ಸಮಾಜವಾದಿ ತತ್ವ ಸಿದ್ದಾಂತ ಮತ್ತು ಅಧಿಕಾರ

(ದಿನಾಂಕ 10 ಡಿಸೆಂಬರ್‌ 2024ರಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಡಾ. ರಾಮಮನೋಹರ್‌ ಲೋಹಿಯಾ ಅಧ್ಯಯನ ಪೀಠ ಏರ್ಪಡಿಸಿದ್ದ ಆನ್‌ ಲೈನ್‌ ಉಪನ್ಯಾಸ ಕಾರ್ಯಕ್ರಮದಲ್ಲಿ ಮಂಡಿಸಿದ ಪ್ರಬಂಧದ ಪರಿಷ್ಕೃತ ಲೇಖನ ರೂಪ )

-ನಾ ದಿವಾಕರ

ಭಾರತದ ರಾಜಕಾರಣದಲ್ಲಿ ಅತಿ ಹೆಚ್ಚು ಚರ್ಚೆಗೊಳಗಾಗಿರುವ ವಿದ್ಯಮಾನ ಎಂದರೆ ರಾಜಕೀಯ ಪಕ್ಷಗಳು ಹಾಗೂ ನಾಯಕರು ಅನುಕರಿಸುವ/ಅನುಸರಿಸುವ ತತ್ವ ಅಥವಾ ಸಿದ್ಧಾಂತಗಳು ಅಥವಾ ಅಧಿಕಾರ ಪಡೆಯುವ ಸಲುವಾಗಿ ಪ್ರತಿಪಾದಿಸುವ ತಾತ್ವಿಕ ನೆಲೆಗಳು. ಬಹುಪಾಲು ರಾಜಕೀಯ ಪಕ್ಷಗಳೂ ತಮ್ಮದೇ ಆದ ತಾತ್ವಿಕ/ಸೈದ್ಧಾಂತಿಕ ನೆಲೆಗಳನ್ನು ಹೊಂದಿರುತ್ತವೆ. ಅಧಿಕಾರ ರಾಜಕಾರಣದ ವ್ಯಾಪ್ತಿಯಿಂದ ಹೊರತಾಗಿಯೂ ತಮ್ಮ ತಾತ್ವಿಕತೆಯನ್ನು ಕಾಪಾಡಿಕೊಂಡು ಸಾಮಾನ್ಯ ಜನತೆಯ ನಡುವೆ ತತ್ವಾಧಾರಿತ ರಾಜಕಾರಣದ ಬಗ್ಗೆ ಸಂವಾದದಲ್ಲಿ ತೊಡಗಿರುತ್ತವೆ. ಸಮಾಜವಾದಿ

ಮಾರ್ಕ್ಸ್‌ , ಗಾಂಧಿ, ಲೋಹಿಯಾ, ಜೆಪಿ, ಅಂಬೇಡ್ಕರ್‌, ಪೆರಿಯಾರ್‌ ಮುಂತಾದ ಅನೇಕ ದಾರ್ಶನಿಕ ನಾಯಕರು ಬಿಟ್ಟುಹೋಗಿರುವ ತತ್ವಗಳನ್ನು ತಮ್ಮ ಸಮಕಾಲೀನ ರಾಜಕಾರಣದ ಅನುಕೂಲತೆಗಳಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾ ಸಾಗಿ ಬಂದಿರುವ ಬಂಡವಾಳಿಗ ಪಕ್ಷಗಳು (ಬೂರ್ಷ್ವಾ ಪಕ್ಷಗಳು) ಕಾಲಕಾಲಕ್ಕೆ ಈ ತತ್ವಗಳ ನಮ್ಯತೆ (flexibility ) ಮತ್ತು ಸಮಯಕ್ಕೆ ತಕ್ಕಂತೆ ಹಿಗ್ಗಿಸುವ/ಕುಗ್ಗಿಸುವ ಸ್ಥಿತಿಸ್ಥಾಪಕತ್ವದ ಗುಣವನ್ನು (Elasticity) ಬಳಸಿಕೊಳ್ಳುತ್ತಾ ಅಧಿಕಾರ ರಾಜಕಾರಣದ ಒಂದು ಭಾಗವಾಗಿ ಉಳಿದುಕೊಂಡು ಬೆಳೆಯುತ್ತಾ ಬಂದಿವೆ.

ತತ್ವ ಮತ್ತು ಸಿದ್ಧಾಂತ , ಇವೆರಡರ ನಡುವಿನ ವ್ಯತ್ಯಾಸವನ್ನು ಸಮಕಾಲೀನ ಯುಗದ ಯುವ ಸಮೂಹ ಗಂಭೀರವಾಗಿ ಅರ್ಥಮಾಡಿಕೊಳ್ಳಬೇಕಿದೆ. ತತ್ವ ಎನ್ನುವುದು ಒಂದು ಸಾಮಾಜಿಕ-ರಾಜಕೀಯ-ಸಾಂಸ್ಕೃತಿಕ ನಡಿಗೆಯ ಮಾದರಿ. ವ್ಯಕ್ತಿ, ಪಕ್ಷ ಅಥವಾ ಸಂಘಟನೆ ಯಾವ ಮಾರ್ಗದಲ್ಲಿ ಸಾಗಬೇಕು, ಯಾವ ಸಾಮಾಜಿಕ ಆಶಯಗಳನ್ನು ಹೊಂದಿರಬೇಕು, ಸಾಂಸ್ಕೃತಿಕವಾಗಿ ಯಾವ ನೆಲೆಗಳನ್ನು ಅವಲಂಬಿಸಬೇಕು, ಸಾಮಾಜಿಕ ಸಂಘರ್ಷದಲ್ಲಿ ಯಾವ ಮಾರ್ಗ ಅನುಸರಿಸಬೇಕು, ಸಮಾಜ ಸುಧಾರಣೆಗಳಿಗೆ ಹೇಗೆ ತೆರೆದುಕೊಳ್ಳಬೇಕು ಇತ್ಯಾದಿ ಮಾರ್ಗದರ್ಶಿ ಸೂತ್ರಗಳನ್ನು ತತ್ವಗಳು ನಿರ್ದೇಶಿಸುತ್ತವೆ. ಮಹಾತ್ಮ ಗಾಂಧಿ, ಡಾ. ರಾಮ ಮನೋಹರ್‌ ಲೋಹಿಯಾ ಮತ್ತು ಒಂದು ನೆಲೆಯಲ್ಲಿ ಡಾ. ಬಿ.ಆರ್.‌ ಅಂಬೇಡ್ಕರ್‌ ಅವರ ತಾತ್ವಿಕ ನೆಲೆಗಳನ್ನೂ ಈ ಚೌಕಟ್ಟಿನೊಳಗೆ ವ್ಯಾಖ್ಯಾನಿಸಬಹುದು. ಅಂಬೇಡ್ಕರ್‌ ಅವರ ತಾತ್ವಿಕತೆ ಈ ನಿಟ್ಟಿನಲ್ಲಿ ಹೆಚ್ಚು ಸೈದ್ಧಾಂತಿಕ ಸ್ಪರ್ಶ ಪಡೆದುಕೊಳ್ಳುತ್ತದೆ.

ಇದನ್ನೂ ಓದಿ: ಹೂಲಿಹಳ್ಳಿ ಗ್ರಾಮಕ್ಕೆ ಸಮರ್ಪಕವಾಗಿ ಬಸ್ ಬಿಡುವಂತೆ ಆಗ್ರಹ: ವಿದ್ಯಾರ್ಥಿಗಳು ಊರಿನ ಗ್ರಾಮಸ್ಥರ ಪ್ರತಿಭಟನೆ

ಮತ್ತೊಂದೆಡೆ ಸಿದ್ದಾಂತ ಎನ್ನುವುದು ಒಂದು ವಿಶಾಲ ಸಂರಚನೆಗೊಳಗಾದ, ಆಳವಾದ ವೈಚಾರಿಕ ಪ್ರಜ್ಞೆಯನ್ನು ಅಳವಡಿಸಿಕೊಳ್ಳುವ ತತ್ವ ಅಥವಾ ತಾತ್ವಿಕತೆ ಆಗಿರುತ್ತದೆ. ಸಿದ್ದಾಂತ ಎನ್ನುವುದು ವಿಶಾಲ ಸಮಾಜದ (broader society) ಎಲ್ಲ ಸ್ತರಗಳನ್ನೂ, ಎಲ್ಲ ಆಯಾಮಗಳನ್ನೂ, ಎಲ್ಲ ವಲಯಗಳನ್ನೂ ಪ್ರಭಾವಿಸುತ್ತದೆ ಮತ್ತು ಕಾಲಕಾಲಕ್ಕೆ ನಿರ್ದೇಶಿಸುತ್ತಿರುತ್ತದೆ. ಸಮಾಜದ ಮೇಲ್ಪದರ, ಮಧ್ಯಮ ಸ್ತರಗಳನ್ನು ದಾಟಿ, ಸಾಮಾಜಿಕ ಪಿರಮಿಡ್ಡಿನ  ತಳಪಾಯದ ಜನರ ಬದುಕಿನಲ್ಲೂ ತನ್ನ ಅಸ್ತಿತ್ವವನ್ನು ಕಾಣಲು ಬಯಸುತ್ತದೆ. ಸಿದ್ಧಾಂತಗಳು ಒಂದು ನೆಲೆಯಲ್ಲಿ ಸ್ಥಿರತೆಯನ್ನು ಕಂಡುಕೊಂಡರೂ, ಜಡಗಟ್ಟುವುದಿಲ್ಲ.

ಜಡಗಟ್ಟಿದ ಸಿದ್ದಾಂತಗಳು ಚಲನಶೀಲತೆಯನ್ನು ಕಳೆದುಕೊಂಡು ಅಪ್ರಸ್ತುತವಾಗಿಬಿಡುತ್ತವೆ. ಜಗತ್ತಿನ ಎಲ್ಲ ರಾಜಕೀಯ ಸಿದ್ಧಾಂತಗಳೂ ಕಾಲಕಾಲಕ್ಕೆ ಮರುಪರಿಷ್ಕರಣೆಗೊಳಗಾಗುತ್ತಲೇ ಹೋಗುತ್ತವೆ. ಆದರೆ ಈ ಹಾದಿಯಲ್ಲಿ ತನ್ನ ಮೂಲ ಚಿಂತನಾ ಧಾರೆಯನ್ನು ಸಡಿಲವಾಗುವ ಅವಕಾಶಗಳನ್ನು ನೀಡುವುದಿಲ್ಲ. ರಾಜಕೀಯ ದೃಷ್ಟಿಯಿಂದ ನೋಡಿದಾಗ ಮಾರ್ಕ್ಸ್‌ವಾದವನ್ನು ಇದಕ್ಕೆ ಉದಾಹರಣೆಯಾಗಿ ನೋಡಬಹುದು. ಸಮಾಜವಾದ ಎನ್ನುವ ಒಂದು ಸೈದ್ಧಾಂತಿಕ ನೆಲೆಯಲ್ಲೂ ಇದರ ಎಳೆಯನ್ನು ಗುರುತಿಸಬಹುದು. ಹೀಗೆ ಭಿನ್ನ ಚಿಂತನಾ ಲಹರಿಯ ನೆಲೆಯಲ್ಲಿ ನೋಡಿದಾಗ ಎಲ್ಲ ತತ್ವಗಳಿಗೂ, ತಾತ್ವಿಕ ಪ್ರತಿಪಾದನೆಗಳಿಗೂ,  ಎಲ್ಲ ಕಾಲಗಳಲ್ಲೂ ಸೈದ್ಧಾಂತಿಕ ಚೌಕಟ್ಟುಗಳನ್ನು ನಿರ್ಮಿಸಲಾಗುವುದಿಲ್ಲ ಎನ್ನುವುದು ಸ್ಪಷ್ಟ.

ಅದೇ ವೇಳೆ ಸೈದ್ದಾಂತಿಕ ನೆಲೆಯಲ್ಲಿ ನಿಂತು ನೋಡುವಾಗ ಯಾವುದೇ ತತ್ವಗಳನ್ನೂ ವಿಮರ್ಶಿಸದೆ ಒಪ್ಪಿಕೊಳ್ಳಲೂ ಆಗುವುದಿಲ್ಲ. ಏಕೆಂದರೆ  ಸೈದ್ಧಾಂತಿಕ ಮಾದರಿಗಳಲ್ಲಿ ಸ್ಪಷ್ಟವಾದ ಗುರಿ, ಗುರಿ ಸಾಧನೆಯ ಮಾರ್ಗೋಪಾಯಗಳು ಹಾಗೂ ಅದಕ್ಕೆ ಅನುಸರಿಸಬೇಕಾದ ಕಾರ್ಯಸೂಚಿಗಳು ಸ್ಪಷ್ಟವಾಗಿರುತ್ತವೆ. ಸಿದ್ಧಾಂತ ಎನ್ನುವುದು ಸಮಾಜವನ್ನು ಕಟ್ಟುವ ಬುನಾದಿಯಾಗಿ ಕಾಣುತ್ತದೆ. ಸಾಮಾನ್ಯವಾಗಿ ಅದಕ್ಕೊಂದು ರಾಜಕೀಯ ಸ್ವರೂಪವೂ ಇರುತ್ತದೆ.

ಸಾಮಾಜಿಕ-ಆರ್ಥಿಕ ಅಸಮಾನತೆಗಳನ್ನು ತೊಡೆದುಹಾಕುವುದರಿಂದ ಸಂಪತ್ತಿನ ಸಮಾನ ಹಂಚಿಕೆಯವರೆಗೆ ಶೋಷಿತ-ದಮನಿತ ಜನತೆ ಅನುಸರಿಸಬೇಕಾದ ಕಾರ್ಯಮಾರ್ಗಗಳಿಗೆ ಒಪ್ಪಿತ ಸಿದ್ದಾಂತದ ಚೌಕಟ್ಟಿನೊಳಗೇ ಆರ್ಥಿಕ-ಸಾಂಸ್ಕೃತಿಕ-ಸಾಮಾಜಿಕ ಮಾದರಿಗಳನ್ನು ನಿರ್ವಚಿಸುವುದು ಯಾವುದೇ ಸಿದ್ಧಾಂತದ ಆದ್ಯತೆಯಾಗಿರುತ್ತದೆ. ಇಲ್ಲಿ ಅಳವಡಿಸಿಕೊಳ್ಳಬೇಕಾದ ಬೌದ್ಧಿಕ ಚಿಂತನಾ ಕ್ರಮಗಳು, ಭೌತಿಕ ಬೆಳವಣಿಗೆಯ ಹಾದಿಗಳು ಹಾಗೂ ಅನುಸರಿಸಬೇಕಾದ ಸಾಂಸ್ಕೃತಿಕ ಆಚರಣೆಗಳು ಸಿದ್ಧಾಂತಗಳ ಭಾರಕ್ಕೆ ಸಿಲುಕುವ ಸಂದರ್ಭಗಳನ್ನೂ ಇತಿಹಾಸದಲ್ಲಿ ಕಂಡಿದ್ದೇವೆ. ಒಂದು ಸೈದ್ಧಾಂತಿಕ ಸ್ಪಷ್ಟತೆ ಇದ್ದಲ್ಲಿ ಇಂತಹ ಅಪಭ್ರಂಶಗಳನ್ನು ತಪ್ಪಿಸುವುದು ಸಾಧ್ಯ.

ಸಮಾಜವಾದದ ಉಗಮ-ಬೆಳವಣಿಗೆ

ಈ ನೆಲೆಯಲ್ಲಿ ನಿಂತು ನೋಡಿದಾಗ ಸಮಾಜವಾದ ಎನ್ನುವ ತತ್ವ ಮತ್ತು ಸಿದ್ಧಾಂತವು ಇತಿಹಾಸದ ಬೇರೆ ಬೇರೆ ಹಂತಗಳಲ್ಲಿ ಉಗಮವಾಗಿರುವುದನ್ನು ಗಮನಿಸಬಹುದು. ಒಂದು ಸಾಮಾಜಿಕ ತತ್ವದ ರೂಪದಲ್ಲಿ ಉಗಮಿಸಿದ ಸಮಾಜವಾದಕ್ಕೆ ಸೈದ್ಧಾಂತಿಕ ರೂಪ ದೊರೆತದ್ದು ಫ್ರೆಂಚ್‌ ಕ್ರಾಂತಿಯ ಬಳಿಕ. 19ನೇ ಶತಮಾನದ ಔದ್ಯೋಗಿಕ ಕ್ರಾಂತಿ ಮತ್ತು ಅದರ ಪರಿಣಾಮವಾಗಿ ರೂಪುಗೊಂಡ ನಗರೀಕರಣದ ಪರಿಣಾಮವಾಗಿ ನಗರ-ಪಟ್ಟಣಗಳಲ್ಲಿ ದುಡಿಯುವ ವರ್ಗಗಳ ಸಂಖ್ಯೆ ಹೆಚ್ಚಾಗತೊಡಗಿತ್ತು. ಔದ್ಯೋಗಿಕ ಜಗತ್ತನ್ನು ಪ್ರವೇಶಿಸುವ ಅಸಂಖ್ಯಾತ ಜನರ ಜೀವನ, ಜೀವನೋಪಾಯ ಮತ್ತು ಭವಿಷ್ಯ ಆಳುವ ವರ್ಗಗಳ ಸಾಮಾಜಿಕ ಜವಾಬ್ದಾರಿಯಾಗಿ ಪರಿಣಮಿಸತ್ತು.

ಆಗ ತತ್ವ ಶಾಸ್ತ್ರಜ್ಞರು ಶ್ರಮಜೀವಿಗಳ ಬದುಕು ಬವಣೆಯನ್ನು ಗಮನಿಸಿ, ಅವರ ದುಸ್ಥಿತಿಯ ಬಗ್ಗೆ ಯೋಚನೆ ಮಾಡಲಾರಂಭಿಸಿದರು. ಸಮಾಜದ ಮತ್ತು ಆರ್ಥಿಕತೆಯ ಉನ್ನತಿಗೆ, ಪ್ರಗತಿಗೆ ಕಾರಣೀಭೂತರಾಗುವ ದುಡಿಮೆಯ ಕೈಗಳಿಗೆ ಸುಗಮ ಬದುಕಿನ ಹಾದಿಗಳನ್ನು ನಿರ್ಮಿಸಲು ತಾತ್ವಿಕ ಮಾರ್ಗದರ್ಶನಗಳನ್ನು, ಸೂತ್ರಗಳನ್ನು ರೂಪಿಸಲಾಯಿತು.

ಈ ಹಂತದಲ್ಲೇ, 1830ರ ದಶಕದ ಔದ್ಯೋಗಿಕ ಕ್ರಾಂತಿಯ ವಾತಾವರಣದಲ್ಲಿ ಸಮಾಜವಾದ ಎಂಬ ಪದವನ್ನು ಹೆಚ್ಚಿನ ಸಂದರ್ಭಗಳಲ್ಲಿ ತಾತ್ವಿಕ ಅಥವಾ ನೈತಿಕ ನಂಬಿಕೆಗಳನ್ನು ಬಿಂಬಿಸುವ ಚಿಂತನಾ ಕ್ರಮವಾಗಿ ಬಳಸಲಾಗುತ್ತಿತ್ತು. ಅಲೆಕ್ಸಾಂಡ್ರೆ ವಿನೆಟ್‌ ಎಂಬ ತತ್ವಶಾಸ್ತ್ರಜ್ಞ “ ಸಮಾಜವಾದ ಎಂದರೆ ಸರಳವಾಗಿ ವ್ಯಕ್ತಿವಾದದ ವಿರುದ್ಧ ಇರುವುದು ” ಎಂದು ಹೇಳುತ್ತಾನೆ. ರಾಬರ್ಟ್‌ ಓವನ್‌ ಇದಕ್ಕೆ ನೈತಿಕತೆಯ ಸ್ಪರ್ಶ ನೀಡುತ್ತಾನೆ. ಸಮಾಜದ ಎಲ್ಲ ಸ್ತರಗಳ ಜನರನ್ನೂ ಒಳಗೊಳ್ಳುವ ಮತ್ತು ಸಮಷ್ಟಿ ಚಿಂತನೆಯಲ್ಲಿ ಸಮಸ್ತರಿಗೂ ಸುಗಮ ಬದುಕು ಕಲ್ಪಿಸುವ ಒಂದು ಆಲೋಚನಾ ಕ್ರಮವಾಗಿ ಸಮಾಜವಾದ ರೂಪುಗೊಂಡಿತ್ತು. ಯುಟೋಪಿಯನ್‌ ಸಮಾಜವಾದಿಗಳು ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗಾಗಿ ಸಮಾಜವನ್ನು ಕಟ್ಟುವ ಚಿಂತನೆಗೆ ತೆರೆದುಕೊಂಡಿದ್ದರು.

ಕಾರ್ಲ್‌ ಮಾರ್ಕ್ಸ್‌ ಮತ್ತು ಫ್ರೆಡ್ರಿಕ್‌ ಏಂಗೆಲ್ಸ್ ಈ ಕಾಲ್ಪನಿಕ ಸಮಾಜವಾದವನ್ನು ಪುನರ್‌ ವ್ಯಾಖ್ಯಾನಿಸಿದ್ದೇ ಅಲ್ಲದೆ, ಸೈದ್ಧಾಂತಿಕ ನೆಲೆಯಲ್ಲಿ ನಿರಾಕರಿಸಿ ವೈಜ್ಞಾನಿಕ ಸಮಾಜವಾದವನ್ನು ಪ್ರತಿಪಾದಿಸಿದ್ದರು. ಬಂಡವಾಳ ಮತ್ತು ಸಮಾಜದ ಮೇಲೆ ಅದರ ಹಿಡಿತ, ಬಂಡವಾಳದ ಉತ್ಪಾದನೆ ಮತ್ತು ಕ್ರೋಢೀಕರಣಕ್ಕೆ ಅವಶ್ಯವಾದ  ಉತ್ಪಾದನಾ ಸಾಧನಗಳ ಮಾಲೀಕತ್ವ ಮತ್ತು ಉತ್ಪಾದನಾ ವಿಧಾನಗಳು ಮತ್ತು ಉತ್ಪಾದಕೀಯ ಶಕ್ತಿಗಳ ಮೇಲಿನ ಹಿಡಿತ ಯಾವುದೇ ಸಮಾಜದ ಜನರ ಆರ್ಥಿಕ ಪ್ರಗತಿಯನ್ನು ನಿರ್ಧರಿಸುತ್ತದೆ ಎಂಬ ಸೈದ್ಧಾಂತಿಕ ಚಿಂತನೆಯನ್ನು ಮಾರ್ಕ್ಸ್‌ ವೈಜ್ಞಾನಿಕ ನೆಲೆಯಲ್ಲಿ ನಿಷ್ಕರ್ಷೆಗೊಳಪಡಿಸಿದ್ದರು. ಈ ಆರ್ಥಿಕತೆಯಲ್ಲಿ ಬಂಡವಾಳಶಾಹಿಯಿಂದ ಉಂಟಾಗಬಹುದಾದ ಶೋಷಣೆ ಮತ್ತು ತಾರತಮ್ಯಗಳಿಂದ ಹೊರಬರಲು ಮತ್ತು ಸಮಾಜವಾದಿ ಸಿದ್ದಾಂತದಡಿ ಸಾಮಾಜಿಕ-ಆರ್ಥಿಕ ಸಮಾನತೆಯನ್ನು ಸಾಧಿಸಲು  ಶ್ರಮಜೀವಿ ವರ್ಗದ (proletarian) ಕ್ರಾಂತಿಯಿಂದ ಮಾತ್ರ ಸಾಧ್ಯ ಎಂದು ಪ್ರತಿಪಾದಿಸಿದರು.

ಈ ನಿಟ್ಟಿನಲ್ಲಿ ಸಮಾಜವಾದಿಗಳು ಬೇರೆಯಾಗಿ ಯೋಚಿಸುತ್ತಾರೆ.  ಹಿಂಸಾತ್ಮಕ ಹೋರಾಟ  ಅಥವಾ ಕ್ರಾಂತಿಕಾರಿ ಆಲೋಚನೆಗಳನ್ನು ಬದಿಗಿಟ್ಟು ಸಮಾಜ ಸುಧಾರಣೆಯ ಮುಖಾಂತರ, ಸಾಮಾಜಿಕ ಪರಿವರ್ತನೆಯ ಮೂಲಕ ಸಮಾನತೆಯನ್ನು ಸಾಧಿಸಬಹುದು ಎಂದು ಪ್ರತಿಪಾದಿಸುತ್ತಾರೆ. ಸಮಾಜದಲ್ಲಿ ಉತ್ಪಾದನೆಯಾಗುವ ಸಂಪತ್ತು  ಮತ್ತು ಅದಕ್ಕೆ ಪೂರಕವಾಗಿರುವ ಸಂಪನ್ಮೂಲಗಳು ಆರ್ಥಿಕವಾಗಿ ಒಂದೇ ವರ್ಗದಲ್ಲಿ ಕ್ರೋಢೀಕರಣವಾಗುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಹೋಗುವುದಿಲ್ಲ. ತತ್ವಶಾಸ್ತ್ರಜ್ಞ ರೂಸೋ ಇಂದ ಹಿಡಿದು ಗಾಂಧಿಯವರೆಗೂ ಸಂಪತ್ತು ಉಳ್ಳವರು ಸಮಾಜಕ್ಕೆ ಒಳ್ಳೆಯದನ್ನು ಮಾಡಲು ಸಂಪತ್ತನ್ನು ಬಳಸಬೇಕು ಎಂದೇ ಹೇಳುತ್ತಾರೆ. ಅದು ದಾನ ಧರ್ಮಗಳ ಮೂಲಕ, ಔದಾರ್ಯಯುತ ಕ್ರಮಗಳ ಮೂಲಕ ಸಾಧ್ಯ ಎಂದು  ಭಾವಿಸುತ್ತಾರೆ.

ಆದರೆ ಯಾವುದೇ ಸಮಾಜದಲ್ಲಿ ರಾಜ್ಯಾಡಳಿತದ ವ್ಯವಸ್ಥೆ ಇಲ್ಲದಿದ್ದರೆ ಈ ಔದಾರ್ಯದ ಕ್ರಮಗಳು ದಾನಗಳು ಜನರನ್ನು ತಲುಪುವುದಿಲ್ಲ ಎಂಬುದು ಕಟು ಸತ್ಯ. ಇಲ್ಲಿ ಹುಟ್ಟಿಕೊಳ್ಳುವ ಮಧ್ಯವರ್ತಿ ವರ್ಗಗಳ ಹಾವಳಿಯನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಇಲ್ಲಿ ರಾಜಕೀಯ ಅಧಿಕಾರ, ನಿರ್ವಹಣೆ ಮತ್ತು ನಿಯಂತ್ರಣದ ಪ್ರಶ್ನೆ ಉದ್ಭವಿಸುತ್ತದೆ. ರಾಜಪ್ರಭುತ್ವದ ಅಥವಾ ನಿರಂಕುಶಾಧಿಕಾರದ ಔದಾರ್ಯವಾಗಲೀ (Benevolent Dictatorship) ಅಧಿಕಾರಶಾಹಿಯ ಔದಾರ್ಯವಾಗಲೀ (Benevolent Beauracracy), ಉದಾರವಾದಿ ಪ್ರಜಾಸತ್ತಾತ್ಮಕ ಔದಾರ್ಯವಾಗಲೀ (Liberal Democractic Benevolence) ವಿವಿಧ ದೇಶಗಳಲ್ಲಿ ಈ ಪ್ರಯೋಗಗಳು ನಡೆದಿದ್ದು ವಿಫಲವಾಗಿರುವುದು ಚಾರಿತ್ರಿಕ ಸತ್ಯ.

ಭಾರತೀಯ ಸಮಾಜವಾದ

ಭಾರತದಲ್ಲಿ ಸಮಾಜವಾದದ ತತ್ವಗಳ ಪ್ರಭಾವ ಉಂಟಾಗಿದ್ದು ಸ್ವಾತಂತ್ರ್ಯ ಸಂಗ್ರಾಮದ ನಡುವೆ ಮತ್ತು ಹೋರಾಟಗಾರರ ನಡುವೆ. ಸ್ವಾತಂತ್ರ್ಯಾಂದೋಲನದ ಮುಂದಾಳತ್ವ ವಹಿಸಿದ್ದ ಕಾಂಗ್ರೆಸ್‌ನಲ್ಲೇ ಸಮಾಜವಾದಿ ಬಣ ಇದ್ದುದನ್ನೂ ಗುರುತಿಸಬಹುದು. ಈ ಸಮಾಜವಾದಿ ಚಿಂತನೆಗಳೇ ದಕ್ಷಿಣ ಭಾರತದ ಜಾತಿ ವಿರೋಧಿ ಹೋರಾಟ, ಬ್ರಾಹ್ಮಣೇತರ ರಾಜಕಾರಣ ಇತ್ಯಾದಿಗಳಿಗೆ ಬುನಾದಿಯಾಗಿದ್ದವು. ಇವರ ಪೈಕಿ ಮಾರ್ಕ್ಸ್‌ವಾದವನ್ನು ಒಪ್ಪಿದವರು ಕಮ್ಯುನಿಸ್ಟ್‌ ಬ್ಲಾಕ್‌ ರೂಪಿಸಿಕೊಂಡಿದ್ದು, ನಂತರದಲ್ಲಿ ಕಮ್ಯುನಿಸ್ಟ್‌ ಪಕ್ಷವಾಗಿ ಉಗಮಿಸಿತು. ಆದರೆ ಈ ಚಿಂತನಾ ಮಾದರಿಯಿಂದ ಹೊರಗುಳಿದವರು ಸ್ವಾತಂತ್ರ್ಯಾನಂತರದಲ್ಲೂ ಸಮಾಜವಾದವನ್ನು ಒಂದು ರಾಜಕೀಯ ತತ್ವವಾಗಿ ಮುಂದುವರೆಸಿದ್ದರು. ಅವರಲ್ಲಿ ಪ್ರಮುಖವಾಗಿ ಕಾಣುವುದು ರಾಮ ಮನೋಹರ್‌ ಲೋಹಿಯಾ , ಜಯಪ್ರಕಾಶ್‌ ನಾರಾಯಣ್(‌ ಜೆಪಿ), ಮಧು ಲಿಮಯೆ, ಮಧು ದಂಡವತೆ ಮುಂತಾದವರು. ಈ ಚಿಂತಕರು ಗಾಂಧಿ ಪ್ರಣೀತ ಗ್ರಾಮಭಾರತದ ಪರಿಕಲ್ಪನೆಯಲ್ಲಿ ಸಮಾಜವಾದವನ್ನು ಅನುಸರಿಸುವ ಮೂಲಕ ಸಾಮಾಜಿಕ ಸಮಾನತೆಯ ಬಗ್ಗೆ ಯೋಚಿಸಿದ್ದರು.

ಭಾರತದ ರಾಜಕೀಯದಲ್ಲಿ ಸಮಾಜವಾದ ಎಂದರೆ ಲೋಹಿಯಾವಾದ ಎಂದೇ ಅರ್ಥೈಸಬೇಕಾಗುತ್ತದೆ. ಏಕೆಂದರೆ ಭಾರತದ ಕಮ್ಯುನಿಸ್ಟ್‌ ಪಕ್ಷಗಳು ʼಸಮಾಜವಾದಕ್ಕೆ ಭಾರತದ ಮಾರ್ಗವನ್ನುʼ (Indian Way to Socialism) ರೂಪಿಸಲಿಲ್ಲ. ಬದಲಾಗಿ ಕಮ್ಯುನಿಸ್ಟ್ ಪಕ್ಷಗಳು ವೈಜ್ಞಾನಿಕ ಸಮಾಜವಾದ ಮತ್ತು ಕಮ್ಯುನಿಸಂ ಪ್ರತಿಪಾದಿಸುತ್ತಲೇ, ರಷ್ಯಾ ಮಾದರಿ ಅಥವಾ ಚೀನಾ ಮಾದರಿಯನ್ನೇ ಅಳವಡಿಸಿಕೊಂಡರು. ತತ್ಪರಿಣಾಮವಾಗಿ ಕಮ್ಯುನಿಸ್ಟ್‌ ರಾಜಕೀಯ ಮತ್ತು ಚಳುವಳಿಗಳು Dogmatic ಆಗಿ ಮಾರ್ಕ್ಸ್‌ ಪ್ರತಿಪಾದಿಸುವ Base and Superstructure ತತ್ವಗಳಿಗೆ ಬದ್ಧರಾಗಿದ್ದವು . ಹಾಗಾಗಿ ಕಮ್ಯುನಿಸ್ಟ್‌ ಚಳುವಳಿ ಮತ್ತು ರಾಜಕೀಯ ಎರಡೂ ಸಹ ಭಾರತದ ಜಾತಿ ಪ್ರಶ್ನೆಯನ್ನು ಸೈದ್ಧಾಂತಿಕ ನೆಲೆಯಲ್ಲಿ ನಿರ್ವಚಿಸಲಿಲ್ಲ. ಹಾಗಾಗಿ ಕಮ್ಯುನಿಸ್ಟ್‌ ಪಕ್ಷಗಳ ರಾಜಕಾರಣವು ವರ್ಗ ಹೋರಾಟದ ಚೌಕಟ್ಟಿನಲ್ಲಿ ಕಾಣಬಹುದಾಗಿದ್ದ ಜಾತಿ ವೈರುಧ್ಯಗಳನ್ನು ಗುರುತಿಸುವುದರಲ್ಲಿ ವಿಫಲವಾಗಿತ್ತು. ವರ್ಗ ಹೋರಾಟದಲ್ಲಿ ಯಶಸ್ವಿಯಾಗಿ ಆರ್ಥಿಕ ಸಮಾನತೆ ಸಾಧ್ಯವಾದರೆ ಜಾತಿ ಇಲ್ಲವಾಗುತ್ತದೆ ಎಂಬ ಸರಳೀಕೃತ ತತ್ವವನ್ನು ತಮ್ಮದಾಗಿಸಿಕೊಂಡಿದ್ದವು.

ಆದರೆ ಭಾರತದಲ್ಲಿ ಜಾತಿ ಮತ್ತು ವರ್ಗ ಎರಡೂ ಸಹ ಅಂತರ್‌ ಸಂಬಂಧ ಹೊಂದಿರುವ ವಿದ್ಯಮಾನಗಳು. “ಭಾರತದಲ್ಲಿ ಪ್ರತಿಯೊಂದು ಜಾತಿಯೂ ತನ್ನ ನೆಲೆಯಲ್ಲಿ ಒಂದು ವರ್ಗವಾಗಿರುತ್ತದೆ ” (Every Caste in India is a Class by itself) ಎಂದು ಅಂಬೇಡ್ಕರ್‌ ಒಂದೆಡೆ ಹೇಳುತ್ತಾರೆ. ಹಾಗೆಯೇ Class cuts across caste ಅಂದರೆ ವರ್ಗವು ಜಾತಿ ಶ್ರೇಣಿಯನ್ನು ಲಂಬಗತಿಯಲ್ಲಿ (Vertically) ಹಂತಹಂತದಲ್ಲೂ ಭೇದಿಸುತ್ತಲೇ ಹೋಗುತ್ತದೆ ಎಂದು ಅಂಬೇಡ್ಕರ್‌ ವ್ಯಾಖ್ಯಾನಿಸಿದ್ದರು. ಇದನ್ನು ಸ್ಪಷ್ಟವಾಗಿ ಗುರುತಿಸಿ ಭಾರತದ ಸಮಾಜವಾದಕ್ಕೆ ಹೊಸ ಆಯಾಮವನ್ನು ನೀಡಲು ಯತ್ನಿಸಿದವರು ರಾಮಮನೋಹರ್‌ ಲೋಹಿಯಾ. ಹಾಗಾಗಿಯೇ ಜಾತಿ ಕೇಂದ್ರಿತ ಶೋಷಣೆಯ ನೆಲೆಗಳನ್ನು ಅರ್ಥೈಸುವಲ್ಲಿ ಲೋಹಿಯಾ ಯಶಸ್ವಿಯಾಗುತ್ತಾರೆ. ಅಷ್ಟೇ ಅಲ್ಲದೆ ಸಮಾಜವಾದಿ ತತ್ವಗಳನ್ನು ಸಂಸದೀಯ ಪ್ರಜಾತಂತ್ರದ ಒಂದು ಭಾಗವಾಗಿ ರೂಪಿಸಿ ರಾಜಕೀಯ ಪಕ್ಷಗಳ ಉದಯಕ್ಕೆ ಲೋಹಿಯಾ ಕಾರಣರಾಗುತ್ತಾರೆ. ಇಂದಿಗೂ ಸಹ ದೇಶದ ಎಲ್ಲ ರಾಜ್ಯಗಳಲ್ಲೂ, ಪ್ರಾದೇಶಿಕ ನೆಲೆಯಲ್ಲಿ ಲೋಹಿಯಾವಾದಿಗಳು ಪಕ್ಷಗಳನ್ನು ಸ್ಥಾಪಿಸಿಕೊಂಡಿದ್ದಾರೆ, ಕಾಂಗ್ರೆಸ್‌ ಪಕ್ಷದೊಳಗೂ ಲೋಹಿಯಾವಾದಿಗಳು ಪ್ರಭಾವ ಹೊಂದಿದ್ದಾರೆ.

ಆದರೆ ಈ ಜಾತಿ ವ್ಯವಸ್ಥೆಯಿಂದ ಶೋಷಣೆಗೊಳಗಾದ ತಳಸಮಾಜದ ಶೋಷಿತರ ವಿಮೋಚನೆಯ ಹಾದಿಯಲ್ಲಿ ಎದುರಾಗುವ ಊಳಿಗಮಾನ್ಯ ವ್ಯವಸ್ಥೆ, ಅದನ್ನು ಪೋಷಿಸುವ ಆಧುನಿಕ ನವ ಉದಾರವಾದಿ ಬಂಡವಾಳಶಾಹಿ ಹಾಗೂ ಇವೆರಡನ್ನೂ ಒಂದೇ ಸ್ತರದಲ್ಲಿಟ್ಟು ಬೆಳೆಸುವ ಪಿತೃಪ್ರಧಾನತೆಯನ್ನು ಎದುರಿಸಲು ಅಗತ್ಯವಾದ ಸೈದ್ಧಾಂತಿಕ ಚೌಕಟ್ಟು ಲೋಹಿಯಾವಾದದಲ್ಲಿ ಗುರುತಿಸುವುದು ಕಷ್ಟ. ಹಾಗಾಗಿಯೇ ಲೋಹಿಯಾವಾದ ಅಥವಾ ಭಾರತೀಯ ಸಮಾಜವಾದವನ್ನು ತಾತ್ವಿಕ ನೆಲೆಯಲ್ಲಿ ಕಾಣಬಹುದೇ ಹೊರತು ಸೈದ್ಧಾಂತಿಕ ಸ್ಪರ್ಶ ನೀಡಲಾಗುವುದಿಲ್ಲ. ಹಾಗಾಗಿಯೇ ವೈಚಾರಿಕತೆಯ ನೆಲೆಯಲ್ಲಿ ಸಮಾಜವಾದಿಗಳ ರಾಜಕಾರಣವು ಬಿಜೆಪಿ-ಆರೆಸ್ಸೆಸ್‌ನ ಸೈದ್ಧಾಂತಿಕ ಸೆಳೆತಕ್ಕೆ ಸುಲಭ ತುತ್ತಾಗುವುದನ್ನು ಕಾಣಬಹುದು. ತಾತ್ವಿಕ ನೆಲೆಗಳನ್ನು ದಾಟಿ ಸೈದ್ಧಾಂತಿಕ ಚೌಕಟ್ಟನ್ನು ನಿರ್ಮಿಸದಿರುವ ಯಾವುದೇ ಜನಾಂದೋಲನಗಳಲ್ಲಿ ಈ ಕೊರತೆಯನ್ನು ಗುರುತಿಸಬಹುದು. ಇದು ಸಮಾಜವಾದಿ ರಾಜಕಾರಣದ ಸೈದ್ದಾಂತಿಕ ಕೊರತೆ ಎನ್ನಬಹುದು.

ಲೋಹಿಯಾವಾದ ಅಥವಾ ಭಾರತದ ಸಮಾಜವಾದವು ರೂಢಿಸಿಕೊಂಡ ಈ ಚಂಚಲತೆ (volatility) ಅಥವಾ ನಮ್ಯತೆಯು (flexibility) ಅಧಿಕಾರ ರಾಜಕಾರಣದಲ್ಲಿ ಅವಕಾಶವಾದಕ್ಕೆ ತಕ್ಕ ಭೂಮಿಕೆಯನ್ನು ಒದಗಿಸುತ್ತದೆ. ಬಂಡವಾಳಗಾರರಿಂದಲೇ ನಿರ್ದೇಶಿಸಿ, ನಿಯಂತ್ರಿಸಿ, ನಿರ್ವಹಿಸಲ್ಪಡುವ ಬೂರ್ಷ್ವಾ ಪ್ರಜಾಪ್ರಭುತ್ವದಲ್ಲಿ ಬಹುತೇಕ ತಾತ್ವಿಕ ನೆಲೆಗಳು ಅಂತಿಮವಾಗಿ ಅಧಿಕಾರ ಕೇಂದ್ರಗಳಲ್ಲಿ ಅಸ್ತಿತ್ವ ಕಂಡುಕೊಳ್ಳುವುದನ್ನು ಇಲ್ಲಿ ಗಮನಿಸಬೇಕಾಗುತ್ತದೆ. ಹಾಗಾಗಿ ಬಂಡವಾಳದ ಹಾಗೂ ಬಂಡವಾಳಶಾಹಿ ಆರ್ಥಿಕತೆಯ ಪರಿಣಾಮ, ಪ್ರಭಾವಗಳನ್ನು ವೈಜ್ಞಾನಿಕ ನೆಲೆಯಲ್ಲಿ ವಿಶ್ಲೇಷಿಸದೆ ಹೋದರೆ, ಭಾರತದಲ್ಲಿ ಈ ಆರ್ಥಿಕತೆ ಸೃಷ್ಟಿಸುತ್ತಿರುವ ಅಸಮಾನತೆಗಳನ್ನು ಅರ್ಥಮಾಡಿಕೊಳ್ಳಲಾಗುವುದಿಲ್ಲ. ಭಾರತದ ಶ್ರಮಿಕ ವರ್ಗದಲ್ಲಿ ಬಹುಸಂಖ್ಯಾತರಾದ ತಳಸಮುದಾಯಗಳು (Subaltern classes) ಎದುರಿಸುವ ಶೋಷಣೆ ಮತ್ತು ತಾರತಮ್ಯಗಳನ್ನು ವಿಶ್ಲೇಷಿಸಲಾಗುವುದಿಲ್ಲ. ಭಾರತದ ಸಮಾಜವಾದಿ ಚಿಂತನೆಗಳು ಈ ಆರ್ಥಿಕತೆಯ ನೆಲೆಯಲ್ಲಿ ರೂಪುಗೊಂಡಿಲ್ಲ.

ಹಾಗಾಗಿಯೇ ಬಹುಮಟ್ಟಿಗೆ ಲೋಹಿಯಾವಾದ ಮತ್ತು ಸಮಾಜವಾದಿ ತತ್ವಗಳಿಂದ ಪ್ರೇರಣೆ ಪಡೆದು ನಿರಂತರ ಸಂಘರ್ಷದಲ್ಲಿ ತೊಡಗಿರುವ ಭಾರತದ ರೈತ ಚಳುವಳಿಗಳು, ದಲಿತ ಚಳುವಳಿಗಳು ನವ ಉದಾರವಾದ ಮತ್ತು ವರ್ತಮಾನದ ಆಪ್ತ ಬಂಡವಾಳಶಾಹಿ ಆರ್ಥಿಕತೆಯನ್ನು ಸಮರ್ಥವಾಗಿ ಎದುರಿಸಲಾಗುತ್ತಿಲ್ಲ. ಇಲ್ಲಿ ಅತ್ಯವಶ್ಯವಾದ ಒಂದು ಸೈದ್ಧಾಂತಿಕ ನೆಲೆಯನ್ನು ಭಾರತದ ಸಮಾಜವಾದಿ ಚಿಂತನೆಗಳು ಒದಗಿಸುವುದೂ ಇಲ್ಲ. ಆದ್ದರಿಂದಲೇ  ರೈತ ಸಂಘಟನೆಗಳು, ದಲಿತ ಚಳುವಳಿಗಳು ಸ್ಪಷ್ಟ ರಾಜಕೀಯ ನಿಲುವು ಇಲ್ಲದಂತಾಗಿವೆ. ಅಂಬೇಡ್ಕರ್‌ ಪ್ರತಿಪಾದಿಸಿದ ಸಮಾಜವಾದಿ ತತ್ವಗಳು ಕಮ್ಯುನಿಸ್ಟ್‌ ಸಿದ್ಧಾಂತದಡಿಯಲ್ಲಿ ರೂಪುಗೊಳ್ಳದಿದ್ದರೂ, ಸಾರ್ವಜನಿಕ ಸಂಪತ್ತಿನ ಹಾಗೂ ಉತ್ಪಾದನಾ ಸಾಧನಗಳ ಒಡೆತನವು ಖಾಸಗಿ ಬಂಡವಾಳಶಾಹಿಗಳ ಬಳಿ ಇರಕೂಡದು ಎಂಬ ಸ್ಪಷ್ಟ ನಿಲುವನ್ನು ಹೊಂದಿದ್ದರು. ಭೂಮಿ ಮತ್ತು ಸಾರ್ವಜನಿಕ ಸಂಪನ್ಮೂಲ-ಸಂಪತ್ತು ಸರ್ಕಾರದ ಒಡೆತನದಲ್ಲಿರಬೇಕು ಎನ್ನುವುದು ಅಂಬೇಡ್ಕರ್‌ ಅವರ ಸಮಾಜವಾದಿ ಆಶಯವಾಗಿತ್ತು. ಇಂದು ಅಂಬೇಡ್ಕರ್‌ವಾದವನ್ನೇ ಅನುಸರಿಸುವ ಬಹುಜನ ಸಮಾಜ ಪಕ್ಷ ಮತ್ತಿತರ ಪಕ್ಷಗಳೂ ಸಹ ಈ ಆಶಯದತ್ತ ಗಮನಹರಿಸುತ್ತಿಲ್ಲ.

ಈ ಸೈದ್ಧಾಂತಿಕ ಕೊರತೆಯ ಪರಿಣಾಮವಾಗಿ ರೈತ ಚಳುವಳಿಗಳಲ್ಲಿ, ಭಾರತದ ಕೃಷಿ ಕ್ಷೇತ್ರದೊಳಗಿನ ಶ್ರಮಜೀವಿ ವರ್ಗ,  ಕೃಷಿ ಕಾರ್ಮಿಕರು ಪ್ರಧಾನವಾಗಿ ಪ್ರತಿನಿಧಿಸಲ್ಪಡುವುದಿಲ್ಲ. ಸಣ್ಣ, ಅತಿಸಣ್ಣ ಮತ್ತು ದೊಡ್ಡ ರೈತರೇ ರೈತ ಚಳುವಳಿಯಲ್ಲಿ ಪ್ರಧಾನವಾಗಿ ಕಾಣುತ್ತಾರೆ. ಭೂರಹಿತರ ಪರವಾದ ಹೋರಾಟಗಳನ್ನು ರೈತ ಸಂಘಟನೆಗಳು ಕೈಗೆತ್ತಿಕೊಳ್ಳುವುದು ಅಪರೂಪ. ಭೂಮಿ ಹೊಂದಿರುವ ರೈತ ಸಮುದಾಯವನ್ನು ಪ್ರತಿನಿಧಿಸುವ ಲೋಹಿಯಾವಾದದಿಂದ ಪ್ರೇರಿತವಾದ ರೈತ ಸಂಘಟನೆಗಳು ಸಾಂಘಿಕವಾಗಿ ಸಮಾನತೆಯನ್ನು ಪ್ರತಿಪಾದಿಸಿದರೂ, ಅಂತಿಮವಾಗಿ ಭೂಮಿ ಇರುವ ರೈತಾಪಿ  ಸಮುದಾಯವನ್ನು ಒಂದು ವರ್ಗವಾಗಿಯೇ ಪರಿಗಣಿಸುತ್ತದೆ. ಇಲ್ಲಿ ವರ್ಗ ಹಿತಾಸಕ್ತಿಯೇ ಪ್ರಧಾನವಾಗುವುದರಿಂದ, ಹೋರಾಟದ ನಡುವೆಯೇ ಉದ್ಭವಿಸಬಹುದಾದ ವರ್ಗ ಸಂಘರ್ಷಕ್ಕೆ ಈ ತಾತ್ವಿಕ ನೆಲೆಗಳಲ್ಲಿ ಉತ್ತರವೂ ದೊರೆಯುವುದಿಲ್ಲ.

ಮಾರ್ಕ್ಸ್‌ವಾದದ ಸೈದ್ಧಾಂತಿಕ ನೆಲೆಯಲ್ಲಿ ನಿಂತು ಕಾಣಲು ಸಾಧ್ಯವಾಗುವ ಸಾಮಾಜಿಕ ವೈರುಧ್ಯಗಳನ್ನು, ಆರ್ಥಿಕ ವಿರೋಧಾಭಾಸಗಳನ್ನು ಸಮಾಜವಾದಿ ನೆಲೆಯಲ್ಲಿ ಗುರುತಿಸಲು ವಿಫಲವಾಗಿರುವುದರಿಂದಲೇ ಲೋಹಿಯಾ-ಅಂಬೇಡ್ಕರ್‌ವಾದಿಗಳು ಯಾವುದೋ ಒಂದು ರೀತಿಯಲ್ಲಿ ಬಲಪಂಥೀಯ ಸೈದ್ಧಾಂತಿಕ ನೆಲೆಗಳಲ್ಲಿ ಆಶ್ರಯ ಪಡೆದುಕೊಳ್ಳುವಂತಾಗುತ್ತದೆ. ನೀತಿಶ್‌ ಕುಮಾರ್‌ ಅವರ ಜೆಡಿಯು, ರಾಮ್‌ವಿಲಾಸ್‌ ಪಾಸ್ವಾನ್‌ ಅವರ ಪಕ್ಷ, -ಬಿಎಸ್‌ಪಿಯ ಮಾಯಾವತಿ , ಬಿಹಾರದ ರಾಷ್ಟ್ರೀಯ ಜನತಾದಳ, ಮಹಾರಾಷ್ಟ್ರದ ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ ಮತ್ತು ಉತ್ತರಪ್ರದೇಶದ ಸಮಾಜವಾದಿ ಪಕ್ಷವೂ ಸಹ  ಸಹ ಇದೇ ದ್ವಂದ್ವವನ್ನು ಎದುರಿಸುತ್ತದೆ. ಈ ಪಕ್ಷಗಳಲ್ಲಿ ಕೆಲವು ಬಿಜೆಪಿಯಿಂದ ಅಂತರ ಕಾಯ್ದುಕೊಂಡರೂ ದಲಿತ ಸಮುದಾಯವನ್ನು, ತಳಸಮುದಾಯಗಳನ್ನು ನಿರಂತರ ಶೋಷಣೆಗೊಳಪಡಿಸುವ ನವ ಉದಾರವಾದಿ ಬಂಡವಾಳಶಾಹಿಯ ವಿರುದ್ಧ ದನಿ ಎತ್ತುವುದಿಲ್ಲ.

ಅಧಿಕಾರ ರಾಜಕಾರಣದ ಪ್ರಭಾವ

ಭಾರತದ ಸಂದರ್ಭದಲ್ಲಿ ಸಮಾಜವಾದವನ್ನು ಸಂಸದೀಯ ಅಧಿಕಾರ ಅಥವಾ ರಾಜಕೀಯ ಅಧಿಕಾರದ ಚೌಕಟ್ಟಿನಲ್ಲಿ ನೋಡುವಾಗ ಎರಡು ನೆಲೆಗಳಲ್ಲಿ ನಿಷ್ಕರ್ಷೆ ಮಾಡಬೇಕಾಗುತ್ತದೆ. ಮೊದಲನೆಯದು ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ಸಮಾಜವಾದಿಗಳು, ಸಮಾಜವಾದಿ ಪಕ್ಷಗಳು ನಿರ್ವಹಿಸಿದ, ನಿರ್ವಹಿಸುತ್ತಿರುವ ಪಾತ್ರ ಮತ್ತು ಈ ಚೌಕಟ್ಟಿನ ಒಳಗೇ ಪ್ರಾದೇಶಿಕ ರಾಜಕೀಯದಲ್ಲಿ ಸಮಾಜವಾದದ ಪ್ರಭಾವ ಮತ್ತು ಪರಿಣಾಮ. ವಿಶ್ವದ ಯಾವುದೇ ದೇಶದಲ್ಲಾದರೂ ಸಾಮಾನ್ಯವಾಗಿ ಸಮಾಜವಾದಿಗಳು ಹೆಚ್ಚಾಗಿ ಎಡಪಂಥೀಯ ರಾಜಕಾರಣದೊಂದಿಗೇ ಗುರುತಿಸಿಕೊಳ್ಳುತ್ತಾರೆ. ಕಮ್ಯುನಿಸ್ಟ್‌ ಪಕ್ಷಗಳು ಪ್ರಬಲವಾಗಿಲ್ಲದ ಕಡೆಗಳಲ್ಲಿ ಎಡಪಂಥೀಯ ಚಿಂತನೆಗಳಿಗೆ ತೆರೆದುಕೊಂಡಿರುತ್ತಾರೆ.

ಆದರೆ ಭಾರತದ ರಾಜಕಾರಣದಲ್ಲಿ ಲೋಹಿಯಾ ಕಾಲಘಟ್ಟದಿಂದಲೂ ಸಹ ಸಮಾಜವಾದಿ ರಾಜಕಾರಣವು ಬಲಪಂಥೀಯ ರಾಜಕೀಯದೊಂದಿಗೆ ಗುರುತಿಸಿಕೊಂಡಿದೆ. ಆರೆಸ್ಸೆಸ್‌ ಹಿನ್ನೆಲೆಯಿಂದ ಬಂದ ಬಿಜೆಪಿಯ ಹಿರಿಯ ನಾಯಕ ದಿವಂಗತ ಅಟಲ್‌ ಬಿಹಾರಿ ವಾಜಪೇಯಿ ಸಹ ಗಾಂಧಿ ಸಮಾಜವಾದದ ಬಗ್ಗೆ ಮಾತನಾಡುತ್ತಿದ್ದುದನ್ನು ಸ್ಮರಿಸಬಹುದು. ಗಾಂಧಿ ಪ್ರಣೀತ ಆರ್ಥಿಕತೆಯ ನೆಲೆಯಲ್ಲಿ ರೂಪುಗೊಂಡ ಸಮಾಜವಾದಿ ಚಳುವಳಿಗಳು, ಲೋಹಿಯಾ ಚಿಂತನೆಯ ಮೂಲಕ ಜಾತಿ ವೈರುಧ್ಯಗಳನ್ನು ಅರಿತು, ಪ್ರಾದೇಶಿಕವಾಗಿ ಪ್ರಾಬಲ್ಯ ಪಡೆದಿರುವುದನ್ನು ವಿಶೇಷವಾಗಿ ಉತ್ತರ ಭಾರತದಲ್ಲಿ ಗುರುತಿಸಬಹುದಾದರೂ, ಇದು ಸಮಾಜವಾದದ ಮೂಲ ಸಿದ್ಧಾಂತವನ್ನು ಬದಿಗಿರಿಸಿರುವುದು ಸ್ಪಷ್ಟವಾಗಿ ಕಾಣುತ್ತದೆ.

ಇಲ್ಲಿ ಉದ್ಭವಿಸುವ ವರ್ಗ ಹಿತಾಸಕ್ತಿಯ ಪರಿಣಾಮವಾಗಿಯೇ ಉತ್ತರ ಭಾರತದಲ್ಲಿ ಬಹುತೇಕ ಸಮಾಜವಾದಿ ಚಳುವಳಿಗಳು ಮತ್ತು ಪಕ್ಷಗಳು ದಲಿತ ಚಳುವಳಿಗಳಿಂದ ಅಂತರ ಕಾಪಾಡಿಕೊಂಡೇ ಬಂದಿರುವುದನ್ನೂ ಗುರುತಿಸಬಹುದು. ಸಹಜವಾಗಿ  ಈ ಪಕ್ಷಗಳು ಅಂದರೆ ಮಧ್ಯವರ್ತಿ ಜಾತಿಗಳನ್ನು , ಈಗ ಒಬಿಸಿ ಎಂದು ಶಾಸನಾತ್ಮಕವಾಗಿ ಗುರುತಿಸಲ್ಪಟ್ಟಿರುವ ಈ ಹಿಂದುಳಿದ ವರ್ಗಗಳನ್ನು ಹೆಚ್ಚಾಗಿ ಪ್ರತಿನಿಧಿಸುತ್ತವೆ. ಹಾಗಾಗಿ ಸಮಾಜವಾದಿ ಪಕ್ಷಗಳು ಸಹಜವಾಗಿ ವರ್ಗ ಹಿತಾಸಕ್ತಿಯ ನೆಲೆಯಲ್ಲೇ ತಮ್ಮ ರಾಜಕೀಯ ತತ್ವಗಳನ್ನೂ ರೂಪಿಸಿಕೊಂಡುಬಂದಿವೆ. ಲೋಹಿಯಾ, ಜೆಪಿ ಅವರಿಂದ ಜಾರ್ಜ್‌ ಫರ್ನಾಂಡಿಸ್‌, ನೀತಿಶ್‌ಕುಮಾರ್‌, ರಾಮ್‌ ವಿಲಾಸ್‌ ಪಾಸ್ವಾನ್‌, ಮುಲಾಯಂ ಸಿಂಗ್‌, ಲಲ್ಲೂ ಯಾದವ್‌ವರೆಗೂ ಈ ತಾತ್ವಿಕ ನಿಲುವುಗಳು ಸಮಾಜವಾದಿಗಳ ರಾಜಕೀಯ ನಡೆಯನ್ನು ನಿರ್ದೇಶಿಸಿವೆ.. ಇದಕ್ಕೆ ಕಾರಣವನ್ನು ಸಮಾಜವಾದಿಗಳ ಕಮ್ಯುನಿಸ್ಟ್‌ ವಿರೋಧಿ ಚಿಂತಾ ಕ್ರಮ ಮತ್ತು ಒಬಿಸಿ ವರ್ಗ ಹಿತಾಸಕ್ತಿಗಳಲ್ಲಿ ಕಾಣಬಹುದು.

ಕರ್ನಾಟಕದಲ್ಲಿ ಸಮಾಜವಾದವು ಮೂಲತಃ ಭೂ ಹೋರಾಟಗಳ ಮೂಲಕ ತನ್ನ ನೆಲೆ ಕಂಡುಕೊಂಡಿತ್ತು. ಕಾಗೋಡು ಸತ್ಯಾಗ್ರಹದಿಂದ ಆರಂಭವಾದ ಈ ಪಯಣ ದೇವರಾಜ ಅರಸು ಆಳ್ವಿಕೆಯ ಭೂ ಸುಧಾರಣಾ ಕ್ರಮಗಳಿಗೂ ವಿಸ್ತರಿಸಿದ್ದನ್ನು ಗುರುತಿಸಬಹುದು. ನವ ಉದಾರವಾದ-ಜಾಗತೀಕರಣ ಪ್ರವೇಶವಾದ ನಂತರ,  1980ರ ನಂತರದಲ್ಲಿ ಕಟ್ಟಾ ಸಮಾಜವಾದಿಗಳೆಂದು ಗುರುತಿಸಿಕೊಂಡ ರಾಜಕೀಯ ನಾಯಕರೂ ಸಹ ಕಾಂಗ್ರೆಸ್ , ಜನತಾ ದಳ ಅಥವಾ ಬಿಜೆಪಿಯೊಡನೆ ಗುರುತಿಸಿಕೊಳ್ಳಲಾರಂಭಿಸಿದ್ದರು. ಇಂದು ಕರ್ನಾಟಕದಲ್ಲಿ ಸಮಾಜವಾದಿ ರಾಜಕೀಯ ಪಕ್ಷಗಳು ಉಳಿದಿಲ್ಲ ಅದರೆ ಕಾಂಗ್ರೆಸ್‌ ನಾಯಕರಲ್ಲಿ ಸಮಾಜವಾದದ ಬಗ್ಗೆ ಒಲವು ಇದೆ. ಕರ್ನಾಟಕದ ರೈತ ಚಳುವಳಿಯನ್ನು ಇಂದಿಗೂ ಲೋಹಿಯಾ ಸಮಾಜವಾದವೇ ನಿರ್ದೇಶಿಸುತ್ತಿದೆ. ದಲಿತ ಚಳುವಳಿಯು ಆರಂಭದಲ್ಲಿ ಮಾರ್ಕ್ಸ್‌ವಾದಿ ಚಿಂತನೆಗಳಿಂದ ಪ್ರಭಾವಿತವಾದರೂ, ಬಂಡಾಯ ಚಳುವಳಿಯ ತದನಂತರದಲ್ಲಿ ಇಡೀ ಚಳುವಳಿಯೇ ಲೋಹಿಯಾವಾದದ ಹಿಡಿತಕ್ಕೆ ಸಿಕ್ಕಿದ್ದನ್ನು 1980-90ರ ರಾಜಕೀಯ ಬೆಳವಣಿಗೆಗಳಲ್ಲಿ ಗುರುತಿಸಬಹುದು.

ಚಳುವಳಿಗಳ ಸೈದ್ಧಾಂತಿಕ ಕೊರತೆ

ಹಾಗಾಗಿಯೇ ದಲಿತ ಚಳುವಳಿ ಭೂ ಹೋರಾಟಗಳಿಂದ ಕ್ರಮೇಣ ಹಿಂದೆ ಸರಿಯಿತು. ಇಂದಿಗೂ ಕರ್ನಾಟಕದ ದಲಿತ ಚಳುವಳಿಯಲ್ಲಿ ಸೈದ್ಧಾಂತಿಕವಾಗಿ ಭೂಮಿ ಒಂದು ಪ್ರಧಾನ ಪ್ರಶ್ನೆಯಾಗಿಲ್ಲ.  ಬದಲಾಗಿ ಸಂವಿಧಾನದ ಚೌಕಟ್ಟಿನಲ್ಲಿ ಸರ್ಕಾರಗಳು ಅನುಸರಿಸುವ ಕಲ್ಯಾಣ ಆರ್ಥಿಕತೆಯನ್ನೇ (Welfare Economics) ಸಮಾಜವಾದ ಎಂದು ಬಿಂಬಿಸಲಾಗುತ್ತಿದೆ. ಇದು ಅರ್ಧಸತ್ಯ ಮಾತ್ರ. ಈಗಿನ ಸರ್ಕಾರವು ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳನ್ನೂ ಸೇರಿದಂತೆ ಯಾವುದೇ ಕಲ್ಯಾಣ ಯೋಜನೆಗಳಾದರೂ (Welfare schemes) ಸಮಾಜದಲ್ಲಿರುವ ಅಸಮಾನತೆಯ ಮೂಲ ಬೇರುಗಳನ್ನು ಸಡಿಲಿಸುವುದಿಲ್ಲ. ಬದಲಾಗಿ ಈ ಸಡಿಲ ಬೇರುಗಳ ಮೇಲೆ ಬದುಕು ಕಟ್ಟಿಕೊಳ್ಳುವ ತಳಸಮಾಜದ ಜನರಿಗೆ ಬದುಕುವ ಅವಕಾಶಗಳನ್ನು ಕಲ್ಪಿಸುತ್ತದೆ.

ಇದನ್ನು ತಾತ್ವಿಕ ನೆಲೆಯಲ್ಲಿ ಸಮಾಜವಾದ ಎಂದು ಹೇಳಲಾಗುವುದಾದರೂ, ಸೈದ್ಧಾಂತಿಕವಾಗಿ, ವೈಜ್ಞಾನಿಕ ನೆಲೆಯಲ್ಲಿ ಇದು ಬಂಡವಾಳಶಾಹಿ ಔದಾರ್ಯವಾಗಿ (Benevolent Capitalism) ಮಾತ್ರ ಕಾಣುತ್ತದೆ. ಇಂದಿಗೂ ಜಾತಿ ತಾರತಮ್ಯ, ಶೋಷಣೆ ಎದುರಿಸುತ್ತಿರುವ ತಳಸಮುದಾಯಗಳಿಗೆ, ವಿಶೇಷವಾಗಿ ದಲಿತ ಮತ್ತು ಆದಿವಾಸಿಗಳಿಗೆ ಈ ಕಲ್ಯಾಣ ಆರ್ಥಿಕತೆ ನಿರ್ಮಿಸುವ ಜೀವನೋಪಾಯದ ಚೌಕಟ್ಟುಗಳು ಅಂತಿಮವಾಗಿ ಬಂಡವಾಳ-ಮಾರುಕಟ್ಟೆ-ಕಾರ್ಪೋರೇಟ್‌ ಆರ್ಥಿಕತೆಯ ನೆರಳಿನಲ್ಲೇ ಮುಂದುವರೆಯುತ್ತವೆ.

ಕರ್ನಾಟಕದ ಸಮಾಜವಾದಿ ಚಳುವಳಿಯಲ್ಲಿ ಮತ್ತೊಂದು ದ್ವಂದ್ವವನ್ನೂ ಗುರುತಿಸಲೇಬೇಕಿದೆ. ಇಲ್ಲಿ ರೂಪುಗೊಂಡ ಸಮಾಜವಾದಿ ಚಿಂತನೆಗಳು ಗಾಂಧಿ ಚಿಂತನೆಗಳಿಗೆ ತೆರೆದುಕೊಳ್ಳುತ್ತಲೇ ಕಾಂಗ್ರೆಸ್‌ ಪಕ್ಷದೊಡನೆ ಸಮ್ಮಿಲಿತಗೊಂಡಿವೆ. ಈ ಚಿಂತನಾ ಧಾರೆಯಲ್ಲೂ ಭೂಮಿ ಪ್ರಧಾನ ಪ್ರಶ್ನೆಯಾಗುವುದಿಲ್ಲ. ಆದರೆ ರಾಜಕೀಯದಿಂದ ಹೊರತಾಗಿರುವ ಬೌದ್ಧಿಕ ವರ್ಗದಲ್ಲಿ ಸಮಾಜವಾದಿ-ಲೋಹಿಯಾವಾದಿ ಚಿಂತನೆಗಳು ಇಂದಿಗೂ ಪ್ರಖರವಾಗಿದ್ದು, ಇದು ಬಿಜೆಪಿ-ಆರೆಸ್ಸೆಸ್ ಪ್ರಣೀತ ಬಲಪಂಥೀಯ ರಾಜಕಾರಣದಿಂದ ಅಂತರ ಕಾಪಾಡಿಕೊಳ್ಳುತ್ತವೆ.

ಸಾಹಿತ್ಯಕವಾಗಿಯೂ ಈ ಸಮಾಜವಾದಿ ತತ್ವಗಳು ರಾಜ್ಯದ ರಾಜಕಾರಣವನ್ನು ಹೊರಗಿನಿಂದ ಪ್ರಭಾವಿಸಲು ಪ್ರಯತ್ನಿಸುತ್ತಿರುತ್ತವೆ. ಬಹುಪಾಲು ಸಮಾಜವಾದಿ ಚಿಂತಕರು ಕಾಂಗ್ರೆಸ್‌ ಪಕ್ಷದ ಆಡಳಿತ ನೀತಿಗಳ ವಿರುದ್ಧವೂ ದನಿ ಎತ್ತುತ್ತಾರೆ. ಲೋಹಿಯಾ ಪ್ರಭಾವಕ್ಕೊಳಗಾದ ದಲಿತ-ರೈತ ಚಳುವಳಿಗಳಲ್ಲೂ ಈ ಪ್ರತಿರೋಧದ ದನಿಯನ್ನು ಕೇಳಬಹುದು. ಆದರೆ ಈ ಜನಾಂದೋಲನಗಳು ಕಾಂಗ್ರೆಸ್‌ ಪಕ್ಷದೊಳಗೆ ಇರುವ ಬಂಡವಾಳಶಾಹಿ ಸ್ವರೂಪವನ್ನು ತಾತ್ವಿಕವಾಗಿ ವಿರೋಧಿಸುವುದಿಲ್ಲ. ಭಾರತೀಯ ಸಮಾಜವಾದದ ತಾತ್ವಿಕ ಕೊರತೆಯೇ ಇಲ್ಲಿ ಎದ್ದು ಕಾಣುತ್ತದೆ.

ಕರ್ನಾಟಕದಲ್ಲಿ ನಡೆದ ಭೂ ಹೋರಾಟಗಳು, ಕೃಷಿ ಆಂದೋಲನಗಳು, ರೈತ ಹೋರಾಟಗಳು ಅಂತಿಮವಾಗಿ ಅಲ್ಪಸ್ವಲ್ಪವಾದರೂ ಭೂಮಿ ಇರುವ ಒಂದು ವರ್ಗದೊಡನೆ ಗುರುತಿಸಿಕೊಳ್ಳುತ್ತವೆ. ಅರಸು ಕಾಲದ ಭೂ ಸುಧಾರಣೆಯಲ್ಲಿ ಉಳುವವನಿಗೇ ಭೂಮಿ ಯಶಸ್ವಿಯಾಗಿ ವಿತರಣೆಯಾದರೂ ಅಂತಿಮವಾಗಿ ಇಲ್ಲಿಯೂ ಹಿಡಿತ ಸಾಧಿಸಿದ್ದು ಭೂಮಿ ಇರುವ ಒಂದು ಮಧ್ಯಮ ಅಥವಾ ಶ್ರೀಮಂತ ವರ್ಗವೇ. ಕರ್ನಾಟಕದಲ್ಲಿ ಚಾರಿತ್ರಿಕವಾಗಿ ರಯತ್‌ವಾರಿ ಪದ್ಧತಿಯ ಭೂ ಹಿಡುವಳಿ ಇರುವುದರಿಂದ, ಉತ್ತರ ಭಾರತದಲ್ಲಾದಂತೆ ಇಲ್ಲಿನ ತಳಸಮಾಜದ ದಲಿತ ಸಮುದಾಯಗಳು ಪೂರ್ತಿಯಾಗಿ ಭೂಹೀನರಾಗಿ ಕಾಣುವುದಿಲ್ಲ.

ಆದರೆ ಇರುವ ಅಲ್ಪಸ್ವಲ್ಪ ಭೂಮಿಯನ್ನೂ ನವ ಉದಾರವಾದದ ಅಭಿವೃದ್ಧಿ ಯೋಜನೆಗಳಿಗೆ ಕಳೆದುಕೊಳ್ಳುತ್ತಿರುವ ಸಣ್ಣ-ಅತಿ ಸಣ್ಣ ರೈತರಿಗೆ ಇಲ್ಲಿನ ಸಮಾಜವಾದಿ ಹೋರಾಟಗಳು ನ್ಯಾಯ ಒದಗಿಸಲಾಗುತ್ತಿಲ್ಲ. ಕಾಂಗ್ರೆಸ್‌ ಸೇರಿದಂತೆ ಯಾವ ಬೂರ್ಷ್ವಾ ಪಕ್ಷಗಳೂ ಈ ನಿಟ್ಟಿನಲ್ಲಿ ಆಸಕ್ತಿ ವಹಿಸುವುದೂ ಇಲ್ಲ. ಇದು ಕರ್ನಾಟಕದ ಭೂ ಹೋರಾಟಗಳ ಪರಂಪರೆಯ ಅವನತಿಗೆ ಮೂಲ ಕಾರಣವಾಗಿದೆ. ಲೋಹಿಯಾ ಸಮಾಜವಾದ ತನ್ನ ತಾತ್ವಿಕ ನೆಲೆಗಳನ್ನು ಅಕಾಡೆಮಿಗಳಲ್ಲಿ, ಬೌದ್ಧಿಕ ವಲಯದಲ್ಲಿ ಕಾಪಾಡಿಕೊಂಡು ಬಂದಿದ್ದರೂ, ಅದು ರಾಜಕೀಯವಾಗಿ ರೂಪಾಂತರಗೊಂಡಿಲ್ಲ.

ಹಾಗಾಗಿಯೇ ವೇಳೆ ಭೂಮಿಯನ್ನು ಕಳೆದುಕೊಳ್ಳುತ್ತಿರುವ ಅಪಾರ ಸಂಖ್ಯೆಯ ರೈತರು ಹೋರಾಟಗಳ ಅಂಗಳದಲ್ಲಿ ತಮ್ಮ ಪ್ರಾತಿನಿಧಿತ್ವವನ್ನು ಕಳೆದುಕೊಳ್ಳುತ್ತಲೇ ಇದ್ದಾರೆ. ಭೂ ಹೀನರು ಈ ಹೋರಾಟಗಳಲ್ಲಿ ಕಾಣುವುದೇ ಇಲ್ಲ. ಭೂಮಿಗಾಗಿ ಅಥವಾ ಭೂಮಿಯ ಹಕ್ಕಿಗಾಗಿ ಹೋರಾಟ ರೈತ ಚಳುವಳಿಯ ಪ್ರಣಾಳಿಕೆಯಲ್ಲಿ ಕಾಣುವುದೂ ಇಲ್ಲ. ಮೂಲತಃ ಭಾರತದ ಸಮಾಜವಾದಿ ಚಳುವಳಿ ಮತ್ತು ರಾಜಕಾರಣ ಎರಡೂ ಸಹ ಸಂಸದೀಯ ಅಧಿಕಾರ ರಾಜಕಾರಣದ ಹಿಡಿತದಿಂದ ಬಿಡಿಸಿಕೊಳ್ಳಲಾಗದೆ ಇರುವುದೇ ಸಮಾಜವಾದದ ತಾತ್ವಿಕ ಸೋಲಿಗೆ ಕಾರಣವಾಗಿದೆ. ಬಂಡವಾಳಶಾಹಿ-ಕಾರ್ಪೋರೇಟ್‌ ಮಾರುಕಟ್ಟೆ ಆರ್ಥಿಕತೆಯ ಚೌಕಟ್ಟಿನೊಳಗೇ ಆಳ್ವಿಕೆ ನಡೆಸುವ ಮುಖ್ಯವಾಹಿನಿಯ ಎಲ್ಲ ರಾಜಕೀಯ ಪಕ್ಷಗಳೂ ʼ ಸಮಾಜವಾದ  ʼವನ್ನು ಬಲವಾಗಿ ಪ್ರತಿಪಾದಿಸಿದರೂ, ಅಂತಿಮವಾಗಿ ಅದು ಕಲ್ಯಾಣ ಯೋಜನೆಗಳಂತಹ ತಾತ್ಕಾಲಿಕ ಪರಿಹಾರಗಳಲ್ಲಿ ಪರ್ಯವಸಾನ ಹೊಂದುತ್ತವೆ.

ಅಂತಿಮವಾಗಿ

ಒಂದು ಸಿದ್ಧಾಂತವಾಗಿ ವಿಶ್ವ ಇತಿಹಾಸದಲ್ಲಿ ಉಗಮಿಸಿದ, ಇಂದಿಗೂ ಹಲವು ದೇಶಗಳ ರಾಜಕಾರಣವನ್ನು ಪ್ರಭಾವಿಸುತ್ತಿರುವ, ನಿರ್ದೇಶಿಸುತ್ತಿರುವ ಸಮಾಜವಾದ ಎಂಬ ತತ್ವ-ಸಿದ್ಧಾಂತವು ಅಪೇಕ್ಷಿಸುವ, ಅಸಮಾನತೆಗಳನ್ನು ಸಂಪೂರ್ಣವಾಗಿ ಅಳಿಸಿಹಾಕುವ, ಸಮ ಸಮಾಜವನ್ನು ನಿರ್ಮಿಸುವ ಉದಾತ್ತ ಚಿಂತನೆಗಳು ಭಾರತದ ಸಮಾಜವಾದಿ ರಾಜಕಾರಣದಲ್ಲಿ ಹಿಂದಕ್ಕೆ ಸರಿದಿವೆ, ಸರಿಯುತ್ತಲೇ ಇವೆ. ಹಾಗಾಗಿಯೇ ಯಾವುದೇ ಮುಖ್ಯವಾಹಿನಿ ಪಕ್ಷಗಳಲ್ಲೂ ನವ ಉದಾರವಾದದ ವಿರುದ್ಧ ಸಣ್ಣ ಧ್ವನಿಯೂ ಕೇಳಿಬರುವುದಿಲ್ಲ. ಈ ಮೌನವನ್ನು ಮುರಿಯುವ ಪ್ರಯತ್ನಗಳು ನಾಗರಿಕ ಸಮಾಜದ ಬೌದ್ಧಿಕ-ಅಕಾಡೆಮಿಕ್‌ ವಲಯಗಳಲ್ಲಾದರೂ ನಡೆಯಬೇಕಿದೆ. ಬಹಳ ವೇಗವಾಗಿ ಕಾರ್ಪೋರೇಟ್‌ ಮಾರುಕಟ್ಟೆ ಆರ್ಥಿಕತೆಯನ್ನು ತನ್ನದಾಗಿಸಿಕೊಂಡು, ವಿಶ್ವಗುರು ಆಗಲು ಹೊರಟಿರುವ ವಿಕಸಿತ ಭಾರತದ ಪ್ರಮುಖ ಸವಾಲು ಇದೇ ಆಗಿದೆ. ಡಾ. ಬಿ.ಆರ್.‌ ಅಂಬೇಡ್ಕರ್‌ ಸಮಾಜವಾದಿ ಪ್ರಜಾಪ್ರಭುತ್ವದ ಆಳ್ವಿಕೆಯ ಮೂಲಕ ಕಟ್ಟಲು ಬಯಸಿದ ಸಮಾಜವು ಇಂದು ತೀವ್ರ ಅಸಮಾನತೆಯ ನೆಲೆಯಾಗಿರುವುದು ಈ ಸವಾಲನ್ನು ಮತ್ತಷ್ಟು ಸಂಕೀರ್ಣಗೊಳಿಸುತ್ತದೆ.

ಇಂದಿಗೂ ಬಿಜೆಪಿ ಅನುಸರಿಸುತ್ತಿರುವ ಆಪ್ತ ಬಂಡವಾಳಶಾಹಿ ನೀತಿಗಳನ್ನು, ಕಾಂಗ್ರೆಸ್‌ ಪಕ್ಷವನ್ನೂ ಸೇರಿದಂತೆ ಎಲ್ಲ ಬೂರ್ಷ್ವಾ ಪಕ್ಷಗಳೂ ಅನುಮೋದಿಸುವ ಕಾರ್ಪೋರೇಟ್‌ ಮಾರುಕಟ್ಟೆ ಆರ್ಥಿಕತೆಯನ್ನು ವಿರೋಧಿಸುವ ಮೂಲಕ, ಭಾರತದ ಸಾಮಾಜಿಕ ಪಿರಮಿಡ್ಡಿನ ತಳಪಾಯದಲ್ಲಿರುವ ಬಹುಸಂಖ್ಯಾತ ಜನಸಮೂಹಗಳನ್ನು ಶೋಷಣೆ, ತಾರತಮ್ಯ, ಅಸಮಾನತೆಗಳಿಂದ ಹೊರತರಲು ಒಂದು “ಒಳಗೊಳ್ಳುವ ರಾಜಕೀಯ ಚಿಂತನೆ ” ( Inclusive political thought ) ಅತ್ಯವಶ್ಯವಾಗಿದೆ. ಈ ಚಿಂತನೆಯನ್ನು ಸಮಾಜದ ಕಟ್ಟಕಡೆಯ ಶ್ರಮಜೀವಿಯವರೆಗೂ ತಲುಪಿಸುವ ಜವಾಬ್ದಾರಿ ದಲಿತ ಚಳುವಳಿಗಳ ಮೇಲಿರುವಷ್ಟೇ ರೈತ ಚಳುವಳಿಗಳ ಮೇಲೂ ಇದೆ. ಏಕೆಂದರೆ ಈ ಶ್ರಮಜೀವಿಗಳ ಪೈಕಿ ಬಹುಸಂಖ್ಯಾತರು ಕೃಷಿ ಅವಲಂಬಿಸಿದ್ದಾರೆ, ಈ ಜನತೆಯ ನಡುವೆ ತಳಸಮುದಾಯಗಳೇ ಪ್ರಧಾನವಾಗಿ ಕಾಣುತ್ತವೆ. ಭಾರತದ ಸಮಾಜವಾದಿ ರಾಜಕಾರಣದ ವೈಫಲ್ಯ ಮತ್ತು ಕೊರತೆಗಳನ್ನು ನೀಗಿಸಿಕೊಂಡು ಈ ಶ್ರಮಿಕರತ್ತ ಗಮನಹರಿಸುವುದು, ಲೋಹಿಯಾವಾದಿಗಳು ಮಾತ್ರವೇ ಅಲ್ಲ ಎಲ್ಲ ಪ್ರಗತಿಪರ ಹೋರಾಟಗಳ ಆದ್ಯತೆಯೂ ಆಗಬೇಕಿದೆ.

ಇದನ್ನೂ ನೋಡಿ: ಹಾಡು | ‘‌ಕಮಿಷನರ್ ಅನುಪಮ್ ಅಗರ್ವಾಲ್ ಹಠಾವೊ’ ಸಾಹಿತ್ಯ ಮತ್ತು ಹಾಡು : ಶ್ಯಾಮರಾಜ ಪಟ್ರೆಮೆ Janashakthi Media

Donate Janashakthi Media

One thought on “ಸಮಾಜವಾದಿ ತತ್ವ ಸಿದ್ದಾಂತ ಮತ್ತು ಅಧಿಕಾರ

  1. ಇಂದಿನ ರಾಜಕಾರಣದ ಒಳಮುಖವನ್ನು ಸವಿಸ್ತಾರವಾಗಿ ಪರಿಚಯಿಸುವ ಉತ್ತಮ ಲೇಖನ

Leave a Reply

Your email address will not be published. Required fields are marked *