ರಂದು ಪಿಎಸ್ಐಗಳ ಆಯ್ಕೆ ಪ್ರಕ್ರಿಯೆ ಕಾರ್ಯ ಆರಂಭವಾಗಿತ್ತು. ನೇಮಕಾತಿಯಲ್ಲಿ ನಿಯಮಗಳ ಉಲ್ಲಂಘನೆ, ವಿವಿಧ ಹಂತಗಳಲ್ಲಿ ನಡೆದಿರುವ ಅಕ್ರಮಗಳು ಹಾಗೂ ಯಾರೆಲ್ಲಾ ದುರ್ಲಾಭ ಪಡೆದಿದ್ದಾರೆ ಎಂಬುದರ ಕುರಿತು ತನಿಖೆ ನಡೆಸುವಂತೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ನೇಮಕಾತಿ ಅಕ್ರಮ ನಡೆಸಿದ 52 ಅಭ್ಯರ್ಥಿಗಳಿಗೆ ಮುಂದಿನ ದಿನಗಳಲ್ಲಿ ನಡೆಯುವ ಇಲಾಖಾ ಪರೀಕ್ಷೆಗೆ ನಿಷೇಧ ಹೇರಲಾಗಿದೆ. ಈ ಅಕ್ರಮವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ. ಮುಂದೆ ನಡೆಯುವ ಪಿಎಸ್‌ಐ ಹುದ್ದೆಯ ನೇರ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಿಯಮಾನುಸಾರ, ಪಾರದರ್ಶಕ ಹಾಗೂ ಲೋಪರಹಿತವಾಗಿ ನಡೆಸಲು ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಶಿಫಾರಸು ಮಾಡುವಂತೆ ಆಯೋಗವನ್ನು ಕೋರಲಾಗಿದೆ.
ಸಿಐಡಿ ತಂಡ ಹಾಗೂ ಪೊಲೀಸ್ ನೇಮಕಾತಿ ವಿಭಾಗವು ಆಯೋಗಕ್ಕೆ ಸಮಗ್ರ ಮಾಹಿತಿಗಳನ್ನು ಹಾಗೂ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ. ಇದೇ ಅಕ್ರಮ ಪ್ರಕರಣದಲ್ಲಿ ಹಿಂದೆ ತನಿಖೆ ನಡೆಸಿದ್ದ ಸಿಐಡಿ ತಂಡವು ಹಲವರನ್ನು ಬಂಧಿಸಿತ್ತು. ಮತ್ತೆ ವಿಚಾರಣಾ ಆಯೋಗದಿಂದ ತನಿಖೆ ಆರಂಭಗೊಳ್ಳಲಿದೆ.