ನವದೆಹಲಿ: ಫಾದರ್ ಸ್ವಾನ್ ಸ್ವಾಮಿಯವರ ಮೇಲೆ ಸುಳ್ಳು ಕೇಸುಗಳನ್ನು ಹೊರಿಸಲು, ಅವರು ಜೈಲಿನಲ್ಲೇ ಮುಂದುವರೆಯುವಂತೆ ಮಾಡಿ ಅಮಾನವೀಯವಾಗಿ ನಡೆಸಿಕೊಳ್ಳಲು ಹೊಣೆಗಾರರಾದವರ ವಿರುದ್ಧ ಕ್ರಮಕೈಗೊಳ್ಳುವಂತೆ ಸರಕಾರಕ್ಕೆ ನಿರ್ದೇಶನ ಕೊಡಬೇಕು ಎಂದು ರಾಷ್ಟ್ರಪತಿಗಳನ್ನು ಆಗ್ರಹಿಸಿ ಹತ್ತು ಪ್ರಮುಖ ವಿಪಕ್ಷಗಳ ಮುಖಂಡರು ಅವರಿಗೆ ಇಂದು(ಜುಲೈ 6ರಂದು) ಪತ್ರ ಬರೆದಿದ್ದಾರೆ. ಈಗ ಭೀಮಾ ಕೊರೆಗಾಂವ್ ಕೇಸಿನಲ್ಲಿ ಜೈಲಿಗೆ ಹಾಕಿರುವವರನ್ನು ಹಾಗೂ ಇತರ ರಾಜಕೀಯ-ಪ್ರೇರಿತ ಯುಎಪಿಎ, ರಾಜದ್ರೋಹ ಮುಂತಾದ ಕೇಸುಗಳಲ್ಲಿ ಬಂಧಿತರಾಗಿರುವ ಎಲ್ಲರನ್ನೂ ತಕ್ಷಣವೇ ಬಿಡುಗಡೆ ಮಾಡಲೇಬೇಕಾಗಿದೆ ಎಂದೂ ಅವರು ಈ ಪತ್ರದಲ್ಲಿ ಹೇಳಿದ್ದಾರೆ.
ಇದನ್ನು ಓದಿ: “ಸ್ಟಾನ್ ಸ್ವಾಮಿಯವರ ಸಾವು ಕಸ್ಟಡಿ ಹತ್ಯೆ”- ವ್ಯಾಪಕ ಆಕ್ರೋಶ, ಖಂಡನೆ
ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ)ನ ಸೀತಾರಾಮ್ ಯೆಚುರಿ ಮತ್ತು ಭಾರತ ಕಮ್ಯೂನಿಸ್ಟ್ ಪಕ್ಷ-ಸಿಪಿಐನ ಡಿ.ರಾಜ ಇವರಲ್ಲದೆ ಕಾಂಗ್ರೆಸ್‍ನ ಸೋನಿಯಾ ಗಾಂಧಿ, ಜನತಾದಳ (ಜಾತ್ಯಾತೀತ)ಜೆಡಿ(ಎಸ್) ನ ಹೆಚ್.ಡಿ.ದೇವೇಗೌಡ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ-ಎನ್‌ಸಿಪಿ ಯ ಶರದ್ ಪವಾರ್, ಜಮ್ಮು-ಕಾಶ್ಮೀರ ಜನತಾ ಮೈತ್ರಿಕೂಟದ ಫಾರುಖ್ ಅಬ್ದುಲ್ಲ, ತೃಣಮೂಲ ಕಾಂಗ್ರೆಸ್(ಟಿಎಂಸಿ) ನ ಮಮತಾ ಬ್ಯಾನರ್ಜಿ, ರಾಷ್ಟ್ರೀಯ ಜನತಾ ದಳ(ಆರ್.ಜೆ.ಡಿ.)ದ ತೇಜಸ್ವೀ ಯಾದವ್, ದ್ರಾವೀಡ್ ಮುನ್ನೇತ್ರ ಕಳಗಂ(ಡಿಎಂಕೆ) ನ ಎಂ ಕೆ ಸ್ಟಾಲಿನ್ ಹಾಗೂ ಝಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ) ನ ಹೇಮಂತ್ ಸೊರೆನ್ ಸಹಿ ಮಾಡಿರುವ ಈ ಪತ್ರದ ಪೂರ್ಣ ಪಾಠವನ್ನು ಈ ಮುಂದೆ ಕೊಡಲಾಗಿದೆ:
ನಾವು, ಪ್ರಮುಖ ವಿಪಕ್ಷಗಳ ಮುಖಂಡರು ಫಾದರ್ ಸ್ಟಾನ್ ಸ್ವಾಮಿಯವರ ಸಾವಿನ ಬಗ್ಗೆ ಆಳವಾದ ಯಾತನೆಯಿಂದ ತೀವ್ರ ದುಃಖ ಮತ್ತು ಆಕ್ರೋಶವನ್ನು ವ್ಯಕ್ತಪಡಿಸುತ್ತ ನಿಮಗೆ ಬರೆಯುತ್ತಿದ್ದೇವೆ.
ಝಾರ್ಖಂಡ್‌ನ ದೂರ-ದೂರದ ಪ್ರದೇಶಗಳಲ್ಲಿ ಆದಿವಾಸಿಗಳ ಹಕ್ಕುಗಳು ಮತ್ತು ಸಮಸ್ಯೆಗಳನ್ನು ಪ್ರತಿಪಾದಿಸುತ್ತಿದ್ದ, ಚಟುವಟಿಕೆಗಳಲ್ಲಿ ತೊಡಗಿದ್ದ 84 ವರ್ಷದ ಜೆಸುಯಿಟ್ ಪಾದ್ರಿಯ ಮೇಲೆ ಕರಾಳ ಯುಎಪಿಎ ಕಾಯ್ದೆಯ ಅಡಿಯಲ್ಲಿ ಕಪೋಲಕಲ್ಪಿತ ಆರೋಪಗಳನ್ನು ಹಾಕಿ ಕಳೆದ ಅಕ್ಟೋಬರ್‌ನಲ್ಲಿ ಅವರನ್ನು ಜೈಲಿಗೆ ಹಾಕಲಾಯಿತು.
ಅವರಿಗೆ ಓಡಾಟವನ್ನು ಕುಂಠಿತಗೊಳಿಸುವ ಪಾರ್ಕಿನ್ಸನ್ ಕಾಯಿಲೆಯೂ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಶುಶ್ರೂಷೆಯನ್ನು ನಿರಾಕರಿಸಲಾಯಿತು. ಜೈಲಿನಲ್ಲಿ ಅವರಿಗೆ ದ್ರವ ಪದಾರ್ಥಗಳನ್ನು ಕುಡಿಯಲು ಒಂದು ಸಿಪ್ಪರ್ ಲಭ್ಯಗೊಂಡದ್ದು ಕೂಡ ಒಂದು ದೇಶವ್ಯಾಪಿ ಪ್ರಚಾರಾಂದೋಲನ ನಡೆಸಿದ ನಂತರವೇ.
ಇದನ್ನು ಓದಿ: ಭೀಮಾ ಕೋರೆಗಾಂವ್ ಮತ್ತು ಎಲ್ಗಾರ್ ಪರಿಷತ್ ಪ್ರಕರಣ ಆರೋಪಿ ಸ್ಟಾನ್ ಸ್ವಾಮಿ ನಿಧನ
ಕೋವಿಡ್ ಪ್ರಕರಣಗಳು ಅಪಾರವಾಗಿ ಹೆಚ್ಚಿದ ಜನನಿಬಿಡವಾಗಿದ್ದ ತಲೋಜಾ ಜೈಲಿನಿಂದ ಅವರನ್ನು ಸ್ಥಳಾಂತರಿಸಬೇಕೆಂಬ ಹಲವಾರು ಮನವಿಗಳಿಗೆ ಕಿವಿಗೊಡಲೇ ಇಲ್ಲ. ಜಾಮೀನು ಕೊಡಿ ಮತ್ತು ಮನೆಗೆ ಕಳಿಸಿ ಎಂಬ ಅವರ ಮನವಿಗಳನ್ನು ಕೂಡ ತಿರಸ್ಕರಿಸಲಾಯಿತು. ಅವರಿಗೆ ಕೋವಿಡ್ ಸೋಂಕು ತಗಲಿ ಅವರ ದೇಹಸ್ಥಿತಿ ಹದಗೆಡಲಾರಂಭಿಸಿದಾಗ ಮುಂಬೈ ಹೈಕೋರ್ಟಿನ ಮಧ್ಯಪ್ರವೇಶದಿಂದಾಗಿ ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಆ ವೇಳೆಗೆ ಕಸ್ಟಡಿಯಲ್ಲಿ ಅವರ ಸಾವನ್ನು ತಡೆಯಲು ಬಹಳ ವಿಳಂಬವಾಗಿತ್ತು.
ತಾವು ಭಾರತದ ರಾಷ್ಟ್ರಪತಿಯಾಗಿ, ಅವರ ಮೇಲೆ ಸುಳ್ಳು ಕೇಸುಗಳನ್ನು ಹೊರಿಸಲು, ಅವರು ಜೈಲಿನಲ್ಲೇ ಮುಂದುವರೆಯುವಂತೆ ಮಾಡಲು ಮತ್ತು ಅಮಾನವೀಯವಾಗಿ ನಡೆಸಿಕೊಳ್ಳಲು ಹೊಣೆಗಾರರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ “ನಿಮ್ಮ ಸರಕಾರ”ಕ್ಕೆ ನಿರ್ದೇಶನ ಕೊಡಲು ತಕ್ಷಣವೇ ಮಧ್ಯಪ್ರವೇಶಿಸಬೇಕು ಎಂದು ನಾವು ಆಗ್ರಹಪಡಿಸುತ್ತೇವೆ. ಅವರನ್ನು ಜವಾಬುದಾರರಾಗಿ ಮಾಡಬೇಕು. ಈಗ ಭೀಮಾ ಕೊರೆಗಾಂವ್ ಕೇಸಿನಲ್ಲಿ ಜೈಲಿಗೆ ಹಾಕಿರುವವರನ್ನು ಹಾಗೂ ಕರಾಳ ಯುಎಪಿಎ, ರಾಜದ್ರೋಹ ಮುಂತಾದವುಗಳ ಅಡಿಯಲ್ಲಿ ಇತರ ರಾಜಕೀಯ-ಪ್ರೇರಿತ ಕೇಸುಗಳಲ್ಲಿ ಬಂಧಿತರಾಗಿರುವ ಎಲ್ಲರನ್ನೂ ತಕ್ಷಣವೇ ಬಿಡುಗಡೆ ಮಾಡಲೇಬೇಕಾಗಿದೆ.