ಬೆಂಗಳೂರು : ಉದಯಪುರದಲ್ಲಿ ನಡೆದ ಹತ್ಯೆಯನ್ನು ಸೌಹಾರ್ದ ಕರ್ನಾಟಕ ಖಂಡಿಸಿದೆ. ಈ ಕುರಿತು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ನೂಪುರ ಶರ್ಮಾ ಅವರು ಪೈಗಂಬರ್ ಅವರ ಬಗ್ಗೆ ಆಡಿದ ಮಾತನ್ನು ಬೆಂಬಲಿಸಿದರು ಎಂಬ ಕಾರಣಕ್ಕೆ ಉದಯಪುರದಲ್ಲಿ ಕನ್ನಯ್ಯ ಲಾಲ್ ಎಂಬುವವರನ್ನು ಇಬ್ಬರು ಮುಸ್ಲಿಂ ವ್ಯಕ್ತಿಗಳು ಶಿರಚ್ಛೇದ ಮಾಡಿದ್ದನ್ನು ನಾವು ಖಂಡಿಸುತ್ತೇವೆ. ಇದೊಂದು ಆಘಾತಕಾರಿ ಘಟನೆಯಾಗಿದೆ. ಮೂಲಭೂತವಾದವು ಮನುಷ್ಯತ್ವ ವಿರೋಧಿ ಕೃತ್ಯಗಳಿಗೆ ಕಾರಣವಾಗುವುದನ್ನು ಈ ಕೃತ್ಯವೂ ತೋರಿಸುತ್ತದೆ.
ಯಾವುದೇ ಧರ್ಮವು ತಾನಾಗಿ ಹಿಂಸೆಯನ್ನು ಬೋಧಿಸುವುದಿಲ್ಲ. ಮತಧರ್ಮದ ಹೆಸರಿನಲ್ಲಿ ಕೆಲವು ವಿಕೃತರು ಇಂಥ ಹಿಂಸಾಕೃತ್ಯಗಳನ್ನು ಮಾಡುತ್ತಾರೆ. ನಮ್ಮ ದೇಶಕ್ಕೆ ಅಹಿಂಸೆಯ ದೊಡ್ಡ ಪರಂಪರೆ ಇದೆ. ನಾವು ಎಲ್ಲ ರೀತಿಯ ಹಿಂಸೆಯನ್ನು ವಿರೋಧಿಸುತ್ತೇವೆ. ಎಲ್ಲ ಧರ್ಮಗಳ ಮೂಲಭೂತವಾದವನ್ನು ಪ್ರತಿರೋದಿಸುತ್ತೇವೆ.
ನೂಪುರ ಶರ್ಮ ಅವರ ಪ್ರಚೋದನಾಕಾರಿ ಮಾತನ್ನು ನಾವು ಒಪ್ಪುವುದಿಲ್ಲ.
ಹಾಗೆಯೇ ಅವರ ಅಭಿಪ್ರಾಯವನ್ನು ಪ್ರಜಾಸತ್ತಾತ್ಮಕ ಮಾರ್ಗಗಳ ಮೂಲಕ ವಿರೋಧಿಸಬೇಕು ಎಂದು ಬಯಸುತ್ತೇವೆ.
ಉದಯಪುರದಲ್ಲಿ ಕನ್ನಯ್ಯ ಲಾಲ್ ಹತ್ಯೆ ಮಾಡಿದವರಿಗೆ ತಕ್ಕ ಶಿಕ್ಷೆಯಾಗಲಿ ಎಂದು ಆಗ್ರಹಿಸುತ್ತೇವೆ. ಹಿಂಸೆಯನ್ನು ಪ್ರಚೋದಿಸುವ ಯಾವುದೇ ವ್ಯಕ್ತಿಗಳಿಗೆ ಮತ್ತು ಯಾವುದೇ ಧರ್ಮದ ಮೂಲಭೂತವಾದಿಗಳಿಗೆ ಈ ಶಿಕ್ಷೆಯೇ ಒಂದು ಪಾಠವಾಗಲಿ ಎಂದು ಸೌಹಾರ್ದ ಕರ್ನಾಟಕದ, ಪ್ರೊ. ಬರಗೂರು ರಾಮಚಂದ್ರಪ್ಪ, ಡಾ.ಕೆ.ಮರುಳಸಿದ್ದಪ್ಪ, ಡಾ.ಜಿ.ರಾಮಕೃಷ್ಣ, ಡಾ.ಸಿದ್ಧನಗೌಡಪಾಟೀಲ್, ಡಾ.ಕೆ.ಶರೀಫಾ, ನಿಸಾರ್ ಅಹಮದ್, ಐ.ಪಿ.ಎಸ್ ( ನಿವೃತ್ತ), ಮಾವಳ್ಳಿ ಶಂಕರ್, ಆರ್.ಮೋಹನರಾಜು, ಬಿ.ಎಂ.ಹನೀಫ್, ಗೌರಮ್ಮ, ಬಿ.ರಾಜಶೇಖರಮೂರ್ತಿ, ಎಸ್.ವೈ.ಗುರುಶಾಂತ್ ಜಂಟಿ ಹೇಳಿಕೆ ನೀಡಿದ್ದಾರೆ.