ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ನಿರ್ಮಾಪಕ, ಉದ್ಯಮಿ ಸೌಂದರ್ಯ ಜಗದೀಶ್ ಸಾವನ್ನಪ್ಪಿದ್ದಾರೆ. ಮಹಾಲಕ್ಷ್ಮೀ ಲೇಔಟ್‌ನಲ್ಲಿರುವ ಅವರ ನಿವಾಸದಲ್ಲೇ ಜಗದೀಶ್ ನಿಧನರಾಗಿದ್ದು, ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಸೌಂದರ್ಯ ಜಗದೀಶ್ ಅವರ ಸಾವು ಚಿತ್ರೋದ್ಯಮಕ್ಕೆ ಆಘಾತ ನೀಡಿದ್ದು, ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಮಹಾಲಕ್ಷ್ಮೀ ಲೇಔಟ್‌ನಲ್ಲಿರುವ ತಮ್ಮ ನಿವಾಸದಲ್ಲೇ ಜಗದೀಶ್ ಆತ್ಮಹತ್ಯೆಗೆ ಶರಣಾಗಿದ್ದು, ಕೂಡಲೇ ಅವರನ್ನು ರಾಜಾಜಿನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ, ಅಷ್ಟರಲ್ಲಾಗಲೇ ಜಗದೀಶ್ ನಿಧನರಾಗಿದ್ದರು ಎಂಬ ಮಾಹಿತಿ ಸಿಕ್ಕಿದೆ. ಜಗದೀಶ್ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ನಿಖರ ಕಾರಣವೇನು ಎಂಬುದು ಬಹಿರಂಗವಾಗಿಲ್ಲ. ಆದರೆ ಮೂಲಗಳ ನೀಡಿರುವ ಮಾಹಿತಿ ಪ್ರಕಾರ, ಈಚೆಗೆ ಆರ್ಥಿಕವಾಗಿ ಜಗದೀಶ್ ತುಂಬ ನಷ್ಟದಲ್ಲಿದ್ದರು ಮತ್ತು ಸಾಕಷ್ಟು ಸಾಲ ಮಾಡಿಕೊಂಡಿದ್ದರು ಎಂಬ ಮಾತುಗಳು ಕೇಳಿಬಂದಿವೆ.
ರಾಜಾಜಿನಗರದ ಡಾ. ರಾಜ್‌ಕುಮಾರ್ ರಸ್ತೆಯಲ್ಲಿ ಜೆಟ್‌ಲಾಗ್ ರೆಸ್ಟೊ ಬಾರ್ ಸಹ ನಡೆಸುತ್ತಿದ್ದರು. ನಟ ದರ್ಶನ್ ಅಭಿನಯದ ಕಾಟೇರ್ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಇದೇ ಬಾರ್‌ನಲ್ಲಿ ರಾತ್ರಿ ಪಾರ್ಟಿ ನಡೆದಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು,ರೆಸ್ಟೊ ಬಾರ್ ಬಂದ್ ಮಾಡಿಸಿದ್ದರು. ಜೊತೆಗೆ, ಸೌಂದರ್ಯ ಜಗದೀಶ್ ಹಾಗೂ ಪತ್ನಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
‘ಹಣಕಾಸು ವ್ಯವಹಾರದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಶರಣಾಗಿರುವ ಮಾಹಿತಿ ಇದೆ. ಸಾವಿನ ಬಗ್ಗೆ ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಬಿಸಿಹವೆ ಇನ್ನೂ ಒಂದು ವಾರ ಮುಂದುವರಿಯಲಿದೆ, ಏಪ್ರಿಲ್ 19 ರ ನಂತರ ಮಳೆ ಸಾಧ್ಯತೆ: ವರದಿ
ಬಹುತಾರಾಗಣದ ‘ಮಸ್ತ್ ಮಜಾ ಮಾಡಿ’ ಸಿನಿಮಾವನ್ನು ನಿರ್ಮಾಣ ಮಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ನಿರ್ಮಾಪಕರಾಗಿ ಸೌಂದರ್ಯ ಜಗದೀಶ್ ಎಂಟ್ರಿ ನೀಡಿದರು. ಆನಂತರ ಪುತ್ರನಿಗಾಗಿ ‘ಅಪ್ಪು ಪಪ್ಪು’ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಪುತ್ರ ಸ್ನೇಹಿತ್ ಅವರನ್ನು ಚಿತ್ರರಂಗದಲ್ಲಿ ಬೆಳೆಸಬೇಕೆಂಬುದು ಅವರ ಗುರಿ ಆಗಿತ್ತು. ಇದರ ಜೊತೆಗೆ ‘ಸ್ನೇಹಿತರು’, ‘ರಾಮ್ ಲೀಲಾ’ ಸಿನಿಮಾಗಳನ್ನು ಕೂಡ ಸೌಂದರ್ಯ ಜಗದೀಶ್ ನಿರ್ಮಾಣ ಮಾಡಿದ್ದರು.