ಬೆಂಗಳೂರು ಜ 22: ಶಿವಮೊಗ್ಗದ ಹುಣಸೋಡು ಬಳಿ ನಿನ್ನೆ ರಾತ್ರಿ ಸಂಭವಿಸಿದ ಸ್ಫೋಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಉನ್ನತಮಟ್ಟದ ತನಿಖೆಗೆ ಆದೇಶಿಸಿರುವುದಾಗಿ ಟ್ವೀಟ್ ಮಾಡಿದ್ದಾರೆ.
ಈ ಭಾರೀ ಅನಾಹುತದಲ್ಲಿ 16 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದು, ತೀವ್ರ ಆಘಾತಕಾರಿ ಹಾಗೂ ದುರದೃಷ್ಟಕರ. ಹಿರಿಯ ಅಧಿಕಾರಿಗಳೊಂದಿಗೆ ನಿನ್ನೆ ತಡರಾತ್ರಿಯಿಂದಲೇ ಸಂಪರ್ಕದಲ್ಲಿದ್ದು, ಅಗತ್ಯ ರಕ್ಷಣಾ ಕಾರ್ಯಾಚರಣೆಗೆ ತಂಡಗಳನ್ನು ಈಗಾಗಲೇ ರವಾನಿಸಲಾಗಿದೆ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಈ ಭೀಕರ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಕಂಬನಿ ಮಿಡಿದಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಶಿವಮೊಗ್ಗದಲ್ಲಿ ನಡೆದ ಘಟನೆಯ ಸಾವಿನ ಸುದ್ದಿ ನೋವು ತಂದಿದೆ. ಸಾವನ್ನಪ್ಪಿದವರ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇನೆ. ಘಟನೆಯಲ್ಲಿ ಗಾಯಗೊಂಡವರು ಶೀಘ್ರ ಚೇತರಿಸಲಿ, ಘಟನೆಯಿಂದ ಸಂತ್ರಸ್ತರಾಗಿರುವವರಿಗೆ ರಾಜ್ಯ ಸರ್ಕಾರ ಎಲ್ಲಾ ರೀತಿಯ ನೆರವು ನೀಡುವಂತೆ ಯಡಿಯೂರಪ್ಪಗೆ ತಿಳಿಸಿದ್ದಾಗಿ ಹೇಳಿದ್ದಾರೆ.
ಶಿವಮೊಗ್ಗದ ಕಲ್ಲು ಗಣಿಕಾರಿಕೆ ಕ್ವಾರಿಯಲ್ಲಿ ಸಂಭವಿಸಿರುವ ಸ್ಫೋಟ ಬಹುದೊಡ್ಡ ದುರಂತವಾಗಿದ್ದು, ಈ ಪ್ರಕರಣವನ್ನು ಆಳವಾದ ತನಿಖೆಗೆ ಒಳಪಡಿಸಬೇಕು. ಈ ಮೂಲಕ ಮುಂದಿನ ದಿನಗಳಲ್ಲಿ ಇಂಥ ಘಟನೆಗಳು ಪುನರಾವರ್ತನೆಯಾಗುವುದನ್ನು ತಪ್ಪಿಸಬೇಕು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ. ಮಡಿದ ಕಾರ್ಮಿಕರಿಗೆ ರಾಹುಲ್ ಸಂತಾಪವನ್ನು ಸೂಚಿಸಿದ್ದು, ಪರಿಹಾರಕ್ಕೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಶಿವಮೊಗ್ಗದಲ್ಲಿ ನಿಗೂಢ ಸ್ಪೋಟ : 15 ಮಂದಿ ಸಾವು
ಶಿವಮೊಗ್ಗದಲ್ಲಿ ಕ್ರಷರ್ ಬಳಿ ಡೈನಾಮೈಟ್ ಸ್ಫೋಟಗೊಂಡು ಹಲವು ಮಂದಿ ಸಾವಿಗೀಡಾದ ಪ್ರಕರಣದ ಬಗ್ಗೆ ಸಂತಾಪ ಸೂಚಿಸಿರುವ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಅಕ್ರಮ ಗಣಿಗಾರಿಕೆ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದು, ವಲಸೆ ಕಾರ್ಮಿಕರಿಗೆ ಭದ್ರತೆ ಇಲ್ಲದಂತಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಈ ವಿಡಿಯೋ ನೋಡಿ : ಶಿವಮೊಗ್ಗದಲ್ಲಿ ಬಾರೀ ಸ್ಪೋಟ 16 ಸಾವು
ಸಿಪಿಐಎಂ ಕರ್ನಾಟಕ ರಾಜ್ಯಸಮಿತಿಯು ಘಟನೆಯನ್ನು ಖಂಡಿಸಿದ್ದು, ಘಟನೆಯಲ್ಲಿ ಮಡಿದ ಕಾರ್ಮಿಕರಿಗೆ ಸಂತಾಪ ಸೂಚಿಸಿದೆ. ಸಮಗ್ರ ತನಿಖೆಯ ಮೂಲಕವಷ್ಟೆ ಘಟನೆಗೆ ನಿಜವಾದ ಕಾರಣ ತಿಳಿಯಲಿದೆ. ಮಡಿದವರ ಕುಟಂಬಕ್ಕೆ ಮತ್ತು ಗಾಯಾಳುಗಳಿಗೆ ಪರಿಹಾರ ನೀಡಬೇಕು. ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಬೇಕು ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಒತ್ತಾಯಿಸಿದ್ದಾರೆ.
