ಸ್ಪಂದನಾ ಮೃತದೇಹ ಆಗಸ್ಟ್‌ 08ರ ರಾತ್ರಿ ಬೆಂಗಳೂರಿಗೆ

ಬೆಂಗಳೂರು: ಥಾಯ್ಲೆಂಡ್​ ರಾಜಧಾನಿ ಬ್ಯಾಂಕಾಕ್ ಗೆ ಪ್ರವಾಸ ತೆರಳಿದ್ದ ವೇಳೆ ಹೃದಯಾಘಾತದಿಂದ ಹಠಾತ್ ನಿಧನರಾದ ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಮೃತದೇಹದ ಹಸ್ತಾಂತರ ಪ್ರಕ್ರಿಯೆ ಇಂದು ಮಧ್ಯಾಹ್ನವಾಗಲಿದೆ ಎಂದು ಅವರ ಕುಟುಂಬಸ್ಥರಿಂದ ಮಾಹಿತಿ ಸಿಕ್ಕಿದೆ.

ಸ್ಪಂದನಾ ಮರಣೋತ್ತರ ಪರೀಕ್ಷೆ ಮುಕ್ತಾಯವಾಗಿದ್ದು, ಮಧ್ಯಾಹ್ನದ ವೇಳೆಗೆ ಕಸ್ಟಮ್ಸ್​ ಕ್ಲಿಯರೆನ್ಸ್​ ಬಳಿಕ ಸ್ಪಂದನಾ ಮೃತದೇಹ ಹಸ್ತಾಂತರ ಪ್ರಕ್ರಿಯೆ ಮುಗಿಯಲಿದೆ. ಥೈಲ್ಯಾಂಡ್‌ನಿಂದ ಇಂದು ಸಂಜೆ 7 ಗಂಟೆಗೆ ವಿಮಾನದಲ್ಲಿ ಮೃತದೇಹ ರವಾನೆ ಆಗಲಿದೆ. ಮಧ್ಯರಾತ್ರಿ 1 ಗಂಟೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಏರ್‌ಪೋರ್ಟ್‌ಗೆ ತಲುಪಲಿದೆ ಎಂದು ಮಾಹಿತಿ ತಿಳಿದಿದೆ.

ಇದನ್ನೂ ಓದಿ:ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ನಿಧನ

ನಂತರ ಸ್ಪಂದನಾ ಅಂತ್ಯಕ್ರಿಯೆ, ಅಂತಿಮ ವಿಧಿ ವಿಧಾನಗಳನ್ನು ಬೆಂಗಳೂರಿನಲ್ಲಿಯೇ ನಡೆಸಲಾಗುತ್ತದೆಯೇ ಅಥವಾ ಮಂಗಳೂರು ಸಮೀಪ ಬೆಳ್ತಂಗಡಿಗೆ ಕೊಂಡೊಯ್ಯಲಾಗುತ್ತದೆಯೇ ಎಂಬುದನ್ನು ಕುಟುಂಬಸ್ಥರು ನಿರ್ಧರಿಸಲಿದ್ದಾರೆ. ನಿನ್ನೆ ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ್ದ ಸ್ಪಂದನಾ ಚಿಕ್ಕಪ್ಪ ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್, ನಾಳೆ ರಾತ್ರಿ ಬೆಂಗಳೂರಿಗೆ ಸ್ಪಂದನಾ ಮೃತದೇಹ ತಲುಪಲಿದೆ. ಬುಧವಾರ ಸ್ಪಂದನಾ ಅಂತ್ಯ ಸಂಸ್ಕಾರ ನೆರವೇರಲಿದೆ. ಅಂತ್ಯಕ್ರಿಯೆ ಸ್ಥಳದ ಬಗ್ಗೆ ವಿಜಯ್ ​ರಾಘವೇಂದ್ರ ಅವರ ತೀರ್ಮಾನವೇ ಅಂತಿಮ ಎಂದಿದ್ದಾರೆ.

ಸದ್ಯ ವಿಜಯ್ ರಾಘವೇಂದ್ರ ಹಾಗೂ ಕುಟುಂಬ ಬ್ಯಾಂಕಾಕ್​​ನಲ್ಲೇ ಇದೆ. ಸ್ಪಂದನಾ ಅವರ ಮರಣೋತ್ತರ ಪರೀಕ್ಷೆ ಈಗಾಗಲೇ ಪೂರ್ಣಗೊಂಡಿದೆ. ಸಂಜೆ ಅಥವಾ ರಾತ್ರಿ ಬ್ಯಾಂಕಾಕ್​ನಿಂದ ಬೆಂಗಳೂರಿಗೆ ಸ್ಪಂದನಾ ಪಾರ್ಥಿವ ಶರೀರವನ್ನು ತರಲಾಗುತ್ತದೆ. ಮಲ್ಲೇಶ್ವರಂನ ಆಟದ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡುವ ಸಾಧ್ಯತೆ ಇದೆ. ಸ್ಪಂದನಾ ಹಾಗೂ ವಿಜಯ ರಾಘವೇಂದ್ರ 26 ಆಗಸ್ಟ್‌ 2007ರಂದು ಮದುವೆ ಆಗಿದ್ದರು. ಸ್ಪಂದನಾ ತಂದೆ ನಿವೃತ್ತ ಸಹಾಯಕ ಕಮಿಷನರ್‌ ಬಿಕೆ ಶಿವರಾಮ್‌ ಅವರ ಪುತ್ರಿ. ದಂಪತಿಗೆ ಶೌರ್ಯ ಎಂಬ ಮಗ ಇದ್ದಾನೆ.

ಹರಿಶ್ಚಂದ್ರ ಘಾಟ್​​ನಲ್ಲಿ ಅಂತ್ಯ ಸಂಸ್ಕಾರ :  ಸ್ಪಂದನಾ ಅಂತ್ಯಸಂಸ್ಕಾರ ಬೆಂಗಳೂರಿನಲ್ಲೇ ನಡೆಸುವುದಾಗಿ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಹರಿಶ್ಚಂದ್ರ ಘಾಟ್​​ನಲ್ಲಿ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ.  ಇಂದು ರಾತ್ರಿ 11 ಗಂಟೆ ಸುಮಾರಿಗೆ ಏರ್ ಪೋರ್ಟ್​ಗೆ ಸ್ಪಂದನಾ ಮೃತದೇಹ ತಲುಪಲಿದೆ. 12 ಗಂಟೆ ವೇಳೆಗೆ ಮಲ್ಲೇಶ್ವರಂನಲ್ಲಿರುವ ಮನೆಗೆ ಮೃತದೇಹ ತರಲಾಗುತ್ತದೆ. ನಾಳೆ (ಆಗಸ್ಟ್ 9)  ಮಧ್ಯಾಹ್ನದವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಸಂಜೆ ವೇಳೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Donate Janashakthi Media

Leave a Reply

Your email address will not be published. Required fields are marked *