ಮಡಿಕೇರಿ: ʻʻಯಾರೇ ಅಕ್ರಮವಾಗಿ ಆಸ್ತಿಯನ್ನು ಸಂಪಾದನೆ ಮಾಡಿದರೂ ಅದು ತಪ್ಪು, ಅದಕ್ಕಾಗಿಯೇ ಐಟಿ-ಇಡಿ ದಾಳಿ ನಡೆದಿದೆ. ಅದೊಂದು ಸ್ವತಂತ್ರ ಸಂಸ್ಥೆ. ಈಗ ಆಗಿರುವ ದಾಳಿಯು ರಾಜಕೀಯ ಪ್ರೇರಿತ ಅಲ್ಲ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಖಾನ್ ಅವರ ಮೇಲೆ ಐಟಿ ಇಡಿ ದಾಳಿ ನಡೆದಿರುವ ಬಗ್ಗೆ ಪ್ರಸ್ತಾಪಿಸಿದರು. ʻʻಕಾಂಗ್ರೆಸ್ ನವರನ್ನೇ ಗುರಿಯಾಗಿಸಿಕೊಂಡು ದಾಳಿ ನಡೆದರೆ ರಾಜಕೀಯ ಪ್ರೇರಿತ ಅನ್ನುತ್ತಾರೆ. ಅದೇ ಬಿಜೆಪಿಯವರ ಮೇಲೆ ಐಟಿ ದಾಳಿ ನಡೆದರೆ ಸ್ವತಂತ್ರ ಸಂಸ್ಥೆ ಅನ್ನುತ್ತಾರೆ. ಯಾರ ಬಳಿ ಅಕ್ರಮವಾಗಿ ಸಂಪಾದಿಸಿದ ಹಣ ಇರುತ್ತದೆಯೋ ಅವರ ಮೇಲೆ ದಾಳಿ ನಡೆಯುವುದು ಸಹಜವೇ ಆಗಿದೆ ಎಂದರು.
ಚಾಮರಾಜನಗರ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ರಾಜಕೀಯ ನಿವೃತ್ತಿ ಘೋಷಣೆ ವಿಚಾರದ ಬಗ್ಗೆ ಪ್ರಸ್ತಾಪಿಸಿದ ಸಚಿವರು ʻʻನಾನು ವಿರೋಧ ಪಕ್ಷದಲ್ಲಿದ್ದಾಗ ಅವರೊಂದಿಗೆ ಬಡವರ ಹಕ್ಕುಪತ್ರದ ಬಗ್ಗೆ ಪ್ರಸ್ತಾಪಿಸಿದ್ದೆ. ಆಗ ಕೂಡಲೇ ಸ್ಪಂದಿಸಿದ್ದರು. ಆಗಲೂ ನಾನು ನೀವು ಯಾವುದೇ ಪಕ್ಷದಲ್ಲಿದ್ದರೂ ನಿಮ್ಮ ನಿಲುವನ್ನು ಒಪ್ಪುತ್ತೇನೆ ಎಂದಿದೆ. ನಂತರದಲ್ಲಿ ಅವರು ನಮ್ಮ ಪಕ್ಷಕ್ಕೆ ಆಗಮಿಸಿದರು. ಅವರು ಅತ್ಯಂತ ತಳಸಮುದಾಯದಿಂದ ಬಂದವರು ಅವರ ಹಿರಿತನ, ಅನುಭವ ನಮಗೆ ಮತ್ತು ಪಕ್ಷಕ್ಕೆ ಬೇಕಾಗಿದೆ. ಅವರ ವಯಸ್ಸು ಮತ್ತು ಆರೋಗ್ಯದ ವಿಚಾರಗಳು ಏನೇ ಇರಲಿ, ರಾಜಕೀಯ ನಿವೃತ್ತಿ ಘೋಷಣೆಯ ನಿರ್ಧಾರದ ಬಗ್ಗೆ ಸ್ಪಷ್ಟವಾಗಿ ತಿಳಿದಿಲ್ಲʼʼ ಎಂದು ಹೇಳಿದರು.