ಎಸ್‌ಎಸ್‌ಸಿ ಪರೀಕ್ಷೆಗಳಲ್ಲಿ ಇಂಗ್ಲಿಷ್-ಹಿಂದಿ ಹೇರಿಕೆ – ಎಚ್.ಡಿ. ಕುಮಾರಸ್ವಾಮಿ ಆಕ್ರೋಶ

ಬೆಂಗಳೂರು : ಕೇಂದ್ರ ಸರ್ಕಾರದ ಇಲಾಖಾ ಹುದ್ದೆಗಳಿಗೆ ಸಿಬ್ಬಂದಿ ಆಯ್ಕೆ ಸಮಿತಿಯು ನಡೆಸುವ ಎಸ್‌ಎಸ್‌ಸಿ ಪರೀಕ್ಷೆಗಳಲ್ಲಿ ಇಂಗ್ಲಿಷ್-ಹಿಂದಿ ಹೇರಿಕೆ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಕೇಂದ್ರದ ಸಿಬ್ಬಂದಿ ಆಯ್ಕೆ ಆಯೋಗವು (SSC) 20,000 ಹುದ್ದೆ ಆಯ್ಕೆಗೆ ಹಿಂದಿ-ಇಂಗ್ಲೀಷ್‌ʼನಲ್ಲಿ ಮಾತ್ರ ಪರೀಕ್ಷೆ ನಡೆಸುತ್ತಿದೆ. ಆಯ್ಕೆಯಾದ ಅಭ್ಯರ್ಥಿಯನ್ನು ಯಾವ ರಾಜ್ಯಕ್ಕಾದರೂ ಕಳುಹಿಸಬಹುದು. ಕನ್ನಡ ಸೇರಿ ಯಾವುದೇ ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆಗೆ ಅವಕಾಶವಿಲ್ಲ ಇದು ರಾಷ್ಟ್ರೀಯ ಭಾಷೆಗಳಿಗೆ ಮಾಡುತ್ತಿರುವ ಅವಮಾನ,
ಭಾಷಾ ತಾರತಮ್ಯಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ? ಎಂದು ಹಿಂದಿ ಹೇರಿಕೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಕೇಂದ್ರ ಸರಕಾರಕ್ಕೆ ಪ್ರಾದೇಶಿಕ ಭಾಷೆಗಳನ್ನು ಹತ್ತಿಕ್ಕಲೇಬೇಕು ಎನ್ನುವ ಕೆಟ್ಟ ಹಠವಿದ್ದಂತೆ ಇದೆ. ಕನ್ನಡವೂ ಸೇರಿ ದಕ್ಷಿಣದ ಪ್ರಾದೇಶಿಕ ಭಾಷೆಗಳ ಬಗ್ಗೆ ಇನ್ನಿಲ್ಲದ ಅಸಹನೆ, ದ್ವೇಷ ಮೈಗೂಡಿಸಿಕೊಂಡಿದೆ ಎನಿಸುತ್ತಿದೆ. ತ್ರಿಭಾಷಾ ಸೂತ್ರಕ್ಕೆ ಹೇಗಾದರೂ ಸಮಾಧಿ ಕಟ್ಟಲೇಬೇಕೆಂದು ಹೊರಟಂತಿದೆ ಎಂದು ಆರೋಪಿಸಿದ್ದಾರೆ.

ಒಕ್ಕೂಟ ತತ್ವದಲ್ಲಿ ಆಡಳಿತ ನಡೆಸುವ ಪಕ್ಷಕ್ಕೇ ಒಪ್ಪಿಗೆ ಇಲ್ಲ ಎನ್ನುವುದನ್ನು ಇದು ತೋರಿಸುತ್ತಿದೆ. ಹಿಂದಿ ಭಾಷಿಗರನ್ನು ಕರ್ನಾಟಕ ಹಾಗೂ ದಕ್ಷಿಣ ಭಾರತದಲ್ಲಿ ತುಂಬುವ ದುಸ್ಸಾಹಸದ ಕ್ರಮ ಇದಾಗಿದೆ ಹಾಗಾಗಿ, ಕನ್ನಡದಲ್ಲೂ ಪರೀಕ್ಷೆ ನಡೆಸಬೇಕು, ಕರ್ನಾಟಕದ ಹುದ್ದೆಗಳಿಗೆ ಕನ್ನಡಿಗರನ್ನೇ ನೇಮಿಸಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು.

Donate Janashakthi Media

Leave a Reply

Your email address will not be published. Required fields are marked *