ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಜರುಗಿದ ಕೇಂದ್ರ ಸಚಿವ ಸಂಪುಟ ಸಭೆಯು ಕರ್ನಾಟಕದ ಬೆಟ್ಟ ಕುರುಬ ಜನಾಂಗಕ್ಕೆ ಸೇರಿದ 12 ಜಾತಿಗಳನ್ನು ಪರಿಶಿಷ್ಟ ಪಂಗಡ ಸಮುದಾಯದ ಪಟ್ಟಿಗೆ ಸೇರ್ಪಡೆಗೊಳಿಸಿದೆ.
ರಾಜ್ಯ ಸರ್ಕಾರದ ಶಿಫಾರಸ್ಸಿನ ಮೇರೆಗೆ ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ. ಕರ್ನಾಟಕದ ಚಾಮರಾಜನಗರ, ಕೊಡಗು, ಮೈಸೂರು ಜಿಲ್ಲೆಗಳ ಅಂಚಿನಲ್ಲಿ ಬೆಟ್ಟ ಕುರುಬ ಜನಾಂಗದವರು ನೆಲೆಸಿದ್ದರು. ಅವರನ್ನು ಕಾರಣಾಂತರಗಳಿಂದ ಒಕ್ಕಲೆಬ್ಬಿಸಲಾಗಿತ್ತು. ಪರಿಶಿಷ್ಟ ವರ್ಗಕ್ಕೆ ಸೇರ್ಪಡೆಗೊಳಿಸುವಂತೆ ಈ ಜನಾಂಗದವರು ಕಳೆದ 30 ವರ್ಷಗಳಿಂದ ಹೋರಾಡುತ್ತಿದ್ದರು.
ಕರ್ನಾಟಕದ ಮಲೆ ಮಹದೇಶ್ವರ ಬೆಟ್ಟದಲ್ಲಿ ಹಾಗೂ ಸುತ್ತಮುತ್ತಲಿನ ಬೆಟ್ಟಗಳಲ್ಲಿ ಬೆಟ್ಟ ಕುರುಬರು ವಾಸಿಸುತ್ತಿದ್ದರು. ಇವರನ್ನು ಕಾಡು ಕುರುಬರು ಎಂದು ಕರೆಯಲಾಗುತ್ತಿತ್ತು. ನಂತರದಲ್ಲಿ ಬೆಟ್ಟ ಕುರುಬರು ಎಂದು ಕರೆಯಯಲಾಯಿತು. ಇದೀಗ ಈ ಸಮುದಾಯಕ್ಕೆ ಸೇರಿದ 12 ಉಪ ಜಾತಿಗಳನ್ನು ಪರಿಶಿಷ್ಟ ಪಂಗಡ ಸಮುದಾಯಕ್ಕೆ ಸೇರಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಇದರಿಂದಾಗಿ ಈ ವರ್ಗದವರು ಸರ್ಕಾರದ ಹೆಚ್ಚುವರಿ ಸೌಲಭ್ಯಗಳನ್ನು ಪಡೆದು ಸಮಾಜ ಮುಖಿಯಾಗಲು ಸಹಕಾರಿಯಾಗಲಿದೆ ಎಂದು ಹೇಳಲಾಗಿದೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ತೀರ್ಮಾನಕ್ಕೆ ಅಭಿನಂದನೆ ಸಲ್ಲಿಸಿದ್ದು, ಮೀಸಲಾತಿಯ ಲಾಭ ಪಡೆದು ಬೆಟ್ಟ ಕುರುಬ ಸಮುದಾಯ ಸರ್ವತೋಮುಖ ಅಭಿವೃದ್ಧಿ ಸಾಧಿಸಲಿ ಎಂದು ಟ್ವೀಟ್ ಮಾಡಿದ್ದಾರೆ.