ಬೆಳಗಾವಿ: ಮಹಾರಾಷ್ಟ್ರದ ಗಡಿಯಲ್ಲಿರುವ ಬೆಳಗಾವಿಯ ಹೊರವಲಯದಲ್ಲಿ ಇಂದು ಮಧ್ಯಾಹ್ನ ಮರಾಠಿ ಭಾಷೆಯಲ್ಲಿ ಮಾತನಾಡಲಿಲ್ಲವೆಂದು KSRTC ಬಸ್ಸಿನ ಕಂಡಕ್ಟರ್ ಮೇಲೆ ಮರಾಠಿ ಪುಂಡರು ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸುಲೇಭಾವಿ ಗ್ರಾಮದಲ್ಲಿ ಯುವಕನ ಜೊತೆ ಬಸ್ ಹತ್ತಿದ ಯುವತಿಯೋರ್ವಳು ಮರಾಠಿಯಲ್ಲಿ ಮಾತನಾಡಿದ್ದಳು. ಆಗ ನಾನು ನನಗೆ ಮರಾಠಿ ಬರಲ್ಲ, ಕನ್ನಡದಲ್ಲಿ ಮಾತನಾಡು ಎಂದು ಹೇಳಿದ್ದಕ್ಕೆ ಜನರನ್ನು ಕರೆಸಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು 51 ವರ್ಷದ ಕಂಡಕ್ಟರ್ ಮಹಾದೇವಪ್ಪ ಮಲ್ಲಪ್ಪ ಹುಕ್ಕೇರಿ ತಿಳಿಸಿದ್ದಾರೆ.
ಇದನ್ನೂ ಓದಿ:ಹೈದರಾಬಾದ್ನ ವೈದ್ಯ ವಿದ್ಯಾರ್ಥಿನಿ ದುರಂತ ಅಂತ್ಯ: ಮೂವತ್ತು ಗಂಟೆಗಳ ಬಳಿಕ ಶವ ಪತ್ತೆ
ಟಿಕೆಟ್ ಪಡೆಯಲು ಯುವತಿ ಮರಾಠಿಯಲ್ಲಿ ಮಾತನಾಡಿದ್ದಳು. ಆಗ ನನಗೆ ಮರಾಠಿ ಬರಲ್ಲ ಎಂದು ನಾನು ಹೇಳಿದ್ದಕ್ಕೆ ಯುವತಿ ಮರಾಠಿ ಕಲಿಯಬೇಕು ಎಂದು ಹೇಳಿ ನನಗೆ ನಿಂದಿಸಿದರು. ಇದ್ದಕ್ಕಿದ್ದಂತೆ ಹೆಚ್ಚಿನ ಸಂಖ್ಯೆಯ ಜನರು ಜಮಾಯಿಸಿ ನನ್ನ ಮೇಲೆ ಹಲ್ಲೆ ನಡೆಸಿದರು ಎಂದು ಕಂಡಕ್ಟರ್ ಹೇಳಿದರು.
ಗಾಯಗೊಂಡ ಬಸ್ ಕಂಡಕ್ಟರ್ ಅನ್ನು ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಿಸಲಾಗಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ನಂತರ, ಕನ್ನಡ ಪರ ಕಾರ್ಯಕರ್ತರು ಪ್ರತಿಭಟನೆ ನಡೆಸಿ ದಾಳಿಯಲ್ಲಿ ಭಾಗಿಯಾದವರನ್ನು ಬಂಧಿಸಬೇಕೆಂದು ಒತ್ತಾಯಿಸಿದರು.
ಬೆಳಗಾವಿಯಲ್ಲಿ ಮರಾಠಿ ಮಾತನಾಡುವ ಜನಸಂಖ್ಯೆ ಗಣನೀಯವಾಗಿದ್ದು, ಅವರಲ್ಲಿ ಒಂದು ವರ್ಗವು ಜಿಲ್ಲೆಯನ್ನು ಮಹಾರಾಷ್ಟ್ರದೊಂದಿಗೆ ವಿಲೀನಗೊಳಿಸಬೇಕೆಂದು ಒತ್ತಾಯಿಸುತ್ತಿದೆ. ಇದನ್ನು ರಾಜ್ಯ ಮತ್ತು ಅಲ್ಲಿ ವಾಸಿಸುವ ಕನ್ನಡ ಜನರು ತೀವ್ರವಾಗಿ ವಿರೋಧಿಸುತ್ತಾರೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಮಿತಿಮೀರಿದ ಪುಂಡರ ಹಾವಳಿ – ಮಧ್ಯರಾತ್ರಿ ಮಾರಕಾಸ್ತ್ರ ಹಿಡಿದು ಬೈಕ್ ವ್ಹೀಲಿಂಗ್