ಕೃಷಿ ಕಾಯ್ದೆ ರದ್ದತಿ: ʻಅದ್ಭುತ ಸುದ್ದಿʼ ಎಂದ ಸೋನು ಸೂದ್‌ – ʻಸಂಪೂರ್ಣ ಅನ್ಯಾಯʼವೆಂದ ಕಂಗನಾ

ನವದೆಹಲಿ: ದೇಶದ ಕೃಷಿಗೆ ಸಂಬಂಧಿಸಿದಂತೆ ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೊಳಿಸಲು ಹೊರಟಿರುವ ಮೂರು ಕರಾಳ ಕೃಷಿ ಕಾಯ್ದೆಗಳನ್ನು ರೈತರ ಧೀರೋದ್ಧಾತ ಹೋರಾಟದ ಪರಿಣಾಮವಾಗಿ ಪ್ರಧಾನಿ ನರೇಂದ್ರ ಮೋದಿ ಆ ಕಾಯ್ದೆಗಳನ್ನು ರದ್ದುಪಡಿಸುವುದಾಗಿ ಪ್ರಕಟಿಸಿದ ನಂತರ ಹಲವು ವಿವಿಧ ಬಗೆಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ಸೋನು ಸೂದ್, ಕಂಗನಾ ರನೌತ್‌, ಪ್ರಕಾಶ್ ರಾಜ್, ರಿಚಾ ಚಡ್ಡಾ, ತಾಪ್ಸಿ ಪನ್ನು, ಸಯಾನಿ ಗುಪ್ತಾ ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ನಟ ಸೋನು ಸೂದ್ ತಮ್ಮ ಟ್ವಿಟರ್‌ ಖಾತೆಯಲ್ಲಿ “ಇದೊಂದು ಅದ್ಭುತ ಸುದ್ದಿ! ಪ್ರಧಾನಿ ನರೇಂದ್ರಮೋದಿಯವರೇ ಕೃಷಿ ಕಾನೂನುಗಳನ್ನು ಹಿಂಪಡೆದಿದ್ದಕ್ಕಾಗಿ ಧನ್ಯವಾದಗಳು. ರೈತರೇ, ಶಾಂತಿಯುತ ಪ್ರತಿಭಟನೆಗಳ ಮೂಲಕ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಕೊಂಡಿರುವುದಕ್ಕೆ ಧನ್ಯವಾದಗಳು. ನೀವು ಇಂದು ಶ್ರೀ ಗುರುನಾನಕ್ ದೇವ್ ಜೀಯವರ ಜಯಂತಿಯ ಶುಭದೊಂದಿಗೆ ನಿಮ್ಮ ಕುಟುಂಬಗಳೊಂದಿಗೆ ಸಂತೋಷದಿಂದ ಹಿಂತಿರುಗುತ್ತೀರಿ ಎಂದು ಭಾವಿಸುತ್ತೇವೆ ಎಂದು ತಿಳಿಸಿದ್ದಾರೆ.

ರೈತರ ಹೋರಾಟಕ್ಕೆ ಸಂದ ಜಯಕ್ಕೆ ವ್ಯತಿರಿಕ್ತವಾಗಿ ಪ್ರತಿಕ್ರಿಯಿಸಿರುವ ನಟಿ ಕಂಗನಾ ರನೌತ್ ಕಾಯ್ದೆ ರದ್ದತಿ ಬಗ್ಗೆ ವ್ಯಕ್ತಿಯೋರ್ವರ ಟ್ವೀಟ್‌ ಅನ್ನು ಆಧರಿಸಿ ತಮ್ಮ ಇನ್‌ಸ್ಟಾಗ್ರಾಮ್‌ ನಲ್ಲಿ ಪೋಸ್ಟ್‌ ಮಾಡಿರುವ ಅವರು “ದುಃಖಕರ, ನಾಚಿಕೆಗೇಡಿನ ಮತ್ತು ಸಂಪೂರ್ಣವಾಗಿ ಅನ್ಯಾಯ” ಎಂದಿದ್ದು ಅಲ್ಲದೆ, “ಬೀದಿಯಲ್ಲಿರುವ ಜನರು ಕಾನೂನುಗಳನ್ನು ಮಾಡಲು ಪ್ರಾರಂಭಿಸಿದರೆ ಮತ್ತು ಸಂಸತ್ತಿನಲ್ಲಿ ಆಯ್ಕೆ ಮಾಡಿದ ಸರ್ಕಾರವಲ್ಲ, ಆಗ ಇದು ಜಿಹಾದಿ ರಾಷ್ಟ್ರವಾಗಿದೆ… ಇದನ್ನು ಬಯಸಿದ ಎಲ್ಲರಿಗೂ ಅಭಿನಂದನೆʼʼ ಎಂದು ತಿಳಿಸಿದ್ದಾರೆ.

ಮತ್ತೊಂದು ಸಂದೇಶದಲ್ಲಿ, ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಚಿತ್ರವನ್ನು ಹಂಚಿಕೊಂಡು, “ರಾಷ್ಟ್ರದ ಆತ್ಮಸಾಕ್ಷಿಯು ಆಳವಾದ ನಿದ್ರೆಯಲ್ಲಿರುವಾಗ, ಲಾತ್ (ಬೆತ್ತ) ಒಂದೇ ಪರಿಹಾರ ಮತ್ತು ಸರ್ವಾಧಿಕಾರವು ಏಕೈಕ ಪರಿಹಾರವಾಗಿದೆ… ಜನ್ಮದಿನದ ಶುಭಾಶಯಗಳು ಮೇಡಂ ಪ್ರೈಮ್‌ ಮಿನಿಸ್ಟರ್”‌ ಎಂದು ಬರೆದುಕೊಂಡಿದ್ದಾರೆ.

ಇನ್ನೂ ಅನೇಕರು ತಮ್ಮದೇ ಆದ ಪ್ರತಿಕ್ರಿಯೆಗಳನ್ನು ಕೃಷಿ ಕಾನೂನುಗಳನ್ನು ರದ್ದತಿ ಬಗ್ಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.

ನಟ ಪ್ರಕಾಶ್ ರಾಜ್ ತಮ್ಮ ಟ್ವಿಟರ್‌ನಲ್ಲಿ ರೈತರ ಹೋರಾಟಗಳನ್ನು ಬಿಂಬಿಸುವ ಕವಿತೆಯೊಂದನ್ನು ಹಂಚಿಕೊಂಡು ಹೋರಾಟಕ್ಕೆ ಸಂದ ಜಯವೆಂದು ವಿವರಿಸಿದ್ದಾರೆ.

ಸಯಾನಿ ಗುಪ್ತಾ ತಮ್ಮ ಟ್ವಿಟರ್‌ನಲ್ಲಿ “ರೈತರಿಗೆ ಅಭಿನಂದನೆಗಳು. ನೀವು ಹೋರಾಟದಿಂದ ಎಲ್ಲವೂ ಸಾಧ್ಯವೆಂದು ತೋರಿಸಿದ್ದೀರಿ. ಪ್ರತಿಭಟನೆಗಳು ಪ್ರಬಲ ಅಸ್ತ್ರವೆಂದು ತಿಳಿಸಿಕೊಟ್ಟಿದ್ದೀರಿ. ಪ್ರಾಣ ಕಳೆದುಕೊಂಡ ಎಲ್ಲರಿಗೂ ಪ್ರಾರ್ಥನೆ. ಅವರ ತ್ಯಾಗ ವ್ಯರ್ಥವಾಗಲಿಲ್ಲ. ನಮ್ಮ ಅನ್ನದಾತರು ಸದಾ ನಮ್ಮೊಂದಿಗಿರಲಿ! ಜೈ ಜವಾನ್ ಜೈ ಕಿಸಾನ್!” ಎಂದಿದ್ದಾರೆ.

ರಿಚಾ ಚಡ್ಡಾ ಸಹ ಪ್ರತಿಕ್ರಿಯೆಯನ್ನು ನೀಡಿದ್ದು, “ನೀವು ಗೆದ್ದಿದ್ದೀರಿ! ನಿನ್ನ ಗೆಲುವಿನಲ್ಲಿ ಎಲ್ಲರ ಜಯವಿದೆ” ಎಂದಿದ್ದಾರೆ. ತಾಪ್ಸಿ ತನ್ನ ಎಲ್ಲಾ ಅನುಯಾಯಿಗಳಿಗೆ ಗುರುನಾನಕ್ ಜಯಂತಿಯ ಶುಭಾಶಯಗಳನ್ನು ತಿಳಿಸುವುದರೊಂದಿಗೆ ಮೂರು ಕೃಷಿ ಕಾಯ್ದೆಗಳ ರದ್ದತಿ ಬಗೆಗಿನ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *