ಪೆನ್‌ಡ್ರೈವ್‌ ಪ್ರಕರಣ: ಎಸ್‌ಐಟಿ ಹೊರಡಿಸಿದ ವಿಶೇಷ ಪ್ರಕಟಣೆ

ಬೆಂಗಳೂರು: ಹಾಸನದ ಲೈಂಗಿಕ ಹಿಂಸೆ ಮತ್ತು ಶೋಷಣೆಯ ಪ್ರಕರಣದ ಹಿನ್ನೆಲೆಯಲ್ಲಿ ಎಸ್‌ಐಟಿ  ಪ್ರಕಟಣೆಯನ್ನು ಹೊರಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ವಿಡಿಯೋಗಳನ್ನು ಯಾರೇ ಆಗಲಿ ಸಾಮಾಜಿಕ ಜಾಲತಾಣಗಳಲ್ಲಿ (ವಾಟ್ಸಾಪಿನಂತಹ ಮೆಸೆಂಜರ್ ಆಪ್ ಮೂಲಕವೂ ಸೇರಿ) ಹಂಚುವುದು ಮಾಹಿತಿ ತಂತ್ರಜ್ಞಾನ ಕಾಯಿದೆ ಕಲಂ 67(ಎ) ಐಟಿ ಆಕ್ಟ್ ಹಾಗೂ ಕಲಂ 228ಎ(1), 292 ಐಪಿಸಿ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ.‌

ಖಾಸಗಿ ಮೆಸೇಜಿಂಗ್ ಆಪ್‌ಗಳ ಮುಖಾಂತರ ಹಂಚುವುದನ್ನೂ ಪತ್ತೆ ಹಚ್ಚುವುದು ಸಾಧ್ಯವಿದ್ದು, ಅಂಥದ್ದರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಇದು ಸಂಬಂಧಿಸಿದ ಬಲಿಪಶು ಮಹಿಳೆಯರ ಘನತೆ ಹಾಗೂ ಗೌಪ್ಯತೆಗೆ ಕುಂದುಂಟು ಮಾಡುವುದಾಗಿದ್ದು, ಅದನ್ನು ಗಂಭೀರವಾಗಿ ಪರಿಗಣಿಸುವುದಾಗಿ ಎಚ್ಚರಿಕೆ ನೀಡಿದೆ.

ಅಲ್ಲದೇ ಈ ಪ್ರಕರಣದ ಸಂತ್ರಸ್ತೆಯರಿಗಾಗಿ ಎಸ್‌ಐಟಿ ಈಗಾಗಲೇ 6360938947 ಸಂಖ್ಯೆಯ ಸಹಾಯವಾಣಿಯನ್ನು ಹೊರಡಿಸಿದ್ದು, ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ‌ ಈ ನಂಬರಿಗೆ ಕರೆ ಮಾಡಬಹುದು. ಈ ಸಂಖ್ಯೆಗೆ ಕರೆ ಮಾಡಿ ದೂರು ಮಾಹಿತಿ ನೀಡುವ ಯಾವುದೇ ವ್ಯಕ್ತಿಯ ಗುರುತನ್ನು ಗೌಪ್ಯವಾಗಿಡಲಾಗುವುದು.  ಎಸ್‌ಐಟಿ ಕಚೇರಿಗೆ ಬರುವ ಅಗತ್ಯವೂ ಇಲ್ಲ, ಸಂತ್ರಸ್ತರಿಗೆ ಅಗತ್ಯವಿರುವ ನೆರವನ್ನು ಒದಗಿಸಲಾಗುವುದು ಎಂದು ಎಸ್‌ಐಟಿ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಪೆನ್ ಡ್ರೈವ್ ಹಗರಣ ಎಚ್‌ಡಿ ರೇವಣ್ಣ ಎಸ್‌ಐಟಿ ವಶಕ್ಕೆ

ಯಾವುದೇ ಸಂತ್ರಸ್ತರ ಗುರುತನ್ನು ಬಹಿರಂಗಪಡಿಸುವ ಕೆಲಸವನ್ನು ಮಾಧ್ಯಮ ಸಂಸ್ಥೆಗಳು, ವ್ಯಕ್ತಿಗಳು ಅಥವಾ ಸಂಘ ಸಂಸ್ಥೆಗಳು ಅಥವಾ ಇನ್ಯಾರೇ ಆದರೂ ಮಾಡಬಾರದೆಂದು ಸೂಚಿಸಿರುವ ಎಸ್‌ಐಟಿ, ಈ ವಿಚಾರದಲ್ಲಿ ಅಗತ್ಯ ಕಂಡುಬಂದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದಿದೆ.

ಯಾವುದೇ ಲೈಂಗಿಕ ಹಿಂಸೆ ಅಥವಾ ಅತ್ಯಾಚಾರ ಪ್ರಕರಣಗಳಲ್ಲಿ ನಾಚಿಕೆ ಪಟ್ಟುಕೊಳ್ಳಬೇಕಾದ್ದು. ಹಿಂಜರಿಯಬೇಕಾದ್ದು, ಅವಮಾನ ಎಂದು ಭಾವಿಸಬೇಕಾದ್ದು ಅಂತಹ ಪ್ರಕರಣಗಳಲ್ಲಿ ಅಪರಾಧವೆಸಗಿದ ವ್ಯಕ್ತಿಯೇ ಹೊರತು, ಶೋಷಣೆಗೆ ಒಳಗಾದ ವ್ಯಕ್ತಿ ಅಲ್ಲ ಎಂಬುದನ್ನು ಅರಿಯಬೇಕು ಮತ್ತು ಸೂಕ್ತ ಸಂವೇದನೆಯಿಂದ ಪ್ರವರ್ತಿಸುವುದು ಸಮಾಜದ ಆರೋಗ್ಯದ ದೃಷ್ಟಿಯಿಂದ ಬಹಳ ಮುಖ್ಯ.

ಈ ವಿಚಾರದಲ್ಲಿ ಎಸ್ ಐ ಟಿಯು ಅತ್ಯಂತ ಹೆಚ್ಚಿನ ಸಂವೇದನೆಯಿಂದ ನಡೆದುಕೊಳ್ಳಲಿದೆ. ಈಗಾಗಲೇ ಇದಕ್ಕೆ ಅಗತ್ಯವಿರುವ ವೃತ್ತಿಪರ ಕೌನ್ಸೆಲರುಗಳು, ವೈದ್ಯರುಗಳು. ಇಂತಹ ಕಾರ್ಯದಲ್ಲಿ ಅನುಭವವಿರುವ ಸಂಸ್ಥೆಗಳ ನೆರವನ್ನು ಎಸ್ ಐ ಟಿ ಪಡೆದುಕೊಂಡಿದೆ. ಸಾರ್ವಜನಿಕರೂ ಈ ವಿಚಾರದಲ್ಲಿ ಸ್ಪಂದಿಸುವುದು ಅಗತ್ಯ.

ಇದನ್ನೂ ನೋಡಿ: ಪೆನ್‌ಡ್ರೈವ್‌ ಪ್ರಕರಣ :ವಿಡಿಯೋ ಬಹಿರಂಗಗೊಳಿಸಿದವರನ್ನು ಕೂಡಲೇ ಬಂಧಿಸಿ, ಸಂತ್ರಸ್ತರನ್ನು ರಕ್ಷಿಸಿ – ಸಿಐಟಿಯು ಆಗ್ರಹ

Donate Janashakthi Media

Leave a Reply

Your email address will not be published. Required fields are marked *