ಆಪರೇಷನ್​ ಹಸ್ತ ಚರ್ಚೆ ಬೆನ್ನಲ್ಲೇ ಸಿಎಂ ಭೇಟಿಯಾದ ಎಸ್. ಟಿ ಸೋಮಶೇಖರ್..!

ಬೆಂಗಳೂರು :ರಾಜ್ಯದಲ್ಲಿ ಆಪರೇಷನ್​ ಹಸ್ತದ ಚರ್ಚೆ ನಡುವೆಯೇ ಬಿಜೆಪಿ ಶಾಸಕ ಎಸ್​ ಟಿ ಸೋಮಶೇಖರ್​ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ್ ಜೊತೆ ವೇದಿಕೆ ಹಂಚಿಕೊಂಡು ರಾಜಕೀಯ ಚರ್ಚೆಯ ಕೇಂದ್ರ ಬಿಂದುವಾಗಿದ್ದ ಯಶವಂತಪುರ ಬಿಜೆಪಿ ಶಾಸಕ ಎಸ್‌ಟಿ ಸೋಮಶೇಖರ್ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ಆಪರೇಷನ್ ಹಸ್ತದ ಚರ್ಚೆ ನಡುವೆ ಸೋಮಶೇಖರ್ ಅವರ ಈ ನಡೆ ಇದೀಗ ಸಾಕಷ್ಟು ಕುತೂಹಲ ಮೂಡಿಸಿದೆ.

ಇತ್ತೀಚೆಗಷ್ಟೇ ಯಶವಂತಪುರ ಕ್ಷೇತ್ರದಲ್ಲಿ ನಡೆದಿದ್ದ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಾಸಕ ಎಸ್‌ಟಿ ಸೋಮಶೇಖರ್ ಅವರು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಹೊಗಳಿದ್ದರು. ಡಿಕೆಶಿ ತಮ್ಮ ರಾಜಕೀಯ ಗುರು ಎಂದು ಕಾರ್ಯಕ್ರಮದಲ್ಲಿ ಹೇಳಿದ್ದರು. ಇದು ಬಿಜೆಪಿಯಲ್ಲಿ ದೊಡ್ಡ ಸಂಚಲನವನ್ನು ಉಂಟು ಮಾಡಿತ್ತು.

ಈ ನಡುವೆ ಸೋಮಶೇಖರ್ ಕಾಂಗ್ರೆಸ್ ಸೇರಲಿದ್ದಾರೆ, ಬೆಂಗಳೂರು ಉತ್ತರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಆಗಿ ಸ್ಪರ್ಧೆ ಮಾಡಲಿದ್ದಾರೆ. ಪುತ್ರನನ್ನು ಯಶವಂತಪುರ ಕ್ಷೇತ್ರದ ಉಪ ಚುನಾವಣೆಗೆ ನಿಲ್ಲಿಸುತ್ತಾರೆ ಎನ್ನುವ ಚರ್ಚೆ ಆರಂಭವಾಗಿತ್ತು. ಆಪರೇಷನ್ ಹಸ್ತದ ಬಗ್ಗೆ ಚರ್ಚೆ ನಡೆದ ಹಿನ್ನೆಲೆಯಲ್ಲಿ ಖುದ್ದು ಯಡಿಯೂರಪ್ಪ ತಮ್ಮ ನಿವಾಸದಲ್ಲಿ ಬೆಂಗಳೂರು ಶಾಸಕರ ಸಭೆ ನಡೆಸಿ ಸಮಸ್ಯೆಗೆ ಪರಿಹಾರಕ್ಕೆ ಸೂಚಿಸಿದ್ದರು. ಅದರಂತೆ ಸೋಮಶೇಖರ್ ವಿರುದ್ಧ ಕೆಲಸ ಮಾಡಿದ್ದ ಮಾರೇಗೌಡರನ್ನು ಇಂದು ಬೆಳಗ್ಗೆಯಷ್ಟೇ ಪಕ್ಷದಿಂದ ಉಚ್ಛಾಟನೆ ಮಾಡಲಾಗಿತ್ತು. ಅದರ ನಡುವೆ ಸೋಮಶೇಖರ್ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿರುವುದು ಬಿಜೆಪಿಯಲ್ಲಿ ಮತ್ತೆ ಸಂಚಲನ ಮೂಡಿಸಿದೆ.

ಸಿಎಂ ಭೇಟಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಎಸ್.ಟಿ ಸೋಮಶೇಖರ್, ತಮ್ಮ ಕ್ಷೇತ್ರದ ಅಭಿವೃದ್ಧಿ ವಿಷಯದ ಬಗ್ಗೆ ಚರ್ಚೆ ನಡೆಸಿದರು. ಜೊತೆಗೆ ಕಾಮಗಾರಿಗಳು, ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಸಿಎಂಗೆ ಮನವಿ ಪತ್ರ ಸಲ್ಲಿಸಿದ್ದೇನೆ. ‘ಇದು ರಾಜಕೀಯ ಕಾರಣದ ಭೇಟಿಯಲ್ಲ, ಕೇವಲ ಕ್ಷೇತ್ರದ ಅಭಿವೃದ್ಧಿ ವಿಚಾರಕ್ಕೆ ಸೀಮಿತವಾದ ಭೇಟಿ ಎಂದು ಎಸ್​ ಟಿ ಸೋಮಶೇಖರ್ ಸ್ಪಷ್ಟನೆ ನೀಡಿದ್ದಾರೆ.

ಆದರೆ ಈ ಊಹಾಪೋಹಗಳ ಮಧ್ಯೆ ಸಿಎಂ‌ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದು ಭಾರಿ ಕುತೂಹಲ ಮೂಡಿಸಿದೆ. ಸೋಮಶೇಖರ್ ಮೂಲಕವೇ 15 ಕ್ಕೂ ಹೆಚ್ಚು ಶಾಸಕರ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

 

Donate Janashakthi Media

Leave a Reply

Your email address will not be published. Required fields are marked *