“ಕನ್ನಡ ನಿನ್ನ ಮನೇಲಿ ಮಾತನಾಡ್ಕೋ, ಇಲ್ಲಿ ಬೇಕಾಗಿಲ್ಲ” – ಕಾಲೇಜ್ ವಾರ್ಡನ್‌ ವಿದ್ಯಾರ್ಥಿಗೆ ಧಮ್ಕಿ!

ಬೆಂಗಳೂರು: ಕನ್ನಡ ಹಾಗೂ ಕನ್ನಡಿಗರಿಗೆ ದಿನೇ ದಿನೇ ಗೌರವ ತಗ್ಗುತ್ತಿದೆ. ಇಲ್ಲಿವರೆಗೆ ಕನ್ನಡ ಗೊತ್ತಿಲ್ಲ ಎನ್ನುತ್ತಿದ್ದವರು, ಇದೀಗ ಕನ್ನಡಿಗರಿಗೇ ಕನ್ನಡ ಮಾತನಾಡಬೇಡ, ನೀವು ಕನ್ನಡ ಮಾತನಾಡಬೇಕೋ, ಹಿಂದಿ ಮಾತನಾಡಬೇಕೋ ಎಂದು ನಾನು ನಿರ್ಧಾರ ಮಾಡ್ತೀವಿ ಎಂದು ಎಚ್ಚರಿಕೆ ಕೊಟ್ಟಿರುವ ಘಟನೆ ನಗರದ ಕಾಲೇಜಿನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿದ್ದೂ, ‘ಕನ್ನಡ ನಿನ್ನ ಮನೇಲಿ ಮಾತನಾಡ್ಕೋ, ಇಲ್ಲಿ ಬೇಕಾಗಿಲ್ಲ’ ಎಂದು ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನ ವಾರ್ಡನ್‌ ಕನ್ನಡ ವಿದ್ಯಾರ್ಥಿಗೆ ಧಮ್ಕಿ ಹಾಕಿದ್ದಾನೆ. ವೈರಲ್‌ ಆಗಿರುವ ವಿಡಿಯೋ ಬೆಂಗಳೂರಿನ ಎಎಂಸಿ ಕಾಲೇಜಿನ ಹಾಸ್ಟೆಲ್‌ನದ್ದು ಎಂದು ಉಲ್ಲೇಖಿಸಲಾಗಿದೆ. ಅಲ್ಲಿರುವ ಕನ್ನಡದ ವಿದ್ಯಾರ್ಥಿಗಳು ಕನ್ನಡದಲ್ಲೇ ಮಾತನಾಡಲು ಮುಂದಾದಾಗ ವಾರ್ಡನ್‌ ಹಿಂದಿಯಲ್ಲೇ ಹರಿಹಾಯ್ದಿದ್ದಾನೆ.

ಇದನ್ನೂ ಓದಿ: ನವದೆಹಲಿ | ನರೇಗಾ ಮರು ಸ್ಥಾಪಿಸಲು ಜನವರಿ 10ರಿಂದ ‘ಮನರೇಗಾ ಬಚಾವೋ ಸಂಗ್ರಾಮ – ಮಲ್ಲಿಕಾರ್ಜುನ ಖರ್ಗೆ

‘ಕನ್ನಡ-ಹಿಂದಿ ನಾನು ನಿರ್ಧಾರ ಮಾಡ್ತೀನಿ’

‘ನಿಮ್ಮ ಮನೆಯಲ್ಲಿ ಕನ್ನಡ ಮಾತನಾಡಿಕೋ, ಇದು ಕಾಲೇಜು, ಇಲ್ಲೆಲ್ಲ ಬೇಡ ಎಂದಿದ್ದಾರೆ. ಇದರಿಂದ ಕೋಪಗೊಂಡ ವಿದ್ಯಾರ್ಥಿಗಳು ಕನ್ನಡ ಮಾತನಾಡಲೇಬಾರದಾ? ಎಂದು ಕೇಳಿದ್ದಾರೆ. ಇಲ್ಲಿ ಕನ್ನಡ ಕಡ್ಡಾಯವಲ್ಲ, ಅಷ್ಟೇ. ನೀನು ಕನ್ನಡದಲ್ಲಿ ಮಾತನಾಡಬೇಕೋ, ಹಿಂದಿಯಲ್ಲಿ ಮಾತನಾಡಬೇಕೋ ಡಿಸೈಡ್‌ ಮಾಡುವುದು ನಾನು. ಕನ್ನಡ ಮಾತನಾಡುವುದಾದರೆ ನಿನ್ನ ಮನೆಯಲ್ಲೇ ಇರು, ಇಲ್ಲೆಲ್ಲ ನಡೆಯಲ್ಲ. ಇದು ನಿನ್ನ ಮನೆಯಲ್ಲ, ಇದು ಕಾಲೇಜು’ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಇದೇ ವಿಚಾರವಾಗಿ ವಿದ್ಯಾರ್ಥಿ ಹಾಗೂ ವಾರ್ಡನ್‌ ನಡುವೆ ವಾಗ್ವಾದ ನಡೆದಿದೆ. ವಾರ್ಡನ್‌ ನಡೆಗೆ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಹಲವರು ಈ ವಿಡಿಯೋ ಹಂಚಿಕೊಂಡಿದ್ದು, ಬೆಂಗಳೂರಿನಲ್ಲಿ ಕನ್ನಡ ಮಾತನಾಡಬೇಕಾ, ಬೇಡವಾ? ಎಂಬುದನ್ನು ಬೇರೆಯವರು ನಿರ್ಧರಿಸುವ ದುಸ್ಥಿತಿಗೆ ನಾವೆಲ್ಲ ತಲುಪಿದ್ದೀವಾ? ಎಂದು ಕಳವಳಗೊಂಡಿದ್ದಾರೆ.

ಕನ್ನಡಪರ ಹೋರಾಟಗಾರ ರೂಪೇಶ್‌ ರಾಜಣ್ಣ ಈ ವಿಡಿಯೋ ಹಂಚಿಕೊಂಡು ಆಕ್ರೋಶ ಹೊರಹಾಕಿದ್ದಾರೆ. ‘ಇದು ದುರಹಂಕಾರದ ಪರಮಾವಧಿ, ಕನ್ನಡದ ಮೇಲೆ ಅನ್ಯಭಾಷಿಕರ ದಬ್ಬಾಳಿಕೆ, ಕಾಲೇಜಿನಲ್ಲಿ ಕನ್ನಡ ಮಾತನಾಡಬಾರದಂತೆ. ಇವನಿಗೆ ಈ ಆದೇಶ ಮಾಡೋಕೆ ಈ ಅಧಿಕಾರ ಕೊಟ್ಟೋರು ಯಾರು? ಕಾಲೇಜು ಕನ್ನಡ ವಿದ್ಯಾರ್ಥಿಗಳ ಮೇಲೆ ಈ ದೌರ್ಜನ್ಯ ಸಹಿಸೋಲ್ಲ. ಕಾಲೇಜುಗಳ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಆದ್ಯತೆ ಇಲ್ಲ. ಇವನು ಅವನ ಊರಿಗೆ ಹೊರಡಲಿ’ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.ಕರ್ನಾಟಕದ ಶಾಲೆ-ಕಾಲೇಜುಗಳಲ್ಲಿ ಕನ್ನಡ ಮಾತನಾಡಬಾರದು ಅನ್ನೋ ನಾಡ ದ್ರೋಹಿಗಳಿಗೆ ಕರ್ನಾಟಕದಲ್ಲಿ ನೆಲೆ ಸಿಗಬಾರದು. ಕೂಡಲೇ ಈತನನ್ನು ವಜಾ ಮಾಡಿ, ಅವನ ಊರಿಗೆ ಕಳಿಸಬೇಕು. ರಾಜ್ಯದ ಪ್ರತಿ ಶಾಲೆ-ಕಾಲೇಜಿಗೂ ಈ ಘಟನೆ ಎಚ್ಚರಿಕೆಯಾಗಿರಲಿ ಎಂದು ಆ ಕಾಲೇಜಿನ ಆಡಳಿತ ಮಂಡಳಿಗೆ ಟ್ಯಾಗ್‌ ಮಾಡಿದ್ದಾರೆ. ಕರ್ನಾಟಕದಲ್ಲಿ ಕನ್ನಡಕ್ಕೆ ಬೆಲೆ ಕೊಡದ ಇಂತವರನ್ನು ಗಡಿಪಾರು ಮಾಡಬೇಕು. ಇಂತವರಿಗೆ ಬುದ್ಧಿ ಕಲಿಸಲು ಸರ್ಕಾರವೇ ಒಂದು ಕಾನೂನು ತರಬೇಕು. ಇಲ್ಲದಿದ್ದರೆ ಪರಭಾಷಿಕರ ದರ್ಪಕ್ಕೆ ಕನ್ನಡ ಪದೇ ಪದೇ ಅವಮಾನಕ್ಕೆ ಒಳಗಾಗುತ್ತಲೇ ಇರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ವಾರ್ಡನ್‌ಗೆ ವಿದ್ಯಾರ್ಥಿಗಳಿಂದ ಮುತ್ತಿಗೆ

ವಿಡಿಯೋ ವೈರಲ್ ಆಗುತ್ತಿದಂತೆ ಕನ್ನಡ ಮಾತಾಡಬಾರದು ಎಂದು ಹೇಳಿದ ಎಎಂಸಿ ಕಾಲೇಜ್ ಹಾಸ್ಟಲ್ ವಾರ್ಡನ್‌ಗೆ ವಿದ್ಯಾರ್ಥಿಗೆ ಮುತ್ತಿಗೆ ಹಾಕಿದ್ದಾರೆ. ಕ್ಷಮೆ ಕೇಳುವಂತೆ ಪಟ್ಟು ಹಿಡಿದಿದ್ದಾರೆ. ಕನ್ನಡಿಗ ವಿದ್ಯಾರ್ಥಿಗಳ ಆಕ್ರೋಶದಿಂದ ವಾರ್ಡನ್‌ ಕಕ್ಕಾಬಿಕ್ಕಿಯಾಗಿದ್ದಾನೆ. ಕರ್ನಾಟಕದಲ್ಲಿ ಕನ್ನಡವೇ ಮೊದಲು ಎಂದು ವಿದ್ಯಾರ್ಥಿಗಳು ಪಾಠ ಕಲಿಸಿದ್ದಾರೆ.

ಇದನ್ನೂ ನೋಡಿ: ಮರ್ಯಾದೆಗೇಡು ಹತ್ಯೆ ನಿಷೇಧ ಕಾಯ್ದೆಗಾಗಿ ಪತ್ರ ಚಳವಳಿ Janashakthi Media

Donate Janashakthi Media

Leave a Reply

Your email address will not be published. Required fields are marked *