ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ಮಕ್ಕಳೆಲ್ಲಾ ಉತ್ತೀರ್ಣ

ಬೆಂಗಳೂರು: 2021ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ನೂತನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಫಲಿತಾಂಶವನ್ನು ಇಂದು ಮಧ್ಯಾಹ್ನ 3.30ಕ್ಕೆ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಫಲಿತಾಂಶದ ಸಂಪೂರ್ಣ ವಿವರಗಳನ್ನು ಪ್ರಕಟಿಸಿದರು.

ಈ ಬಾರಿ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳ ಶೇಕಡ 99.09% ರಷ್ಟು ಫಲಿತಾಂಶ ಬಂದಿದೆ. ಪರೀಕ್ಷೆಯಲ್ಲಿ ಹಾಜರಾಗಿದ್ದ 8,71,443 ವಿದ್ಯಾರ್ಥಿಗಳಲ್ಲಿ ಒಬ್ಬ ವಿದ್ಯಾರ್ಥಿ ಹೊರತುಪಡಿಸಿ ಉಳಿದೆಲ್ಲರೂ ತೇರ್ಗಡೆಯಾಗಿದ್ದಾರೆ. ಒಬ್ಬ ವಿದ್ಯಾರ್ಥಿ ತನ್ನ ಬದಲಿಗೆ ಬೇರೆಯವರನ್ನು ಕಳುಹಿಸಿ ಪರೀಕ್ಷೆ ಬರೆಸಿದ್ದರಿಂದ ಆ ವಿದ್ಯಾರ್ಥಿಯನ್ನು ಅನುತ್ತೀರ್ಣಗೊಳಿಸಲಾಗಿದೆ ಎಂದು ತಿಳಿಸಿದರು.

4.70 ಲಕ್ಷ ವಿದ್ಯಾರ್ಥಿಗಳು ಹಾಗೂ 4.1 ಲಕ್ಷ ವಿದ್ಯಾರ್ಥಿನಿಯರು ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಎಂದು ಸಚಿವರು ಘೋಷಿಸಿದರು. ಮಕ್ಕಳ ಫಲಿತಾಂಶ ವೆಬ್‌ಸೈಟ್‌ಗೆ ಶೇಖರಿಸಲಾಗುತ್ತಿದೆ. ನಾಳೆ ಬೆಳಿಗ್ಗೆ ಒಳಗೆ ಎಲ್ಲರಿಗೂ ಫಲಿತಾಂಶ ಪ್ರಕಟಗೊಳ್ಳಲಿದೆ. ಎಸ್ ಎಂ ಎಸ್ ಮೂಲಕವೂ ಫಲಿತಾಂಶ ತಲುಪಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.

ಇದನ್ನು ಓದಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಈ ಬಾರಿ 8.76 ಲಕ್ಷ ವಿದ್ಯಾರ್ಥಿಗಳು

ಎ+ (90-100 ಮಾರ್ಕ್ಸ್) 1,28, 931 ಮಂದಿ, ಶೇಕಡ 16.52
ಎ ಗ್ರೇಡ್ (80-89 ಮಾರ್ಕ್ಸ್) 2,50,317 ಮಂದಿ, ಶೇಕಡ 32.07
ಬಿ ಗ್ರೇಡ್ (60-79 ಮಾರ್ಕ್ಸ್) 2,87,684 ಮಂದಿ, ಶೇಕಡ 13.86
ಸಿ ಗ್ರೇಡ್ (35-59 ಮಾರ್ಕ್ಸ್) 1,13,610 ಮಂದಿ, ಶೇಕಡ 14.55
ಸಿ ಗ್ರೇಡ್ ಅಂಕಗಳಲ್ಲಿ ಶೇಕಡ 9 ಮಂದಿಗೆ ಗ್ರೇಸ್ ಅಂಕ ನೀಡಿ ಪಾಸ್ ನೀಡಲಾಗಿದೆ.

625ಕ್ಕೆ 625 ಅಂಕ ಪಡೆದವರು 157 ವಿದ್ಯಾರ್ಥಿಗಳು
625ಕ್ಕೆ 623 ಅಂಕ ಪಡೆದವರು 287 ವಿದ್ಯಾರ್ಥಿಗಳು
625ಕ್ಕೆ 622 ಅಂಕ ಪಡೆದವರು 2 ವಿದ್ಯಾರ್ಥಿಗಳು
625ಕ್ಕೆ 621 ಅಂಕ ಪಡೆದವರು 449 ವಿದ್ಯಾರ್ಥಿಗಳು
625ಕ್ಕೆ 620 ಅಂಕ ಪಡೆದವರು 28 ವಿದ್ಯಾರ್ಥಿಗಳು

ಭಾಷಾವಾರು ಪಾಸಾದವರು
ಪ್ರಥಮ ಭಾಷೆ 125ಕ್ಕೆ 125 ರಷ್ಟು ಅಂಕ ಪಡೆದವರು 25,302 ವಿದ್ಯಾರ್ಥಿಗಳು
ದ್ವಿತೀಯ ಭಾಷೆ 100ಕ್ಕೆ 100 ರಷ್ಟು ಅಂಕ ಪಡೆದವರು 36,628 ವಿದ್ಯಾರ್ಥಿಗಳು
ತೃತಿಯ ಭಾಷೆ 100ಕ್ಕೆ 100ರಷ್ಟು ಅಂಕ ಪಡೆದವರು 36,776 ವಿದ್ಯಾರ್ಥಿಗಳು
ಗಣಿತ 100ಕ್ಕೆ 100ರಷ್ಟು ಅಂಕ ಪಡೆದವರು 6321 ವಿದ್ಯಾರ್ಥಿಗಳು
ವಿಜ್ಞಾನ 100ಕ್ಕೆ 100ರಷ್ಟು ಅಂಕ ಪಡೆದವರು 3,649 ಮಕ್ಕಳು
ಸಮಾಜ ವಿಜ್ಞಾನ ವಿಷಯ 100ಕ್ಕೆ 100ರಷ್ಟು ಅಂಕ ಪಡೆದವರು 9,367 ಮಕ್ಕಳು

ಪರೀಕ್ಷೆಯಲ್ಲಿ ಮಕ್ಕಳು ಗೈರು ಆಗದೇ ಶೇ 99.65ರಷ್ಟು ಹಾಜರಾತಿಯೊಂದಿಗೆ ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಿದ್ದರು. ಕಳೆದ ಬಾರಿಗಿಂತ ಹೆಚ್ಚಿನ ಸಂಖ್ಯೆಯ ಮಕ್ಕಳು ಹಾಜರಾಗಿದ್ದರು. ಮಕ್ಕಳ ಶೇಕಡಾವಾರು ಹಾಜರಾತಿಯೂ ಈ ಬಾರಿ ಹೆಚ್ಚಾಗಿದೆ ಎಂದು ಶಿಕ್ಷಣ ಮಂಡಳಿ ಮಾಹಿತಿ ನೀಡಿದೆ.

ಈ ಬಾರಿ ಕೊರೊನಾ ಆತಂಕದ ನಡುವೆಯೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ 2 ದಿನಗಳು ನಡೆಸಿತು. ಜುಲೈ 19 ಮತ್ತು 22ಕ್ಕೆ ಪರೀಕ್ಷೆ ನಡೆದಿತ್ತು. ವಿದ್ಯಾರ್ಥಿಗಳು http://sslc.karnataka.gov.in/ ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದಾಗಿದೆ. ಪರೀಕ್ಷೆಯಲ್ಲಿ ಒಎಂಆರ್ ಉತ್ತರ ಪತ್ರಿಕೆಗಳನ್ನು ಬಳಸಲಾಗಿತ್ತು. ಬಹು ಆಯ್ಕೆ ಪ್ರಶ್ನೆ ಪತ್ರಿಕೆ ಪರಿಚಯಿಸಲಾಗಿತ್ತು. ಒಎಂಆರ್ ಉತ್ತರ ಪತ್ರಿಕೆಗಳನ್ನು ಡಿಜಿಟಲ್ ಸ್ಕ್ಯಾನಿಂಗ್‌ಗೆ ಕಳುಹಿಸಿ ನಂತರ ಮೌಲ್ಯಮಾಪನ ಮಾಡಿ ಫಲಿತಾಂಶ ಪ್ರಕಟಿಸಲಾಗಿದೆ.

ಫಲಿತಾಂಶದ ಬಗ್ಗೆ ವಿದ್ಯಾರ್ಥಿಗಳು ಮರುಮೌಲ್ಯಮಾಪನಕ್ಕೆ ಅರ್ಜಿಯನ್ನು ಸಹ ಸಲ್ಲಿಸಬಹುದಾಗಿದೆ. ಒಂದು ವೇಳೆ ಮರುಪರೀಕ್ಷೆ ಬರೆಯಲು ಇಚ್ಚಿಸಿದಲ್ಲಿ ಎರಡನೇ ಬಾರಿಗೆ ಅರ್ಜಿ ಸಲ್ಲಿಸಬಹುದು. ಅದಕ್ಕೆ ಶಿಕ್ಷಕರ ಸಹಾಯ ಪಡೆದು ಅಗತ್ಯವಿರುವ ದಾಖಲೆಗಳನ್ನು ಭರ್ತಿ ಮಾಡಿ ಮನವಿ ಮಾಡಬಹುದು.

Donate Janashakthi Media

Leave a Reply

Your email address will not be published. Required fields are marked *