ನವದೆಹಲಿ : ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರಿಗೆ ಪಕ್ಷದ ಪ್ರಧಾನ ಕಚೇರಿ ಎ.ಕೆ.ಜಿ. ಭವನದಲ್ಲಿ ಇಂದು (ಸೆ14) ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕೆಂಪು ಬಾವುಟದಲ್ಲಿ ಸುತ್ತಿದ ಅವರ ಪಾರ್ಥಿವ ಶರೀರವನ್ನು ಲಾಲ್ ಸಲಾಂ ಘೋಷಣೆಗಳ ನಡುವೆ ಇಂದು ಬೆಳಗ್ಗೆ ಪಕ್ಷದ ಕಚೇರಿಗೆ ತರಲಾ ಯಿತು. ಪ್ರಕಾಶ್ ಕಾರಟ್, ಬೃಂದಾ ಕಾರಟ್, ಪಿಣರಾಯಿ ವಿಜಯನ್ ಮತ್ತು ಎಂ.ಎ. ಬೇಬಿ ಸೇರಿದಂತೆ ಇತರ ಮುಖಂಡರು ಅವರಿಗೆ ಶ್ರದ್ಧಾಂ ಜಲಿ ಸಲ್ಲಿಸಿದರು.
ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಎ.ಕೆ.ಜಿ. ಭವನಕ್ಕೆ ಪಕ್ಷದ ಇತರ ಮುಖಂಡರೊಂದಿಗೆ ಆಗಮಿಸಿ, ಅಂತಿಮ ನಮನ ಸಲ್ಲಿಸಿದರು. ಎನ್‌ಸಿಪಿ (ಎಸ್‌ಪಿ) ಅಧ್ಯಕ್ಷ ಶರದ್ ಪವಾರ್, ಆರ್‌ಜೆಡಿ ಸಂಸದ ಮನೋಜ್ ಝಾ, ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕರಾದ ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಅಂತಿಮ ನಮನ ಸಲ್ಲಿಸಿದರು. ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿ ಪುಷ್ಪಗುಚ್ಛ ಅರ್ಪಿಸಿ, ಶುಕ್ರವಾರ ಸಂಜೆ ನಮನ ಸಲ್ಲಿಸಿದ್ದರು.
ಜೆಎನ್‌ಯುನಲ್ಲಿ ಶ್ರದ್ಧಾಂಜಲಿ: ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಯೆಚೂರಿ(72), ಏಮ್ಸ್ ನಲ್ಲಿ ಗುರುವಾರ ನಿಧನರಾದರು. ಅವ ರನ್ನು ಆಗಸ್ಟ್ 19 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾಜಿ ವಿದ್ಯಾರ್ಥಿಯೊಬ್ಬರಿಗೆ ಇದೇ ಮೊದಲ ಬಾರಿಗೆ ವಿವಿ ಆವರಣದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇದು ಯೆಚೂರಿಯವರಿಗೆ ಸಿಕ್ಕ ಗೌರವ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.
ಶುಕ್ರವಾರ ಅವರ ಪಾರ್ಥಿವ ಶರೀರವನ್ನು ಏಮ್ಸ್‌ನಿಂದ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯಕ್ಕೆ ಕೊಂಡೊಯ್ಯಲಾಯಿತು. ಅಲ್ಲಿ ನೂರಾರು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಅವರಿಗೆ ಅಂತಿಮ ನಮನ ಸಲ್ಲಿಸಿದರು. ಜೆಎನ್‌ಯುನಲ್ಲಿ ವಿದ್ಯಾರ್ಥಿಯಾಗಿದ್ದಾಗ ಯೆಚೂರಿ ಅವರು 1974 ರಲ್ಲಿ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಭಾಗವಾಗಿದ್ದರು. 1977-78ರಲ್ಲಿ ಜೆಎನ್‌ಯುಎಸ್‌ಯು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಅವರನ್ನು ತುರ್ತು ಪರಿಸ್ಥಿತಿ ಸಮಯದಲ್ಲಿ ಬಂಧಿಸಲಾಯಿತು.
ಸೀತಾರಾಂ ಯೆಚೂರಿಯವಿಗೆ ಸಿಪಿಐ(ಎಂ) ಪಕ್ಷದ ಕರ್ನಾಟಕ ರಾಜ್ಯ ಸಮಿತಿಯಿಂದ ಅಂತಿಮ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಮತ್ತು ಕೇಂದ್ರ ಸಮಿತಿ ಯು.ಬಸವರಾಜ್, ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರುಗಳಾದ ಮೀನಾಕ್ಷಿ ಸುಂದರಂ, ಕೆ.ನೀಲ ಕೆಎನ್, ಕೆ. ಪ್ರಕಾಶ್, ಮುನಿವೆಂಕಟಪ್ಪ ಹಾಗೂ ರಾಜ್ಯ ಸಮಿತಿ ಸದಸ್ಯ ಡಾ.. ಅನಿಲ್ ಕುಮಾರ್, ವಕೀಲ. ವೆಂಕಟೇಶ್ ಡಿಎಚ್‌ಎಸ್‌ನ ನಾಗರಾಜ್ ಎನ್, ಕ್ರಿಯಾದ ಚಂದ್ರಶೇಖರ್ ದೇವನಹಳ್ಳಿಯ ರೈತ ಮುಖಂಡ ವೀರಣ್ಣ ಸೇರಿದಂತೆ ಹಲವರು ಶ್ರದ್ಧಾಂಜಲಿ ಸಲ್ಲಿಸಿದರು