ಸುಡಾನ್: ಸುಡಾನ್‌ನಲ್ಲಿ ಕ್ಷಿಪ್ರ ಮಿಲಿಟರಿ ಕ್ರಾಂತಿ ನಡೆದಿದ್ದು ಅಲ್ಲಿನ ಪ್ರಧಾನಿ ಅಬ್ದುಲ್ಲಾ ಹಮ್ದೋಕ್ ಅವರನ್ನು ಭದ್ರತಾ ಪಡೆಗಳು ಬಂಧಿಸಿ ಅಜ್ಞಾತ ಸ್ಥಳವೊಂದಕ್ಕೆ ಕರೆದೊಯ್ದಿವೆ. ಅಬ್ದುಲ್ಲಾ ಅವರು ದೇಶದಲ್ಲಿ ನಡೆಯುತ್ತಿರುವ ಕ್ಷಿಪ್ರಕ್ರಾಂತಿಗೆ ಬೆಂಬಲ ಸೂಚಿಸಿ ಹೇಳಿಕೆ ಬಿಡುಗಡೆಗೊಳಿಸಲು ನಿರಾಕರಿಸಿದ ನಂತರ ಈ ಬೆಳವಣಿಗೆ ನಡೆದಿದೆ.
ಕ್ಷಿಪ್ರ ಮಿಲಿಟರಿ ಕ್ರಾಂತಿಯಿಂದಾಗಿ ಪ್ರಧಾನಿ ಅಲ್ಲದೆ, ಸಚಿವರು ಮತ್ತು ಸರ್ಕಾರದ ಪರ ಇರುವ ಹಲವು ನಾಯಕರನ್ನು ಸುಡಾನ್ ಸೇನೆಯು ಇಂದು ಬಂಧಿಸಿದೆ.
ದೇಶದ ಕೈಗಾರಿಕಾ ಸಚಿವ ಇಬ್ರಾಹಿಂ ಅಲ್-ಶೇಖ್, ಸುಡಾನ್ ರಾಜಧಾನಿ ಖರ್ತೌಮ್ ಇಲ್ಲಿನ ರಾಜ್ಯಪಾಲ ಅಯ್ಮಾನ್ ಖಾಲಿದ್, ಮಾಹಿತಿ ಸಚಿವ ಹಂಝಾ ಬಲೌಲ್, ಪ್ರಧಾನಿಯ ಮಾಧ್ಯಮ ಸಲಹೆಗಾರ ಫೈಸಲ್ ಮುಹಮ್ಮದ್ ಸಲೇಹ್, ಆಡಳಿತ ಸಾವರಿನ್ ಕೌನ್ಸಿಲ್‍ನ ವಕ್ತಾರ ಮುಹಮ್ಮದ್ ಅಲ್-ಫಿಕಿ ಸುಲೈಮಾನ್ ಸಹಿತ ಹಲವರನ್ನು ಸೇನೆ ವಶಕ್ಕೆ ಪಡೆದುಕೊಂಡಿದೆ ಎಂದು ಹೇಳಲಾಗಿದೆ.
ಸೇನೆಯ ಪರವಾಗಿ ಹೇಳಿಕೆ ನೀಡಲು ನಿರಾಕರಿಸಿದ ಪ್ರಧಾನಿಯನ್ನು ಬಂಧಿಸಿ ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಬಂಧನದಲ್ಲಿರಿಸಿಕೊಂಡಿರುವ ಭದ್ರತಾ ಪಡೆಗಳು ಸೇನೆ ಬೆಂಬಲ ಸೂಚಿಸಿ ಹೇಳಿಕೆ ನೀಡಲು ಒತ್ತಾಯಿಸುತ್ತಿದ್ದಾರೆ. ಕ್ಷಿಪ್ರಕ್ರಾಂತಿಯ ಕುರಿತು ಸೇನೆಯಿಂದ ಈವರೆಗೆ ಅಧಿಕೃತ ಹೇಳಿಕೆ ಪ್ರಕಟವಾಗಿಲ್ಲ.
ಸುಡಾನ್ ಮಿಲಿಟರಿ ಪ್ರಜಾಸತ್ತಾತ್ಮಕ ನಾಗರಿಕ ಆಡಳಿತವನ್ನು ವಿಸರ್ಜಿಸಿದೆ, ರಾಜಕೀಯ ನಾಯಕರನ್ನು ಬಂಧಿಸಿದೆ. ಅಲ್ಲದೆ, ತುರ್ತು ಪರಿಸ್ಥಿತಿ ಘೋಷಿಸಿದೆ.
ನಾಗರಿಕ ನಾಯಕರೊಂದಿಗೆ ಜಂಟಿ ಮಂಡಳಿಯ ಮುಖ್ಯಸ್ಥರಾಗಿದ್ದ ಜನರಲ್ ಅಬ್ದೆಲ್ ಫತ್ತಾ ಬುರ್ಹಾನ್ ರಾಜಕೀಯ ಒಳಜಗಳವನ್ನು ದೂಷಿಸಿದರು.
ಪ್ರತಿಭಟನಕಾರರು ರಾಜಧಾನಿ ಖಾರ್ಟೂಮ್ ನ ಬೀದಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ ಮತ್ತು ಗುಂಡಿನ ದಾಳಿಯ ವರದಿಗಳಿವೆ. ಎರಡು ವರ್ಷಗಳ ಹಿಂದೆ ದೀರ್ಘಕಾಲದ ಆಡಳಿತಗಾರ ಒಮರ್ ಅಲ್-ಬಷೀರ್ ಅವರನ್ನು ಪದಚ್ಯುತಗೊಳಿಸಿ ಪ್ರಸಕ್ತ ಸರ್ಕಾರ ಸ್ಥಾಪಿಸಿದಾಗಿನಿಂದ ಮಿಲಿಟರಿ ಮತ್ತು ನಾಗರಿಕ ನಾಯಕರು ಭಿನ್ನಾಭಿಪ್ರಾಯಗಳು ಆಗಾಗ ತಲೆದೂರುತ್ತಿದ್ದವು.
ದೇಶವು ಆಳವಾದ ಆರ್ಥಿಕ ಬಿಕ್ಕಟ್ಟಿನಲ್ಲಿ ಉಳಿದಿದ್ದರೂ, ಹೆಚ್ಚಿನ ಅಂತರರಾಷ್ಟ್ರೀಯ ಬೆಂಬಲವಿತ್ತು. ಇದರ ನಡುವೆ ಮಿಲಿಟರಿ ಸ್ವಾಧೀನ ಪ್ರಕ್ರಿಯೆಯ ಸರ್ಕಾರದ ತೀರ್ಮಾನಗಳು ಭಾರಿ ಅಪಾಯಕ್ಕೆ ಸಿಲುಕಿಸುತ್ತಿದೆ.
ಕಳೆದ ತಿಂಗಳು ಸುಡಾನ್‍ನಲ್ಲಿ ನಡೆದ ವಿಫಲ ಕ್ಷಿಪ್ರಕ್ರಾಂತಿಯೊಂದರ ನಂತರ ದೇಶದಲ್ಲಿ ಮಿಲಿಟರಿ ಮತ್ತು ನಾಗರಿಕ ಗುಂಪುಗಳ ನಡುವೆ ವೈಷಮ್ಯ ಹೆಚ್ಚಾಗಿತ್ತು.
ರಾಜಕೀಯ ನಾಯಕರ ಬಂಧನವನ್ನು ಖಂಡಿಸಿ ಸುಡಾನ್ ನಲ್ಲಿ ವಿವಿಧ ಕಡೆಗಳಲ್ಲಿ ತೀವ್ರರೀತಿಯ ಪ್ರತಿರೋಧಗಳು ಎದ್ದಿದ್ದು, ಹಲವು ಕಡೆಗಳಲ್ಲಿ ಮಿಲಿಟರಿ ಆಕ್ರಮಣದ ವಿರುದ್ಧ ಹಾಗೂ ರಾಜಕೀಯ ನಾಯಕರ ಬಂಧನವನ್ನು ಖಂಡಿಸಿ ಪ್ರತಿಭಟನೆಗಳನ್ನು ಜನತೆ ನಡೆಸಿದ್ದಾರೆ.