ಕೊಲಂಬೊ: ಆರ್ಥಿಕ ಬಿಕ್ಕಟ್ಟು ಉಂಟಾಗಿರುವ ಶ್ರೀಲಂಕಾದಲ್ಲಿ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಪ್ರಧಾನಿ ಮಹಿಂದಾ ರಾಜಪಕ್ಸೆ ಇಂದು (ಮೇ 09) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದು ಬಿಕ್ಕಟ್ಟಿನಲ್ಲಿ ಹೊಸ ‘ಕ್ಯಾಬಿನೆಟ್’ ಗೆ ದಾರಿ ಮಾಡಿಕೊಡಲಿದೆ ಎನ್ನಲಾಗಿದೆ.
ಕಳೆದ ಶುಕ್ರವಾರ ನಡೆಸಿದ ವಿಶೇಷ ಸಭೆಯಲ್ಲಿ ದೇಶದಲ್ಲಿ ನಡೆಯುತ್ತಿರುವ ಆರ್ಥಿಕ ದುಸ್ಥಿಯ ವಿರುದ್ಧ ಜನತೆ ತಿರುಗಿ ಬಿದ್ದಿದ್ದು, ಪ್ರತಿಭಟನೆಯ ತೀವ್ರತೆಯಿಂದಾಗಿ ರಾಜೀನಾಮೆ ನೀಡಬೇಕಾಗಿ ಬಂದಿದೆ. ಹೀಗಾಗಿ ಸರ್ವಪಕ್ಷಗಳ ನಾಯಕರನ್ನು ಸಂಪುಟ ರಚನೆಗೆ ಆಹ್ವಾನಿಸುವ ನಿರೀಕ್ಷೆಯಿದೆ.
ಈ ಹಿಂದೆ ವಿರೋಧ ಪಕ್ಷದ ನಾಯಕ ಸಜಿತ್ ಪ್ರೇಮ್ದಾಸ್ ಮಧ್ಯಂತರ ಸರ್ಕಾರದಲ್ಲಿ ತಾವು ಪ್ರಧಾನಿ ಹುದ್ದೆಯನ್ನು ಸ್ವೀಕರಿಸುವುದಿಲ್ಲ ಎನ್ನುವುದನ್ನು ದೃಢಪಡಿಸಿದ್ದಾರೆ.
ಇದನ್ನೂ ಓದಿ : ಶ್ರೀಲಂಕಾ: ಸಾರ್ವಭೌಮತ್ವಕ್ಕೇ ಕುತ್ತು ತರಬಹುದಾದ ಆರ್ಥಿಕ ಬಿಕ್ಕಟ್ಟು
ತಮ್ಮ ರಾಜೀನಾಮೆಯಿಂದ ಆರ್ಥಿಕ ಬಿಕ್ಕಟ್ಟು ಶಮನವಾಗಲಿದೆ ಎಂದಾದರೆ, ಅದಕ್ಕೆ ತಾವು ಸಿದ್ಧ ಎಂದು ಮಹಿಂದಾ ರಾಜಪಕ್ಸೆ ರಾಜೀನಾಮೆ ಸಲ್ಲಿಸುವ ವೇಳೆಯಲ್ಲಿ ಹೇಳಿದ್ದಾರೆ. ಜನರ ತೀವ್ರ ಪ್ರತಿಭಟನೆಯ ನಡುವೆ ದೇಶದಲ್ಲಿ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟನ್ನು ನಿರ್ವಹಿಸುವುದು ಗಂಭೀರ ಸಮಸ್ಯೆಯಾಗಿದೆ ಎಂದು ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ಒಪ್ಪಿಕೊಂಡಿದ್ದಾರೆ ಎಂಬುದು ವರದಿಯಾಗಿದೆ.
ಪ್ರತಿಭಟನಾಕಾರರು ಇಂದು ಪ್ರಧಾನಿಯ ಅಧಿಕೃತ ನಿವಾಸ ‘ಟೆಂಪಲ್ ಟ್ರೀಸ್’ ಬಳಿ ಪ್ರಧಾನಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು. ‘ಗೊಟ್ ಗೊ ಗಾಮ’ (ಗೊಟ್ಬಯಾ ರಾಜೀನಾಮೆ ಕೊಡು), ಮೈನ್ ಗೊ ಗಾಮ(ಮಹಿಂದಾ ರಾಜಿನಾಮೆ ಕೊಡು) ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ಸಂದರ್ಭದಲ್ಲಿ ಜನತೆ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ಘರ್ಷಣೆ ನಡೆದು, ಹದಿನಾರು ಮಂದಿ ಗಾಯಗೊಂಡಿದ್ದಾರೆ. ಅವರನ್ನು ಕೊಲೊಂಬೊದ ನ್ಯಾಷನಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಜನತೆ ಶಾಂತಿಯಿಂದ ವರ್ತಿಸಲು ಹೇಳಲಾಗಿದ್ದು,”ರಾಜಕೀಯ ಮತ್ತು ಆರ್ಥಿಕ ಬಿಕ್ಕಟಿಗೆ ಪರಿಹಾರವನ್ನು ಕಂಡುಕೊಳ್ಳಲು ಆಡಳಿತವು ಬದ್ಧವಾಗಿದೆ” ಎಂದು ಟ್ವೀಟ್ ಮಾಡಲಾಗಿದೆ.
ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿನ ನಂತರ ಮಹಿಂದಾ ರಾಜಪಕ್ಸೆ ಎರಡು ಬಾರಿ ತುರ್ತು ಪರಿಸ್ಥಿತಿ ಘೋಷಿಸಿದ್ದರು. ಲಂಕಾದ ಪ್ರಸ್ತುತ ಇತಿಹಾಸದಲ್ಲಿ ತನ್ನ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಅನುಭವಿಸುತ್ತಿದೆ. ಇಂಧನ, ಅಡುಗೆ ಅನಿಲ, ಅಗತ್ಯ ವಸ್ತುಗಳ ಕೊರತೆ ಹಾಗೂ ಹಲವು ಗಂಟೆಗಳ ಕಾಲ ವಿದ್ಯುತ್ ಕಡಿತದಿಂದ ಸಾರ್ವಜನಿಕರು ವಾರಗಟ್ಟಲೆ ತೊಂದರೆ ಅನುಭವಿಸುತ್ತಿದ್ದಾರೆ.
ಆದರೂ ರಾಜಪಕ್ಸೆ ಅವರು ತಮ್ಮ ಸರ್ಕಾರದ ಕ್ರಮಗಳನ್ನು ಸಮರ್ಥಿಸಿಕೊಂಡಿದ್ದಾರೆ. ವಿದೇಶಿ ವಿನಿಮಯ ಬಿಕ್ಕಟ್ಟು ಮತ್ತು ಅದರಿಂದ ಆರ್ಥಿಕ ಕುಸಿತವು ಹೆಚ್ಚಾಗಿ ಕೋವಿಡ್ ಸಾಂಕ್ರಾಮಿಕ ರೋಗದಿಂದ ಮತ್ತಷ್ಟು ಉದ್ಭವಿಸಿದೆ ಎಂದಿದ್ದಾರೆ.