ಬೆಂಗಳೂರು : ಕರ್ನಾಟಕ ಶಾಲಾ ಮತ್ತು ಮೌಲ್ಯ ನಿರ್ಣಯ ಮಂಡಳಿಯ ನಿರ್ದೇಶಕರು ದಿನಾಂಕ 30.01.2023 ರಂದು ಆದೇಶ ಹೊರಡಿಸಿ, 2022- 23ನೇ ಸಾಲಿನ ಎಸ್ಎಸ್ ಎಲ್ ಸಿ ರಾಜ್ಯಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆಗೆ ಶುಲ್ಕವಾಗಿ ಎಲ್ಲಾ ಸರ್ಕಾರಿ ಹಾಗು ಅನುದಾನಿತ ಶಾಲೆಗಳಲ್ಲಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ತಮ್ಮ ಶಾಲೆಯ 10ನೇ ತರಗತಿಯ ಪ್ರತಿ ವಿದ್ಯಾರ್ಥಿಗಳಿಂದ ತಲಾ 60 ರೂಪಾಯಿಗಳನ್ನು ಸಂಗ್ರಹಿಸಿಲು ಸೂಚಿಸಿರುವುದನ್ನು ಕರ್ನಾಟಕ ರಾಜ್ಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ವಿರೋಧಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ನಿರಂಜನಾರಾಧ್ಯ.ವಿ.ಪಿ, ಪ್ರತಿವರ್ಷ ಪೂರ್ವ ಸಿದ್ಧತಾ ಪರೀಕ್ಷೆಯನ್ನು ಪರೀಕ್ಷಾ ಮಂಡಳಿಯೇ ನಡೆಸುತ್ತಿತ್ತು . ಈ ಹಿಂದೆಲ್ಲ ಮಕ್ಕಳು ಪಾವತಿಸಿದ ಪರೀಕ್ಷಾ ಶುಲ್ಕದಲ್ಲಿಯೇ ಪೂರ್ವ ಸಿದ್ಧತಾ ಪರೀಕ್ಷೆಯನ್ನು ಕೂಡ ಶಾಲೆಗಳಲ್ಲಿ ನಡೆಸಲು ಮಂಡಳಿಯು ಪ್ರಶ್ನೆ ಪತ್ರಿಕೆಗಳನ್ನು ಉತ್ತರ ಪತ್ರಿಕೆ ಸಹಿತ ನೀಡಿ ಪೂರ್ವ ಸಿದ್ಧತಾ ಪರೀಕ್ಷೆಗೆ ಸೂಚನೆ ನೀಡುತ್ತಿದ್ದದ್ದು ಪರಿಪಾಠವಾಗಿತ್ತು.
ಇದನ್ನೂ ಓದಿ : ಶಾಲಾ ಶಿಕ್ಷಣ ಸಚಿವರಿಗೆ ಕಲಿಕೆಯ ಸ್ವರೂಪದ ಬಗ್ಗೆ ತಿಳುವಳಿಕೆ ಕೊರತೆ: ನಿರಂಜನಾರಾಧ್ಯ.ವಿ.ಪಿ
ಮಂಡಳಿ ಮಕ್ಕಳಿಂದ ಈಗಾಗಲೇ ಶುಲ್ಕ ವಸೂಲಿ ಮಾಡಿದ್ದು ಆ ಹಣದಲ್ಲೇ ಪೂರ್ವಸಿದ್ಧತಾ ಪರೀಕ್ಷೆಯನ್ನು ನಡೆಸಬೇಕಿದೆ . ಆದರೆ , ಈಗ ಕರ್ನಾಟಕ ಶಾಲಾ ಮತ್ತು ಮೌಲ್ಯ ನಿರ್ಣಯ ಮಂಡಳಿಯ ನಿರ್ದೇಶಕರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿ ಪ್ರಶ್ನೆ ಪತ್ರಿಕೆಯನ್ನು ಮುದ್ರಿಸಲು 60 ರೂಪಾಯಿಗಳನ್ನು ವಸೂಲಿ ಮಾಡಲು ಮುಂದಾಗಿರುವುದು ಮಕ್ಕಳ ದೃಷ್ಟಿಯಿಂದ ಹೊರೆಯಾಗಿದೆ ಎಂದು ಆರೋಪಿಸಿದ್ದಾರೆ.
ಇದಲ್ಲದೆ ಮತ್ತೆ ಉತ್ತರ ಪತ್ರಿಕೆಗೂ ಶಾಲೆಯ ಮುಖ್ಯ ಶಿಕ್ಷಕರು ಮಕ್ಕಳಿಂದ ಹಣ ವಸೂಲಿ ಮಾಡುತ್ತಾರೆ. ಇದು ಬಡ ಮಕ್ಕಳಿಗೆ ಮತ್ತು ಕುಟುಂಬಗಳಿಗೆ ಎರಡು ಪಟ್ಟು ಹೊರೆಯಾಗಲಿದ್ದು , ಸರ್ಕಾರ ಬಡ ಮಕ್ಕಳಿಗೆ ಮಾಡಿದ ಅನ್ಯಾಯವಾಗಿದೆ .
ಮಂಡಳಿಯಲ್ಲಿ ಕೋಟ್ಯಂತರ ಹಣವಿದ್ದು , ಮಂಡಳಿಯೇ ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆ ಸರಬರಾಜು ಮಾಡಿ ಪೂರ್ವ ಸಿದ್ಧತಾ ಪರೀಕ್ಷೆಯನ್ನು ರಾಜ್ಯಮಟ್ಟದಲ್ಲಿ ನಡೆಸಬೇಕೆಂದು ಎಸ್ಡಿಎಂಸಿಗಳ ಸಮನ್ವಯ ವೇದಿಕೆ ಸರಕಾರವನ್ನು ಒತ್ತಾಯಿಸಿದೆ.