ನವದೆಹಲಿ: ಭಾರತ ಮತ್ತು ಚೀನಾ ಗಡಿ ಭಾಗದಲ್ಲಿ ಚೀನಾ ಸೈನಿಕರ ಉದ್ಧಟತನ ವರ್ತನೆ ಕುರಿತು ಚರ್ಚೆಗೆ ಪ್ರಸಕ್ತ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳು ಮಹಾತ್ಮಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಪಕ್ಷದ ಸಂಸದರು ಸಂಸತ್ತಿನ ಉಭಯ ಸದನಗಳಲ್ಲಿ ಈ ವಿಷಯದ ಬಗ್ಗೆ ಚರ್ಚೆಗೆ ಕೋರಿ ನೋಟಿಸು ನೀಡಿದ್ದಾರೆ. ಆದರೂ, ಕೇಂದ್ರದ ಬಿಜೆಪಿ ಸರ್ಕಾರ ಈ ವಿಚಾರದಲ್ಲಿ ಚರ್ಚೆಗೆ ಒಳಪಡಿಸಲು ಮುಂದಾಗುತ್ತಿಲ್ಲ. ಇದರಿಂದ ಕೆರಳಿದ ಪ್ರತಿಪಕ್ಷಗಳು ಸದನದಲ್ಲಿ ಸಭ್ಯಾತ್ಯಾಗ ಮಾಡಿ ಪ್ರತಿಭಟನೆಯನ್ನು ನಡೆಸಿದೆ.
ಇದನ್ನು ಓದಿ: ಚೀನಾ ಯುದ್ಧದ ತಯಾರಿಯಲ್ಲಿದೆ-ಕೇಂದ್ರ ಸರ್ಕಾರ ನಿದ್ದೆ ಮಾಡುತ್ತಿದೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪ
ಡಿಸೆಂಬರ್ 9 ರಂದು ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಭಾರತ ಮತ್ತು ಚೀನಾದ ಸೈನಿಕರು ವಾಸ್ತವ ನಿಯಂತ್ರಣ ರೇಖೆಯ ಉದ್ದಕ್ಕೂ (ಎಲ್‌ಎಸಿ) ಘರ್ಷಣೆ ನಡೆಸಿದರು ಮತ್ತು ‘ಮುಖಾಮುಖಿಯಲ್ಲಿ ಎರಡೂ ಕಡೆಯ ಕೆಲವು ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ’ ಎಂದು ಭಾರತೀಯ ಸೇನೆ ತಿಳಿಸಿದೆ.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ, ಪಿ.ಚಿದಂಬರಂ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಸಿಪಿಐ, ಸಿಪಿಐ(ಎಂ), ಆರ್‌ಜೆಡಿ, ಜೆಡಿಯು, ಶಿವಸೇನೆ, ಡಿಎಂಕೆ ಮತ್ತು ಎನ್‌ಸಿಪಿ ಪಕ್ಷಗಳು ಸೇರಿದಂತೆ ಸುಮಾರು 12 ವಿರೋಧ ಪಕ್ಷದ ಸಂಸದರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸೋನಿಯಾ ಗಾಂಧಿ, ಸರ್ಕಾರದ ಹಠಮಾರಿ ಧೋರಣೆಯಿಂದ ಚೀನಾ ಗಡಿ ವಿಷಯ ಸಂಸತ್ತಿನಲ್ಲಿ ಚರ್ಚೆಯಾಗುತ್ತಿಲ್ಲ. ಗಡಿಯಲ್ಲಿನ ಪರಿಸ್ಥಿತಿ ಏನು ಎಂಬ ಬಗ್ಗೆ ಸಂಸತ್ತು ಮತ್ತು ಸಾರ್ವಜನಿಕರು ತಿಳಿದುಕೊಳ್ಳಲು ಬಯಸುತ್ತಾರೆ. ಆದರೆ ಕೇಂದ್ರ ಸರ್ಕಾರ ಎಲ್ಲಾ ಮಾಹಿತಿಗಳನ್ನು ಮುಚ್ಚಿಡುತ್ತಿದೆ. ಸರ್ಕಾರ ಈ ರೀತಿ ಮರೆ ಮಾಚುತ್ತಿರುವುದೇಕೆ ಎಂದು ಪ್ರಶ್ನಿಸಿದರು.
ಇದನ್ನು ಓದಿ: ಉಕ್ರೇನ್ ಹೊರತು ಪಡಿಸಿಯೂ ಆಳಗೊಂಡ ಭಾರತ-ಆಮೇರಿಕ ಮೈತ್ರಿ
ಡಿಸೆಂಬರ್ 7 ರಂದು ಚಳಿಗಾಲದ ಅಧಿವೇಶನ ಪ್ರಾರಂಭವಾದಾಗಿನಿಂದ ಭಾರತ-ಚೀನಾ ಗಡಿ ಉದ್ವಿಗ್ನತೆ ಮತ್ತು ಇತ್ತೀಚಿನ ಚೀನಾದ ಉಲ್ಲಂಘನೆಗಳ ಬಗ್ಗೆ ಚರ್ಚೆಗೆ ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ. ಗಡಿಯಲ್ಲಿ ಚೀನಾದ ಅಕ್ರಮಣದ ಕುರಿತು ಸಂಸತ್ತಿನಲ್ಲಿ ಕೇಳಲಾದ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸಬೇಕು ಮತ್ತು ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಮೌನ ಮುರಿಯಬೇಕು ಎಂದು ಆಗ್ರಹಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಅರುಣಾಚಲ ಪ್ರದೇಶದ ಗಡಿ ಭಾಗವಾಗಿರುವ ತವಾಂಗ್‍ನಲ್ಲಿ ಚೀನಾ ಸೈನಿಕರು ಒಳನುಸಳಲು ಯತ್ನಿಸಿದರು. ನಮ್ಮ ಸೈನಿಕರು ಅದನ್ನು ತಡೆದಿದ್ದಾರೆ. ಈ ವಿಚಾರಗಳನ್ನು ಚರ್ಚೆಗೆ ಒಳಪಡಿಸಬೇಕೆಂದು ನಾವು ಹಲವು ಬಾರಿ ನೋಟಿಸ್ ನೀಡಿದ್ದೇವೆ. ಆದರೆ ಸರ್ಕಾರ ಅವಕಾಶವನ್ನೇ ನೀಡುತ್ತಿಲ್ಲ. ಸದನ ಆರಂಭವಾದ ದಿನ ಕೇಂದ್ರ ರಕ್ಷಣಾ ಸಚಿವರು ಉತ್ತರ ಹೇಳಿ ಹೋಗಿದ್ದಾರೆ. ಅದು ಏಕಮುಖವಾಗಿ ಉಳಿದಿದೆ. ಚರ್ಚೆಯಾಗದೆ ಇದ್ದರೆ ಸಂಸತ್ತಿಗೆ ಅರ್ಥವೇನು ಎಂದು ಪ್ರಶ್ನಿಸಿದ್ದಾರೆ.
ಇದನ್ನು ಓದಿ: ಹವಾಮಾನ ಬದಲಾವಣೆ : ಗ್ಲಾಸ್ಗೊ ಸಮ್ಮೇಳನ ಮತ್ತು ಭಾರತ
ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಮಾತನಾಡಿ, ಭಾರತ ಮತ್ತು ಚೀನಾ ಗಡಿಯಲ್ಲಿ ಏನಾಗುತ್ತಿದೆ ಎಂಬ ವಿಷಯ ಸಂಸತ್ತಿನಲ್ಲಿ ಚರ್ಚೆಯಾಗಲೇಬೇಕಿದೆ. ನಾವು ಮಿಲಿಟರಿ ರಹಸ್ಯಗಳನ್ನು ಕೇಳುತ್ತಿಲ್ಲ. ಚೀನಾ ಸೈನಿಕರು ದೇಶದ ಗಡಿಯ ಒಳಗೆ ನುಸಳಿದ್ದೇಗೆ ಎಂದು ತಿಳಿದುಕೊಳ್ಳ ಬಯಸುತ್ತೇವೆ ಎಂದಿದ್ದಾರೆ.
ಸಂಸತ್ ಅಧಿವೇಶನದಲ್ಲಿ ಸಭಾತ್ಯಾಗ
ಇಂದು ಬೆಳಗ್ಗೆ ಲೋಕಸಭೆಯಲ್ಲಿ ಶೂನ್ಯವೇಳೆಯೊಂದಿಗೆ ಆರಂಭವಾದ ಕಲಾಪದಲ್ಲಿ ಪ್ರತಿಪಕ್ಷಗಳು ಚೀನಾ ಗಡಿ ಗಲಾಟೆ ಚರ್ಚೆಗೆ ಪಟ್ಟು ಹಿಡಿದರು. ಕಾಂಗ್ರೆಸ್ ಮತ್ತು ಡಿಎಂಕೆ ಸದಸ್ಯರು ಪ್ರತಿಭಟನೆಗೆ ಮುಂದಾದರು. ಟಿಎಂಸಿ, ಸಂಯುಕ್ತ ಜನತಾದಳದ ಸಂಸದರು ಬೆಂಬಲ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌದರಿ, ಚರ್ಚೆಗೆ ಅವಕಾಶ ನೀಡುವಂತೆ ಸಭಾಧ್ಯಕ್ಷ ಓಂ ಬಿರ್ಲಾ ಅವರನ್ನು ಒತ್ತಾಯಿಸಿದರು. ಸಂಸತ್ತಿನ ಹೊರಗೆ ಟಿವಿಗಳು ಸೇರಿದಂತೆ ಹಲವೆಡೆ ಗಡಿ ವಿವಾದ ಚರ್ಚೆಯಾಗುತ್ತಿದೆ. ಸಂಸತ್ತಿನಲ್ಲೂ ನಾವು ಚರ್ಚೆ ಮಾಡಲು ಅವಕಾಶ ಕೇಳುತ್ತಿವೆ. ಹೊರಗಡೆ ಚರ್ಚೆಯಾಗುವುದಾದರೇ ಪ್ರಜಾಪ್ರಭುತ್ವದ ದೊಡ್ಡ ಸಂಸ್ಥೆಯಲ್ಲಿ ಚರ್ಚೆಯಾಕಿಲ್ಲ ಎಂದು ಪ್ರಶ್ನಿಸಿದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ