ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು: ವಿಮಾನ ಸಂಸ್ಥೆ ಮಾರಾಟ,ಸಂಬಳಕ್ಕಾಗಿ ಹಣ ಮುದ್ರಣದ ಪ್ರಸ್ತಾಪ

  • ಹದಗೆಟ್ಟ ತೀವ್ರ ಆರ್ಥಿಕ ಬಿಕ್ಕಟ್ಟು
  • ಒಂದು ದಿನಕ್ಕೆ ಆಗುವಷ್ಟು ಮಾತ್ರ ಪೆಟ್ರೋಲ್‌ ಲಭ್ಯತೆ
  • ಸರ್ಕಾರದಿಂದ ಕೆಲವು ಆರ್ಥಿಕ ಉಪಕ್ರಮಗಳ ಪ್ರಸ್ತಾವನೆ

ಕೊಲೊಂಬೊ: ಸದ್ಯ ದೇಶದಲ್ಲಿ ಒಂದು ದಿನಕ್ಕೆ ಆಗುವಷ್ಟು ಪೆಟ್ರೋಲ್‌ ಮಾತ್ರ ಉಳಿದಿದೆ ಎಂದು ಶ್ರೀಲಂಕಾದ ನೂತನ ಪ್ರಧಾನಿ ರಾನಿಲ್‌ ವಿಕ್ರಮಸಿಂಘೆ ಸೋಮವಾರ ನಾಗರಿಕರನ್ನು ಎಚ್ಚರಿಸಿದ್ದಾರೆ. ಆರ್ಥಿಕತೆ ಕುರಿತು ದೇಶವನ್ನು ಉದ್ದೇಶಿ ಮಾತನಾಡಿರುವ ಅವರು ನಷ್ಟವನ್ನು ಭರಿಸಲು ಶ್ರೀಲಂಕಾದ ನೂತನ ಸರ್ಕಾರವು ರಾಷ್ಟ್ರೀಯ ವಿಮಾನಯಾನ ಸಂಸ್ಥೆಯನ್ನು ಮಾರಾಟ ಮಾಡಲು ಚಿಂತನೆ ನಡೆಸಿದೆ. ಸರ್ಕಾರಿ ಸಂಬಳ ಪಾವತಿ ಮಾಡಲು ಹಣ ಮುದ್ರಣ ಮಾಡುವ ಒತ್ತಡಕ್ಕೆ ಸಿಲುಕಿರುವುದರ ನಡುವೆ ರಾಷ್ಟ್ರೀಯ ಆರ್ಥಿಕತೆಯನ್ನು ಸ್ಥಿರಗೊಳಿಸುವ ಪ್ರಯತ್ನದ ಭಾಗವಾಗಿ ಈ ಮಾರಾಟ ಯೋಜನೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ವಿಮಾನಯಾನ ಸಂಸ್ಥೆ ಮಾರ್ಚ್‌ 2021ರ ಆರ್ಥಿಕ ವರ್ಷದಲ್ಲಿ 45 ದಶಲಕ್ಷ ಡಾಲರ್‌ ನಷ್ಟ ಅನುಭವಿಸಿದೆ. ವಿಮಾನಯಾನ ಸಂಸ್ಥೆ ನಷ್ಟ ಕೂಡ ಆರ್ಥಿಕ ಹೊರೆಯಾಗಿದ್ದು, ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿದೆ ಎಂದು ಅವರು ವಿವರಿಸಿದ್ದಾರೆ. ವಿದೇಶಿ ಸಾಲದ ಸುಸ್ತಿದಾರ ಎಂದು ಅಧಿಕೃತವಾಗಿ ಘೋಷಣೆ ಮಾಡಲು ಶ್ರೀಲಂಕಾ ಸಿದ್ಧತೆ ನಡೆಸಿದೆ. ಇದೇ ವೇಳೆ ಅದು ಸರ್ಕಾರಿ ಸಂಸ್ಥೆಗಳ ಮಾರಾಟದ ಅನಿವಾರ್ಯ ಸ್ಥಿತಿಗೆ ತಲುಪಿದೆ. “ವಿಮಾನದ ಒಳಗೆ ಕಾಲನ್ನೇ ಇಡದಂತಹ ಬಡವರಲ್ಲಿಯೇ ಬಡವರು ಈ ನಷ್ಟದ ಹೊರೆ ಹೊರುವಂತೆ ಆಗಬಾರದು” ಎಂದು ವಿಕ್ರೆಮಸಿಂಘೆ ಹೇಳಿದ್ದಾರೆ.

“ದೇಶದಲ್ಲಿ 14 ಔಷಧಿಗಳ ಕೊರತೆಯಿದೆ, ಅಲ್ಪಾವಧಿಯಲ್ಲೇ ಹಣದುಬ್ಬರ ಹೆಚ್ಚಾಗುವ ಸಾಧ್ಯತೆ ಇದೆ. ಸಂಬಳ ಪಾವತಿಸಲು ಮತ್ತು ಅಗತ್ಯಗಳ ಪೂರೈಕೆಗಾಗಿ ಹಣದ ಮುದ್ರಣವನ್ನು ಮುಂದುವರೆಸಬೇಕಾದ ಅನಿವಾರ್ಯತೆ ಇದೆ” ಎಂದು ದೇಶದ ಸ್ಥಿತಿಯ ಮಾಹಿತಿ ನೀಡಿದ್ದಾರೆ. “ನವೆಂಬರ್ 2019ರಲ್ಲಿ 7.5 ಬಿಲಿಯನ್ ಡಾಲರ್ ವಿದೇಶಿ ವಿನಿಮಯ ಮೀಸಲಿಡಲಾಗಿತ್ತು. ಇಂದು 1 ಮಿಲಿಯನ್ ಡಾಲರ್ ಹೊಂದಿಸುವುದು ಕೂಡ ಕಷ್ಟಕರವಾಗಿದೆ. ಇಂಧನ ಆಮದು ಮಾಡಿಕೊಳ್ಳಲು ಅಗತ್ಯವಿರುವ 5 ಮಿಲಿಯನ್ ಡಾಲರ್‌ ಸಂಗ್ರಹಿಸುವುದು ಹಣಕಾಸು ಸಚಿವಾಯಲಕ್ಕೆ ಕಷ್ಟಕರವಾಗಿದೆ.  ಶೀಘ್ರದಲ್ಲೇ ನೋಟುಗಳ ಮುದ್ರಣ ಆರಂಭಿಸಲಾಗುವುದು. ಈ ಮೂಲಕ ಜನರು ಆಹಾರ ಸಾಮಾಗ್ರಿ ಖರೀದಿಗೆ ಬೇಕಾದ ವೇತನ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದರು.

Donate Janashakthi Media

Leave a Reply

Your email address will not be published. Required fields are marked *