ಬೆಂಗಳೂರು : ‘ಎಲ್ಲ ಧರ್ಮಗಳಲ್ಲೂ ಸಣ್ಣ ಜನ ಇರುತ್ತಾರೆ. ಇಂತಹವರನ್ನು ಪ್ರತಿಭಟಿಸುವ ಮನೋಸ್ಥೈರ್ಯ ನಮಗೆ ಬೇಕಿದೆ. ಅಶಾಂತಿಯನ್ನು ನಮ್ಮ ಮನಸ್ಸಿನೊಳಗೆ ಯಾರು ನುಗ್ಗಿಸಿದರು, ಹೇಗೆ ನುಗ್ಗಿಸಿದರು, ಎಂಬುದನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ತಲೆಯಲ್ಲಿ ಕೇವಲ ಗೊಬ್ಬರ, ಕಸ ತುಂಬಿಕೊಂಡು ಅಜ್ಞಾನಿಗಳಾಗಬಾರದು’ ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಎಚ್ಚರಿಸಿದರು.
ಗುರುವಾರ ನಗರದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ಧರ್ಮ ರಾಜಕೀಯದ ಹೆಸರಿನಲ್ಲಿ ಹಗಲು ದರೋಡೆ ನಡೆಯುತ್ತಿದೆ. ಧರ್ಮ-ರಾಜಕೀಯದ ದುರಂಧರರು ಹೊತ್ತು ಬಂದಂತೆ ಕೊಡೆ ಹಿಡಿಯುತ್ತಿದ್ದಾರೆ’ ಎಂದು ವಿಷಾದಿಸಿದ ವ್ಯಕ್ತಪಡಿಸಿದರು. ‘ಸಂವಿಧಾನ ನಮ್ಮ ಧರ್ಮವಾಗಬೇಕು. ಸರಿದಾರಿಯಲ್ಲಿ ಸಾಗಿ ಎಲ್ಲರೂ ಬಯಸುವ ದೇಶ ಕಟ್ಟಬೇಕು.ವ್ಯಕ್ತಿಗತ ಶುದ್ಧಿಯಿಂದ ಲೋಕಶುದ್ಧಿಯ ಕಡೆಗೆ ಸಾಗಬೇಕು. ಇದನ್ನು ಎಲ್ಲ ಧರ್ಮದವರೂ ಅರಿಯಬೇಕು’ ಎಂದು ಕಿವಿಮಾತು ಹೇಳಿದರು.
ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ. ದೇಶ ಇಂದು ವಿಶೇಷ ಸಂಕಷ್ಟವನ್ನು ಎದುರಿಸುತ್ತಿದ್ದು, ಮಾನವ ಸಂಬಂಧಗಳ ನಡುವೆ ಕಂದಕ ನಿರ್ಮಾಣವಾಗುತ್ತಿದೆ. ವಿವೇಕ-ಅವಿವೇಕ, ಸತ್ಯ-ಅಸತ್ಯ, ವಿಚಾರ-ವಿಕಾರದ ನಡುವೆ ಅಂತರ ಕಡಿಮೆಯಾಗುತ್ತಿದೆ. ಆದರೆ ಧರ್ಮದ ಹೆಸರಿನಲ್ಲಿ ಕಂದಕ ನಿರ್ಮಾಣವಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಬುದ್ಧ, ಬಸವ, ಕನಕದಾಸ, ಗಾಂಧೀಜಿ, ಮೌಲಾನ ಆಜಾದ್, ಅಂಬೇಡ್ಕರ್, ಶಿಶುನಾಳ ಶರೀಫ, ಸೂಫಿ ಸಂತರು, ಜಲಾಲುದ್ದೀನ್, ಕುವೆಂಪು, ಬೇಂದ್ರೆ ಹೀಗೆ ಹಲವಾರು ದಾರ್ಶನಿಕರು ನಮಗೆ ಸೌಹಾರ್ದ, ಸಮಾನತೆ, ಭ್ರಾತೃತ್ವ, ಧಾರ್ಮಿಕ ಸಮಾನತೆ, ಎಲ್ಲರೂ ಒಂದೇ ಎಂಬ ವಿಚಾರಗಳನ್ನು ಬಿತ್ತಿ ಹೋಗಿದ್ದಾರೆ ಎಂದರು. ದೇಶದಲ್ಲಿ ದ್ವೇಷ ಬಿತ್ತುವವರು ಒಂದು ಧರ್ಮದಲ್ಲಿ ಇದ್ದಾರೆ ಎಂದರೆ ಅದು ಅರ್ಧ ಸತ್ಯವಾಗುತ್ತದೆ. ಎಲ್ಲಾ ಧರ್ಮಗಳಲ್ಲೂ ದ್ವೇಷ ಬಿತ್ತುವವರು ಇದ್ದಾರೆ. ದ್ವೇಷ ಬಿತ್ತುವವರು ಅಲ್ಪಸಂಖ್ಯೆಯಲ್ಲಿದ್ದರೆ, ಸೌರ್ಹಾದ, ಸಮಾನತೆ ಬಯಸುವವರು ಬಹುಸಂಖ್ಯೆಯಲ್ಲಿದ್ದಾರೆ. ಕರ್ನಾಟಕಕ್ಕೂ ಸೌಹಾರ್ದತೆಯ ಬಹುದೊಡ್ಡ ಪರಂಪರೆ ಇದೆ. ಅದನ್ನು ನಮ್ಮ ಜನರು ಉಳಿಸಿಕೊಳ್ಳುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ಇವತ್ತಿನ ಸಂದರ್ಭಕ್ಕೆ ವೈರುಧ್ಯಗಳನ್ನು ಮೀರಿ ಒಂದುಗೂಡಿಸುವ ಸೌಹಾರ್ದತೆಯನ್ನು ಕಟ್ಟುವ ಜವಾಬ್ದಾರಿ ನಮ್ಮ ಮೇಲಿದೆ. ಅದನ್ನು ನಮ್ಮೆಲ್ಲರ ಕರ್ತವ್ಯವೆಂದು ಭಾವಿಸೋಣ. ಕರ್ನಾಟಕದಲ್ಲಿ ಸೌಹಾರ್ದತೆಯನ್ನು ಗಟ್ಟಿಗೊಳಿಸೋಣ ಎಂದು ಅವರು ಕರೆ ನೀಡಿದರು.
ಕ್ರೈಸ್ತಧರ್ಮದ ಗುರುಗಳಾದ ಪೀಟರ್ ಮಚಾದೊ ಮಾತನಾಡಿ, ಭಾರತ ದೇಶ ಹಲವು ಧರ್ಮಗಳ ದೇಶವಾಗಿದೆ. ಧರ್ಮವು ಮೌಲ್ಯಗಳನ್ನು ಎತ್ತಿಹಿಡಿಯಬೇಕು. ಕರಗವು ಮುಸ್ಲಿಂ ಮಸೀದಿಗೆ ಹೋಗುವುದು ಧಾರ್ಮಿಕ ಸಹಿಷ್ಣುತೆಯನ್ನು ತೋರಿಸುತ್ತದೆ. ಮಾನವೀಯತೆಯನ್ನು ಸಾರುವ ಧರ್ಮವೇ ಶ್ರೇಷ್ಠ ಧರ್ಮ ಎಂದರು.
ಕರ್ನಾಟಕ ವಕ್ಫ್ ಮಂಡಳಿಯ ಅಧ್ಯಕ್ಷ ಮೌಲಾನಾ ಶಾಫಿ ಸಅದಿ ಮಾತನಾಡಿ, ರಾಜ್ಯದಲ್ಲಿ ನಡೆಯುತ್ತಿರುವ ಕೆಲವು ಕ್ರೌರ್ಯ ಘಟನೆಗಳನ್ನು ಇಂದು ತಿರುಚಲಾಗುತ್ತಿದೆ. ಹೊರಗಡೆ ನಡೆಯುವ ಗಲಭೆಗಳಿಗಿಂತ ಟಿವಿ ಮಾಧ್ಯಮದಲ್ಲೇ ಹೆಚ್ಚು ಕೋಮುಗಲಭೆಗಳು ನಡೆಯುತ್ತಿವೆ. ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‍ಗೆ ಹೋಗುವವರನ್ನು ಭಯೋತ್ಪಾದಕರಂತೆ ಮಾಧ್ಯಮಗಳು ಬಿಂಬಿಸಿವೆ. ಹೈಕೋರ್ಟ್ ಹಿಜಾಬ್‍ಅನ್ನು ಇಸ್ಲಾಂನ ಭಾಗವಲ್ಲ ಎಂದಿದ್ದಕ್ಕೆ ಆಘಾತವಾಗಿದೆ. ಹಾಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗುತ್ತಿದ್ದೇವೆಯೇ ಹೊರತು ಯಾವುದೇ ಧರ್ಮದ ವಿರುದ್ಧ ಸುಪ್ರೀಂ ಕೋರ್ಟ್‍ಗೆ ಹೋಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಧರ್ಮದ ಹೆಸರಿನಲ್ಲಿ ದ್ವೇಷ, ಒಂದು ಸಮುದಾಯದ ವ್ಯಾಪಾರಸ್ಥರಿಗೆ ನಿರ್ಬಂಧ, ಧ್ವನಿವರ್ಧಕ ಬಳಕೆಗೆ ಆಕ್ಷೇಪ ಸೇರಿದಂತೆ ಸಾಮರಸ್ಯ ಕದಡುತ್ತಿರುವ ಹಿನ್ನೆಲೆಯಲ್ಲಿ ಸೌಹಾರ್ದ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಧರ್ಮಗುರುಗಳು, ನ್ಯಾಯಮೂರ್ತಿಗಳು ಹಾಗೂ ಸಂವಿಧಾನ ತಜ್ಞರ ಸಂದೇಶ ಸಾರಲು ‘ಸೌಹಾರ್ದ ಸಂಸ್ಕೃತಿ ಸಮಾವೇಶ’ವನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ, ವಿ.ಗೋಪಾಲಗೌಡ, ಎಚ್, ಎನ್ ನಾಗಮೋಹನದಾಸ್, ಹಿರಿಯ ಪತ್ರಕರ್ತ ಬಿಎಂ ಹನೀಫ್, ಸೌಹಾರ್ದ ಕರ್ನಾಟಕ ಎಸ್.ವೈ. ಗುರುಶಾಂತ್, ಜ್ಯೋತಿ ಅನಂತಸುಬ್ಬಾರಾವ್, ಮಲ್ಲಿಗೆ, ದಲಿತ ಮುಖಂಡರಾದ ಮೋಹನ್ ರಾಜ್, ಮಾವಳ್ಳಿ ಶಂಕರ್, ಸೇರಿದಂತೆ ವಿವಿಧ ದರ್ಮಗಳ ಗುರುಗಳು, ಮತ್ತಿತರರು ಉಪಸ್ಥಿತರಿದ್ದರು.