ಜಿಲ್ಲೆಯ ಅಭಿವೃದ್ಧಿಯ ನಿರೀಕ್ಷೆಗೆ ತಣ್ಣೀರು ಎರಚಿದ ರಾಜ್ಯ ಬಜೆಟ್: ಬಸವರಾಜ ಪೂಜಾರ

ಹಾವೇರಿ: ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ಇಂದು ಸದನದಲ್ಲಿ ಮಂಡಿಸಿದ 4.09 ಲಕ್ಷ ಕೋಟಿ ರೂಪಾಯಿಯ 2025-26 ನೇ ಸಾಲಿನ ಆಯವ್ಯಯ (ಬಜೆಟ್) ದಲ್ಲಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಅತ್ಯಗತ್ಯವಿರುವ ಅನುದಾನ ನೀಡುವಲ್ಲಿ ಹಾಗೂ ಕೃಷಿಯಾಧಾರಿತ ಕೈಗಾರಿಕೆಗಳನ್ನು ಒದಗಿಸುವಲ್ಲಿ ವಿಫಲವಾಗಿದ್ದು, ಈ ಬಜೆಟ್ ಜಿಲ್ಲೆಯ ಜನರ ಭರವಸೆಗೆ ಧಕ್ಕೆ ತಂದಿದೆ ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಖಂಡಿಸಿದ್ದಾರೆ.

ಜಿಲ್ಲೆಯಲ್ಲಿ ನಿರುದ್ಯೋಗ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಉದ್ಯೋಗ ಅರಸಿಕೊಂಡು ದೂರದ ಮಹಾನಗರಗಳಿಗೆ ಜನತೆ ವಲಸೆ ಹೋಗುತ್ತಿದ್ದಾರೆ. ಸ್ಥಳೀಯವಾಗಿ ಉದ್ಯೋಗ ಸೃಷ್ಠಿಸಲು ಕೃಷಿ ಪ್ರಧಾನ ಹಾವೇರಿ ಜಿಲ್ಲೆಯಲ್ಲಿ ಕೃಷಿ, ಪಶು ಸಂಗೋಪನೆಗೆ ಪ್ರಾಶಸ್ತ್ಯ ನೀಡಬೇಕಿರುವ ತುರ್ತಿದೆ. ಕೃಷಿಯಾಧಾರಿತ ಕೈಗಾರಿಗಳನ್ನು ಜಾರಿಗೆ ತಂದು ಉದ್ಯೋಗ ಸೃಷ್ಠಿಸಲು ಈ ಬಜೆಟ್ ನಲ್ಲಿ ಯಾವುದೇ ಕ್ರಮ ಕೈಗೊಳ್ಳದಿರುವುದು ರಾಜ್ಯ ಸರಕಾರಕ್ಕೆ ಉದ್ಯೋಗ ನೀತಿಯ ಸ್ಪಷ್ಟ ಕಣ್ಣೋಟವಿಲ್ಲದಿರುವುದು ಹಾಗೂ ಉದ್ಯೋಗ ಸೃಷ್ಠಿಗೆ ಒತ್ತು ನೀಡುವ ಇಚ್ಛಾಶಕ್ತಿ ಇಲ್ಲ ಎಂಬುದನ್ನು ಸಾಬೀತುಪಡಿಸಿದೆ.

ಇದನ್ನು ಓದಿ:ಕೃಷಿ ಬಿಕ್ಕಟ್ಟು, ಬೆಲೆ ಏರಿಕೆ ಬವಣೆಗೆ ಪರಿಹಾರ ಒದಗಿಸದ ನಿರಾಶೆ ಬಜೆಟ್ – KPRS ಟೀಕೆ

ಜಿಲ್ಲೆಯ ರೈತರ ಬೇಡಿಕೆಯಾದ ವರದಾ-ಬೇಡ್ತಿ ನದಿ ಜೋಡಣೆಗೂ ಕ್ರಮ ಕೈಗೊಳ್ಳದಿರುವುದು. ಹಾವೇರಿ ವಿಶ್ವ ವಿದ್ಯಾಲಯಕ್ಕೆ ಅಗತ್ಯ ಅನುದಾನ ಮೀಸಲಿಡುವಲ್ಲಿ ವಿಫಲವಾಗಿರುವುದು ರಾಜ್ಯ ಸರಕಾರದ ಅನ್ಯಾಯಕಾರಿ ನಡೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉದ್ಯೋಗಕ್ಕಾಗಿ ಹಂಬಲಿಸುತ್ತಿರುವ ರಾಜ್ಯದ ಯುವಜನತೆಯು ಮುಖ್ಯಮಂತ್ರಿಗಳು ಉದ್ಯೋಗ ನೀತಿ ಜಾರಿಗೊಳಿಸಿ ಉದ್ಯೋಗ ಭರವಸೆ ನೀಡುತ್ತಾರೆಂದು ಭಾವಿಸಿದ್ದರು, ಆದರೆ ಮಾನ್ಯ ಸಿದ್ರಾಮಯ್ಯನವರು ಮಂಡಿಸಿದ ದಾಖಲೆಯ 16ನೇ ಬಜೆಟ್ ರಾಜ್ಯದ ಯುವಜನರ ಬದುಕಿನ ಭದ್ರತೆಯ ಕುರಿತು ಯಾವುದೆ ಸ್ಪಷ್ಟ ಕಣ್ಣೋಟ ಹೊಂದಿಲ್ಲ ಎಂಬುದನ್ನು ಸಾಬೀತು ಪಡಿಸಿದೆ.

ಶಿಕ್ಷಣ ಇಲಾಖೆಯಲ್ಲಿ 15 ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುವುದು ಎಂಬ ಒಂದಂಶ ಹೊರತುಪಡಿಸಿದರೆ, ರಾಜ್ಯ ಸರಕಾರದಡಿ ಖಾಲಿಯಿರುವ ಎರಡು ಲಕ್ಷ ಎಪ್ಪತ್ತು ಸಾವಿರ ಹುದ್ದೆಗಳ ಭರ್ತಿಗೂ ಯಾವುದೇ ಕ್ರಮ ಕೈಗೊಂಡಿಲ್ಲ ಅಲ್ಲದೇ ರಾಜ್ಯಕ್ಕೆ ಅಗತ್ಯವಿರುವ ಯುವ ನೀತಿಯನ್ನೂ ಕೂಡ ಜಾರಿ ಮಾಡಲು ಮುಂದಾಗಿಲ್ಲ. ಇದು ನಿರುದ್ಯೋಗ ಸಮಸ್ಯೆ ಎದುರಿಸುತ್ತಿರುವ ಯುವಜನರಿಗೆ ಸಹಜವಾಗಿಯೇ ನಿರಾಸೆ ಮೂಡಿಸಿದ ಬಜೆಟ್ ಆಗಿದೆ.

‘ನನ್ನ ವೃತ್ತಿ, ನನ್ನ ಆಯ್ಕೆ’ ಕಾರ್ಯಕ್ರಮದಡಿ ಸರ್ಕಾರಿ ಶಾಲಾ/ಕಾಲೇಜುಗಳಲ್ಲಿ 2.30 ಲಕ್ಷ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ನೀಡುವ ಪ್ರಸ್ತಾಪ ಸ್ವಾಗತಾರ್ಹ ಕ್ರಮ; ಆದರೆ ವೃತ್ತಿ ಮಾರ್ಗದರ್ಶನ ಪಡೆದವರಿಗೆ ಉದ್ಯೋಗ ಸೃಷ್ಠಿಸದೇ ಇರುವುದು ಜಾಣ ಕುರುಡು ನೀತಿಯಾಗಿದೆ.

ರಾಜ್ಯ ಸರ್ಕಾರವು Karnataka Clean Mobility Policy 2025-30 ಯಡಿ 50 ಸಾವಿರ ಕೋಟಿ ರೂ. ಹೂಡಿಕೆ ಹಾಗೂ 1 ಲಕ್ಷ ಹೊಸ ಉದ್ಯೋಗ ಸೃಜನೆಯ ಗುರಿ ಹಾಗೂ 21911 ಕೋಟಿ ರೂ. ಹೂಡಿಕೆಯೊಂದಿಗೆ ಪ್ರಾರಂಭವಾದ Foxconn ಸಂಸ್ಥೆಗೆ ಮೊಬೈಲ್ ಫೋನ್ ಗಳ ಉತ್ಪಾದನಾ ಘಟಕಕ್ಕೆ 6970 ಕೋಟಿ ರೂ. ಮೌಲ್ಯದ ಪ್ರೋತ್ಸಾಹಕ ನೀಡಲು ಕ್ರಮ. ಇದರಿಂದ 50ಸಾವಿರ ಉದ್ಯೋಗ ಸೃಜನೆಯ ನಿರೀಕ್ಷೆ ಮತ್ತು ಬೆಂಗಳೂರು ಹೊರತು ಪಡಿಸಿ, ಇತರ ನಗರಗಳಗಲ್ಲೂ ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸಲು, 1 ಸಾವಿರ ಕೋಟಿ ರೂ. ವೆಚ್ಚದ ಸ್ಥಳೀಯ ಆರ್ಥಿಕ ಆಕ್ಸಿಲರೇಟರ್ ಕಾರ್ಯಕ್ರಮ -LEAP ಪ್ರಾರಂಭ. ಈ ವರ್ಷ 200 ಕೋಟಿ ರೂ. ಅನುದಾನ. 5 ಲಕ್ಷ ಹೊಸ ಉದ್ಯೋಗ ಸೃಷ್ಟಿಯ ಗುರಿ ಹೊಂದಿದೆ ಎಂದು ಬಜೆಟ್ ನಲ್ಲಿ ಪ್ರಸ್ತಾಪಿಸಿದೆ ಆದರೆ ಹಿಂದಿನ ಬಜೆಟ್ ನಲ್ಲಿಯೂ ಈ ರೀತಿ ಉದ್ಯೋಗ ಸೃಷ್ಠಿಯ ನಿರೀಕ್ಷೆ ಹಾಗೂ ಗುರಿ ಎಂಬ ಆಕರ್ಷಕವಾದ ಮಾತುಗಳು ರಾಜ್ಯದ ಯುವಜನರಿಗೆ ಅಂಗೈನಲ್ಲಿ ಆಕಾಶ ತೋರಿಸಿರುವುದು ಅನುಭವ ವೇದ್ಯವಾಗಿದೆ.

ಇದನ್ನು ಓದಿ:“ಕಾರ್ಪೊರೇಟ್ ಸುಲಿಗೆಗೆ ಮಣೆ ಹಾಕುವ” ಕೇಂದ್ರ ಸರಕಾರದ ಮಾದರಿಯನ್ನೇ ಅನುಸರಿಸಿದ ರಾಜ್ಯದ ಬಜೆಟ್

ಸರಕಾರ ಬಜೆಟ್ ನಲ್ಲಿ ಪ್ರಸ್ತಾಪಿಸಿರುವ ಯುವಜನ ಸಬಲೀಕರಣ ಕೇವಲ ಘೋಷಣೆಯಂತಿದೆ. ಕೌಶಲ್ಯ ಅಭಿವೃದ್ದಿ ತರಭೇತಿ ನೀಡುತ್ತೇವೆ ಎಂದು ಹೇಳುತ್ತಿದೆ ಇದು ಕೇಂದ್ರ ಸರಕಾರದ ಬಜೆಟ್ ನಕಲಿನಂತೆ ಭಾಸವಾಗುತ್ತಿದೆ ಏಕೆಂದರೆ ಕೇಂದ್ರ ಸರಕಾರವೂ ಕೂಡ ಕೌಶಲ್ಯಾಭಿವೃದ್ಧಿ ತರಭೇತಿಗೆ ಒತ್ತು ಕೊಟ್ಟಿತ್ತು ಎಷ್ಟು ಜನರಿಗೆ ತರಬೇತಿ ಕೊಡಲಾಯ್ತು, ಆ ತರಭೇತಿ ಪಡೆದವರಲ್ಲಿ ಎಷ್ಟು ಜನರಿಗೆ ಉದ್ಯೋಗ ಒದಗಿಸಲಾಯ್ತು ಎಂಬುವ ಮಾಹಿತಿ ಮಾತ್ರ ಸಿಗುವುದಿಲ್ಲ. ರಾಜ್ಯ ಸರಕಾರದ ಬಜೆಟ್ ಕೂಡ ಕೇಂದ್ರದ ದಾರಿಯಲ್ಲಿ ಸಾಗಿದ್ದು ಯುವಜನರಲ್ಲಿ ಭ್ರಮೆ ಹುಟ್ಟಿಸುವುದಾಗಿದೆ.

ಕೇವಲ ತರಭೇತಿ ನೀಡುವ ಬಜೆಟ್ ಪ್ರಸ್ತಾವನೆಗಳು ಯುವಜನರ ಬದುಕಿಗೆ ಭದ್ರತೆ ಖಾತ್ರಿಪಡಿಸುವುದಿಲ್ಲ.

ಉದ್ಯೋಗದ ಖಾತ್ರಿ ನೀಡದೇ ಕೇವಲ ತರಭೇತಿ ನೀಡುತ್ತೇವೆಂಬುದು ರಾಜ್ಯ ಸರಕಾರ ಉದ್ಯೋಗಕ್ಕಾಗಿ ಪರದಾಡುತ್ತಿರುವ ಯುವಜನರ ಬದುಕಿನ ಜೊತೆ ಚಲ್ಲಾಟವಾಡಿದಂತಾಗುತ್ತದೆ.

ರಾಜ್ಯದ ಯುವಜನತೆ ಸರಕಾರದ ಈ ಯುವಜನ ಹಾಗೂ ಜನಸಾಮನ್ಯರ ವಿರೋಧಿ ಬಜೆಟ್ ಅನ್ನು ತಿರಸ್ಕರಿಸಿ ಉದ್ಯೋಗ ಭದ್ರತೆ ಖಾತ್ರಿಪಡಿಸುವ ಯೋಜನೆಗಳನ್ನು ಸರಕಾರ ಜಾರಿಗೆ ತರಲು ಒತ್ತಾಯಿಸಿ ಪ್ರತಿಭಟಿಸಲು ಯುವಜನತೆಗೆ ಡಿವೈಎಫ್ಐ ರಾಜ್ಯ ಸಮಿತಿಯು ಕರೆ ನೀಡುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *