ಧಾರವಾಡ: ಇಲ್ಲಿನ ಸಮೀಪದ ನುಗ್ಗಿಕೆರಿ ಆಂಜನೇಯ ದೇವಸ್ಥಾನದಲ್ಲಿ ಹದಿನೈದು ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದ ನಬೀಸಾಬ ಮತ್ತು ಇತರೆ ಮುಸ್ಲಿಂ ವ್ಯಾಪಾರಿಗಳ ಅಂಗಡಿಗಳ ಮೇಲೆ ಏಕಾಏಕಿ ದಾಳಿ ನಡೆಸಿ ಆರು ಟನ್ ಕಲ್ಲಂಗಡಿ ಹಣ್ಣುಗಳನ್ನು ಮತ್ತು ಇತರೆ ಪದಾರ್ಥಗಳನ್ನು ಧ್ವಂಸ ಮಾಡಿದ ಶ್ರೀರಾಮ ಸೇನೆ ಕಾರ್ಯಕರ್ತರ ಪುಂಡಾಟಿಕೆಯ ಗುಂಡಾಗಿರಿಯನ್ನು ಧಾರವಾಡದ ಜನಪರ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ.
ಧಾರವಾಡದ ಜಿಲ್ಲಾಧಿಕಾರಿ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿದ ಸಂಘಟಕರು, ಕೋಮು ದ್ವೇಷ ಹುಟ್ಟುಹಾಕಿ ಸೌಹಾರ್ದತೆಯನ್ನು ಕದಡಲು ರಾಜ್ಯದಲ್ಲಿ ಕೆಲ ದಿನಗಳಿಂದ ಇಂತಹ ಘಟನೆಗಳು ನಡೆಯುತ್ತಿರುವುದು ಗೊತ್ತಿದ್ದು ಮತ್ತು ಈ ಮೊದಲೇ ಮುಸ್ಲಿಂ ವ್ಯಾಪಾರಿಗಳಿಗೆ ಶ್ರೀರಾಮಸೇನೆಯ ಕಾರ್ಯಕರ್ತರು ಬೆದರಿಕೆ ಹಾಕಿರುವ ವಿಷಯ ಜಿಲ್ಲಾಡಳಿತ ಮತ್ತು ಪೋಲಿಸ್ ಇಲಾಖೆಗೆ ಗೊತ್ತಿದೆ. ಯಾವುದೇ ಮುಂಜಾಗ್ರತಾ ಕ್ರಮವಹಿಸದೇ ನಿರ್ಲಕ್ಷ್ಯ ವಹಿಸಿರುವುದು ಮತ್ತು ಘಟನೆ ನಡೆಯುತ್ತಿರುವಾಗ ಪೊಲೀಸರು ಮೂಖ ಪ್ರೇಕ್ಷಕರಾಗಿರುವುದನ್ನು ಗಮನಿಸಿದರೆ ಪೊಲೀಸ್ ವ್ಯವಸ್ಥೆ ಮತ್ತು ರಾಜ್ಯದ ಗುಪ್ತಚರ ಇಲಾಖೆ ಸಂಪೂರ್ಣ ವಿಫಲವಾಗಿರುವುದು ಕಂಡುಬರುತ್ತಿದೆ ಎಂದಿದ್ದಾರೆ.
ಇದನ್ನು ಓದಿ: ಮುಸ್ಲಿಂ ವರ್ತಕರ ಅಂಗಡಿಗಳ ಧ್ವಂಸ ; ಶ್ರೀರಾಮಸೇನೆ ಕಾರ್ಯಕರ್ತರಿಂದ ಗೂಂಡಾಗಿರಿ
ನಾಡಿನ ಧಾರ್ಮಿಕ ಕೇಂದ್ರಗಳಲ್ಲಿ ಹತ್ತಾರು ವರ್ಷಗಳಿಂದ ಮುಸ್ಲಿಂರು ಸೇರಿದಂತೆ ಎಲ್ಲ ಧರ್ಮಿಯರು ಹೊಟ್ಟೆ ಪಾಡಿಗಾಗಿ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡಿದ್ದು, ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಯಾರು ಎಲ್ಲಿ ವ್ಯಾಪಾರ ಮಾಡಬೇಕೆಂದು ನಿರ್ಬಂಧ ಹೇರುವ ಹಾಗೂ ದಾಳಿ ಮಾಡುವ ಅಧಿಕಾರವನ್ನು ಈ ಮತಾಂದರಿಗೆ ಕೊಟ್ಟವರ‍್ಯಾರು?. ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಕೋಮುದ್ವೇಷದ ಘಟನೆಗಳು ನಡೆಯುತ್ತಿದ್ದು ಸರಕಾರವೇ ಇವರಿಗೆಲ್ಲ ಕುಮ್ಮಕ್ಕು ನೀಡುತ್ತಿದೆ ಏನೋ ಎಂದು ಅನುಮಾನ ಹಾಗೂ ಆತಂಕವಾಗುತ್ತಿದೆ ಎಂದು ಹೇಳಿದ್ದಾರೆ.
ನಿರಂತರವಾಗಿ ಉದ್ದೇಶಪೂರ್ವಕವಾಗಿ ಹುಟ್ಟಿಹಾಕುತ್ತಿರುವ ಈ ತರದ ಘಟನೆಗಳು ಬಹುತ್ವ ಭಾರತ, ಸರ್ವಜನಾಂಗದ ಶಾಂತಿಯ ತೋಟವಾದ ನಾಡಿನ ಸೌಹಾರ್ದ ಪರಂಪರೆಗೆ ಕೋಡಲಿಪೆಟ್ಟು ನೀಡಲಿವೆಯಲ್ಲದೇ ಇವು ಸಂವಿಧಾನ ವಿರೋಧಿಯಾಗಿವೆ.
ಇದನ್ನು ಓದಿ: ನುಗ್ಗಿಕೇರಿ ಅಂಗಡಿ ಧ್ವಂಸ ಪ್ರಕರಣ : ನಾಲ್ವರು ಶ್ರೀರಾಮಸೇನಾ ಕಾರ್ಯಕರ್ತರ ಬಂಧನ
ಮೊದಲೇ ಕಳೆದೆರಡು ವರ್ಷಗಳಿಂದ ಕೊರೊನಾ ಮಹಾಮಾರಿಯಿಂದ ಆರ್ಥಿಕ ಸಂಕಷ್ಟಕ್ಕೀಡಾದ ಜನತೆ ತೀವ್ರ ಬೆಲೆ ಏರಿಕೆ, ನಿರುದ್ಯೋಗ ಮತ್ತು ಸರಕಾರದ ತಪ್ಪು ನೀತಿಗಳಿಂದಾಗಿ ತತ್ತರಿಸಿರುವ ಜನಸಾಮಾನ್ಯರ ಆಕ್ರೋಶವನ್ನು ಮರೆಮಾಚಲು ಈ ತರದ ಭಾವನಾತ್ಮಕ ವಿಚಾರಗಳನ್ನು ಮುನ್ನಲೆಗೆ ತರಲಾಗುತ್ತಿದೆ ಎಂದು ತಿಳಿಯದಷ್ಟು ಜನ ಮುರ್ಖರಲ್ಲ ಅನ್ನುವದನ್ನು ಸರಕಾರ ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಜನರಲ್ಲಿ ಇಂತಹ ಮನುಷ್ಯ ವಿರೋಧಿ ವಿಷಬೀಜ ಬಿತ್ತಿ ಜನತೆಯ ಕೂಡಿ ಬಾಳುವ ಸಂಸ್ಕೃತಿಗೆ ದಕ್ಕೆ ತರುವಂತ ಕಾನೂನನ್ನು ಕೈಗೆ ತೆಗೆದುಕೊಳ್ಳುವ ಕಿರಾತಕರನ್ನು ಮತ್ತು ಅವರು ಪ್ರತಿನಿಧಿಸುವ ಸಂಘಟನೆಗಳ ಮೇಲೆ ಕೂಡಲೇ ಅಗತ್ಯ ಕಾನೂನು ಕ್ರಮಕೈಗೊಳ್ಳಬೇಕು. ಇಂತಹ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಹಿಸಬೇಕು. ಈ ಘಟನೆಯಲ್ಲಿ ನಷ್ಟ ಅನುಭವಿಸಿದ ಮುಸ್ಲಿಂ ವ್ಯಾಪಾರಿಗಳಿಗೆ ಸರಕಾರವೇ ಪರಿಹಾರ ನೀಡಬೇಕು ಹಾಗೂ ಅಲ್ಲಿಯೇ ಮೊದಲಿನಂತೆ ವ್ಯಾಪಾರ ಮಾಡಲು ಸೂಕ್ತ ರಕ್ಷಣೆ ಹಾಗೂ ಅವಕಾಶ ಕಲ್ಪಿಸಬೇಕೆಂದು ಧಾರವಾಡದ ಜನಪರ ಸಂಘಟನೆಗಳು ಜಿಲ್ಲಾಧಿಕಾರಿಗೆ ಸಲ್ಲಿಸಿರುವ ಮನವಿಯಲ್ಲಿ ಆಗ್ರಹಿಸಿದ್ದಾರೆ.