ಬಿಹಾರಕ್ಕಿಲ್ಲ ವಿಶೇಷ ಸ್ಥಾನಮಾನ: ಸ್ಪೋಟವಾಗುತ್ತಾ ನಿತೀಶ್ ಅಸಮಾಧಾನ..?

ನವದೆಹಲಿ: ಹೊಸದಿಲ್ಲಿ: ತಮ್ಮ ಪ್ರಮುಖ ಮಿತ್ರ ಪಕ್ಷಗಳಲ್ಲಿ ಒಂದಾದ ಜೆಡಿಯುದ ಬಹುಕಾಲದ ಬೇಡಿಕೆಯಾಗಿರುವ, ಬಿಹಾರಕ್ಕೆ ವಿಶೇಷ ರಾಜ್ಯ ಸ್ಥಾನಮಾನ ನೀಡುವ ಯಾವುದೇ ಆಲೋಚನೆ ಇಲ್ಲ ಎಂದು ಕೇಂದ್ರ ಸರ್ಕಾರ ಸೋಮವಾರ ಸ್ಪಷ್ಟಪಡಿಸಿದೆ. ಇದು ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವ ಜನತಾ ದಳ (ಸಂಯುಕ್ತ) ಪಕ್ಷದ ಮುಂದಿನ ನಡೆಯ ಬಗ್ಗೆ ಕುತೂಹಲ ಮೂಡಿಸಿದೆ.

ಆರ್ಥಿಕ ಬೆಳವಣಿಗೆ ಹಾಗೂ ಕೈಗಾರಿಕೀಕರಣವನ್ನು ಉತ್ತೇಜಿಸಲು ಬಿಹಾರ ಹಾಗೂ ಇತರೆ ಅತಿ ಹಿಂದುಳಿದ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ಕಲ್ಪಿಸುವ ಉದ್ದೇಶ ಸರ್ಕಾರದ ಮುಂದೆ ಇದೆಯೇ ಎಂದು ಬಿಹಾರದ ಜಂಜಾರ್ಪುರದ ಜೆಡಿಯು ಸಂಸದ ರಾಮಪ್ರೀತ್ ಮಂಡಲ್ ಅವರು ಹಣಕಾಸು ಸಚಿವಾಲಯಕ್ಕೆ ಪ್ರಶ್ನೆ ಕೇಳಿದ್ದರು.

ಇದಕ್ಕೆ ಲಿಖಿತ ಉತ್ತರ ನೀಡಿರುವ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, ಬಿಹಾರಕ್ಕೆ ವಿಶೇಷ ರಾಜ್ಯ ಸ್ಥಾನಮಾನ ಕಲ್ಪಿಸುವ ಯೋಚನೆ ಮಾಡಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣ: ಬಿ ನಾಗೇಂದ್ರಗೆ ಆಗಸ್ಟ್‌ 3ರ ವರೆಗೆ ನ್ಯಾಯಾಂಗ ಬಂಧನ

ಏನಿದು ವಿಶೇಷ ಸ್ಥಾನಮಾನ?

ವಿಶೇಷ ಸ್ಥಾನಮಾನವು ಹಿಂದುಳಿದ ರಾಜ್ಯಕ್ಕೆ ಅದರ ಬೆಳವಣಿಗೆಯನ್ನು ವೇಗಗೊಳಿಸಲು ಕೇಂದ್ರ ಹೆಚ್ಚಿನ ಬೆಂಬಲವನ್ನು ಖಾತ್ರಿಗೊಳಿಸುತ್ತದೆ. ಸಂವಿಧಾನವು ಯಾವುದೇ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ಒದಗಿಸದಿದ್ದರೂ, ಇದನ್ನು 1969 ರಲ್ಲಿ ಐದನೇ ಹಣಕಾಸು ಆಯೋಗದ ಶಿಫಾರಸುಗಳ ಮೇಲೆ ಪರಿಚಯಿಸಲಾಯಿತು. ಇದುವರೆಗೆ ವಿಶೇಷ ಸ್ಥಾನಮಾನವನ್ನು ಪಡೆದಿರುವ ರಾಜ್ಯಗಳ ಪೈಕಿ ಜಮ್ಮು ಮತ್ತು ಕಾಶ್ಮೀರ (ಈಗ ಕೇಂದ್ರಾಡಳಿತ ಪ್ರದೇಶ), ಈಶಾನ್ಯ ರಾಜ್ಯಗಳು, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಂತಹ ಗುಡ್ಡಗಾಡು ರಾಜ್ಯಗಳು ಸೇರಿವೆ.

ಕೇಂದ್ರ ಸರ್ಕಾರದ ವಿವರಣೆ ಏನು?

“ರಾಷ್ಟ್ರೀಯ ಅಭಿವೃದ್ಧಿ ಸಮಿತಿಯು (ಎನ್‌ಡಿಸಿ) ಈ ಹಿಂದೆ, ವಿಶೇಷ ಪರಿಗಣನೆಗೆ ಅಗತ್ಯವಾಗಿರುವ ಹಲವು ಗುಣಲಕ್ಷಣಗಳಿರುವ ರಾಜ್ಯಗಳಿಗೆ ಯೋಜನಾ ನೆರವಿಗಾಗಿ ವಿಶೇಷ ಸ್ಥಾನಮಾನ ಮಾನ್ಯತೆ ನೀಡಿತ್ತು. ಈ ಗುಣಲಕ್ಷಣಗಳು (1) ಬೆಟ್ಟಗುಡ್ಡ ಹಾಗೂ ಸಂಕೀರ್ಣ ಭೂಪ್ರದೇಶ, (2) ಕಡಿಮೆ ಜನಸಾಂದ್ರತೆ ಅಥವಾ ಸಾಕಷ್ಟು ದೊಡ್ಡ ಗಾತ್ರದ ಬುಡಕಟ್ಟು ಜನಸಂಖ್ಯೆಯ ಪ್ರಮಾಣ, (3) ನೆರೆಹೊರೆಯ ದೇಶಗಳ ಜತೆಗೆ ಗಡಿ ಹಂಚಿಕೊಂಡಿರುವ ವ್ಯೂಹಾತ್ಮಕ ಸ್ಥಳಗಳು, (4) ಆರ್ಥಿಕ ಮತ್ತು ಮೂಲಸೌಕರ್ಯ ಹಿಂದುಳಿದಿರುವಿಕೆ, (5) ರಾಜ್ಯ ಹಣಕಾಸಿನ ಸಂಕೀರ್ಣ ಸ್ವಭಾವವನ್ನು ಒಳಗೊಂಡಿದೆ” ಎಂದು ಪಂಕಜ್ ಚೌಧರಿ ಉತ್ತರಿಸಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *