ಬೆಂಗಳೂರು: 2025-26ನೇ ಸಾಲಿನ ಆಯವ್ಯಯವನ್ನು ಮಾರ್ಚ್ 7ರಂದು ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ವಿಧಾನಸೌಧದಲ್ಲಿ ತಿಳಿಸಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಮುಖ್ಯಮಂತ್ರಿ ಅವರು ರೈತ ಸಂಘದ ಮುಖಂಡರುಗಳೊಂದಿಗೆ 2025-26ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆ ನಡೆಸಿ, ರೈತ ಸಮುದಾಯದ ಕುಂದುಕೊರತೆ, ಬೇಡಿಕೆಗಳನ್ನು ಆಲಿಸಿದರು. ಬಳಿಕ ಸುದ್ದಿಗಾರರಿಗೆ ಬಜೆಟ್ ಮಂಡನೆಯ ಬಗ್ಗೆ ಮಾಹಿತಿ ನೀಡಿದರು.
ಮಾರ್ಚ್ 3 ರಿಂದ ವಿಧಾನಮಂಡಲ ಅಧಿವೇಶನ ಪ್ರಾರಂಭವಾಗುತ್ತದೆ. ಮಾರ್ಚ್ 7ರಂದು ಬಜೆಟ್ ಮಂಡಿಸುತ್ತೇನೆ. ಬಳಿಕ 3 ದಿನ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆಯಾಗುತ್ತದೆ ಎಂದು ತಿಳಿಸಿದರು.
16ನೇ ದಾಖಲೆಯ ಬಜೆಟ್
ಈಗಾಗಲೇ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಿದ್ದರಾಮಯ್ಯ ಮಾಡಿದ್ದಾರೆ. ಈ ಬಾರಿ ವಿಧಾನ ಸಭೆಯಲ್ಲಿ 16ನೇ ದಾಖಲೆಯ ಬಜೆಟ್‌ನ್ನು ಸಿಎಂ ಸಿದ್ದರಾಮಯ್ಯ ಮಂಡಿಸಲಿದ್ದಾರೆ.
ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಬೆಲೆ ಏರಿಕೆಗೆ ಬಗ್ಗೆ ಭಾರೀ ನಿರೀಕ್ಷೆಯನ್ನು ಸಾಮಾನ್ಯ ಜನರು ಇಟ್ಟಿಕೊಂಡಿದ್ದಾರೆ. ಹೊಸ ವರ್ಷದ ಮೊದಲ ಅಧಿವೇಶನ ಇದಾಗಿದ್ದು, ಮಾರ್ಚ್ 3ರಂದು ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಮಾರ್ಚ್ 4, 5, 6ರಂದು ಚರ್ಚೆ ನಡೆಯಲಿದೆ. ಮಾರ್ಚ್ 7ರ ಶುಕ್ರವಾರ 2025-26ನೇ ಸಾಲಿನ ಬಜೆಟ್ ಮಂಡಿಸುತ್ತೇನೆ ಎಂದು ಸಿದ್ದರಾಮಯ್ಯ ಮಾಹಿತಿಯನ್ನು ತಿಳಿಸಿದ್ದಾರೆ.
ಈಗಾಗಲೇ ಫೆಬ್ರವರಿ 6 ರಿಂದ ನಿರಂತರವಾಗಿ ಸಿದ್ದರಾಮಯ್ಯ ವಿವಿಧ ಇಲಾಖೆಗಳ ಸಚಿವರು, ಅಧಿಕಾರಿಗಳ ಜೊತೆ ಬಜೆಟ್ ಪೂರ್ವಭಾವಿ ಸಭೆಗಳನ್ನು ನಡೆಸುತ್ತಿದ್ದಾರೆ. ಬಜೆಟ್ ಮಂಡನೆ ತಯಾರಿ ನಡೆಸಿದ್ದಾರೆ. ವಿಧಾನಸಭೆ ಚುನಾವಣೆ ಮುಗಿದು ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ 2023ರ ಜುಲೈನಲ್ಲಿ ಹಣಕಾಸು ಸಚಿವ, ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡಿಸಿದರು.
ಕರ್ನಾಟಕದ 2025-26ನೇ ಸಾಲಿನ ಬಜೆಟ್ ಗಾತ್ರ 4 ಲಕ್ಷ ಕೋಟಿ ರೂ.ಗಳನ್ನು ದಾಟಲಿದೆ ಎಂದು ಅಂದಾಜಿಸಲಾಗಿದೆ. 5 ಗ್ಯಾರಂಟಿ ಯೋಜನೆಗಳ ಘೋಷಣೆ, ಅನುಷ್ಠಾನದ ಬಳಿಕ ಕರ್ನಾಟಕ ಸರ್ಕಾರ ಖಜಾನೆ ಭರ್ತಿ ಮಾಡಲು ಹರಸಾಹಸ ಪಡುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ.
ಕರ್ನಾಟಕ ಸರ್ಕಾರದ ಬಜೆಟ್ ಮೇಲೆ ಅಪಾರ ನಿರೀಕ್ಷೆಗಳಿಲ್ಲ. ಕಾರಣ ಗ್ಯಾರಂಟಿ ಯೋಜನೆಗಳು. ಸರ್ಕಾರ ಹೊಸ ಹೊಸ ಯೋಜನೆಗಳನ್ನು ಘೋಷಣೆ ಮಾಡುವ ಬದಲು ಈಗ ಇರುವ ಯೋಜನೆಗಳಿಗೆ ಅನುದಾನವನ್ನು ಹಂಚಿಕೆ ಮಾಡುವ ನಿರೀಕ್ಷೆ ಇದೆ. ರಾಜ್ಯದಲ್ಲಿ ಚುನಾವಣೆಯೂ ಇಲ್ಲದ ಕಾರಣ ಜನಪ್ರಿಯ ಯೋಜನೆಗಳ ಮೊರೆ ಹೋಗದೆ ಆದಾಯ ಸಂಗ್ರಹಕ್ಕೆ ಹೆಚ್ಚಿನ ಒತ್ತು ನೀಡಲಿದೆ ಎಂದು ಅಂದಾಜಿಸಲಾಗಿದೆ.
ವ್ಹೀಲ್ ಚೇರ್‌ನಲ್ಲೇ ವಿಧಾನಸೌಧಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯನವರು ಸದ್ಯ ಮಂಡಿನೋವಿನಿಂದ ಚೇತರಿಸಿಕೊಳ್ಳುತ್ತಿದ್ದಾರೆ. ವ್ಹೀಲ್ ಚೇರ್‌ನಲ್ಲೇ ವಿಧಾನಸೌಧಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಬಜೆಟ್ ಪೂರ್ವಭಾವಿ ಸಭೆಗಳನ್ನು ನಡೆಸಿದರು. ಆರೋಗ್ಯ ಈಗ ಇಂಪ್ರೂವ್ ಆಗ್ತಿದೆ. ಒತ್ತಡ ಹೆಚ್ಚಾಗಿರುವುದರಿಂದ ಮೊಂಡಿ ನೋವಿದೆ. ನೋವು ಈಗ ಕಡಿಮೆ ಆಗ್ತಿದೆ ಎಂದರು.
ಕೃಷಿಕರ ಪರ ಬಜೆಟ್ ಮಂಡನೆ
ಸಭೆ ಬಳಿಕ ಬಜೆಟ್ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ತಯಾರಿ ಮಾಡುವಾಗ ನಾವು ಇತಿಮಿತಿಯಲ್ಲಿ ಮಾಡಿದ್ದೇವೆ ಯಾವೆಲ್ಲಾ ಅಂಶಗಳನ್ನು ಸೇರಿಸಬೇಕು ಎಂಬ ಬಗ್ಗೆ ಚರ್ಚೆ ಆಗಿದೆ. ನಮ್ಮ ಸರ್ಕಾರ ರೈತರ ಹಿತ ಕಾಪಾಡುವಲ್ಲಿ ಹಿಂದೆ ಬಿದ್ದಿಲ್ಲ. ಕೃಷಿಕರಿಗೆ ಪೂರಕವಾಗಿ ಇರ್ತೀನಿ ಎಂಬ ಮಾತು ಕೊಡ್ತೀನಿ ಎಂದರು.
2025-26ನೇ ಸಾಲಿನ ಬಜೆಟ್ ಮಂಡಿಸುವ ಮೂಲಕ 16ನೇ ಬಾರಿ ಮತ್ತು ರಾಜ್ಯ ರಾಜಕೀಯದಲ್ಲಿ ಅತಿ ಹೆಚ್ಚು ಬಜೆಟ್ ಮಂಡಿಸಿದವರು ಎಂಬ ಹೆಗ್ಗಳಿಕೆಯನ್ನು ಸಿಎಂ ಸಿದ್ದರಾಮಯ್ಯ ಪಡೆಯಲಿದ್ದಾರೆ.
ಇದನ್ನೂ ನೋಡಿ: ಮೋದಿಯವರ ನೀತಿ : ಹಣಕಾಸು ಕಾಯ್ದೆಗಳ ದುರ್ಬಳಕೆ, ಸ್ವತಂತ್ರ ಮಾಧ್ಯಮಗಳ ಮೇಲೆ ದಬ್ಬಾಳಿಕೆ- WAN -IFRA, IAPA ವರದಿ