ಬೆಂಗಳೂರು: ಇರಾನ್ ಮತ್ತು ಅಮೆರಿಕ ನಡುವಿನ ಇತ್ತೀಚಿನ ಒಪ್ಪಂದ (MoU)ದ ಪ್ರಮುಖ ಅಂಶಗಳು, ಅದರ ರಾಜತಾಂತ್ರಿಕ ಮತ್ತು ರಾಜಕೀಯ ಪರಿಣಾಮಗಳು, ಮಧ್ಯಪ್ರಾಚ್ಯದ ಭದ್ರತಾ ಪರಿಸ್ಥಿತಿ ಹಾಗೂ ಜಾಗತಿಕ ರಾಜಕೀಯದ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಮಾಧ್ಯಮ ಅಧ್ಯಯನ ಕೇಂದ್ರ, ಬೆಂಗಳೂರು ವತಿಯಿಂದ ಜೂನ್ 27ರಂದು ವಿಶೇಷ ಆನ್‌ಲೈನ್ ಸಂವಾದವನ್ನು ಆಯೋಜಿಸಲಾಗಿದೆ.
ಈ ಕುರಿತು ಮಾಧ್ಯಮ ಅಧ್ಯಯನ ಕೇಂದ್ರದ ಗುರುರಾಜ ದೇಸಾಯಿ ಪ್ರಕಟಣೆ ಹೊರಡಿಸಿದ್ದು, ಇತ್ತೀಚಿನ ದಿನಗಳಲ್ಲಿ ಇರಾನ್–ಅಮೆರಿಕ ಸಂಬಂಧಗಳು ವಿಶ್ವ ರಾಜಕೀಯದಲ್ಲಿ ಮಹತ್ವದ ಚರ್ಚೆಯ ವಿಷಯವಾಗಿವೆ. ಈ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವಿನ ಒಪ್ಪಂದದಲ್ಲಿ ಯಾವ ಪ್ರಮುಖ ಅಂಶಗಳಿವೆ, ಅದು ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಗೆ ಸಹಕಾರಿಯಾಗುತ್ತದೆಯೇ ಅಥವಾ ಹೊಸ ರಾಜಕೀಯ ಮತ್ತು ರಾಜತಾಂತ್ರಿಕ ಸಮೀಕರಣಗಳಿಗೆ ನಾಂದಿ ಹಾಡುತ್ತದೆಯೇ ಎಂಬುದರ ಕುರಿತು ಸಮಗ್ರ ಚರ್ಚೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಗ್ರಾಮಗಳಿಗೆ ಉಚಿತ ಫೈಬರ್ ಸಂಪರ್ಕ: ಭಾರತ್‌ನೆಟ್ ಯೋಜನೆಯಡಿ ಬಿಎಸ್‌ಎನ್‌ಎಲ್‌ನಿಂದ ವಿಶೇಷ ಅವಕಾಶ
ಸಂವಾದದಲ್ಲಿ ಅಂತಾರಾಷ್ಟ್ರೀಯ ವಿದ್ಯಮಾನಗಳ ವಿಶ್ಲೇಷಕರಾದ ಎನ್. ಕೆ. ವಸಂತರಾಜ್ ಅವರು ಮುಖ್ಯ ಭಾಷಣ ಮಾಡಲಿದ್ದು, ಇರಾನ್–ಅಮೆರಿಕ ಸಂಬಂಧಗಳ ಐತಿಹಾಸಿಕ ಹಿನ್ನೆಲೆ, ಇಸ್ರೇಲ್–ಇರಾನ್ ಸಂಘರ್ಷ, ಪಶ್ಚಿಮ ಏಷ್ಯಾದ ಬದಲಾಗುತ್ತಿರುವ ರಾಜಕೀಯ ಪರಿಸ್ಥಿತಿ, ಜಾಗತಿಕ ಶಕ್ತಿಗಳ ಪಾತ್ರ ಹಾಗೂ ಈ ಬೆಳವಣಿಗೆಗಳ ಪರಿಣಾಮವಾಗಿ ಭಾರತ ಸೇರಿದಂತೆ ಇತರ ರಾಷ್ಟ್ರಗಳ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತು ವಿಶ್ಲೇಷಣೆ ನೀಡಲಿದ್ದಾರೆ.
ಈ ವಿಶೇಷ ಸಂವಾದವು ಜೂನ್ 27 (ಶನಿವಾರ) ಸಂಜೆ 6 ಗಂಟೆಗೆ ಜೂಮ್ ವೇದಿಕೆಯಲ್ಲಿ ನಡೆಯಲಿದೆ. ಭಾಗವಹಿಸಲು Meeting ID: 837 5693 2790 ಹಾಗೂ Passcode: 030120 ಬಳಸಬಹುದಾಗಿದೆ.
ಅಂತಾರಾಷ್ಟ್ರೀಯ ರಾಜಕೀಯ, ಪಶ್ಚಿಮ ಏಷ್ಯಾದ ಬೆಳವಣಿಗೆಗಳು, ವಿದೇಶಾಂಗ ನೀತಿ ಮತ್ತು ಜಾಗತಿಕ ಶಾಂತಿ ಕುರಿತ ಸಮಕಾಲೀನ ಬೆಳವಣಿಗೆಗಳಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು, ಸಂಶೋಧಕರು, ಪತ್ರಕರ್ತರು, ಅಧ್ಯಾಪಕರು ಹಾಗೂ ಸಾರ್ವಜನಿಕರು ಈ ಸಂವಾದದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಯೋಜನ ಪಡೆಯುವಂತೆ ಮಾಧ್ಯಮ ಅಧ್ಯಯನ ಕೇಂದ್ರದ ಗುರುರಾಜ ದೇಸಾಯಿ ಮನವಿ ಮಾಡಿದ್ದಾರೆ.
ಇದನ್ನೂ ನೋಡಿ: ವಿದ್ಯುತ್ ಖಾಸಗೀಕರಣ ಆದರೆ ದುಬಾರಿ ಹೊರೆ ಗ್ಯಾರಂಟಿ! | ಟಾಟಾ ಪವರ್‌ಗೆ ಲೈಸೆನ್ಸ್ ಬೇಡ, ಆಕ್ಷೇಪಣೆ ಸಲ್ಲಿಸಿ
