ಮಹಿಳೆಯರು ದುಡಿಯುವ ಸ್ಥಳದಲ್ಲಿನ ತಾರತಮ್ಯ ಮತ್ತು ದೌರ್ಜನ್ಯ

ಮಂಡ್ಯ ಜಿಲ್ಲೆಯಲ್ಲಿ ನಡೆದ ದುಡಿಯುವ ಮಹಿಳೆಯರ ಸಮಾವೇಶದಲ್ಲಿ ಮಂಡಿಸಲಾದ ಉಪನ್ಯಾಸದ ಲೇಖನ ರೂಪ
-ಯಮುನಾ ಗಾಂವ್ಕರ್

ನಮ್ಮೂರ ಬೀದಿಯಲ್ಲಿ ಕಸ ತೆಗೆಯುವ, ತನ್ನದಲ್ಲದ ಮನೆಗಳಲ್ಲಿ ಕಸಮುಸುರೆ ಸ್ವಚ್ಛತೆ ಮಾಡುವ, ತನ್ನದಲ್ಲದ ಮಕ್ಕಳಿಗೆ ಆಹಾರ ಆರೋಗ್ಯ ಶಿಕ್ಷಣಕ್ಕೆ ಕೆಲಸ ಮಾಡುವ, ತನ್ನದಲ್ಲದ ಮನೆಯನ್ನು ಒಪ್ಪ ಓರಣವಾಗಿ ಕಟ್ಟುವಲ್ಲಿ ಶ್ರಮ ಹಾಕುವ, ಬೀದಿಬದಿಯಲ್ಲಿ ದುಡಿದು ತನ್ನದಲ್ಲದ ಖಜಾನೆಗೆ ಲಾಭ ಮಾಡಿಕೊಡುವ ತನ್ನದಲ್ಲದ ಬದುಕನ್ನು ಬೇರೆಯವರಿಗೆ ಕಟ್ಟಿಕೊಡುವಲ್ಲೇ ನಿರತರಾದವರನ್ನು ಒಳಗೊಂಡು, ದೇಶದ ರಾಷ್ಟ್ರಾಧ್ಯಕ್ಷರವರೆಗೆ, ವ್ಯೋಮಕ್ಕೆ ಜಿಗಿದು ವಾಪಸ್ ಬಂದ ಆ ಹೆಣ್ಮಗಳ ತನಕವೂ ಎಲ್ಲರೂ ದುಡಿಯುವ ಮಹಿಳೆಯರೇ ಆಗಿದ್ದಾರೆ. ಇವರಲ್ಲಿ ಬಹುತೇಕರು ತಮ್ಮ ಸ್ವಂತ ಬದುಕನ್ನು ಪಣಕ್ಕಿಟ್ಟೇ ಕೆಲಸ ಮಾಡುವವರು. ಕೆಲಸಕ್ಕೆ ಕೂಲಿ ಪಡೆದರೂ ಆದಾಯದ ಪಾಲು ಬಳಸಲು ಹಕ್ಕು ಇಲ್ಲದವಳು, ಅವರನ್ನು ನೆನೆಸೋಣ. ದುಡಿಯುವ

ಕಳೆದ ಅವಧಿಯಲ್ಲಿ ನಾವು ನಮ್ಮ ಅನೇಕ ಸಂಘಟನೆಗಳು ಐಕ್ಯ ಚಳುವಳಿ ಮಾಡಿದ ಕಾರಣಕ್ಕೆ ಈಗಷ್ಟೇ ಬಂದ ಸುದ್ದಿಯ ಪ್ರಕಾರ ಮಾಜಿ ಸಂಸದ ಕ್ರೂರ ಕಾಮಾಂಧ ಪ್ರಜ್ವಲ ರೇವಣ್ಣನಿಗೆ ಕೋರ್ಟು ಶಿಕ್ಷೆ ಘೋಷಿಸಿದೆ. (ಜೀವಾವಧಿ ಶಿಕ್ಷೆ ಆಗಿದೆ.) ಕಳೆದ ನಲವತ್ತು ವರ್ಷಗಳಿಂದ ಧರ್ಮಸ್ಥಳದಲ್ಲಿ ಕೆಲವು ಅಸಹಜ ಸಾವುಗಳ ತನಿಖೆಯ ಬಗ್ಗೆ ನಡೆಸಲಾದ ಹೋರಾಟದ ನ್ಯಾಯಕ್ಕೆ ಆಗ್ರಹಿಸಿತ್ತು. ಅದರ ಭಾಗವಾಗಿ ಇದೀಗ ಎಸ್.ಐ.ಟಿ ರಚನೆಯಾಗಿದೆ. ಧರ್ಮಕ್ಷೇತ್ರವೆಂದು ಲಕ್ಷಾಂತರ ಜನರ ಬೆವರ ಫಲವನ್ನೆಲ್ಲ ತನ್ನ ಹುಂಡಿಗೆ ಹಾಕಿದ ಊರಲ್ಲಿ ಹೆಣ್ಣುಗಳ ಅಸ್ಥಿಪಂಜರಗಳು ಸಿಗುತ್ತಿರುವ ವರದಿ ಇದೆ. ದುಡಿಯುವ

ಇದನ್ನೂ ಓದಿ: ತ್ರಿಪುರ | ಹೆಣ್ಣು ಮಗು ಜನಿಸಿದಕ್ಕೆ ಬಿಸ್ಕತ್​ನಲ್ಲಿ ವಿಷಹಾಕಿದ ಯೋಧ

ಮತ್ತೊಂದೆಡೆ, ಅಂತಾರಾಷ್ಟ್ರೀಯ ಮಾನದಂಡಗಳು ಹಾಗೂ ದೇಶದ ಸಂವಿಧಾನ, ಕಾನೂನು, ಕೋರ್ಟ್ ತೀರ್ಪುಗಳು ಇದಾಗ್ಯೂ ಪ್ರಭುತ್ವವೇ ನಿಂತು ಮಹಿಳಾ ಶ್ರಮ ಶಕ್ತಿಗೆ ಮೌಲ್ಯ ಕಟ್ಟಿಕೊಡುತ್ತಿಲ್ಲ, ಹೆಣ್ಣುಮಕ್ಕಳಿಗೆ ಅಪಾಯಕಾರಿ ಸ್ಥಳಗಳಲ್ಲಿ ರಾತ್ರಿಪಾಳಿಯ ಕೆಲಸ ಹಾಕುತ್ತಿದೆ. ಪ್ರಜನನ ಕ್ರಿಯೆಯ ಮೂಲ ಮುಟ್ಟಿನ ರಜೆ ಕೊಡಲಾಗದು ಅಂತಲೂ ಸರ್ಕಾರ ಹೇಳುತ್ತಿದೆ. ಹತ್ತಾರು ಹೋರಾಟಗಳಿಂದ ಪಡೆದ ಹೆರಿಗೆ ರಜಾ ಕೊಡಲಿಕ್ಕೂ ಹಿಂದೇಟು ಹಾಕುವುದನ್ನು ಕಾಣುತ್ತಿದ್ದೇವೆ. ಕಾರ್ಮಿಕ ಕಾಯ್ದೆಗಳನ್ನೆಲ್ಲ ತೆಗೆದು ಕಾರ್ಮಿಕ ಸಂಹಿತೆಗಳನ್ನಾಗಿ ಮಾಡಿ ಹಕ್ಕುಗಳನ್ನೆಲ್ಲ ಕಸಿದು ನವ ಉದಾರವಾದಿ ಆರ್ಥಿಕ ನೀತಿಗಳಿಗೆ ಬಲಿ ಕೊಡಲಾಗುತ್ತಿದೆ. ಸಮಾಜವನ್ನು ಧರ್ಮ, ಕೋಮುವಾದ, ಜಾತಿ, ಜನಾಂಗ, ಭಾಷೆ, ಗಡಿ ಇತ್ಯಾದಿ ವಿಚಾರ ಮುಂದಿಟ್ಟು ವಿಭಜಿಸಿ ಸದಾ ಭಯದಲ್ಲೇ ಜೀವಿಸುವಂತೆ ಮಾಡಲಾಗುತ್ತಿದೆ. ಮಹಿಳೆಯರ ಜೀವಕ್ಕೆ ಬೆಲೆ ಕೊಡದ ಸಮಾಜವನ್ನು ಎದುರು ಹಾಕಿಕೊಂಡು ಸಮಾನತೆಯ ಆಶಯಗಳ ಈಡೇರಿಕೆಗೆ ಹೋರಾಡುತ್ತಲೇ ನಮ್ಮ ತನವನ್ನು ಕಾಪಿಟ್ಟುಕೊಳ್ಳಬೇಕಿದೆ. ದುಡಿಯುವ

ಮಹಿಳೆಯರ ಬದುಕು ಬವಣೆಗಳನ್ನು ಅನಾವರಣ ಮಾಡಿ ಸಂಘಟಿತ ಹೋರಾಟ ಕಟ್ಟಿಕೊಟ್ಟ ಜಗತ್ತಿನ ಸಮಾಜವಾದಿ ಕ್ರಾಂತಿಕಾರಿ ಕಮ್ಯುನಿಷ್ಟ್ ಸಂಗಾತಿಗಳಾದ ಕ್ಲಾರಾ ಜೆಟ್ಕಿನ್, ರೋಸಾ ಲಕ್ಷಂಬರ್ಗ್, ಅಲೆಕ್ಸಾಂಡ್ರಾ ಕೊಲ್ಲಂತಾಯ ಹಾಗೂ ಭಾರತದ ಸಾವಿತ್ರಿಬಾಯಿ ಪುಲೆ, ಫಾತಿಮಾ ಶೇಖ್, ಗೋದಾವರಿ ಪರುಳೆಕರ್, ಕ್ಯಾಪ್ಟನ್ ಲಕ್ಷ್ಮಿ ಸೆಹಗಲ್, ವಿಮಲಾ ರಣದಿವೆ, ಅಹಲ್ಯಾ ರಂಗ್ಣೆಕರ್ ಒಳಗೊಂಡು ಈವರೆಗಿನ ಅನೇಕರ ನೆನಪು ಮಾಡುವೆ. ಸಾಹಿತ್ಯದಲ್ಲಿ ಕಾದಂಬರಿ ಪ್ರಕಾರದಲ್ಲಿ ಕೆಲಸ ಮಾಡಿದ ಮಂಡ್ಯದವರೇ ಆದ ತ್ರಿವೇಣಿಯವರನ್ನು, ಲಿಂಗ ಅಸಮಾನತೆಯನ್ನು ತೋರಿಸಿದ ಬರಹಗಾರ್ತಿಯರಲ್ಲಿ ಒಬ್ಬರಾದ ಬೆಳಗೆರೆ ಜಾನಕಮ್ಮನವರ “ಹೆಣ್ಣಾಟ” ಎಂಬ ಕವನವನ್ನು, ವೈದೇಹಿಯವರ ‘ನನಗೆ ಕಾವ್ಯ ಗೊತ್ತಿಲ್ಲ, ತಿಳಿಸಾರು ಗೊತ್ತು’ ಹಾಗೂ ಪ್ರತಿಭಾ ನಂದಕುಮಾರ್ ಅವರ ‘ನಾವು ಹುಡುಗಿಯರೇ ಹೀಗೆ’ ವಿನಯಾ ವಕ್ಕುಂದ ಅವರ ‘ಮೆರವಣಿಗೆ ಹೊರಡುತ್ತೇವೆ’ ಎಂಬ ಕವನವನ್ನು ಸಾಂಕೇತಿಕವಾಗಿ ನೆನಪಿಸುವೆ. ದುಡಿಯುವ

ಹೆಣ್ಣು ಮುಂದಾಳತ್ವ ಮಾನ್ಯವಾಗಿದ್ದ ಆದಿಮ ಆ ಕಾಲದಿಂದ, ಹಕ್ಕು, ಕನಸು ಕಿತ್ತುಕೊಂಡುದನ್ನು ಪುನಃ ಪಡೆಯಲು ಸೆಣಸಾಡುತ್ತಿರುವ ಆಧುನಿಕ ಈ ಕಾಲದ ತನಕ ಹೆಣ್ಣು ತನ್ನ ಹೆಜ್ಜೆ ಇಟ್ಟ ಬಗೆ ಒಂದು ದೀರ್ಘ ಕಥಾನಕ, ಸಾಹಸಮಯ ರೋಚಕ, ವೇದನಾಮಯ ಘಟನಾವಳಿಗಳ ಜೀವಯಾನವಾಗಿದೆ. ಆ ನಂತರ ಆಧುನಿಕ ಕೈಗಾರಿಕೆ ಬಂದ ಮೇಲೆ ಕಾರ್ಮಿಕರ ಹಕ್ಕುಗಳ ಪ್ರತಿಪಾದನೆ ಶುರುವಾಗಿ 1884ರಿಂದ 1910-11 ರ ತನಕದ ವಿದ್ಯಮಾನ ಅಂದರೆ ಮೇ ಡೇ ಕಾರ್ಮಿಕ ದಿನ ಬಂದ ಸಂದರ್ಭದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಘೋಷಿಸುವ ತನಕದ ಹೋರಾಟ ಹಾಗೂ ಸ್ವಾತಂತ್ರ‍್ಯ ಹೋರಾಟ ಮತ್ತು ನಂತರದ ಕಾಲಘಟ್ಟದ ಚಳುವಳಿ ಮತ್ತು 1990 ರ ನಂತರ ನವ ಉದಾರಿಕರಣ ಕಾಲದ ಆರಂಭದಿಂದ 2014 ಮತ್ತು ಬಂಡವಾಳಶಾಹಿ ಜೊತೆಗೆ ಕೋಮುವಾದವೂ ಸಮ್ಮಿಶ್ರಣಗೊಂಡ 2014 ರಿಂದ ಈಗ 2025 ರ ಸಂದರ್ಭದ ತನಕ ಮಹಿಳೆಯರ ಮೇಲಿನ ತಾರತಮ್ಯ ನಡಾವಳಿ ಮತ್ತು ದೌರ್ಜನ್ಯದ ಪ್ರಮಾಣ ಅಳೆಯಬೇಕಿದೆ. ಇದೊಂದು ದೀರ್ಘ ಸತ್ಯಕತೆ.

ಅಂದು ಶತಮಾನದ ಹಿಂದೆ, ಮಹಿಳಾ ಕಾರ್ಮಿಕರ ಶೋಷಣಾತ್ಮಕ ಕೆಲಸದ ಪರಿಸ್ಥಿತಿ ವಿರುದ್ಧ ಎಲ್ಲಾ ಕಾರ್ಮಿಕರಂತೆ ತಮಗೂ ನಾಗರಿಕ ಹಕ್ಕುಗಳು ಬೇಕು, 8 ಗಂಟೆಗಳ ಕೆಲಸ ಮತ್ತು ಸಮಾನ ಕನಿಷ್ಟ ವೇತನ, ಮತದಾನದ ಹಕ್ಕುಗಳನ್ನು ಪ್ರತಿಪಾದಿಸಲು ನಡೆಸಲಾದ ಹಕ್ಕೊತ್ತಾಯಗಳಲ್ಲಿ ಅಂತರ್ಗತವಾದ ಅನೇಕ ಬೇಡಿಕೆಗಳನ್ನು ಈಗಲೂ ಪಡೆಯಲು ಬೀದಿಯಲ್ಲೇ ಇದ್ದೇವೆ. ನಿಶ್ಚಯವಾಗಿಯೂ ಕೆಲವನ್ನು ಪಡೆದಿದ್ದೇವೆ. ಹಲವನ್ನು ಪಡೆಯಲು ಮುಂದೆ ಸಾಗುತ್ತಿದ್ದೇವೆ.
ಆರ್ಥಿಕವಾಗಿ ನಿರ್ಬಲಳು ಎಂದು ದೂಷಿಸುತ್ತಲೇ ಮಹಿಳೆಯರಿಂದಲೇ ಬಹುಪಾಲು ಕೆಲಸ ಮಾಡಿಸುವ ವ್ಯವಸ್ಥೆಯ ರಾಜಕಾರಣ ಗಮನಿಸಬೇಕಿದೆ.

ಜಗತ್ತಿನ ಒಟ್ಟೂ ಶ್ರಮ ಶಕ್ತಿಯಲ್ಲಿ ಮಹಿಳೆಯರ ಪಾಲು 2/3 ಇದ್ದರೆ ಪುರುಷರದ್ದು 1/3 ಪಾಲು ! ಆದರೆ ಈ ಶ್ರಮ ಶಕ್ತಿಯಿಂದ ಉತ್ಪಾದನೆಯಾಗುವ ಸಂಪತ್ತಿನಲ್ಲಿ 10 % ಮಾತ್ರ ಮಹಿಳೆಯರಿಗೆ ಸಿಗುತ್ತದೆ ಮತ್ತು 90% ಪುರುಷರಿಗೆ ಸಿಗುತ್ತಿದೆ. ಭೂಮಿ ಕೈಗಾರಿಕೆ ಮತ್ತು ಯಂತ್ರ ಮುಂತಾದ ಉತ್ಪಾದನಾ ಸಾಧನಗಳಲ್ಲಿ 99 % ಪುರುಷರಲ್ಲಿ ಕೇಂದ್ರೀಕೃತ. ಕೂಲಿ ಪಡೆದರೂ ಕೂಡ ತನ್ನ ಆದಾಯದ ಪಾಲು ಬಳಸಲು ಹಕ್ಕು ಇಲ್ಲದವಳು ಮಹಿಳೆ. ಹಾಗಾದರೆ ಮಹಿಳೆಯರು ದುಡಿಯುವದಿಲ್ಲವೇ? ದುಡಿಯುತ್ತಾರೆ. ದುಡಿಮೆ ದುಡ್ಡಾಗುತ್ತಿಲ್ಲ ಎಂಬುದು ಗಮನಿಸಬೇಕಿದೆ. ದುಡಿಯುವ

ಹಾಗಾದರೆ, ದುಡಿಯುವ ಮಹಿಳೆ ಎಂದರೆ ಯಾರು? ಯಾಕೆ ಮಹಿಳೆಯರ ದುಡಿಮೆಯನ್ನು ಪ್ರಗತಿಯ ಮಾನದಂಡದಲ್ಲಿ ಪರಿಗಣಿಸುತ್ತಿಲ್ಲ? ಎಂದು ವ್ಯವಸ್ಥೆಯನ್ನು ಪ್ರಶ್ನಿಸುತ್ತಾ ನಮಗೆನಾವೇ ಪ್ರಶ್ನಿಸಿಕೊಳ್ಳೋಣ. ಎಲ್ಲ ಮಹಿಳೆಯರೂ ದುಡಿಯುತ್ತಾರೆ. ಆದರೆ ಈ ವರ್ಗ ಸಮಾಜದಲ್ಲಿ ದುಡಿಮೆಯ ಸ್ವರೂಪ ಮತ್ತು ಅದಕ್ಕೆ ಸಿಗುವ ಪ್ರತಿಫಲದ ಆಧಾರದಲ್ಲಿ ದುಡಿಯುವ ಮಹಿಳೆ ಶಬ್ದದ ವ್ಯಾಖ್ಯಾನ ಮಾಡುತ್ತಾರೆ. ದುಡಿಮೆಯನ್ನು ಆದಾಯಕ್ಕೆ ಮತ್ತು ಮಾರುಕಟ್ಟೆಗೆ ಅನ್ವಯಿಸಿ ವಿಶ್ವೇಷಿಸಲಾಗುತ್ತಿದೆ. ಹಾಗಾಗಿ ಮಹಿಳೆಯರ ‘ದುಡಿಮೆ’ ಶ್ರಮ ಪರಿಗಣನೆ ಆಗುತ್ತಿಲ್ಲ. ಮಹಿಳೆಯರ ಶ್ರಮವು ದುಡಿಮೆಯ ವ್ಯಾಪ್ತಿಯಲ್ಲಿ ಬರಬೇಕೆಂದರೆ ಕೆಲವು ಅರ್ಥಶಾಸ್ತ್ರಜ್ಞರ ಸಿದ್ಧಮಾದರಿಯ ವ್ಯಾಖ್ಯಾನಗಳಿಂದ ವಿಮೋಚನೆಗೊಳ್ಳಬೇಕಿದೆ. ದುಡಿಯುವ

ಮಹಿಳೆಯರು ಹಾಗೂ ದುಡಿಯುವ ಮಹಿಳೆಯರ ಕುರಿತ ಕಣ್ಣೊಟ ಸ್ಪಷ್ಟ ಪಡಿಸಿಕೊಳ್ಳಲು ವರ್ಗ ದೃಷ್ಟಿಕೋನದ ಆಧಾರದಲ್ಲಿ ವಿಶ್ಲೇಷಿಸಿಕೊಳ್ಳೋಣ. ಏನದು ವಿಶ್ಲೇಷಣಾ ವಿಧಾನ?

1. ಆದಾಯ ತರುವ ಉತ್ಪಾದನಾ ಚಟುವಟಿಕೆ ಆಗಿರಬೇಕು.
2. ಸಂಪಾದನೆಯ ಚಟುವಟಿಕೆ ನಿಗದಿತ ವರಮಾನ ತರಬೇಕು.
3. ದುಡಿದುದಕ್ಕೆ ಹಣದ ರೂಪದಲ್ಲಿ ಪ್ರತಿಫಲ ಬರಬೇಕು. ವಿನಿಮಯ ಮಹತ್ವವಿರಬೇಕು.
4. ವಾಸ ಪ್ರದೇಶದಿಂದ ಆಚೆ ಇರಬೇಕು.
5. ಸಾರ್ವಜನಿಕ ಗುಣವಿರಬೇಕು.
6. ಶ್ರಮಹಾಕಿದ ಮೇಲೆ ಅದನ್ನು ಮಾಪನಕ್ಕೆ – ಅಳತೆಗೆ- ಒಳಪಡಿಸುವಂತಿರಬೇಕು.
ಹೀಗೆಲ್ಲ ಇದ್ದರೆ ದುಡಿಯುವ ಮಹಿಳೆ ಎನ್ನಬಹುದು.

ತಾರತಮ್ಯ ಮತ್ತು ದೌರ್ಜನ್ಯಗಳೇ ಮಹಿಳಾ ಶ್ರಮ ಶಕ್ತಿಗೆ ಅಡೆತಡೆಗಳು:-

ಕೆಲಸ ಮಾಡುವ ವಿಭಿನ್ನ ವಲಯಗಳಾದ ಉತ್ಪಾದನೆ, ಕೃಷಿ, ಸೇವಾ ವಲಯಗಳಲ್ಲಿ ಮಹಿಳಾ ಶ್ರಮ ಶಕ್ತಿಗೆ ಅನೇಕ ಅಡೆತಡೆಗಳಿವೆ. ಇವೇ ಆ ತಾರತಮ್ಯಗಳು ಮತ್ತು ಅವುಗಳೇ ದೌರ್ಜನ್ಯಕ್ಕೂ ಕಾರಣಗಳಾಗಿವೆ ಎಂಬುದನ್ನು ಕಂಡುಕೊಳ್ಳಬೇಕಿದೆ.

ಪಿತೃ ಪ್ರಧಾನ ನಡಾವಳಿ, ಲಿಂಗ ಸಂಬಂಧಿ ಪೂರ್ವಾಗ್ರಹಗಳು ಮತ್ತು ಲಿಂಗ ಅಸಮಾನತೆ, ಕೌಟುಂಬಿಕ ಕಟ್ಟುಪಾಡುಗಳು, ಮಹಿಳೆಯರು ಮಾಡುವ ಕೆಲಸದ ಮೌಲ್ಯ ಕಡಿಮೆ ಮಾಡುವ ಅರ್ಥಶಾಸ್ತçದ ಪರಿಭಾಷೆ, ಕಡೆಗಣಿಸುವಿಕೆ, ಗಂಡು-ಹೆಣ್ಣು ಕೂಲಿ ಅಥವಾ ವೇತನ ನೀಡುವಲ್ಲಿ ತಾರತಮ್ಯ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ತಾರತಮ್ಯಗಳು, ಭಾಷೆಯಲ್ಲಿ ಲಿಂಗ ರಾಜಕಾರಣ, ಒಗ್ಗಟ್ಟು ಮುರಿಯುವ ಕೋಮುವಾದದ ಅಪಾಯ, ಪ್ರಭುತ್ವ ಪ್ರಾಯೋಜಿತ ತಾರತಮ್ಯಗಳು, ಸಂಬಳ ರಹಿತ ಕೆಲಸ, ಕಾಳಜಿ ಕೆಲಸಗಳು, ಕೌಟುಂಬಿಕ ಕೆಲಸದ ವಿಸ್ತರಣೆ ಹೀಗೆ ನಡೆಯುತ್ತಲೇ ಇವೆ. ದುಡಿಯುವ

ಸರ್ಕಾರವೇ ಸ್ವತಃ ಲಿಂಗ ತಾರತಮ್ಯ ಮಾಡುವ ಶೋಷಣೆಗೆ ಅವಕಾಶ ಮಾಡಿಕೊಡುವ ಶಾಸನಬದ್ಧ ಸೌಲಭ್ಯ ನೀಡದಿರುವುದು, ಖಾಸಗಿರಂಗದ ಉತ್ತೇಜನ, ಮಹಿಳೆಯರ ಕೆಲಸದ ಕಡೆಗಣನೆ, ಕೆಲಸದ ಸ್ಥಳದಲ್ಲಿ ಕೊರತೆಗಳು, ಹಾಲುಣಿಸಲು ಪ್ರತ್ಯೇಕ ವ್ಯವಸ್ಥೆ ಇಲ್ಲದಿರುವುದು, ಕ್ರಶ್ ವ್ಯವಸ್ಥೆ ಮಾಡದಿರುವುದು, ಪದೋನ್ನತಿ ಇಲ್ಲದಿರುವುದು, ಕೆಲಸದ ಸ್ವರೂಪದಲ್ಲಾದ ಬದಲಾವಣೆಯಿಂದ ಉದ್ಯೋಗ ರಕ್ಷಣೆ ಇಲ್ಲದಿರುವುದು, ಸಾಮಾಜಿಕ ಸುರಕ್ಷೆ, ಹೆರಿಗೆ ಸೌಲಭ್ಯದಿಂದ ವಂಚಿಸುತ್ತಿರುವುದು ಹೀಗೆ ಇವೆಲ್ಲ ಮಹಿಳಾ ಶ್ರಮ ಶಕ್ತಿಗೆ ಇರುವ ಅಡೆತಡೆಗಳು, ತಾರತಮ್ಯಗಳು. ದುಡಿಯುವ

ದೌಜ್ಯನ್ಯದ ಸ್ವರೂಪ ಇದರ ಜೊತೆಗೆ ಹಾಸುಹೊಕ್ಕಾಗಿದೆ. ಅದರಲ್ಲೂ ಮುಖ್ಯವಾಗಿ ಸಂಸ್ಕೃತಿ ಹೆಸರಿನಲ್ಲಿ ಧಾಳಿ, ಕೆಲಸದ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ, ದಿನನಿತ್ಯದ ಜೀವನದಲ್ಲಿ, ಪ್ರಯಾಣದಲ್ಲಿ, ಶಾಲೆ ಕಾಲೇಜು ಕ್ಯಾಂಪಸ್ ಹಾಗೂ ಹಾಸ್ಟೆಲ್ಗಳಲ್ಲಿ, ರೈಲು, ವಿಮಾನಗಳಲ್ಲೂ ಲೈಂಗಿಕ ಹಿಂಸೆ, ಇವು ಈ ಸಮಾಜದ ಅಂತರ್ಗತ ವಿದ್ಯಮಾನಗಳು, ಇಡೀ ಸಮಾಜದ ಬದಲಾವಣೆಗೆ ಪ್ರಜ್ಞಾಪೂರ್ವಕ ಹೋರಾಟ ಮಾಡದೇ ಪ್ರತ್ಯೇಕವಾಗಿ ಮಹಿಳೆಯರ ಮೇಲಿನ ಯಾವುದೇ ಸ್ವರೂಪದ ದಾಳಿ, ದಬ್ಬಾಳಿಕೆ, ದೌರ್ಜನ್ಯ, ತಾರತಮ್ಯ ನಿವಾರಿಸಲು, ಶೋಷಣೆ ಹೋಗಲಾಡಿಸಲು, ಸಮಾನತೆಯ ಆಶಯ ಸಾಕಾರ ಗೊಳಿಸಲು ಸಾಧ್ಯವಿಲ್ಲ.

ಇಂದು ಮಹಿಳೆಯರು ದುಡಿಯುವ ಕ್ಷೇತ್ರಗಳತ್ತ ಒಮ್ಮೆ ಕಣ್ಣು ಹಾಯಿಸೋಣ.

ಉದ್ಯೋಗ ಸೃಷ್ಟಿಯ ಪ್ರಧಾನ ವಲಯಗಳು 1) ಉತ್ಪಾದನಾ ವಲಯ, 2) ಕೃಷಿ ವಲಯ ಹಾಗೂ 3) ಸೇವಾ ವಲಯಗಳನ್ನು ಹೆಸರಿಸಲಾಗುತ್ತದೆ. ಇದರಲ್ಲಿ ಕೃಷಿ ಮತ್ತು ಸೇವಾ ವಲಯಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ವ್ಯಾಪಕವಾಗಿದ್ದು ಕಣ್ಣಿಗೆ ರಾಚುತ್ತದೆ. ಉತ್ಪಾದನಾ ವಲಯದಲ್ಲಿ ಅಷ್ಟಾಗಿ ಇಲ್ಲ. ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಇವು ಪ್ರಧಾನವಾದುವೆಂದು ವ್ಯಾಖ್ಯಾನಿಸಲಾಗುತ್ತದೆ. ಮಹಿಳೆಯರ ದುಡಿಮೆ ಇಲ್ಲದೇ ಇವು ಪೂರ್ಣವಾಗಲಾರವು.

ಉತ್ಪಾದನಾ ವಲಯದಲ್ಲಿ ಉದ್ಯೋಗ ರಹಿತ ಬೆಳವಣಿಗೆ ಆಯಿತು. ಮಾಲಿಕರ ಲಾಭ ಹೆಚ್ಚಿತು. ಉದಾರಿಕರಣ ದಶಕದಲ್ಲಿ ಸೇವಾ ಕ್ಷೇತ್ರದ ಸ್ವರೂಪ ಬದಲಾಯಿತು. ಅನೌಪಚಾರಿಕ ವಲಯಗಳು ಹೆಚ್ಚಾದವು. ಸಾಂಪ್ರದಾಯಿಕ ಕೆಲಸದ ವಿಧಾನಗಳು ಹಂತಹಂತವಾಗಿ ಇಲ್ಲವಾಗುತ್ತ ಬಂದವು. ಇಲ್ಲೆಲ್ಲ ಕಾನೂನಿ ಸೌಲಭ್ಯಗಳಿಲ್ಲದೇ ಮಹಿಳೆಯರನ್ನು ದುಡಿಸುವಿಕೆ ಹೆಚ್ಚಿತು. ಇದಕ್ಕೆ ಹೊಸ ಶೋಧವೇನೂ ಬೇಕಿಲ್ಲ. ಏಕೆಂದರೆ, ತಾತ್ಕಾಲಿಕ ಉದ್ಯೋಗಿಗಳು ಹೆಚ್ಚು. ನೇಮಕಾತಿ ಪತ್ರ ಇರುವದಿಲ್ಲ. ಅಸಮರ್ಥನೀಯ ವೇತನ ವ್ಯವಸ್ಥೆ, ಕನಿಷ್ಟ ಕೂಲಿಯ ಪ್ರಸ್ತಾಪವೇ ಇಲ್ಲ. ಸಾಮಾಜಿಕ ಭದ್ರತೆ ಇಲ್ಲ, ಕುಂದುಕೊರತೆ ಪರಿಹಾರಕ್ಕೆ ಆಲಿಸುವ ಕಾರ್ಯವಿಧಾನವಿಲ್ಲ. ದೂರು ನಿವಾರಣ ಸಮಿತಿಗಳು ಇಲ್ಲ, ಇದ್ದರೂ ನಿಷ್ಕಿçಯ. ಇದು 1990 ರ ನಂತರದ ಭೀಕರ ಕೊಡುಗೆ. ಇಂತಹ ಅಸುರಕ್ಷಿತ ಉದ್ಯೋಗದ ಪ್ರಮಾಣ ಮಾತ್ರ 90%, ಇದನ್ನು ತೋರಿಸಿಯೇ ಬಾರೀ ಉದ್ಯೋಗ ಸೃಷ್ಟಿಯಾಯಿತೆಂದು ಘೋಷಿಸಿಕೊಳ್ಳಲಾಯಿತು.

ಈ ಅಸುರಕ್ಷಿತ ಉದ್ಯೋಗ ಮಾದರಿಯಲ್ಲಿಯೇ ದುಡಿಯುವ ಮಹಿಳೆಯರು ಬಹುಪಾಲು ಸಿಲುಕಿಕೊಂಡರು.

ಕೂಲಿಯೇ ಇಲ್ಲದ ದುಡಿಮೆ ಮತ್ತು ಕೆಲಸದ ಮಹಿಳೀಕರಣ ಏಕಕಾಲದಲ್ಲಿ ಏರಿಕೆ ಆಗಿದೆ.

ಸಂಘಟಿತ ಮತ್ತು ಅಸಂಘಟಿತ ಹಾಗೂ ಎರಡೂ ಅಲ್ಲದ ಕೆಲಸಗಾರರ ವಿಭಾಗ ಇದರಲ್ಲಿದೆ. ಕಾಳಜಿ ಕೆಲಸಗಳಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಮಹಿಳೆಯರಿದ್ದು ವೇತನವೇ ನಿಗದಿ ಇಲ್ಲದ ವಲಯ ಇದಾಗಿದೆ. ಇಲ್ಲಿ ಸರಕಾರದ ಅನೇಕ ಯೋಜನೆಗಳ ಕಾರ್ಮಿಕರು – ಆಹಾರ, ಆರೋಗ್ಯ, ಶಿಕ್ಷಣ, ಕೃಷಿ, ಅಂಗವಿಕಲರ ಯೋಜನೆಗಳು ಇತ್ಯಾದಿ ಇರಬಹುದು – ಅಂಗನವಾಡಿ, ಅಕ್ಷರದಾಸೋಹ, ಆಶಾ, ಉಷಾ, ಶಕ್ತಿ, ಸಖಿಯರು, ಸಹಾಯಕರು, ಅಂಗವಿಕಲರ ವಿವಿಧೋದ್ದೇಶ ಕಾರ್ಯಕರ್ತರು, ಅಪರೇಟರ್ಸ್, ಸ್ವಚ್ಚತೆಯವರು ಹೀಗೆ… ಪಟ್ಟಿ ಉದ್ದ ಇದೆ. ಬೀದಿಬದಿ, ಮನೆಗೆಲಸ, ಪಂಚಾಯ್ತಿಗಳಲ್ಲಿ ಬಿಲ್ ಕಲೆಕ್ಟರ್, ವಾಲ್ ಮನ್, ಸಿಪಾಯಿ, ಸ್ವಚ್ಛವಾಹಿನಿ, ಮುನ್ಸಿಪಲ್ ಗಳಲ್ಲಿ ಡ್ರೈವರ್, ಕಸ ತೆಗೆಯುವವರು, ವಿಂಗಡಿಸುವವರು, ಹಮಾಲಿ ಕಾರ್ಮಿಕರು – ಅಂಗಡಿ, ಮುಗ್ಗಟ್ಟುಗಳು, ಬಜಾರ್ ಗಳಲ್ಲಿ, ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ, ಗಿರಣಿಗಳಲ್ಲಿ ಮಹಿಳಾ ಹಮಾಲಿ ಕಾರ್ಮಿಕರು ಇದ್ದಾರೆ. (ಹಾಗೂ ಬಸ್ಸು, ರೈಲು ಇತ್ಯಾದಿ ಸಾರಿಗೆ ಸ್ಥಳದಲ್ಲಿ ಪುರುಷ ಹಮಾಲಿ ಕಾರ್ಮಿಕರೇ ಹೆಚ್ಚು ಇದ್ದಾರೆ.)

ಕಟ್ಟಡ ನಿರ್ಮಾಣದಂತಹ ಬೃಹತ್ ಉದ್ಯಮದಲ್ಲಿ ಹೆಚ್ಚು ಮಹಿಳೆಯರಿದ್ದಾರೆ. ಟೆಕ್ಸಟೈಲ್ಸ್, ಬೀಡಿ, ಅಗರಬತ್ತಿ ಕರಕುಶಲ, ಜವಳಿ, ದಿನಿನತ್ಯ ಮಾರಾಟಕ್ಕೆ ಹೂ ಹಣ್ಣು ಆಹಾರ ಸಂಸ್ಕರಣೆ, ಕಮ್ಮಾರಿಕೆ, ಹಂಚು, ಗೇರು, ನಾರು ಇರಬಹುದು, ಮಾಹಿತಿ ತಂತ್ರಜ್ಞಾನದ ಕಾರ್ಪೋರೇಟ್ ಸಂಸ್ಥೆಗಳಿಗೆ ವರ್ಕ್ ಫ್ರಂ ಹೋಂ ಇರಬಹುದು, ಕೃಷಿ, ಚಹ ಕಾಫಿ, ಸೆಣಬು, ಸಾಂಬಾರು ಪದಾರ್ಥಗಳ ತೋಟ ಕಾರ್ಮಿಕರಾಗಿರಬಹುದು ಅಥವಾ ಯಾವುದೇ ತೆರನಾದ ಸಮುದ್ರ ಉತ್ಪನ್ನಗಳ ಸಂಸ್ಕರಣೆ ಇತ್ಯಾದಿ, ಸಾರಿಗೆ ಸೇವೆ, ಆಸ್ಪತ್ರೆ, ಸರ್ಕಾರಿ ಮತ್ತು ಕಾಸಗಿ ನರ್ಸಿಂಗ್ ಹೋಂ, ಹೊಟೇಲ್‌ಗಳು, ದೊಡ್ಡ ದೊಡ್ಡ ಕಂಪನಿಗಳಿಗೆ, ಮಾಲ್ ಗಳಿಗೆ ಆಹಾರ ಸಂಸ್ಕರಣೆಗಳಲ್ಲಿ, ಬಂದರುಗಳಲ್ಲಿ, ಆಮದು ಮತ್ತು ರಫ್ತು ಉದ್ಯಮಗಳಲ್ಲಿ, ಗೋಡಂಬಿ, ಹಗ್ಗ, ನಾರು, ಪ್ಲಂಬರ್ ಎಲೆಕ್ಟಿçಶಿಯನ್, ನಿರ್ಮಾಣ ಕಾಮಗಾರಿ ಕೆಲಸಗಳಿರಬಹುದು ಅಲ್ಲೆಲ್ಲ ಮಹಿಳೆಯರಿದ್ದಾರೆ. ವಿದ್ಯುತ್ ಉತ್ಪಾದನೆ, ಪ್ರಸರಣೆ, ವಿತರಣೆಯಲ್ಲಿರುವವರು ಹೀಗೆ ಇದೊಂದು ಬಗೆಯ ಪಟ್ಟಿ ಬೆಳೆಯುತ್ತ ಸಾಗುತ್ತದೆ.

ದುಡಿಯುವ ಮಹಿಳೆಯರ ಬದುಕು ಅವರ ಅವಲಂಬಿತರ ಜೀವನ ಮತ್ತು ಜೀವನೋಪಾಯ ನಿರ್ವಹಣೆ ಇವೆಲ್ಲ ಹಂತಗಳಲ್ಲಿ ಸರ್ಕಾರದ ನೀತಿ ಅವರನ್ನು ಬಾಧಿಸುತ್ತಿದೆ. ಸಾಮಾಜಿಕ ಪರಿಸ್ಥಿತಿ ಅವರನ್ನು ನಿಯಂತ್ರಿಸುತ್ತದೆ, ಸಾಂಸ್ಕೃತಿಕ ಆಚರಣೆಗಳು ಅವರಿಗೆ ದಿಗ್ಬಂಧನ ವಿಧಿಸುತ್ತವೆ, ಕುಟುಂಬದ ಕಟ್ಟಳೆಗಳು ಅವರನ್ನು ಕಟ್ಟಿ ಬಿಗಿಯುತ್ತವೆ. ಈ ಬಲೆಯಲ್ಲಿ ಸಿಲುಕಿದ ದುಡಿಯುವ ಮಹಿಳೆಯರ ಗೋಳು ಒಂದೆರಡಲ್ಲ. ಕೆಲಸದ ಲಭ್ಯತೆಯ ಪ್ರಶ್ನೆ, ಅದು ಸರ್ಕಾರಿ ಅರೆ ಸರ್ಕಾರಿ, ಖಾಸಗಿ ರಂಗದ ಕೆಲಸಗಳಲ್ಲಿ ಇರಬಹುದು, ಕಾರ್ಖಾನೆಗಳು, ಘನ ಕೈಗಾರಿಕೆಗಳಲ್ಲಿ ಇರಬಹುದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನಪ್ರಿಯ ಯೋಜನೆಗಳಲ್ಲೂ ತಾರತಮ್ಯ ಇದೆ.

ಒಟ್ಟಾರೆ ಸಂಘಟಿತ ಅಸಂಘಟಿತ ವಲಯ ಸೇವಾ ವಲಯಗಳ ಕೆಲಸಗಳಲ್ಲಿ ಮಹಿಳೆಯರನ್ನು ದುಡಿಸಿಕೊಳ್ಳಲಾಗುತ್ತಿದೆ. ಆದರೆ ಒಟ್ಟಾರೆ ದುಡಿಮೆಯಲ್ಲಿ ಖಾಯಂ ಸ್ವರೂಪದ, ಕನಿಷ್ಟ ಕೂಲಿ ಕಾನೂನಿನಡಿ ಬರುವ, ಕೆಲಸದ ಭದ್ರತೆ, ವೇತನ, ಪಿಂಚಣಿ, ರಜೆ ಸೌಲಭ್ಯ ಇತ್ಯಾದಿ ಎಲ್ಲಾ ಸೌಲಭ್ಯಗಳ ಸಮೇತ ಇರುವ ಕೆಲಸಗಳಲ್ಲಿ ಮಹಿಳೆಯರು ಕಡಿಮೆ. ಉತ್ಪಾದನಾ ವಲಯದಲ್ಲಿಯಂತೂ ತೀರಾ ಕಡಿಮೆ. ಕೇವಲ ಬೆರಳೆಣಿಕೆಯಷ್ಟು ಜನರನ್ನು ತೋರಿಸಿ ವೈಭವೀಕರಿಸಿ ಹೇಳುವ ಉದಾಹರಿಸುವ ರೀತಿಯನ್ನಷ್ಟೇ ನೋಡಬಹುದು.

ಕೆಲಸದ ಸ್ವರೂಪದಲ್ಲಿ ಆಗಿರುವ ಬದಲಾವಣೆ ಮಹಿಳೆಯರ ಮೇಲೆ ಪರಿಣಾಮ:

ಗುತ್ತಿಗೆ ಕೆಲಸ, ಹೊರಗುತ್ತಿಗೆ, ನೇರ ಪಾವತಿ, ಜನಪ್ರಿಯ ಯೋಜನೆಗಳ ಕೆಲಸಗಳು, ನೀಮ್ ಮತ್ತು ನಾಪ್ಸ್ ಯೋಜನೆ ಟ್ರೇನಿಗಳು, ಸ್ಕಿಲ್ ಇಂಡಿಯಾ ಯೋಜನೆಯ ಕೆಲಸಗಳು, ಗಿಗ್ ಕಾಮಿಕರು, ಸೀಸನಲ್ ಕೆಲಸ, ಸೀಸನಲ್ ಅಲ್ಲದ ಕೆಲಸ, ಕೋರ್ ಮತ್ತು ನಾನ್ ಕೋರ್ ಉತ್ಪಾದನಾ ಸ್ವರೂಪದ ಕೆಲಸ, ಅಪ್ರೆಂಟಿಸ್ ಉದ್ಯೋಗಿಗಳು, ದೀರ್ಘಾವಧಿ ತರಬೇತಿ ನೌಕರರು, ಕಲಿಯುವಾಗಲೇ ಗಳಿಸುವ ತರಬೇತಿದಾರರು, ಪ್ರಾಸಂಗಿಕ ಕೆಲಸಗಳು, ಪ್ರಶಿಕ್ಷಣಾರ್ಥಿಗಳು, ನಿಶ್ಚಿತ ಅವಧಿಯ ಉದ್ಯೋಗಿಗಳು, ಜ್ಯೂನಿಯರ್ ಎಕ್ಸಿಕ್ಯೂಟಿವ್ ಗಳು, ಸ್ಕೀಂ ಟ್ರೇನಿಗಳು, ಹೀಗೆಲ್ಲ ಹೆಸರು ಕೊಟ್ಟು ಮಾಲಿಕ ಕಾರ್ಮಿಕ ಸಂಬಂಧವಿಲ್ಲದ ಕೆಲಸದ ವಿಧಾನಕ್ಕೆ ತೆರೆದುಕೊಳ್ಳುತ್ತಿದೆ ಈಗಿನ ಅಭಿವೃದ್ಧಿಯ ವಿಧಾನ ಮತ್ತು ಆರ್ಥಿಕತೆ. ಇವೆಲ್ಲ ಮಹಿಳೆಯರ ಮೇಲೆ ಗುಲಾಮಗಿರಿಯ ಸ್ವರೂಪಗಳಾಗಿವೆ. ಮಹಿಳೆಯರು ಕೆಲಸದ ಅನಿಶ್ಚಿತತೆಯಿಂದ ಬಳಲುವಂತೆ ಮಾಡಲಾಗುತ್ತದೆ ಮತ್ತು ಮಹಿಳೆಯರ ಕೆಲಸಗಳನ್ನೇ ಗೌಣವಾಗಿಸಿ ಅವರನ್ನು ಅದೃಶ್ಯ ಕಾರ್ಮಿಕರನ್ನಾಗಿಸಲಾಗುತ್ತಿದೆ.

ಈ ವಿಭಾಗದಲ್ಲಿ ಕೆಲಸ ಮಾಡುವವರ ಸಂಘಟನೆಯ ಹಕ್ಕು, ಟ್ರೇಡ್ ಯೂನಿಯನ್ ಹಕ್ಕುಗಳನ್ನು, ನಿರಾಕರಿಸುವ ಮತ್ತು ಹೋರಾಟಗಳಿಂದ ಪಡೆದ ಸೌಲಭ್ಯಗಳನ್ನ ಕಾರ್ಮಿಕ ಸಂಹಿತೆ ಜಾರಿ ಮೂಲಕ ಕಸಿಯುವುದು ಇದರ ಉದ್ದೇಶ. ಇದಕ್ಕೆ ಅತಿಹೆಚ್ಚು ಬೇಗ ಬಲಿಯಾಗುವವರು ದುಡಿಯುವ ಮಹಿಳೆಯರು. ಅಪಾಯಕಾರಿ ದುಡಿಮೆಗಳಲ್ಲಿಯೂ ರಾತ್ರಿಪಾಳಿ ಕೆಲಸವನ್ನು ಮಹಿಳೆಯರಿಗೆ ಹಾಕುವುದಕ್ಕೆ ಕಾನೂನಿ ಅವಕಾಶ ಕಲ್ಪಿಸುವಿಕೆ, ಮಕ್ಕಳನ್ನು ಹೆರುವ ಕೆಲಸ ಮುಗಿಸಿ ಬಂದರೆ ಮಾತ್ರ ಕೆಲಸ ಅಥವಾ ಹೆರಿಗೆ ರಜಾ ನಿರಾಕರಣೆ, ಅಂಗಸೌಷ್ಟವದ ಪ್ರಶ್ನೆ ಮುಂದಿಡುವಿಕೆಯೂ ನಡೆದಿದೆ. ಮುಟ್ಟಿನ ರಜೆ ನೀಡಬೇಕೆಂದು ಅಭಿಪ್ರಾಯವಿದ್ದರೂ ಅದನ್ನು ನೀಡಲು ಮುಂದಾಗದ ಪ್ರಭುತ್ವದ ಧೋರಣೆ ನೋಡುತ್ತಿದ್ದೇವೆ.

ಉತ್ಪಾದನಾ ವಲಯದಲ್ಲಿ ಮಹಿಳೆಯರು ಅನುಭವಿಸುವ ತಾರತಮ್ಯಗಳು:

ಉತ್ಪಾದನಾ ವಲಯದಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ ಇರುವುದಕ್ಕೂ ಸಮಾನತೆಯ ಹಕ್ಕು ಸಾಕಾರ ಆಗದೇ ಇರುವುದಕ್ಕೂ ಸಂಬಂಧವಿದೆ ಎಂದು 150 ವರ್ಷಗಳ ಹಿಂದೆಯೇ ಹೀಗೆ ಗುರ್ತಿಸಲಾಗಿತ್ತು. “ಮಹಿಳೆಯರು ಬೃಹತ್ ಸಾಮಾಜಿಕ ಉತ್ಪಾದನೆಯಲ್ಲಿ ದೊಡ್ಡ ಪ್ರಮಾಣದಲ್ಲಿ ತೊಡಗಿಸಿಕೊಂಡು ಗೃಹ ಕೃತ್ಯದಲ್ಲಿ ನಗಣ್ಯ ರೀತಿಯಲ್ಲಿ ತೊಡಗಿಸಿಕೊಂಡಾಗ ಮಾತ್ರವೇ ಅವರನ್ನು ವಿಮೋಚನೆಗೊಳಿಸಲು ಸಾಧ್ಯ” ಎಂದು ಫ್ರೆಡರಿಕ್ ಎಂಗೆಲ್ಸ್ ಹೇಳಿದ್ದರು.

ಉದ್ಯೋಗ ಸೃಷ್ಟಿಯ ಪ್ರಧಾನ ವಲಯಗಳು ಉತ್ಪಾದನಾ ವಲಯ, ಕೃಷಿ ವಲಯ, ಹಾಗೂ ಸೇವಾ ವಲಯಗಳನ್ನು ಹೆಸರಿಸಲಾಗುತ್ತದೆ. ಇದರಲ್ಲಿ ವ್ಯಾಪಕವಾಗಿ ಕೃಷಿ ಮತ್ತು ಸೇವಾ ವಲಯಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಕಣ್ಣಿಗೆ ರಾಚುತ್ತದೆ. ಉತ್ಪಾದನಾ ವಲಯದಲ್ಲಿ ಅಷ್ಟಾಗಿ ಇಲ್ಲ. ಘನಕೈಗಾರಿಕೆಗಳ ಮಾಲಿಕತ್ವವೂ ಬಹುತೇಕ ಪುರುಷರ ಕೈಯಲ್ಲೇ ಇದೆ ಎಂಬುದನ್ನೂ ಗಮನಿಸೋಣ.

ಈ ವಲಯದಲ್ಲಿ ಮಹಿಳೆಯರ ತೊಡಗಿಸುವ ಪ್ರಮಾಣ, ಸಂಖ್ಯೆ ಹೇಗಿದೆ? ಬದಲಾಗುತ್ತಿರುವ ಜಾಗತಿಕ ವಿದ್ಯಮಾನದಲ್ಲಿ ಕೆಲಸದ ವ್ಯಾಖ್ಯಾನವೇ ಬದಲಾಗುತ್ತಿದೆ. ಬಂಡವಾಳ ಮತ್ತು ಕಾರ್ಮಿಕರು ಇದರಲ್ಲಿ ಸರ್ಕಾರವೂ ಬಂಡವಾಳವನ್ನೇ ಬಲಿಷ್ಟಗೊಳಿಸುತ್ತದೆ ಎಂಬುದನ್ನು ಕಾರ್ಮಿಕರನ್ನು ಅಗ್ಗದ ಕೂಲಿಗೆ ಹೆಚ್ಚಿಗೆ ಶ್ರಮಕ್ಕೆ ದುಡಿಸುತ್ತಿದೆ ಎಂಬುದನ್ನು ಕಾಣುತ್ತಿದ್ದೇವೆ. ದುಡಿತ ಮತ್ತು ಗಳಿಕೆಯ ಮೂಲಕ ಪಾಲ್ಗೊಳ್ಳಬೇಕಾದ ಶ್ರಮಿಕರನ್ನು ಅಂದರೆ ಸಂಪತ್ತು ಸೃಷ್ಟಿಸುವವರ ಬಗ್ಗೆ ಅವರ ಬದುಕಿನ ಬಗ್ಗೆ ಆಳುವವರು ನಿಕೃಷ್ಟ ಧೋರಣೆ ಅನುಸರಿಸುತ್ತಿದ್ದಾರೆ. ಕೊಳ್ಳುವ ಶಕ್ತಿ ಬೇಡಿಕೆ ಹೆಚ್ಚಿಸುತ್ತದೆ, ಬೇಡಿಕೆ ಉತ್ಪಾದನೆಯ ಅಗತ್ಯ ಹೆಚ್ಚಿಸುತ್ತದೆ, ಅದರ ಲಾಭದಿಂದ ಮತ್ತಷ್ಟು ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂಬುದನ್ನು ಅಲ್ಲಗಳೆಯುವ ಸರಕಾರಗಳು ಲಾಭ, ಅತಿಲಾಭದ ಕಡೆಗೆ ಸಾಗಿವೆ.

ಘನ ಕೈಗಾರಿಕೆಯಲ್ಲಿಯೂ ಅಭದ್ರತೆಯ ವಾತಾವರಣ, ದುಡಿಮೆಗೆ ಕೂಲಿ ಸಮವಾಗಿ ಕೊಡಲಾಗದ ಮಾಲಿಕರ ಧೋರಣೆ, ತಾರತಮ್ಯ ಪೂರಿತ ಕೆಲಸದ ವಾತಾವರಣ, ಸಮಾನ ಕೆಲಸಕ್ಕೆ ಸಮಾನ ವೇತನ ಇಲ್ಲದಿರುವುದು ಕಾರ್ಖಾನೆಯ ಪರಿಸರದ ಹತ್ತಿರ ವಸತಿಗೆ ಯೋಗ್ಯ ವ್ಯವಸ್ಥೆಗಳಿಲ್ಲದಿರುವದು, ಪ್ರಯಾಣದ ಅನಾನುಕೂಲ, ಕೌಟುಂಬಿಕ ಕೆಲಸ ಜವಾಬ್ದಾರಿಗಳ ಒತ್ತಡ ದುಡಿಯುವ ಮಹಿಳೆಯರನ್ನು ಜಗ್ಗುತ್ತಿರುತ್ತದೆ. ಹೀಗೆ ಹೇಳುವಾಗಲೇ ಕಿರುಕುಳ ಮತ್ತು ಲೈಂಗಿಕ ಕಿರುಕುಳ ಎಂಬುದು ಮಾನವ ಘನೆತೆಯ ಬದುಕನ್ನೇ ಕಸಿಯುತ್ತದೆ. ಜೀವನೋಪಾಯದ ಹಕ್ಕನ್ನು ಲಿಂಗತಾರತಮ್ಯವಿಲ್ಲದೇ ಸಮಾನಾವಕಾಶ ಪಡೆಯುವ ಹಕ್ಕನ್ನು ಉಲ್ಲಂಘಿಸುವ ಕ್ರಿಯೆಗಳು ಭಾರತದಾದ್ಯಂತ ಹೆಚ್ಚಿವೆ.

ಮಹಿಳೆಯರನ್ನು ನೋಡುವ ಪಾಳೆಗಾರಿ ದೃಷ್ಟಿಕೋನ ಬದಲಾಗಿಲ್ಲ. ಮಹಿಳೆಯರ ಶೈಕ್ಷಣಿಕ, ರಾಜಕೀಯ, ಆರ್ಥಿಕ ಮಟ್ಟ ಹಿಂದುಳಿದಿರುವುದರಿಂದ ಸಂಘಟಿತ ವಲಯದಲ್ಲಿ ಅದರಲ್ಲಿಯೂ ಉತ್ಪಾದನಾ ವಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿಲ್ಲ ಎನ್ನುತ್ತಾರೆ. ಆದರೆ ಸ್ವಲ್ಪ ಭಿನ್ನವಾಗಿ ಯೋಚಿಸೋಣ, ಕೆಲಸದ ಸ್ಥಳದಲ್ಲಿ ಮತ್ತು ಕೆಲಸ ಒದಗಿಸುವಲ್ಲಿ ಲಿಂಗಾಧಾರಿತ ಅಸಮಾನತೆ ಇದೆ. 2012 ರಲ್ಲಿ ಆಡಳಿತ ಮತ್ತು ಆರ್ತಿಕ ಕ್ಷೇತ್ರದ ಕುರಿತು “ಮಹಿಳೆ-ಪುರುಷ” ವರದಿ ಹೀಗೆ ಹೇಳುತ್ತದೆ, ಸಂಘಟಿತ ವಲಯದಲ್ಲಿ 6% ಮಹಿಳೆಯರು ಅಸಂಘಟಿತ ವಲಯದಲ್ಲಿ 94% ಮಹಿಳೆಯರು ಇದ್ದಾರೆ. ಒಟ್ಟೂ ದುಡಿಯುವ ಮಹಿಳೆಯರಲ್ಲಿ 10% ಮಾತ್ರವೇ ಸೇವಾ ನಿಯಮಾವಳಿಗೆ ಒಳಪಟ್ಟಿದ್ದಾರೆ. ಮಹಿಳೆಯರು ಮಾಡುವ ಕೆಲಸಗಳು ಸಹನೆ ಬೇಡುವ ಕಠಿಣ ಕೆಲಸಗಳು. ಆರೋಗ್ಯಕ್ಕೆ ಮಆರಕವಾದ, ಆಯಾಸದ ಕೆಲಸಗಳು. ಇದರಿಮದ ಗರ್ಭಪಾತ, ಅಕಾಲಿಕ ಪ್ರಸವ, ಸಾವು ಆಗುತ್ತಿದೆ. ಹಾಗಾಗಿ ಸ್ವತಃ ಮಹಿಳೆಯರು ಈ ಅಸುರಕ್ಷಿತ ಉತ್ಪಾದನಾ ವಲಯದ ಕೆಲಸಗಳಿಗೆ ಸೇರಲು ಹಿಂದೇಟು ಹಾಕುವಂತಾಗಿದೆ.

ಸಮಯದ ಮಿತಿ ಇಲ್ಲದೇ ದುಡಿಯುವಲ್ಲಿ ಮಹಿಳೆಯರು ಹೆಚ್ಚು. ನಿಗದಿತ ಸಮಯ ಮಿತಿಯಲ್ಲಿ ಕೆಲಸ ಮಾಡುವಲ್ಲಿ ಪುರುಷರು ಜಾಸ್ತಿ. ಮಹಿಳೆಯರ ದುಡಿಮೆ ಎಲ್ಲರಿಗೂ ಖಾಯಂ ಆಗಿ ಬೇಕು, ಆದರೆ ಮಹಿಳೆಯರನ್ನು ಕೆಲಸದಲ್ಲಿ ಖಾಯಮಾತಿ ಮಾಡುವ, ಸೌಲಭ್ಯ ನೀಡುವ ಪ್ರಶ್ನೆ ಬಂದಾಗ ಕಡೆಗಣನೆ. ಇದು ಭಾರತದ ತಾರತಮ್ಯಪೂರಿತ ಕಾರ್ಮಿಕ ನೀತಿಯಾಗಿದೆ.

ಇದಕ್ಕೆಲ್ಲ ಹಲವು ಕಾರಣಗಳಿವೆ. ಜಾಗತಿಕ ಆರ್ಥಿಕ ನೀತಿ, ಆಯಾ ದೇಶಗಳ ಸರ್ಕಾರಗಳ ಒಲವು ಮತ್ತು ನಿಲುವುಗಳು ಹಾಗೂ ನಿರ್ದಿಷ್ಟ ಪರಿಸ್ಥಿತಿಯಲ್ಲಿ ಕೆಲಸದ ಅವಕಾಶಗಳು ಮತ್ತು ಒಟ್ಟಾರೆ ಬದಲಾಗುತ್ತಿರುವ ಉದ್ಯೋಗ ಸಂಬಂಧಗಳು ಮುಖ್ಯವಾಗಿ ಗುರುತಿಸಬಹುದು. ನವ ಉದಾರಿಕರಣ ನೀತಿಯ ಫಲಗಳೇ ಇವು.
ಅದಕ್ಕೇ ಅಮರ್ತ್ಯಸೇನ್ ಹೇಳಿರುವುದು “ಅಭಿವೃದ್ಧಿಯ ಪ್ರಶ್ನೆ ತುಂಬಾ ವ್ಯಾಪಕವಾದುದು. ಈಗಿನ ಅಭಿವೃದ್ಧಿ ಪ್ರಣಾಳಿಕೆಯು ಇರುವುದರ ಸಂಕಥನವಾಗಿದೆಯೇ ಹೊರತೂ ಹೊಂದಿರುವುದರ ಸಂಕಥನವಾಗಿಲ್ಲ” ಎಂದು. ಇಲ್ಲಿ ದುಡಿಯುವ ಮಹಿಳೆಯರ ಸಂಕಥನ ನೋಡಿದರೆ ಅವರದ್ದು ‘ಕಳಕೊಳ್ಳುವ’ ಸಂಕಥನವಾಗಿದೆ.

ಜಾಗತಿಕ ಸನ್ನಿವೇಶವನ್ನು ಭಾರತದೊಡನೆ ತುಲನಾತ್ಮಕವಾಗಿ ನೋಡೋಣ:

ಜಗತ್ತಿನ ಎಲ್ಲಾ ಕೆಲಸಗಳ 60% ಮಹಿಳೆ ಮಾಡುತ್ತಾಳೆ. ವರಮಾನದಲ್ಲಿ ಆಕೆಯ ಪಾಲು 10%. ವಿಶ್ವದ ಒಟ್ಟೂ ಭೂ ಪ್ರದೇಶದ 1% ಮಹಿಳೆಯ ಅಧೀನ. ವಿಶ್ವದ 1 ಬಿಲಿಯ ಬಡವರಲ್ಲಿ 60% ದರಿದ್ರರು ಇದ್ದು ಇದರಲ್ಲಿಯೂ 70% ಮಹಿಳೆಯರೇ ಇದ್ದಾರೆ. ವಿಶ್ವದಲ್ಲಿ ಮಹಿಳೆಯರು ಪುರುಷರಿಗಿಂತ 12% ಹೆಚ್ಚು ದುಡಿಯುತ್ತಾರೆ. ಆದರೆ ಸಮಾನ ಸ್ವರೂಪದ ಕೆಲಸದಲ್ಲಿ 40 % ಕಡಿಮೆ ವೇತನ ಮಹಿಳೆಯರಿಗೆ. ಅರ್ಧ ಮಿಲಿಯ ಮಹಿಳೆಯರು ಗರ್ಭಧಾರಣೆ ತೊಂದರೆಯಿಂದ ಸಾಯುತ್ತಿದ್ದಾರೆ. ಪ್ರಪಂಚದ 1/5 ರಷ್ಟು ಮಹಿಳೆಯರ ಮೇಲೆ ಅತ್ಯಾಚಾರ ಆಗುತ್ತಿದೆ. ಯುದ್ಧ, ಪ್ರಕೃತಿ ವಿಕೋಪ ಇತ್ಯಾದಿ ಕಾರಣಕ್ಕೆ 23 ಮಿಲಿಯನ್ ನಿರಾಶ್ರಿತರಲ್ಲಿ 80% ಮಹಿಳೆಯರು.! ಇವೆಲ್ಲವೂ ಕಳೆದ 10-15 ವರ್ಷಗಳ ಸರ್ವೆ. ಇತ್ತೀಚಿನದು ಇನ್ನೂ ಭಯಾನಕ. ದಿನಕ್ಕೆ 140 ಮಹಿಳೆಯರು ತಮ್ಮ ಗಂಡಂದಿರಿಂದ ಕೊಲೆಗೀಡಾಗುತ್ತಿದ್ದಾರೆ.

ಡಬ್ಲು.ಎಫ್.ಟಿಯು 4 ವರ್ಷಗಳ ಹಿಂದೆ – ವಿಶ್ವ ಬ್ಯಾಂಕ್, ಅಂತಾರಾಷ್ಟ್ರೀಯ ಹಣಕಾಸು ನಿಧಿ, ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್.ಒ) ಹಾಗೂ ಎಫ್.ಐ.ಒ – ವರದಿ ಆಧರಿಸಿ ಕೆಲವು ತುಲನಾತ್ಮಕ ಅಂಕಿಸಂಖ್ಯೆ ನೀಡಿದೆ. ವಿಶ್ವದಲ್ಲಿ ನಿರುದ್ಯೋಗದ ಅಪಾಯ ಎದುರಿಸುತ್ತಿರುವವರಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು. ಮಾತ್ರವಲ್ಲ ಘೋಷಿತ ನಿರ್ದಿಷ್ಟ ಉದ್ಯೋಗದಲ್ಲಿ ಜಗತ್ತಿನ ಒಟ್ಟೂ ಉದ್ಯೋಗದಲ್ಲಿ ಮಹಿಳೆಯರು 40% ಕ್ಕಿಂತ ಕಡಿಮೆ. ಅರೆಕಾಲಿಕ ಕೆಲಸಗಳಲ್ಲಿ 57%, ಅನ್ ಪೇಯ್ಡ್ ಅಥವಾ ಪಾವತಿಸದ ಮನೆ ಕೆಲಸ ಮತ್ತು ಕುಟುಂಬ ಆರೈಕೆ ಕೆಲಸಗಳಲ್ಲಿ ಬಹುಪಾಲು ಮಹಿಳೆಯರೇ ಇದ್ದಾರೆ. ಹಾಗೆಯೇ ವಿಶ್ವದಲ್ಲಿ ವೇತನದಲ್ಲಿ ಲಿಂಗ ತಾರತಮ್ಯ 23% ಇದೆ. ವಿಶ್ವದ 60% ದುಡಿಯುವ ಮಹಿಳೆಯರಿಗೆ ಹೆರಿಗೆ ರಜಾ ಇಲ್ಲ. ಇದರಲ್ಲಿ 65% ಮಹಿಳೆಯರಿಗೆ ಹೆರಿಗೆ ರಜಾ ಅವಧಿಯ ಆದಾಯ ರಕ್ಷಣೆಯೇ ಇಲ್ಲ.

ಭಾರತದಲ್ಲಿ 2011 ರಿಂದ ಜನಗಣತಿ ಆಗದೇ ಇರುವುದರಿಂದ ಕೆಲವು ಸ್ಯಾಂಪಲ್ ಸರ್ವೆಗಳನ್ನು, ಇಲಾಖಾವಾರು ಸರ್ವೆಗಳನ್ನು, ಜಾಗತಿಕ ಸರ್ವೆಗಳನ್ನೇ ಮುಂದಿಟ್ಟು ದುಡಿಯುವ ಮಹಿಳೆಯರ ಬಗೆಗೆ ಅಭ್ಯಸಿಸುವಂತಾಗಿದೆ.

ಭಾರತದಲ್ಲಿ ಮಹಿಳೆ – ಮನೆಗೆಲಸ, ಚಾಕರಿ, ಮತ್ತು ಹೊರಗೆಲಸದಲ್ಲಿ ಮಹಿಳೆಯರು ದಿನದ 352 ನಿಮಿಷ ದುಡಿಯುತ್ತಾರೆ. ಪುರುಷರು ಕೇವಲ 51.8 ನಿಮಿಷ ಮನೆಗೆಲಸದಲ್ಲಿ ದುಡಿಯುತ್ತಾರೆ. ಐಟಿ, ಕಟ್ಟಡ, ಕೃಷಿಯಲ್ಲಿ 34% ವೇತನ ತಾರತಮ್ಯ, ನಗರದಲ್ಲಿ 19 % ವೇತನ ತಾರತಮ್ಯ ಅನುಭವಿಸುತ್ತಿದ್ದಾರೆ. ಇದರಿಂದ ಕಾರ್ಮಿಕರ ಶಕ್ತಿಯನ್ನು ಅಗ್ಗದ ಸರಕಾಗಿಸಿ ಕಾರ್ಮಿಕರ ಬದುಕು ಅಮಾನವೀಯಗೊಳಿಸುವುದು ಉದ್ದೇಶ.

ಜಾಗತಿಕ ಲಿಂಗ ಅಸಮಾನತೆಯ ಸೂಚ್ಯಾಂಕದಲ್ಲಿ 108 ನೇ ಸ್ಥಾನದಲ್ಲಿ ಭಾರತ ಇದೆ. 2133 ನೇ ಇಸವಿ ಬಂದರೂ ಭಾರತ ಚೇತರಿಸದು. ಭಾರತದ ಒಟ್ಟೂ ಹೆಣ್ಣು ಮಕ್ಕಳಲ್ಲಿ 50% ಜನ 24 ವರ್ಷದೊಳಗಿನವರು. ಇದರಲ್ಲಿ 87 ನೇ ಸ್ಥಾನದಲ್ಲಿದ್ದೇವೆ. ವೇತನ ರಹಿತ ಕೆಲಸ ಹಾಗೂ ಅನಿಶ್ಚಿತ ಕೆಲಸಗಳಲ್ಲಿ 70% ಮಹೀಲೆಯರು ಇದ್ದಾರೆ. ಪುರುಷ ಮತ್ತು ಮಹಿಳೆಯರ ಮಧ್ಯೆ ವೇತನ ತಾರತಮ್ಯ 40% ಇದೆ.

ಜಗತ್ತಿನಲ್ಲಿ ಅತಿಹೆಚ್ಚು ಲೈಂಗಿಕ ಅಪರಾಧಗಳು ನಡೆಯುವ ದೇಶಗಳಲ್ಲಿ ಭಾರತವೂ ಒಂದು. ವಿಶ್ವದ ಹಸಿವು ವರದಿಯಲ್ಲಿ ಭಾರತದ 20 ಕೋಟಿ ಜನ ಇದ್ದಾರೆ. 48% ಕುಂಠಿತ ಬೆಳವಣಿಗೆಯಲ್ಲಿದ್ದಾರೆ. 80 ಲಕ್ಷ ಹೆಣ್ಣು ಮಕ್ಕಳು ಶಾಲೆಯಿಂದ ಡ್ರಾಪ್ ಔಟ್. 48 % ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ವರದಕ್ಷಿಣೆ ಸಾವು, ಮರ್ಯಾದೆ ಮುಚ್ಚಿಕೊಳ್ಳಲು ಕೊಲೆ, ಬಾಲ್ಯ ವಿವಾಹ ನಡೆಯುತ್ತಲೇ ಇದೆ. ವಲಸೆ ಕಾರ್ಮಿಕ ಮಹಿಳೆಯರನ್ನೂ ಒಳಗೊಂಡು 18 ವರ್ಷದೊಳಗಿನವರಲ್ಲಿ 47% ಬಾಲ್ಯ ವಿವಾಹವಾಗುತ್ತಿದೆ.

1991 ರಿಂದ 2014 ರ ತನಕ 7.5 ಕೋಟಿ ಮಹಿಳೆಯರು ಕಾಣೆಯಾಗಿದ್ದಾರೆ. ಯಾಕೆಂದರೆ ಭ್ರೂಣ ಹತ್ಯೆ, ಮಾನವ ಕಳ್ಳ ಸಾಗಾಣಿಕೆ ಇದಕ್ಕೆ ಕಾರಣ. 2019 ಮತ್ತು 2021ರ ನಡುವೆ 13.13 ಲಕ್ಷ ಹುಡುಗಿಯರು ಮತ್ತು ಮಹಿಳೆಯರು ಕಾಣೆಯಾಗಿದ್ದಾರೆ ಎಂದು ಸರ್ಕಾರಿ ದತ್ತಾಂಶ ತಿಳಿಸುತ್ತದೆ. ಈ ಅಂಕಿ ಅಂಶಗಳು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಓಅಖಃ) ವರದಿಗಳ ಆಧಾರದ ಮೇಲೆ ಲಭ್ಯವಿದೆ.

ಬೆಲೆ ಏರಿಕೆಯಿಂದ ಹೆಣ್ಣುಮಕ್ಕಳು- ಮಕ್ಕಳು ಬಡವರು ತಿನ್ನುವ ಪ್ರಮಾಣ ಕಡಿಮೆ ಆಗುತ್ತಿದೆ. 1956 ರಲ್ಲಿ 72 ಗ್ರಾಮ್, 90-91 ರಲ್ಲಿ 42 ಗ್ರಾಂ, 2006-07 ರಲ್ಲಿ 33 ಗ್ರಾಂ ಗೆ ಇಳಿದಿದೆ. ಆದರೆ ಹಸಿವೆ ಇಳಿದಿದೆಯೇ, ಕೆಲಸ ಕಡಿಮೆ ಆಗಿದೆಯೇ? ಇಲ್ಲ. ಕೊಳ್ಳುವ ಸಾಮರ್ಥ್ಯ ಇಲ್ಲ. ದುಡಿಮೆಗೆ ಕೂಲಿ ಇಲ್ಲ. ಕಿರುಹಣಕಾಸು ಸಂಸ್ಥೆಗಳಿಂದ ಸಾಲ, ಕೈಗಡ ಪಡೆಯುವಿಕೆ ಹೆಚ್ಚುತ್ತಿದ್ದು ಇದರಿಂದ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ.

13% ಹೆಣ್ಣು ಮಕ್ಕಳು ಮಾತ್ರ ಸ್ವಂತ ಆಸ್ಥಿ ಹೊಂದಿದ್ದು ಅದರ ಮೇಲೆ ಅಧಿಕಾರ ಚಲಾಯಿಸುತ್ತಿದ್ದಾರಷ್ಟೇ. ಚಿನ್ನ ಬೆಳ್ಳಿ ಆಭರಣವಿರಲಿ, ಭೂಮಿ ಇನ್ನಿತರ ಸಂಪತ್ತಿರಲಿ ಸ್ವತಂತ್ರವಾಗಿ ಮಾರಾಟದ ಹಕ್ಕು ಇಲ್ಲವೇ ಇಲ್ಲ.

ಯುನೈಟೆಡ್ ನೇಷನ್ಸ್ ವರದಿ ಪ್ರಕಾರ ಭಾರತದಲ್ಲಿ 51% ಮಹಿಳೆಯರು ಮಾಡುತ್ತಿರುವ ಕೆಲಸ ಸಂಬಳ ರಹಿತ. ಇತ್ತೀಚಿನ ಒಂದು ವರದಿಯ ಪ್ರಕಾರ 66% ಮಹಿಳೆಯರಿಗೆ ದುಡಿಮೆಗೆ ಕೂಲಿ ಇಲ್ಲವೇ ಇಲ್ಲ.

ಭಾರತದ ಸರ್ಕಾರವು ಈ ಸಾಮಾನ್ಯ ಮಹಿಳೆಯರ ಕೆಲಸವನ್ನು ಕೆಲಸವೆಂದು ಪರಿಗಣಿಸುತ್ತಿಲ್ಲ. ಏಕೆಂದರೆ ಮಹಿಳೆಯರನ್ನು ಸಂವಿಧಾನಾತ್ಮಕ ಹಕ್ಕುಗಳಿಂದ ವಂಚಿಸಲು – ಗೌರವಧನ, ಸಂಭಾವನೆ, ಪ್ರೋತ್ಸಾಹಧನ, ಅತಿಥಿ, ಬಾಡಿಗೆ, ಅಸಂಘಟಿತ, ಗುತ್ತಿಗೆ ಇತ್ಯಾದಿ ಹೆಸರಿನಲ್ಲಿ ಶ್ರಮದ ಶೋಷಣೆ ಮಾಡುವ ಮೂಲಕ ಅತಿಹೆಚ್ಚು ಕೆಲಸ ಅತಿ ಹೆಚ್ಚು ಲಾಭ, ಕಡಿಮೆ ಮತ್ತು ನಿಕೃಷ್ಟ ಕೂಲಿಗೆ ದುಡಿಸಲು ಮಹಿಳೆಯರ ಬಳಕೆ ಮಾಡಲಾಗುತ್ತಿದೆ. ಈ ಆರ್ಥಿಕ ಅಸಮಾನತೆ 2158 ನೇ ಇಸ್ವಿ ಬಂದರೂ ಸರಿ ಆಗುವದಿಲ್ಲ ಎಂದು ಜಾಗತಿಕ ಆರ್ಥಿಕ ವೇದಿಕೆ ತನ್ನ ವರದಿಯಲ್ಲಿ ಹೇಳಿದೆ.

ಗ್ಲೋಬಲ್ ಎಂಪ್ಲೊಯ್ಮೆಂಟ್ ಟ್ರೆಂಡ್ಸ್ ಫಾರ್ ವುಮೆನ್ ವರದಿ:

ಇಲ್ಲಿ ಕೆಲವು ಸೂಚನೆಗಳಿವೆ. ಗೃಹ ಕೆಲಸದ ಒತ್ತಡ ಕಡಿಮೆ ಮಾಡಲು ನೀರು ಸಾರಿಗೆ, ಚರಂಡಿ, ವಿದ್ಯುತ್ ಉತ್ತಮ ವ್ಯವಸ್ಥೆ ನೀಡುವುದು, ಮಕ್ಕಳ ಪಾಲನೆ, ಪೋಷಣೆ, ಶಿಕ್ಷಣ, ಆರೋಗ್ಯ ಮನರಂಜನೆ ಒದಗಿಸುವುದು, ಗ್ರಹ ಕೆಲಸದಲ್ಲಿ ತಂದೆಯ ಕೆಲಸ ಹೆಚ್ಚಿಸುವುದು, ಗಂಡ ಹೆಂಡತಿ ಕೆಲಸ ಮಾಡುವಲ್ಲಿ ತೆರಿಗೆ ಕಡಿತ ಗೊಳಿಸಿ ಪ್ರೋತ್ಸಾಹಿಸುವುದು, ವಲಸೆ ಕಾರ್ಮಿಕರ ಹಕ್ಕು ರಕ್ಷಣೆ, ಮನೆಗೆಲಸದ ಮಹಿಳೆಯರ ಹಕ್ಕು ರಕ್ಷಣೆ, ಲಿಂಗತಾರತಮ್ಯ ನಿವಾರಣೆಗೆ ತಾಯ್ತನ ರಜೆ ಮುಗಿದಾಗ ಸೂಕ್ತ ಕೆಲಸ ನೀಡಿಕೆ, ಮುಂಬಡ್ತಿ ನೀಡಬೇಕು, ಉದ್ಯೋಗ ತಾರತಮ್ಯ ಹೋಗಲಾಡಿಸಲು ಸೂಚಿಸಿದ್ದರ ಭಾಗವಾಗಿ ಕೆಲವು ಹಕ್ಕುಗಳು ರಕ್ಷಣೆ ಆಗಿವೆ. ಆದರೆ ಸರ್ಕಾರ ಮತ್ತು ಮಾಲಿಕರು ಈ ಹಕ್ಕುಗಳನ್ನು ಕೊಡದೇ ಇದ್ದುದರಿಂದ ಉತ್ಪದನಾ ವಲಯದಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ ಆಗಿದೆ ಎಂದಿದೆ.

ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್.ಒ) :

ಇದು ತಾರತಮ್ಯ ಮತ್ತು ಹಿಂಸೆಯ ವಿರುದ್ಧ ನಿರ್ಣಯ ಕೈಗೊಂಡಿದೆ.: ಸಮಾಜದ ಬೆಳವಣಿಗೆಯಲ್ಲಿ ತಮ್ಮ ಶ್ರಮ ಹಾಕುವ ಮಹಿಳೆಯರ ಮೇಲಿನ ಎಲ್ಲಾ ರೀತಿಯ ಶೋಷಣೆ ನಿಲ್ಲಿಸಿ; ದುಡಿಮೆಯ ರಕ್ಷಣೆ ಮತ್ತು ದುಡಿಮೆಗೆ ತಕ್ಕ ಮೌಲ್ಯ ನೀಡಬೇಕು ಎಂದು ಐಎಲ್.ಒ ಹೇಳಿದೆ. ರಾತ್ರಿ ಪಾಳಿಯ ಕೆಲಸ, ಗಣಿಗಳಲ್ಲಿ ದುಡಿಮೆ ಬೇಡ ಎಂದು ಹೇಳಿದೆ. ತಾಯ್ತನದ ರಕ್ಷಣೆ, ವೇತನ ನೀಡಿಕೆ, ಸಮಾನ ಕಎಲಸಕ್ಕೆ ಸಮಾನ ವೇತನ, ಉದ್ಯೋಗ ಮತ್ತು ವೃತ್ತಿಯಲ್ಲಿ ಲಿಂಗ ತಾರತಮ್ಯದ ವಿರುದ್ಧ, ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ವಿರುದ್ಧ ನಿರ್ಣಯಗಳಿವೆ. ಐಎಲ್.ಒ 189 ನೆಯ ಸಮಾವೇಶವು ಮನೆಗೆಲಸದ ಮಹಿಳಾ ಕಾರ್ಮಿಕರನ್ನು ಗುರ್ತಿಸಿದೆ.

ಕೃಷಿ ರಂಗದಲ್ಲಿ ಮಹಿಳೆಯರ ಕೆಲಸಗಳು:-

ಕೃಷಿ ವಲಯ ಪ್ರಾಥಮಿಕ ವಲಯವಿದ್ದು ದೇಶದಲ್ಲಿ ಅತಿಹೆಚ್ಚು ಉದ್ಯೋಗದಾತರನ್ನು ಹೊಂದಿದೆ. ಇಲ್ಲಿ ಮಹಿಳೆಯರು ಪುರುಷರಷ್ಟೇ ಪ್ರಮಾಣದಲ್ಲಿ -ರೈತಾಪಿ ಮತ್ತು ಕೃಷಿ ಕೂಲಿಕಾರರಾಗಿ, ಗ್ರಾಮೀಣ ಕೆಲಸಗಾರರಾಗಿ -ಕೆಲಸದಲ್ಲಿ ತೊಡಗಿದ್ದಾರೆ. ರೈತಾಪಿ ಕೆಲಸದಲ್ಲಿ ಕೃಷಿ ಸಾಗುವಳಿ, ಕಳೆ ಕೀಳುವುದರಿಂದ ಹಿಡಿದು ಬಿತ್ತನೆ, ಕೊಯ್ಲು, ಸಂಸ್ಕರಣೆ ತನಕವೂ ಮಹಿಳೆಯರು ಕೆಲಸದಲ್ಲಿದ್ದಾರೆ. ಜಾನುವಾರು ನಿರ್ವಹಣೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ ಇತ್ಯಾದಿ ಕೆಲಸಗಳಲ್ಲಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯನ್ನೂ ಒಳಗೊಂಡು ಕೃಷಿ ಕೂಲಿಕಾರರು ಗ್ರಾಮೀಣ ಮಹಿಳೆಯರ ದೊಡ್ಡ ಪಡೆಯೇ ಇದೆ.

ಸೇವಾ ವಲಯದಲ್ಲಿ ದುಡಿಯುವ ಮಹಿಳೆಯರ ಮೇಲೆ ತಾರತಮ್ಯಗಳು:

ಮಹಿಳೆಯರನ್ನು ಮನೆಯ ಜೀತದಿಂದ ವಿಮೋಚನೆಗೊಳಿಸಬೇಕಿದೆ. ಆದರೆ ಉತ್ಪಾದನಾ ವಲಯದಲ್ಲಿ ಮಾತ್ರವಲ್ಲ ಸೇವಾವಲಯದಲ್ಲಿ ಕೂಡ ಖಾಯಂ ಕೆಲಸದಲ್ಲಿ ಮಹಿಳೆಯರು ಕಡಿಮೆಯೇ. ದುಡಿಯುವ ಮಹಿಳೆಯರು ಅಭಿವೃದ್ಧಿ ಮತ್ತು ಆರ್ಥಿಕ ನೀತಿಯ ನಿರ್ಲಕ್ಷ್ಯಕ್ಕೆ ಗುರಿಯಾಗಿದ್ದಾರೆ. ಕೇಂದ್ರ ಸರ್ಕಾರಿ ಹುದ್ದೆಯಲ್ಲಿ 9%, ಗೆಜೆಟೆಡ್ ಹುದ್ದೆಯಲ್ಲಿ 7%, ಐಎ.ಎಸ್. 10%, ಐಪಿಎಸ್ 4% ಸುಪ್ರಿಂ ಕೋರ್ಟ ನಲ್ಲಿ ನ್ಯಾಯಮೂರ್ತಿಗಳಾಗಿ ಕೇವಲ 3-4 ಜನ, ದೇಶದ ಎಲ್ಲಾ ಹೈಕೋರ್ಟಗಳ 534 ಹುದ್ದೆಗಳ ಪೈಕಿ 54 ಜನ ಮಹಿಳೆಯರು. ಇದೇ ಪರಿಸ್ಥಿತಿ ನಮ್ಮ ರಾಜ್ಯದಲ್ಲೂ ಇದೆ.

ದುಡಿಯುವ ಸ್ಥಳದಲ್ಲಿಯ ನೈಜ ಉದಾಹರಣೆ:

ಭಾರತದ ಭ್ರಹತ್ ಉದ್ಯಮ ನಿರ್ಮಾಣ ಕ್ಷೇತ್ರದ ವ್ಯಾಪಕತೆ ಏನಿದೆ ಅದರಲ್ಲಿ ಮಹಿಳೆ ಎಲ್ಲಿದ್ದಾಳೆ ಅಂತ ನೋಡೋಣ. ಗುತ್ತಿಗೆದಾರರು ಮತ್ತು ಸರ್ಕಾರ ಕೂಡ ನಿರ್ಮಾಣ ಕ್ಷೇತ್ರದಲ್ಲಿದೆ. ದೊಡ್ಡ ದೊಡ್ಡ ಅಂತಸ್ತುಗಳು, ಸಂಕಿರಣಗಳು, ಐಟಿ ಹಬ್ಬುಗಳು, ದೊಡ್ಡದೊಡ್ಡ ಅಣೆಕಟ್ಟೆಗಳು, ಜಲಾಗಾರಗಳು, ಹೆದ್ದಾರಿಗಳು, ಬಂದರು ವಿಮಾನ, ರೈಲು, ಸೇತುವೆ, ದೂರಸಂಪರ್ಕ ಹೀಗೆ ಅನೇಕ ವಿಧದಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಇಲ್ಲೆಲ್ಲ ಶೌಚಾಲಯ, ಸುರಕ್ಷತೆ, ಶಿಶುವಿಹಾರ ಇದ್ಯಾವುದು ಇಲ್ಲದೇನೆ ಮಹಿಳೆಯರು ದುಡೀತಾನೇ ಇರುತ್ತಾರೆ. ಕಲ್ಲು, ಇಟ್ಟಿಗೆ ಹೊರುತ್ತಾರೆ, ಸೆಂಟ್ರಿಂಗ್ ಗೆ ಬೇಕಾದ ವಸ್ತುಗಳನ್ನು ತೆಗೆದುಕೊಂಡು ಹೋಗಿ ಕೊಡುತ್ತಾರೆ.

ಕಾಂಕ್ರೀಟ್ ಗೆ ಬೇಕಾಗುವ ಸಿಮೆಂಟನ್ನು ಕಲಸಿ ಅಗತ್ಯ ವಸ್ತು ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುತ್ತಾರೆ. ತಲೆ ಮೇಲೆ ಬುಟ್ಟಿಯಲ್ಲಿ ಹೊತ್ತು ಕಳಿಸುತ್ತಾರೆ. ಇದನ್ನು ಹೊತ್ತುಕೊಂಡು ಮಹಲುಗಳನ್ನು ಕಟ್ಟಲಿಕ್ಕೆ ಏಣಿಯನ್ನ ಏರಬೇಕು. ಬೆನ್ನಿಗೆ ಮಗುವನ್ನು ಜೋತಾಕಿಸಿ ಮರಳನ್ನು ಸಾರಣಿಗೆ ಮೂಲಕ ಜರಡಿ ಹಿಡಿಯುವ ಕೆಲಸ ಮಾಡುತ್ತಾರೆ. ಮೇಸ್ತಿç ಹೇಳಿದ ಎಲ್ಲಾ ಕೆಲಸಗಳನ್ನು ಕೂಡ ಮಹಿಳೆಯರು ಮಾಡ್ತಾ ಹೋಗಬೇಕು. ಮನೆಯ ಕಟ್ಟಡದ ಎಲ್ಲ ಬೇಕು-ಬೇಡಗಳು ಈ ಮಹಿಳೆಯರಿಗೆ ಗೊತ್ತಿರುತ್ತದೆ ಹಾಗಾಗಿ ಯಾವ ಕೆಲಸ ಮಾಡುವುದಿಲ್ಲ ಎಲ್ಲವನ್ನೂ ಕೂಡ ಮಾಡಿ ಕೊನೆಗೆ ಗೋಡೆ ಕಟ್ಟಿದ ಮೇಲೆ ಅದನ್ನು ನೀರಾಕಿ ಕ್ಯೂರಿಂಗ್ ಮಾಡುವ ಕೆಲಸವನ್ನು ಕೂಡ ಇವರೇ ಮಾಡೋದು.

ಇತ್ತೀಚಿನ ಒಂದು ವರದಿ ಪಿರಿಯಾಡಿಕ್ ಲೇಬರ್ ಸರ್ವೆ ಪ್ರಕಾರ ಭಾರತದ ಒಟ್ಟು ಕಾರ್ಮಿಕ ಬಲದಲ್ಲಿ ಶೇಕಡ 12 ನಿರ್ಮಾಣ ಕ್ಷೇತ್ರದಲ್ಲಿದೆ. ಇದರಲ್ಲಿ ಮಹಿಳೆಯರು ದೊಡ್ಡ ಪ್ರಮಾಣದಲ್ಲಿದ್ದಾರೆ. ದಿನದ ಎಂಟು ತಾಸು ದುಡಿಮೆಯನ್ನು ಮಾಡಿದರೆ ಅವರು ಹೊರುವ ಕಲ್ಲು ಮಣ್ಣು ಪೂರಕ ಸಾಮಗ್ರಿಗಳು ಸೇರಿ ಸರಿಸುಮಾರು ಇಪ್ಪತ್ತು ಸಾವಿರ ಕೆಜಿ ಎತ್ತಿ ಇಳಿಸಿ ಮಾಡುತ್ತಾರೆ ಮತ್ತು ಸರಿಸುಮಾರು 13 ಕಿಲೋಮೀಟರ್ ನಡೆಯುತ್ತಾರೆ. ಇಲ್ಲಿ ದುಡಿಯುವ ಮಹಿಳೆಯರ ಮೇಲೆ ಹಿಂಸೆ, ಲೈಂಗಿಕ ದೌರ್ಜನ್ಯ, ಅತ್ಯಾಚಾರ ಘಟನೆಗಳು ನಡೆಯುತ್ತಲೇ ಇರುವ ವರದಿ ಕೇಳುತ್ತೇವೆ.

ಇದೇ ರೀತಿಯಲ್ಲಿ ಹಮಾಲಿ ಮಹಿಳಾ ಕಾರ್ಮಿಕರ ಪರಿಸ್ಥಿತಿ ಇದೆ.

ಗಾರ್ಮೆಂಟ್ಸ್ ಗಳಲ್ಲಿ ನಿಗದಿತ ಗುರಿ ಇಟ್ಟು ಕೆಲಸ ಮಾಡಬೇಕು, ಒಂದಾನುವೇಳೆ ಟಾರ್ಗೆಟ್ ಮುಗಿಯದೇ ಇದ್ದರೆ ಮಾಲಿಕರು ದೈಹಿಕ ಸುಖಕ್ಕೆ ಕರೆಯುವ ಹೀನ ಮನಸ್ಸು ಇದೆ. ಕಬ್ಬು ಕಟಾವು ಕೆಲಸದಲ್ಲಿ ಗರ್ಭ ಕೋಶ ತೆಗೆಯಿಸಿಯೇ ಕೆಲಸಕ್ಕೆ ಬರಬೇಕು. ಗಗನ ಸಖಿಯರಿಗೆ, ಬ್ಯಾಂಕುಗಳಲ್ಲಿ ಸೇರುವ ಮಹಿಳೆಯರಿಗೆ, ಘನಕೈಗಾರಿಕೆಗಳಲ್ಲಿ ಸೇರುವವರಿಗೆ ಕೆಲವು ಷರತ್ತುಗಳು ಸಂವಿಧಾನ ವಿರೋಧಿಯಾಗಿವೆ.

ಕಾಯ್ದೆಗಳನ್ನು ಜಾರಿ ಮಾಡುವಲ್ಲಿ ಲಿಂಗತಾರತಮ್ಯ, ಆಮೂಲಕ ಹಿಂಸೆ ದೌರ್ಜನ್ಯಕ್ಕೆ ಕುಮ್ಮಕ್ಕು :

ಕಾರ್ಮಿಕ ಕಾಯ್ದೆಗಳನ್ನು, ಅಪರಾಧ ಸಂಬಂಧಿತ ಕಾಯ್ದೆ, ಸಾಕ್ಷ್ಯ ಕಾಯ್ದೆಗಳನ್ನು, ಸಂಹಿತೆಗಳನ್ನಾಗಿಸಿ ಮಹತ್ವ ಕಳೆದುದರಿಂದ ಮಹಿಳೆಯರು ನ್ಯಾಯದಿಂದ ವಂಚಿತರಾಗುವ ದಿನ ಮತ್ತಷ್ಟು ಹತ್ತಿರ. ಈಗಾಗಲೇ ಇರುವ ಹೆರಿಗೆ ರಜಾ ಸೌಲಭ್ಯ ಕಾಯ್ದೆ ಎಲ್ಲಾ ಕಡೆಗೂ ಜಾರಿಯಾಗಿಲ್ಲ. ಕಾಲಕಾಲಕ್ಕೆ ಕೋರ್ಟ ಕಛೇರಿ ಮೆಟ್ಟಿಲೇರಿ ಪಡೆದುಕೊಳ್ಳಬೇಕಾದ ಸಂದರ್ಭಗಳೇ ಹೆಚ್ಚು. ಇತೀಚೆಗೆ ತಮಿಳುನಾಡಿನ ಉಮಾದೇವಿ ಪ್ರಕರಣದಲ್ಲಿ ಹೆರಿಗೆ ರಜಾ ಮೂಲಭೂತ ಹಕ್ಕು ಎಂದೂ ಸಂವಿಧಾನ ವಿಧಿ 21 ರ ಪ್ರಕಾರ ಜೀವಿಸುವ ಹಕ್ಕಿನ ಭಾಗ, ಹೆರಿಗೆ ಜೀವನದ ಸಹಜ ಘಟನೆ, ಸಂತಾನೋತ್ಪತ್ತಿಯ ಹಕ್ಕು, ಮೂರನೇ ಮಗುವಿಗೂ ರಜೆ ನೀಡಬೇಕು ಎಂದು ಸುಪ್ರಿಂ ಕೋರ್ಟ ತೀರ್ಪು ನೀಡಿದೆ.

ಮುಟ್ಟಿನ ರಜೆ ಕಾಯ್ದೆ ಇನ್ನೂ ಬಂದಿಲ್ಲ. ಮನೆಗೆಲಸದ ರಾರ್ಮಿಕರ ರಾಷ್ಟ್ರೀಯ ಕಾರ್ಯನೀತಿ, ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ (ನಿವಾರಣೆ, ನಿಷೇಧ ಮತ್ತು ಪರಿಹಾರ) ಕಾಯ್ದೆ, 2009 ರಲ್ಲಿ ಬೀದಿಬದಿ ವ್ಯಪಾರಿಗಳ ರಾಷ್ಟ್ರೀಯ ಕಾರ್ಯನೀತಿ 2014 ರ ಬೀದಿಬದಿ ವ್ಯಾಪಾರಿಗಳ ಜೀವನೋಪಾಯ ರಕ್ಷಣೆ ಮತ್ತು ಬೀದಿಬದಿ ವ್ಯಾಪಾರದ ನಿಯಂತ್ರಣ ಕಾಯ್ದೆ, ಜಸ್ಟಿಸ್ ವರ್ಮಾ ಸಮಿತಿ ವರದಿ ಜಾರಿ ಇನ್ನೂ ಹಲವಾರು ರಂಗಗಳಲ್ಲಿ ಆಗಲೇ ಇಲ್ಲ. ಇವೆಲ್ಲವೂ ದೌರ್ಜನ್ಯ ಹೆಚ್ಚಳಕ್ಕೆ ಕಾರಣವಾಗಿವೆ.

ಬಜೆಟ್ಟಿನಲ್ಲಿ ಹಣಕಾಸು ಮೀಡಲಿಡುವಲ್ಲಿಯೂ ತಾರತಮ್ಯವಿದೆ. ಲಿಂಗ ಸಂಬಂಧಿ ಜೆಂಡರ್ ಬಜೆಟ್ ನಮ್ಮ ದೇಶದಲ್ಲಿ ಆಗಾಗ ಹೆಸರಿಗೆ ಮಾತ್ರ ಬಳಸಲಾಗುತ್ತಿದೆ. ದೇಶದ ಸರಾಸರಿ 45 ಲಕ್ಷ ಕೋಟಿ ರೂ. ಬಜೆಟ್ಟಿನಲ್ಲಿ 5% ಕೂಡ ಮಹಿಳೆಯರ ಅಭಿವೃದ್ಧಿಗೆ ಇಲ್ಲವೆಂಬುದರಿಂದಲೇ ಲಿಂಗತಾರತಮ್ಯ ನೋಡಬಹುದು. ಮಹಿಳೆಯರೇ ಹೆಚ್ಚು ಕೆಲಸ ಮಾಡುವ ಅನೇಕ ಯೋಜನೆಗಳಿಗೆ ಹಣ ಕಡಿತ ಮಾಡುವುದು ಅವ್ಯಾಹತವಾಗಿ ನಡೆದಿದೆ.

ದೌರ್ಜನ್ಯ, ಹಿಂಸೆ ಎದುರಿಸುವ ಉದ್ಯೋಗಸ್ಥ ಮಹಿಳೆಯರು:

ಮಹಿಳೆಯರ ಮೇಲಿನ ಹಿಂಸೆ ಅಥವಾ ದೌರ್ಜನ್ಯದ ವ್ಯಾಪ್ತಿಯಲ್ಲಿ ಹಲವು ಆಯಾಮಗಳು ಇವೆ. ಮಹಿಳೆಯ ಗೌರವವನ್ನು ಅಪಮೌಲ್ಯ ಮಾಡುವ ಕ್ರಿಯೆ. ದೈಹಿಕ, ಮಾನಸಿಕ ಹಿಂಸೆಗಳು, ಲೈಂಗಿಕ ಹಿಂಸೆಗಳು, ಉದ್ಯೋಗದ ಸ್ಥಳದಲ್ಲಿ ಸಹ ಕಾರ್ಮಿಕರಿಂದಾಗುವ ಹಿಂಸೆ, ಮಾಲಿಕರಿಂದಾಗುವ ಹಿಂಸೆ, ಲೈಂಗಿಕ ಕಿರುಕುಳ ಹೀಗೆ ಬಹಳ ವಿಧಗಳಿವೆ. ನ್ಯಾಶನಲ್ ಕ್ರೈಂ ಬ್ಯೂರೋ ಪ್ರಕಾರ ಮಹಿಳೆಯರ ಮೇಲಿನ ಲೈಂಗಿಕ ಹಿಂಸೆ ಹೆಚ್ಚುತ್ತಿದೆ. ಕೌಟುಂಬಿಕ ಹಿಂಸೆಯ ಕಾರಣ ಪ್ರತಿ 6 ಗಂಟೆಗೆ ಒಬ್ಬ ಮಹಿಳೆಯ ಕೊಲೆ ಆಗುತ್ತಿದೆ. ಒಂದು ವರ್ಷಕ್ಕೆ 5 ಲಕ್ಷ ಹೆಣ್ಮಕ್ಕಳು ಹೊಸ ಜಗತ್ತು ಕಾಣುವ ಮೊದಲೇ ಕಾಣೆಯಾಗುತ್ತಿದ್ದಾರೆ; ಭ್ರೂಣ ಹತ್ಯೆಗೆ ಒಳಗಾಗುತ್ತಿದ್ದಾರೆ. 15 ನಿಮಿಷಕ್ಕೆ ಒಂದು ಅತ್ಯಾಚಾರ ಘಟಿಸುತ್ತಿದೆ.

ಕೌಟುಂಬಿಕ ಅಗತ್ಯಗಳಿಗೆ ಇಂದು ಹೆಚ್ಚು ಮಹಿಳೆಯರು ಆರ್ಥಿಕ ಗಳಿಕೆಯ ಕೆಲಸಕ್ಕೆ ಮುಂದಾಗುವುದು ಅನಿವಾರ್ಯ. ಆದರೆ ದುಡಿಯುವ ಸ್ಥಳದಲ್ಲಿ ಲೈಂಗಿಕ ಕಿರುಕುಳ ನಡೆಯುತ್ತಿರುವುದು ಕೆಲಸದ ಸ್ಥಳದಲ್ಲಿ ಲಿಂಗ ತಾರತಮ್ಯದ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯ ಒಂದು ಸ್ಪಷ್ಟವಾದ ಕುರುಹು ಆಗಿದೆ. ಈ ಭಯಾನಕ ಸ್ಥಿತಿಯಿಂದ ದುಡಿಮೆಯ ಸ್ಥಳದ ಅಸುರಕ್ಷಿತತೆ ಉಂಟಾಗುತ್ತದೆ. ಸಂವಿಧಾನದ 14 ನೇ ಕಲಂ ನಲ್ಲಿ ಹೇಳಿದ “ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಎಲ್ಲಾ ವಿಚಾರಗಳಲ್ಲಿ ಸ್ತ್ರೀ ಪುರುಷರಿಬ್ಬರಿಗೆ ಸಮಾನ ಹಕ್ಕುಗಳು ಮತ್ತು ಸಮಾನ ಅವಕಾಶಗಳು ಇರಬೇಕು ಎಂಬ ಅಂಶದ ಉಲ್ಲಂಘನೆಯಾಗಿದೆ. 2013 ರಲ್ಲಿ ಕೆಲಸದ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಬಂದಿದ್ದರೂ ಸರ್ಕಾರಗಳು ಸಮರ್ಪಕರವಾಗಿ ಅನುಷ್ಟಾನಗೊಳಿಸಿಲ್ಲ. ಕಾರ್ಪೋರೇಟ್ ವಲಯದ ಐಟಿ ಗಳಲ್ಲಿ, ಮನೋರಂಜನಾ ಕ್ಷೇತ್ರಗಳಲ್ಲಿ, ಮನೆಗೆಲಸಗಾರರ ಮೇಲೆ, ಗಾರ್ಮೆಂಟ್ಸ್ ಕೈಗಾರಿಕೆಯಲ್ಲಿ, ಕೃಷಿ ಕ್ಷೇತ್ರದ ವಿವಿಧೆಡೆ, ಕಟ್ಟಡ ಕಾರ್ಮಿಕ ಮಹಿಳೆಯರ ಮೇಲೆ ಹೀಗೆ ಲೈಂಗಿಕ ದೌರ್ಜನ್ಯಗಳು ಹೆಚ್ಚುತ್ತಲೇ ಇವೆ.

ಲೈಂಗಿಕ ಕಿರುಕುಳ ವಿಷಯವನ್ನು ಕಾರ್ಮಿಕ ಸಂಘಗಳು ಕೈಗೆತ್ತಿಕೊಳ್ಳಬಾರದೆಂಬ ಮತ್ತು ಆದ್ಯತೆಯ ವಿಷಯವಾಗಿ ಮಾಡಬೇಕಾದ ಅಗತ್ಯವಿಲ್ಲವೆಂಬ ಹಾಗೂ ಇದೊಂದು ಕೆಲವೇ ಕೆಲವು ಮಹಿಳೆಯರು ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಿರುವುದರಿಂದ, ಇದೊಂದು ಗಣ್ಯ ಹಾಗೂ ಮಧ್ಯಮ ವರ್ಗದ ಮಹಿಳೆಯರ ವಿಚಾರ ಹೊರತೂ ದುಡಿಯುವ ಮಹಿಳೆಯರ ಕುರಿತಾದ ವಿಚಾರವಲ್ಲ ಎಂಬ ಪೂರ್ವಗ್ರಹ ಪೀಡಿತ ಮನೋಭಾವ ಇದೆ. ಇದನ್ನು ಸಾರ್ವಜನಿಕವಾಗಿ ಚರ್ಚಿಸಬಾರದೆಂಬ, ಇದೊಂದು ನಿರುಪದ್ರವ ಉದ್ವೇಗವಾದ್ದರಿಂದ ಇದನ್ನು ಮಹಿಳೆಯರು ಎಂಜೋಯ್ ಮಾಡಬೇಕು ಎಂದು ಹಲುಬುವವರು ಇದ್ದಾರೆ. ಅಲ್ಲದೇ ಮಹಿಳೆಯರ ಉಡುಗೆ ತೊಡುಗೆಗಳಿಂದ ಗಂಡಸರನ್ನು ಉತ್ತೇಜಿಸುತ್ತಾರೆಂದೂ ಯೋಗ್ಯ ಕುಟುಂಬದವರಿಗೆ ಈ ಕಿರುಕುಳವಾಗುತ್ತಿಲ್ಲವೆಂದು ಮೇಲಾಗಿ ಈ ಲೈಂಗಿಕ ಹಿಂಸೆಯನ್ನು ನಿರ್ಲಕ್ಷಿಸುವುದರಿಂದ ಮತ್ತು ಕೇವಲ ಮಹಿಳೆಯರೇ ಇದನ್ನು ಎತ್ತಿ ಪ್ರಶ್ನಿಸಬೇಕೆಂಬ ವಾದಗಳೂ ಎಲ್ಲೆಡೆ ಕೇಳಿಬರುತ್ತಿದೆ.

ಕೆಲವು ಮೂಲಗಳಿಂದ ತಿಳಿದಿರುವಂತೆ 47% ದುಡಿಯುವ ಮಹಿಳೆಯರ ಪ್ರಧಾನ ಸಮಸ್ಯೆ ಏನೆಂದರೆ ಅವರು ಎದುರಿಸುತ್ತಿರುವ ಲೈಂಗಿಕ ಹಿಂಸೆಯೇ ಆಗಿದೆ. ಎಲ್ಲಾ ವಯೋಮಾನದ, ಜಾತಿಯ, ಧರ್ಮದ, ವಿಭಾಗಗಳ, ಪ್ರದೇಶಗಳ ಎಲ್ಲಾ ವರ್ಗಗಳ ಮಹಿಳೆಯರೂ ಇದನ್ನು ಎದುರಿಸುತ್ತಿದ್ದಾರೆ. ಕಟ್ಟಡ ಮತ್ತು ತೋಟ ಕಾರ್ಮಿಕರ ಮಧ್ಯೆ 70 % ಮಹಿಳೆಯರು ಲೈಂಗಿಕ ಕಿರುಕುಳ ಎದುರಿಸುತ್ತಿದ್ದಾರೆ. ಎಕ್ಷನ್ ಏಡ್ ಯುಕೆ ಸರ್ವೆ ಪ್ರಕಾರ ದೇಶದ 79% ಮಹಿಳೆಯರು ಯಾವುದಾದರೂ ಸ್ವರೂಪದ ಹಿಂಸೆ, ಕಿರುಕುಳ, ದೌಜ್ಯನ್ಯ ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ..

ಇದನ್ನೂ ನೋಡಿ: ಧರ್ಮಸ್ಥಳದಲ್ಲಿ ದೌರ್ಜನ್ಯ ನಡೆಸಿದವರು ಕಟಕಟೆಗೆ ಬರಬೇಕು, ಅವರಿಗೆ ಶಿಕ್ಷೆಯಾಗಬೇಕು Janashakthi Media

ದೌರ್ಜನ್ಯವನ್ನು ಸಹಿಸಿ ಮೌನ ವಹಿಸುವುದು ದೌರ್ಜನ್ಯ ನಡೆಸುವವರಿಗೆ ಸಹಾಯ ಮಾಡಿ ಇನ್ನಷ್ಟು ಉತ್ತೇಜನ ಮಾಡಿದಂತೆ. ದೇಹ ಉಡುಪುಗಳೇ ಕಿರುಕುಳಕ್ಕೆ ಕಾರಣವಲ್ಲ. ಬುರ್ಖಾ ಅಥವಾ ಪರದೆ ಹಾಕಿಕೊಂಡ ಮಹಿಳೆಯರ ಮೇಲೂ, ಚಿಕ್ಕ ಮಕ್ಕಳ ಮೇಲೂ ನಡೆಯುತ್ತಿದೆ. ಯಾಕೆಂದರೆ ಹಳೆಯ ಪಿತೃಪ್ರಧಾನ ಸನಾತನ ಸಾಂಸ್ಕೃತಿಕ ಆಕ್ರಮಣಕ್ಕೆ ಇಂದಿನ ನವ ಉದಾರವಾದಿ ಬಂಡವಾಳಶಾಹಿಯು ಉತ್ತರಾಧಿಕಾರಿಯಾಗಿದೆ. ಬ್ಯಾಂಕ್ ಮತ್ತು ಮಾಹಿತಿ ತಂತ್ರಜ್ಞಾನ ಕಂಪನಿಗಳಲ್ಲಿಯೂ ಲೈಂಗಿಕ ಕಿರುಕುಳ ಏರಿಕೆಯಾಗಿದೆ. ರಾಷ್ಟ್ರೀಯ ಮಹಿಳಾ ಆಯೋಗದಲ್ಲಿ ಲೈಂಗಿಕ ಹಿಂಸೆಯ ದೂರುಗಳು ತುಂಬಾ ಹೆಚ್ಚಿವೆ. ಭ್ರೂಣದಿಂದ ಉದ್ಯೋಗದ ಸ್ಥಳದ ವರೆಗೆ, ಚಿಕಕ ಉದ್ಯೋಗದಿಂದ ಉನ್ನತ ಹುದ್ದೆಯವರೆಗಿನ ಯಾವುದೂ ಸುರಕ್ಷಿತ ಸ್ಥಳವಲ್ಲ ಎಂಬಂತಾಗಿದೆ. ಉದಾ: ಕಲ್ಕತ್ತಾದ ರ‍್ಜಿಕರ್ ಆಸ್ಪತ್ರೆ ಹಾಗೂ ಹೈದರಾಬಾದ್ ಆಸ್ಪತ್ರೆಯ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ.

ಇತ್ತೀಚೆಗೆ ಕರ್ನಾಟಕದ ಹಿರಿಯ ಮಹಿಳಾ ರಾಜಕಾರಣಿ ಒಬ್ಬರ ಮೇಲೆ ರಾಜಕೀಯ ದ್ವೇಷ ಹಾಗೂ ಲೈಂಗಿಕ ಹಿಂಸೆ ನೀಡುವಂತಹ ಮಾತುಗಳು ಮತ್ತು ಹಿರಿಯ ಐ.ಎ.ಎಸ್ ಅಧಿಕಾರಿಯ ಮೇಲಿನ ತಾರಮತ್ಯಪೂರಿತ ಅಗೌರವದ ಮಾತುಗಳು, ಹಾಸನದಲ್ಲಿ ಅಂಗನವಾಡಿ ಕಾರ್ಯಕತೆಯ ಮೇಲೆ ಸಿಡಿಪಿಒ ನಿಂದ ಲೈಂಗಿಕ ಕಿರುಕುಳ, ಮಹಾರಾಷ್ಟçದಲ್ಲಿ ಕಬ್ಬು ಕೂಲಿಕಾರರು ಮುಟ್ಟಿನ ಕಾಲದಲ್ಲಿ ಕೆಲಸ ಮಾಡುವಂತಿಲ್ಲ, ತಮ್ಮ ಗರ್ಭಕೋಶ ತೆಗೆಯಿಸಿಕೊಮಡೇ ಈ ಕೆಲಸಕ್ಕೆ ಬರಬೇಕೆಂಬ ಷರತ್ತೂ ವಿಧಿಸಲಾಗಿದೆ.

ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ನಡೆಯುತ್ತಿರುವುದರ ವಿರುದ್ಧ ಸಂಘರ್ಷ ಮಾಡದೇ ಕಾರ್ಮಿಕ ಚಳುವಳಿ ಯಶಸ್ವಿಯಾಗದು ಮತ್ತು ಲೈಂಗಿಕ ಶೋಷಣೆಯ ವಿರುದ್ಧ ಹೋರಾಡುವುದು ವರ್ಗ ಶೋಷಣೆಯ ವಿರುದ್ಧದ ಹೋರಾಟದ ಭಾಗ.

ಭಾಷೆಯಲ್ಲಿ ಲಿಂಗ ರಾಜಕಾರಣ: ಸಾವಿರಾರು ವರ್ಷಗಳಿಂದ ನಾವು ಬಳಸುವ ಭಾಷೆಯಲ್ಲಿ ಲಿಂಗ ಅಸಮಾನತೆ ಹಾಸುಹೊಕ್ಕಾಗಿದೆ. ಅದು ಮಹಿಳೆಯರನ್ನು ನೋಡುವ ದೃಷ್ಟಿಕೋನದ ಮೇಲೆ ಪರಿಣಾಮಬೀರುತ್ತದೆ. ಸಾಮಾಜಿಕ ವ್ಯವಹಾರ, ವ್ಯಾಪಾರ, ಹೊರ ದುಡಿಮೆ, ಸಾಹಿತ್ಯ, ಕಲೆ ಇವೆಲ್ಲ ಗಂಡಿಗೆ ಮಾತ್ರ ಮೀಸಲು ಎಂಬ ಮನೋಭಾವ ಬಿಂಬಿಸುವ ಪುರುಷವಾಚಕ ಶಬ್ದಗಳೇ ಮೇಲುಗೈ ಪಡೆದ ಸಾಹಿತ್ಯ ಬರಹಗಳಲ್ಲಿ ನಮ್ಮ ಮಾತುಗಳಲ್ಲಿ ಇಣುಕುತ್ತವೆ. ಮತ್ತು ಬೈಗುಳದ ಶಬ್ದಗಳ ಆರಂಭ ಹೆಣ್ಣನ್ನು ತುಚ್ಛವಾಗಿ ಕಾಣುವ ಶಬ್ದಗಳ ಪ್ರಯೋಗ, ಜನಮಾನಸದಲ್ಲಿ ಪರಿಣಾಮ ಬೀರುವ ಲಿಂಗತಾರತಮ್ಯದ ಗಾದೆ ಮಾತುಗಳು, ಜಾನಪದ ಹಾಡುಗಳು ಎಂದು ಬಿಂಬಿತವಾಗಿರುವ ಕೆಲವು ಆಸ್ಲೀಲ ಹಾಡುಗಳು, ಕಾಗದ ಪತ್ರಗಳಲ್ಲೂ ಪುರುಷರನ್ನು ಮುನ್ನೆಲೆಯಲ್ಲಿಟ್ಟ ದೋಷಪೂರಿತ ಪದಪ್ರಯೋಗಗಳು ಇವೂ ಕೂಡ ಮಹಿಳೆಯರ ದುಡಿಮೆಯ ಪ್ರದೇಶದಲ್ಲಿ ಮತ್ತು ಸಾಮಾಜಿಕ ಜೀವನದಲ್ಲಿ ತಲೆತಗ್ಗಿಸುವಂತೆ ಮಾಡುತ್ತವೆ.

ಕೋಮುವಾದದ ಪರಿಣಾಮ ದುಡಿಯುವ ಮಹಿಳೆಯರ ಮೇಲೆ:

ಸಹಮಾನವರನ್ನು ಸಂಶಯಿಸುವ, ಹೊರದಬ್ಬುವ, ಅಭದ್ರತೆ ಸೃಷ್ಟಿಸುವ ಕೋಮುವಾದ, ಜಾತಿವಾದ ಜನಾಂಗೀಯ ಹಿಂಸೆಗೆ ಮಹಿಳೆಯರು ಬಲಿಯಾಗುತ್ತಿದ್ದಾರೆ. ಕಾರ್ಮಿಕ ಶಕ್ತಿಯನ್ನು ಒಗ್ಗೂಡದಂತೆ ತಡೆಯುವುದು ಕೂಡ ಹುನ್ನಾರ. ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಧರ್ಮದ ಹೆಸರಿನಲ್ಲಿ ಗಲಭೆಗಳನ್ನು ಸೃಷ್ಟಿಸಲಾಗುತ್ತದೆ, ಮಹಿಳೆಯರಿಗೆ ತಮ್ಮ ಆಯ್ಕೆಯ ಹಕ್ಕು ಇಲ್ಲದೇ ತಮ್ಮದಲ್ಲದ ಧರ್ಮದವರೊಂದಿಗೆ ಮಾತಾಡಿದರೆ, ವಿಹರಿಸಿದರೆ, ವಾಹನದಲ್ಲಿ ಓಡಾಟ ನಡೆಸಿದರೆ, ಮದುವೆಯಾದರೆ ಕೋಮುವಾದಿಗಳು ಹೆಡೆ ಎತ್ತುತ್ತಾರೆ. ಬೀದಿಗಳು ಹೊತ್ತಿ ಉರಿಯುತ್ತವೆ. ಲೌ ಜಿಹಾದ್ ಎನ್ನುವ ಮತಾಂತರ ಎನ್ನುವ ಹುಯಿಲು ಎಬ್ಬಿಸುತ್ತಾರೆ.

ಅತ್ಯಾಚಾರಗಳು ಹೆಚ್ಚುತ್ತಿವೆ. ಜನಜನಿತ ಗಾದೆಮಾತುಗಳಾಗಿ ಹೆಣ್ನನ್ನು ಬಾಧಿಸುವ – ಹೆಣ್ಣಿನ ಬುದ್ಧಿ ಮೊಣಕಾಲ ಕೆಳಗೆ, ಸ್ತ್ರೀ ಬುದ್ಧಿ ಪ್ರಳಯಾಂತಕ, ಜಲಸಿ ದ ನೇಮ್ ಈಸ್ ವುಮೆನ್, ಮೂರು ಜುಟ್ಟು ಸೇರಿಸಬಹುದು; ಎರಡು ಜಡೆ ಸೇರಲ್ಲ, ಹೆಣ್ಣಿಗೆ ಹೆಣ್ಣೇ ಶತ್ರು, ಮನೆಯೊಂದು ಮೂರು ಬಾಗಿಲು ಎನ್ನುವವರು ಈ ಸಮಾಜದಲ್ಲಿದ್ದಾರೆ. ತಾಯಿ, ತಾಯ್ತನ, ಭಾರತೀಯ ಸಂಸ್ಕೃತಿ, ದೇವತೆ ಎಂದೆಲ್ಲ ವಿಷಯಗಳು ಸನಾತನ ಬೊಗಳೆಗಳು ಎನ್ನದೇ ದಾರಿ ಇಲ್ಲ. ಮರ್ಯಾದೆ ಹತ್ಯೆ, ಕೆಲಸದ ಸ್ಥಳದಲ್ಲಿ ಪ್ರೀತಿ ಪ್ರೇಮದ ಕಾರಣಕ್ಕೆ ಎಸಿಡ್ ದಾಳಿಗಳು ನಡೆದಿವೆ. ಬಿಜೆಪಿ ಸಂಘಪರಿವಾರ ಕೋಮುವಾದದಿಂದ ನವ ಫ್ಯಾಸಿಸ್ಟ್ ಮಾದರಿಯತ್ತ ನುಗ್ಗಿದೆ. ಮಹಿಳೆಯರ ಮೇಲಿನ ಸಾಂಸ್ಕೃತಿಕ ಹಿಡಿತ ಗಟ್ಟಿಗೊಳಿಸುತ್ತಿದೆ.

ಸಂಘಟನೆಯ ಆಂತರಿಕ ಜೀವನದಲ್ಲೂ ತಾರತಮ್ಯಗಳಿರುತ್ತವೆ:

ವಿವಿಧ ಸಂಘ ಸಂಸ್ಥೆಗಳಲ್ಲಿ, ಇಲಾಖೆಗಳಲ್ಲಿ, ರಾಜಕೀಯ ಪಕ್ಷಗಳಲ್ಲೂ ಲಿಂಗ ತಾತಮ್ಯಗಳಿರುತ್ತದೆ. ಸಮಾಜದಲ್ಲಿ ಯಾವ ಮೌಲ್ಯ ಬಿತ್ತಿ ಬೆಳೆಯುತ್ತೇವೆಯೋ ಅದೆಲ್ಲ ಮಹಿಳೆಯರ ಮೇಲೆಯೂ ಕಾರ್ಯಕರ್ತರು ಮತ್ತು ನಾಯಕತ್ವದ ಮೇಲೆಯೂ ಪರಿಣಾಮ ಬೀರುತ್ತದೆ. ಸಂಘಟನಾತ್ಮಕ ಬದುಕಿನಲ್ಲೂ ಮಹಿಳೆಯರು ಈ ತಾರತಮ್ಯಗಳೆಲ್ಲವನ್ನೂ ಎದುರಿಸಬೇಕಾಗುತ್ತದೆ. ಜೊತೆಗೆ ಎಲ್ಲಾ ಹಂತದ ಕಾರ್ಯಕರ್ತರನ್ನು, ನಾಯಕರನ್ನು, ಸದಸ್ಯರನ್ನು ಈ ವಿಚಾರದಲ್ಲಿ ಸೂಕ್ಷ್ಮಗ್ರಾಹಿಗಳಾಗುವಂತೆ ಮಾಡಲು ಲಿಂಗ ಸಂವೇದನೆಯುಳ್ಳವರನ್ನಾಗಿಯೂ ಮಾಡಬೇಕಾಗಿದೆ. ಕಾರ್ಮಿಕ ಸಂಘಟನೆ ಮತ್ತು ಕಾರ್ಮಿಕ ಚಳುವಳಿ ಎಂದರೆ ಮಹಿಳೆಯರಿಗೆ ತನ್ನದೇ ಮನೆ, ತವರು ಮನೆಗಿಂತ ಹೆಚ್ಚು ರಕ್ಷಣೆ ನೀಡುವ ಭದ್ರತೆಯ ಅನುಭವ ನೀಡುವ ಸೌಜನ್ಯಯುತ ಆಪ್ತಭಾವದ ಕೇಂದ್ರವಾಗಿರುವಂತೆ ನೋಡಿಕೊಳ್ಳಬೇಕಾದುದು ನಮ್ಮೆಲ್ಲರ ಕರ್ತವ್ಯ.

ಸಮಾಜ ಬೆಳವಣಿಗೆಯಲ್ಲೂ ಸಮಾಜದ ಬದಲಾವಣೆಯಲ್ಲೂ ಮುಂಚೂಣಿಯಲ್ಲಿ ಇರಬೇಕು:

ದುಡಿಮೆ ಮಾಡುತ್ತಲೇ ದುಡಿಯುವ ಪ್ರದೇಶದ ಸಂಕಷ್ಟದ ನಿವಾರಣೆಗೂ ಹೋರಾಡಬೇಕು. ದುಡಿಯುವ ಮಹಿಳೆಯರ ಹೋರಾಟಕ್ಕೆ ಪ್ರಭುತ್ವ ಎದುರು ಹಾಕಿಕೊಳ್ಳುವ, ಮಣಿಸುವ ಸಾಮರ್ಥ್ಯ ಇದೆ. ಇದು ವರ್ಗ ಹೋರಾಟದ ಕೊಡುಗೆ. ಸಾಮಾನ್ಯ ಮಹಿಳೆಯು ಮನೆ ಮಕ್ಕಳು ಕೊಟ್ಟಿಗೆ ಎಂದೆಲ್ಲ ಅಂದರೆ, ದುಡಿಯುವ ಮಹಿಳೆಯರು ಈ ಎಲ್ಲ ಕೆಲಸಗಳ ಒಟ್ಟಿಗೆ ಮಾಲಿಕ, ಸರ್ಕಾರ, ಸ್ಥಳೀಯ ಪುಡಾರಿಗಳು ಮತ್ತು ತಾವು ಕೆಲಸ ಮಾಡುವ ಸ್ಥಳದ ಪುರುಷ ಪ್ರಾಧಾನ್ಯ ಮೌಲ್ಯಗಳ ವಿರುದ್ಧವೂ ಸೆಣಸಾಡಬೇಕಾಗುತ್ತದೆ.

ಮಹಿಳೆಯರು ವ್ಯಾಪಕವಾಗಿ ದುಡಿಮೆಗೆ ತೆರೆದುಕೊಂಡಿದ್ದಾರೆ. ಆದರೆ ಸಂಘಟನಾತ್ಮಕವಾಗಿ ನಾವು ತಲುಪದೇ ಇರುವ ವಿಭಾಗವೂ ಹೆಚ್ಚಿದೆ. ಕಾರ್ಮಿಕ ವರ್ಗದ ಮುಷ್ಕರದ ಶಕ್ತಿ ಪೂರ್ಣಗೊಳ್ಳಬೇಕೆಂದರೆ ತಾರತಮ್ಯ ಹಾಗೂ ಶೋಷಣೆ ನಿಲ್ಲಬೇಕೆಂದರೆ, ದುಡಿಯುವ ವರ್ಗದಲ್ಲಿ ಅರ್ಧದಷ್ಟಿರುವ ಮಹಿಳಾ ಕೆಲಸಗಾರರು ಸಂಘಟಿತರಾಗಬೇಕು. ಸಾಮಾನ್ಯ ಮಹಿಳೆಯರನ್ನೂ ತಮ್ಮಂತೆ ಸಂಘಟಿಸುವ ಜವಾಬ್ದಾರಿ ನಿರ್ವಹಿಸಬೇಕು. ಮುಖ್ಯವಾಗಿ, ಪ್ರಜ್ಞಾವಂತಿಕೆಯಿಂದ, ಬದ್ಧತೆಯಿಂದ, ಸೈದ್ಧಾಂತಿಕ ತಿಳಿವಳಿಕೆಯಿಂದ ಸಮರ್ಥ ನಾಯಕತ್ವಕ್ಕೂ ಬರಬೇಕಾದ ತುರ್ತು ಕರ್ತವ್ಯ ಇದೆ.

Donate Janashakthi Media

One thought on “ಮಹಿಳೆಯರು ದುಡಿಯುವ ಸ್ಥಳದಲ್ಲಿನ ತಾರತಮ್ಯ ಮತ್ತು ದೌರ್ಜನ್ಯ

  1. ಪ್ರಕಟಣೆಗೆ ಧನ್ಯವಾದಗಳು. ಆಸಕ್ತರಿಗೆಲ್ಲ ಉಪಯೋಗಿಸಿಕೊಳ್ಳಲಿ.

Leave a Reply

Your email address will not be published. Required fields are marked *