ಬೆಂಗಳೂರು: ಮೇ 9 ಶುಕ್ರವಾರದಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಸೇನಾ ಸಂಘರ್ಷದ ಹಿನ್ನೆಲೆಯಲ್ಲಿ ಭಾರತೀಯ ಸಶಸ್ತ್ರ ಪಡೆಗಳಿಗೆ ಶಕ್ತಿ ತುಂಬಲು ರಾಜ್ಯಾದ್ಯಂತ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ವಕ್ಫ್ ಮಂಡಳಿಯ ವ್ಯಾಪ್ತಿಯಲ್ಲಿರುವ ಮಸೀದಿಗಳು ಮತ್ತಿತರ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
“ಈ ಕಠಿಣ ಸಮಯದಲ್ಲಿ, ನಾವು ನಮ್ಮ ದೇಶದೊಂದಿಗೆ ನಿಲ್ಲುತ್ತೇವೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ರನ್ನು ಬೆಂಬಲಿಸುತ್ತೇವೆ. ಸರ್ಕಾರದ ಜೊತೆ ನಿಲ್ಲುತ್ತೇವೆ. ನಮ್ಮ ಭಾರತೀಯ ಸಶಸ್ತ್ರ ಪಡೆಗಳು, ಅವರ ಕುಟುಂಬಗಳು ಮತ್ತು ಈ ದೇಶದ ಜನರ ಯೋಗಕ್ಷೇಮಕ್ಕಾಗಿ ಇಂದು ರಾಜ್ಯದ ಎಲ್ಲಾ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದು ಬೆಂಗಳೂರಿನ ಜಾಮಿಯಾ ಮಸೀದಿಯ ಮುಖ್ಯ ಇಮಾಮ್ ಮುಫ್ತಿ ಮೊಹಮ್ಮದ್ ಮಕ್ಸೂನ್ ಇಮ್ರಾನ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಪಾಕಿಸ್ತಾನದ ವಿರುದ್ಧದ ಸೇನಾ ಸಂಘರ್ಷದಲ್ಲಿ ಅಲ್ಲಾಹು ಭಾರತೀಯ ಸೇನಾ ಪಡೆಗಳಿಗೆ ಗೆಲುವು ತಂದುಕೊಡಲಿ ಎಂದು ಪ್ರಾರ್ಥಿಸಿರುವುದಾಗಿ ಅವರು ತಿಳಿಸಿದರು.
ಇದನ್ನೂ ಓದಿ: ಬಿಜೆಪಿಗರು ರಾಷ್ಟ್ರಧ್ವಜವನ್ನು ಕರವಸ್ತ್ರದಂತೆ ಬಳಸಿದ್ದಾರೆ: ಕಾಂಗ್ರೆಸ್ ಕಿಡಿ
ಪಹಲ್ಗಾಮ್ ಭಯೋತ್ಪಾದನಾ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ನಡೆಸಿದ ‘ಆಪರೇಷನ್ ಸಿಂದೂರ್’ನಲ್ಲಿ ಭಾಗವಹಿಸಿದ ಭಾರತೀಯ ಸೈನಿಕರ ಯೋಗಕ್ಷೇಮಕ್ಕಾಗಿ ರಾಜ್ಯದಾದ್ಯಂತ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆಗಳನ್ನು ಆಯೋಜಿಸುವಂತೆ ಕರ್ನಾಟಕ ವಕ್ಫ್ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಬಿ ಝಡ್ ಜಮೀರ್ ಅಹ್ಮದ್ ಖಾನ್ ಅವರು ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ನಿನ್ನೆ ಪತ್ರ ಬರೆದಿದ್ದರು.ಅದರಂತೆ ಇಂದು ಪ್ರಾರ್ಥನೆ ಸಲ್ಲಿಸಲಾಗಿದೆ.
ಜಮೀರ್ ಅಹ್ಮದ್ ಖಾನ್ ಕೂಡಾ ನಗರದ ಶೇಷಾದ್ರಿಪುರಂನ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಇದನ್ನೂ ನೋಡಿ: ಪಹಲ್ಗಾಮ ಹತ್ಯೆಯ ದುರಂತದ ಮಧ್ಯೆ ಕೇಂದ್ರದ ಜಾತಿ ಗಣತಿ ಘೋಷಣೆಯ ಹಿಂದಿನ ರಾಜಕೀಯ ಹಿತಾಸಕ್ತಿಯೇನು?