ನವದೆಹಲಿ: ಸುನಂದಾ ಪುಷ್ಕರ್ 2014ರ ಜನವರಿ 17ರಂದು ದೆಹಲಿಯ ಪಂಚತಾರಾ ಹೋಟೆಲ್ ವೊಂದರಲ್ಲಿ ಶವವಾಗಿ ಪತ್ತೆಯಾದರು. ಅದು ಆತ್ಮಹತ್ಯೆ ಎಂದು ಹೇಳಲಾಗಿದ್ದರೂ ಸಹ ಪತಿ ಶಶಿ ತರೂರ್ ಅವರ ಮೇಲೆ ಕೇಸು ದಾಖಲಾಗಿತ್ತು. ಆ ಪ್ರಕರಣದ ವಿಚಾರಣೆ ನಡೆಸಿದ ದೆಹಲಿ ನ್ಯಾಯಾಲಯದಿಂದ ಶಶಿ ತರೂರ್ ಆರೋಪ ಮುಕ್ತ ಎಂದು ತೀರ್ಪು ಬಂದಿದೆ.
ದೆಹಲಿ ನ್ಯಾಯಾಲಯದ ವಿಶೇಷ ನ್ಯಾಯಾಧೀಶೆ ಗೀತಾಂಜಲಿ ಗೋಯಲ್ ಅವರು ಇಂದು ವರ್ಚುವಲ್ ವಿಚಾರಣೆಯ ಮೂಲಕ ಅಂತಿಮ ತೀರ್ಪು ನೀಡಿದ್ದಾರೆ. ಕಳೆದ ಏಳೂವರೆ ವರ್ಷಗಳ ಪ್ರಕರಣಕ್ಕೆ ಸದ್ಯ ತಾರ್ಕಿಕ ಅಂತ್ಯ ಸಿಕ್ಕಿದೆ.
ನ್ಯಾಯಾಲಯದ ತೀರ್ಪಿನ ಬಗ್ಗೆ ಶಶಿ ತರೂರ್ ಸಮಾಧಾನಗೊಂಡಿದ್ದಾರೆ. ಈ ಏಳೂವರೆ ವರ್ಷದ ಹಿಂಸೆ ಅಂತ್ಯಗೊಂಡಿದೆ. ನಾನು ಕೋರ್ಟ್ ತೀರ್ಪನ್ನು ನಿಜಕ್ಕೂ ಶ್ಲಾಘಿಸುತ್ತೇನೆ ಎಂದಿದ್ದಾರೆ.
ಇದನ್ನು ಓದಿ: ʻಸಂಸತ್ತು ಬೇಸರ ಮೂಡಿಸುವ ಪರಿಸ್ಥಿತಿಯಲ್ಲಿದೆʼ : ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ
ಸುನಂದಾ ಪುಷ್ಕರ್ ಸಂಶಯಾಸ್ಪದ ಸಾವಿನ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಶಶಿ ತರೂರ್ ಇದೀಗ ಆರೋಪ ಮುಕ್ತರಾಗಿದ್ದಾರೆ. ಪತ್ನಿ ಸುನಂದಾ ಪುಷ್ಕರ್ ಆತ್ಮಹತ್ಯೆಗೆ ಅವರು ಕುಮ್ಮಕ್ಕು ನೀಡಿದ್ದರು ಎಂದು ದೆಹಲಿ ಪೊಲೀಸರು ಅವರ ವಿರುದ್ಧ, ಸೆಕ್ಷನ್ 498 ಎ (ಮಹಿಳೆಯು ತನ್ನ ಪತಿ ಅಥವಾ ಪತಿಯ ಸಂಬಂಧಿಗಳಿಂದ ಕ್ರೌರ್ಯಕ್ಕೆ ಒಳಗಾಗುವುದು), ಸೆಕ್ಷನ್ 306 ( ಆತ್ಮಹತ್ಯೆಗೆ ಕುಮ್ಮಕ್ಕು) ಸೇರಿ ವಿವಿಧ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು.
ಸುನಂದಾ ಪುಷ್ಕರ್ ಸಾವು ಕೊಲೆ ಎಂದೇ ದೆಹಲಿ ಪೋಲೀಸರು ತನಿಖೆ ಕೈಗೊಂಡಿದ್ದರು. ಶವದ ಪೋಸ್ಟ್ ಮಾರ್ಟಮ್ ವರದಿ ಪ್ರಕಾರ ವಿಷ ಸೇವನೆಯಿಂದ ಸಾವು ಸಂಭವಿಸಿದೆ ಎಂಬ ಕಾರಣ ನೀಡಲಾಗಿತ್ತು. ಅಲ್ಲದೆ, ಅವರ ಮೈಮೇಲೆ ಗಾಯಗಳಿರುವುದು ಪೂರ್ವ ಮರಣೋತ್ತರ ಪರೀಕ್ಷೆಯಿಂದಲೂ ತಿಳಿದುಬಂದಿದ್ದವು. ಅವುಗಳಲ್ಲಿನ 12 ಗಾಯಗಳು ನಾಲ್ಕು ದಿನಗಳ ಹಳೆಯದು ಎಂದು ಕೋರ್ಟ್ಗೆ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್ ಕುಮಾರ್ ಶ್ರೀವಾಸ್ತವ್ ವರದಿ ಸಲ್ಲಿಸಿದ್ದರು.
ನ್ಯಾಯಾಲಯದಲ್ಲಿ ಶಶಿ ತರೂರ್ ಪರ ಹಿರಿಯ ವಕೀಲ ವಿಕಾಸ್ ಪಾಹ್ವಾ ಅವರು ಸುನಂದಾ ಪುಷ್ಕರ್ ಹತ್ಯೆಯಾಗಿದ್ದಾರೋ… ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಎಂಬುದಕ್ಕೆ ಸರಿಯಾದ ದಾಖಲೆಗಳಿಲ್ಲ. ಯಾವುದೇ ಸ್ಪಷ್ಟತೆಯೇ ಸಿಗುತ್ತಿಲ್ಲ ಎಂದೇ ವಾದಿಸಿದ್ದರು.