60 ಸಾವಿರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಸರ್ಕಾರ ಮುಂದು

ಬೆಂಗಳೂರು: ರಾಜ್ಯ ಸರ್ಕಾರವು ಸರ್ಕಾರಿ ಹುದ್ದೆಗಳ ನೇಮಕಾತಿಗೆ ಒತ್ತಡ ಮತ್ತು ಪ್ರತಿಭಟನೆಗಳು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಸುಮಾರು 60,000 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದೆ. ಯಾವ ಯಾವ ಇಲಾಖೆಗಳಲ್ಲಿ ಎಷ್ಟು ಹುದ್ದೆಗಳೆಂದು ಸಂಖ್ಯೆ ಅಂತಿಮಗೊಳಿಸಲು ವಿವಿಧ ಇಲಾಖೆಗಳೊಂದಿಗೆ ಚರ್ಚೆಗಳು ನಡೆಯುತ್ತಿವೆ.

ಧಾರವಾಡದಲ್ಲಿ ಸಾವಿರಾರು ಉದ್ಯೋಗಾಕಾಂಕ್ಷಿಗಳು ಬೀದಿಗಿಳಿದು, ನೇಮಕಾತಿ ಅಧಿಸೂಚನೆಗಳನ್ನು ಹೊರಡಿಸದಿರುವುದಕ್ಕೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು.

ಈ ಬೆಳವಣಿಗೆ ನಂತರ ಹಣಕಾಸು ಇಲಾಖೆಯ ಮೂಲಗಳ ಪ್ರಕಾರ, ಭಾರಿ ಪ್ರಮಾಣದ ನೇಮಕಾತಿಗೆ ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಲು ನಾವು ಸಮ್ಮತಿ ನೀಡಿದ್ದೇವೆ. ಅಂತಿಮ ಸಂಖ್ಯೆಯನ್ನು ನಿಗದಿಪಡಿಸಲು ಇಲಾಖೆಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: ಹಂಚಿಕೆಯಾಗದ ಆಶ್ರಯ ನಿವೇಶನ; ಸ್ವಂತ ಸೂರಿಗಾಗಿ 26 ವರ್ಷಗಳಿಂದ ಕಾಯುತ್ತಿರುವ 62 ದಲಿತ ಕುಟುಂಬಗಳು

ರಾಜ್ಯ ಸರ್ಕಾರವು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಶೈಕ್ಷಣಿಕ ಸಂಸ್ಥೆಗಳಲ್ಲಿನ ಆಸನಗಳು ಮತ್ತು ರಾಜ್ಯ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳ) ಕಾಯ್ದೆ, 2022 ಅಡಿಯಲ್ಲಿ ಮೀಸಲಾತಿ ಹೆಚ್ಚಳಕ್ಕೆ ತಡೆಹಿಡಿದಿತ್ತು.

ವಿಚಾರಣೆ ಪೂರ್ಣಗೊಳ್ಳುವವರೆಗೆ ಹೆಚ್ಚಿದ ಮೀಸಲಾತಿಯ ಆಧಾರದ ಮೇಲೆ ಯಾವುದೇ ಹೊಸ ನೇಮಕಾತಿ ಅಧಿಸೂಚನೆಗಳನ್ನು ಹೊರಡಿಸಬಾರದು. ಈಗಾಗಲೇ ಪ್ರಾರಂಭವಾದ ನೇಮಕಾತಿ ಪ್ರಕ್ರಿಯೆಗಳು ಮುಂದುವರಿಯಬಹುದು. ನೇಮಕಾತಿಗಳು ಅಂತಿಮ ತೀರ್ಪಿಗೆ ಒಳಪಟ್ಟಿರಬೇಕು ಎಂದು ಹೈಕೋರ್ಟ್ ಹೇಳಿತ್ತು.

ಕಾರ್ಮಿಕ ಸಚಿವ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ರಾಜ್ಯ ಸರ್ಕಾರವು 56,000–58,000 ಹುದ್ದೆಗಳನ್ನು ಭರ್ತಿ ಮಾಡಲು ಉತ್ಸುಕವಾಗಿದೆ ಎಂದು ತಿಳಿಸಿದ್ದಾರೆ. ಮಾರ್ಚ್ 3ರಂದು ಹೈಕೋರ್ಟ್ ನಲ್ಲಿ ವಿಚಾರಣೆ ಇದೆ. ಒಪ್ಪಿಗೆ ಸಿಕ್ಕ ಬಳಿಕ ಹುದ್ದೆಗಳ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದರು.

ಮಾರ್ಚ್ 6ರಂದು ಬಜೆಟ್ ಮಂಡಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಭಾಷಣದಲ್ಲಿ ಈ ಕುರಿತು ಘೋಷಣೆ ಮಾಡುವ ಸಾಧ್ಯತೆ ಇದೆ.

ಕರ್ನಾಟಕದಲ್ಲಿ 70 ಕ್ಕೂ ಹೆಚ್ಚು ಸರ್ಕಾರಿ ಇಲಾಖೆಗಳಲ್ಲಿನ ಮಂಜೂರಾದ ಹುದ್ದೆಗಳು 7.5 ಲಕ್ಷಕ್ಕಿಂತ ಹೆಚ್ಚು ಇದ್ದು, ಪ್ರಸ್ತುತ 2.84 ಲಕ್ಷ ಹುದ್ದೆಗಳು ಖಾಲಿ ಇವೆ. ಸರಾಸರಿ ಪ್ರತಿವರ್ಷ ಸುಮಾರು 25,000 ಹುದ್ದೆಗಳು ಖಾಲಿಯಾಗುತ್ತವೆ. ಕೋವಿಡ್ ಮಹಾಮಾರಿ, ಹಣಕಾಸು ಪರಿಣಾಮಗಳು, ಕಾನೂನು ಅಡಚಣೆಗಳು ಸೇರಿದಂತೆ ವಿವಿಧ ಕಾರಣಗಳಿಂದ ಅನೇಕ ವರ್ಷಗಳಿಂದ ನೇಮಕಾತಿ ಪ್ರಕ್ರಿಯೆ ಕೈಗೊಂಡಿರಲಿಲ್ಲ.

ಇದನ್ನೂ ನೋಡಿ: “ಭಾರತ ಭಾರತವಾಗಿರಲಿ – ಯಾವ ಧರ್ಮರಾಷ್ಟ್ರವಾಗಿಯೂ ಬೇಡ.” – ಬಿ.ಎಂ.ಹನೀಫ್ Janashakthi Media

Donate Janashakthi Media

Leave a Reply

Your email address will not be published. Required fields are marked *