‘ಸಮಾಜವಾದ’ ಮತ್ತು ಸಮಾನ ಅವಕಾಶಗಳು

-ಪ್ರೊ. ಪ್ರಭಾತ್ ಪಟ್ನಾಯಕ್
-ಅನು:ಕೆ.ಎಂ.ನಾಗರಾಜ್

‘ಸಮಾಜವಾದ’ ಎಂದರೆ ಎಲ್ಲರಿಗೂ ಸಮಾನ ಅವಕಾಶಗಳನ್ನು ಖಚಿತಪಡಿಸುವ ಕಲ್ಯಾಣ ಪ್ರಭುತ್ವ ಎಂದು ಭಾರತದ ಮುಖ್ಯ ನ್ಯಾಯಾಧೀಶರು ವ್ಯಾಖ್ಯಾನಿಸಿದ್ದಾರೆ, ಅದರಲ್ಲಿ ಖಾಸಗಿ ಉದ್ಯಮ ಅಸಂಗತವೇನಲ್ಲ ಎಂದು ಸೂಚಿಸಿದ್ದಾರೆ. ಇಲ್ಲಿರುವ ಬಹಳ ಮುಖ್ಯವಾದ ಒಂದು ಪ್ರಶ್ನೆ- ಉತ್ಪಾದನಾ ಸಾಧನಗಳ ಸಾಮಾಜಿಕ ಒಡೆತನವಿಲ್ಲದೆ ಅವಕಾಶಗಳ ಸಮಾನತೆಯ ಕಲ್ಯಾಣ ಪ್ರಭುತ್ವವನ್ನು ಸಾಧಿಸಬಹುದೇ? ಹೆಚ್ಚುತ್ತಿರುವ ಸಂಪತ್ತಿನ ಕೇಂದ್ರೀಕರಣವನ್ನು, ಮತ್ತೊಂದೆಡೆಯಲ್ಲಿ ಬೆಳೆಯುತ್ತಿರುವ ನಿರುದ್ಯೋಗ ಮತ್ತು ಪೌಷ್ಟಿಕಾಂಶದ ಬಡತನವನ್ನು ಕಾಣುತ್ತಿರುವ ಈಗಿನ ಭಾರತದ ಸಮಾಜವು ಸಮಾನ ಅವಕಾಶಗಳನ್ನು ಖಚಿತಪಡಿಸುವ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಯಾರಾದರೂ ವಾದಿಸಲು ಸಾಧ್ಯವೇ?

ಅದೇನೇ ಇರಲಿ, ಭಾರತದ ಮುಖ್ಯ ನ್ಯಾಯಾಧೀಶರು ಸಮಾನ ಅವಕಾಶಗಳಿಗೆ ಬದ್ಧತೆ ವ್ಯಕ್ತಪಡಿಸಿದ್ದಾರೆ. ಅದರಂತೆ ಅವಕಾಶಗಳಲ್ಲಿ ಸಮಾನತೆಯಿರುವ ಒಂದು ಕಲ್ಯಾಣ ಪ್ರಭುತ್ವವನ್ನು ಒದಗಿಸುವುದಕ್ಕೆ ಸುಪ್ರೀಂ ಕೋರ್ಟ್ ಬದ್ಧವಾಗುಳಿಯಲಿ! ಸಮಾಜವಾದ

ಭಾರತ ಸಂವಿಧಾನದ ಪೀಠಿಕೆಯಿಂದ ಸಮಾಜವಾದ ಎಂಬ ಪದವನ್ನು ತೆಗೆದುಹಾಕಬೇಕು ಎಂಬ ಒಂದು ಅರ್ಜಿಯನ್ನು ಆಲಿಸಿದ ಭಾರತದ ಮುಖ್ಯ ನ್ಯಾಯಾಧೀಶರು ಮಹತ್ವಪೂರ್ಣವಾದ ಎರಡು ಅವಲೋಕನಗಳನ್ನು ನವೆಂಬರ್ 22ರಂದು ಮಾಡಿದ್ದಾರೆ: ಮೊದಲನೆಯದು, ಸಮಾಜವಾದಎಂಬ ಪದವನ್ನು ಸಂವಿಧಾನದ ಪೀಠಿಕೆಯಲ್ಲಿ ಯಾವುದೊ ಒಂದು ಸಿದ್ಧಾಂತವನ್ನು ವ್ಯಾಖ್ಯಾನಿಸುವ ಅರ್ಥದಲ್ಲಿ ಬಳಸಲಾಗಿಲ್ಲ; ಎಲ್ಲ ನಾಗರಿಕರಿಗೂ ಸಮಾನ ಅವಕಾಶಗಳನ್ನು ಖಚಿತಪಡಿಸುವ ಒಂದು ಕಲ್ಯಾಣ ಪ್ರಭುತ್ವವನ್ನು ಸೂಚಿಸುವ ಅರ್ಥದಲ್ಲಿ ಉಲ್ಲೇಖಿಸಲಾಗಿದೆ. ಎರಡನೆಯದು, ಈ ಅರ್ಥದಲ್ಲಿ ಸಮಾಜವಾದವು ಸಂವಿಧಾನದ ಮೂಲ ಸಂರಚನೆಯ ಭಾಗವೇ ಆಗಿದೆ. ಇದು ಪೀಠಿಕೆಗೆ ಸೇರಿಸಿದ ಕೇವಲ ಒಂದು ಕೂಡಿಕೆ ಅಲ್ಲ. ಬದಲಿಗೆ, ಭಾರತದ ಗಣರಾಜ್ಯವು ಏನಾಗಬೇಕೆಂದು ನಾವು ಬಯಸುತ್ತೇವೆ ಎಂಬುದರ ಸಾರ-ಸತ್ವವೇ ಅದರಲ್ಲಿ ಹಾಸುಹೊಕ್ಕಾಗಿದೆ.

ಇದನ್ನೂ ಓದಿ: ಫುಡ್ ಫ್ಯಾಸಿಸ಼ಂ

ಸಮಾಜವಾದ ಎಂಬುದಕ್ಕೆ ಒಂದು ಸಾಂಸ್ಥಿಕ ಸ್ವರೂಪವನ್ನು ನೀಡಲು ಮುಖ್ಯ ನ್ಯಾಯಾಧೀಶರು ಹಿಂಜರಿದರು. ವಿಶ್ವಾದ್ಯಂತ ಸಮಾಜವಾದ ಎಂಬ ಪದವು ಉತ್ಪಾದನಾ ಸಾಧನಗಳು, ಕೊನೆಯ ಪಕ್ಷ ಉತ್ಪಾದನೆಯ ಪ್ರಮುಖ ಸಾಧನಗಳು, ಸಮಾಜದ ಒಡೆತನದಲಿವೆ ಎಂದು ಅರ್ಥೈಸುತ್ತದೆ. ಆದರೆ, ಮುಖ್ಯ ನ್ಯಾಯಾಧೀಶರು ಸಮಾಜವಾದವನ್ನು ಒಡೆತನದ ಸ್ವರೂಪದ ಮೂಲಕ ವ್ಯಾಖ್ಯಾನಿಸುವುದರ ಬದಲು ಅದರ ಫಲಿತಾಂಶದ ರೂಪದಲ್ಲಿ ವ್ಯಾಖ್ಯಾನಿಸಿದ್ದಾರೆ, ಖಾಸಗಿ ಉದ್ಯಮವು ಸಮಾಜವಾದದೊಂದಿಗೆ ಹೊಂದಿಕೆಯಾಗುವುದಿಲ್ಲ ಎಂದೇನಲ್ಲ ಎಂದು ಸೂಚಿಸಿದ್ದಾರೆ. ನಿಜಕ್ಕೂ ಮುಖ್ಯವಾದುದೆಂದರೆ, ಎಲ್ಲ ನಾಗರಿಕರಿಗೂ ಸಮಾನ ಅವಕಾಶಗಳನ್ನು ಖಚಿತಪಡಿಸುವ ಒಂದು ಕಲ್ಯಾಣ ಪ್ರಭುತ್ವವನ್ನು ಸೃಷ್ಟಿಸಬೇಕು ಎಂಬುದೇ ಎಂದು ಅವರು ಹೇಳಿದ್ದಾರೆ.

ಉತ್ಪಾದನಾ ಸಾಧನಗಳ ಒಡೆತನದ ಪ್ರಶ್ನೆ

ಸಮಾಜವಾದದ ಸಾಂಸ್ಥಿಕ ವ್ಯಾಖ್ಯಾನವು ಉತ್ಪಾದನಾ ಸಾಧನಗಳ ಒಡೆತನದ ಪರಿಭಾಷೆಯಲ್ಲಿ ವ್ಯಾಪಕವಾಗಿ ಬಳಸಲ್ಪಡುತ್ತದೆ. ಏಕೆಂದರೆ ಅವಕಾಶಗಳಲ್ಲಿ ಸಮಾನತೆಯೊಂದಿಗೆ ಕಲ್ಯಾಣ ಪ್ರಭುತ್ವವನ್ನು ಖಚಿತಪಡಿಸಲು ಸಾಮಾಜಿಕ ಒಡೆತನವು ಒಂದು ಅಗತ್ಯವಾದ ಸ್ಥಿತಿ ಎಂದು ಪರಿಗಣಿಸಲಾಗಿದೆ. ಆದರೆ, ಸಮಾಜದ ಒಡೆತನವು ಸಾಂಸ್ಥಿಕವಾಗಿ ಇಲ್ಲದೆಯೂ ಈ ಫಲಿತಾಂಶವನ್ನು ಪಡೆಯಬಹುದು ಎಂದು ಮುಖ್ಯ ನ್ಯಾಯಾಧೀಶರು ಸೂಚಿಸಿದರು. ಖಚಿತವಾಗಿ ಹೇಳುವುದಾದರೆ, ಅವಕಾಶಗಳ ಸಮಾನತೆಯನ್ನು ಕಲ್ಪಿಸುವ ಕಲ್ಯಾಣ ಪ್ರಭುತ್ವವನ್ನು ಸೃಷ್ಟಿಸುವುದು ಮಾತ್ರವೇ ಸಮಾಜವಾದವಲ್ಲ. ಅದರ ಉದ್ದೇಶವು ಇನ್ನೂ ಹೆಚ್ಚು ದೂರಗಾಮಿಯಾಗಿದೆ.

ಅಂದರೆ, ವ್ಯಕ್ತಿಗಳನ್ನು ವಿಘಟಿಸುವ ಸ್ಥಿತಿಗೆ ಸಮಾಜವನ್ನು ತಂದಿರುವ ಬಂಡವಾಳಶಾಹಿ ವ್ಯವಸ್ಥೆಯನ್ನು ಮೀರಿ ಹೊಸದೊಂದು ಸಮುದಾಯವನ್ನು ಅಸ್ತಿತ್ವಕ್ಕೆ ತರುವುದು. ಈ ಹೊಸ ಸಮುದಾಯವು ಸಮಾನತೆಯನ್ನು ಕಲ್ಪಿಸುವ ಕಲ್ಯಾಣ ಪ್ರಭುತ್ವದ ಗುಣಲಕ್ಷಣಗಳನ್ನು ಹೊಂದಿರಬೇಕು ಕೂಡ.  ಆದರೆ ಬಹಳ ಮುಖ್ಯವಾದ ಒಂದು ಅಂಶವೆಂದರೆ, ಉತ್ಪಾದನಾ ಸಾಧನಗಳ ಸಾಮಾಜಿಕ ಒಡೆತನವಿಲ್ಲದೆ ಅವಕಾಶಗಳಲ್ಲಿ ಸಮಾನತೆಯ ಕಲ್ಯಾಣ ಪ್ರಭುತ್ವವನ್ನು ಸಾಧಿಸಬಹುದೇ ಎಂಬುದು.

ಅದು ಸಾಧ್ಯವಿಲ್ಲ ಎಂಬುದೇ ನಮ್ಮ ಸ್ಪಷ್ಟ ತಿಳುವಳಿಕೆ. ಆದರೂ, ಖಾಸಗಿ ಉದ್ಯಮಗಳಿಗೂ ಮತ್ತು ಅವಕಾಶಗಳ ಸಮಾನತೆಗೂ ನಡುವೆ ಇರುವ ವೈರುಧ್ಯದ ಕೆಲವು ನಿದರ್ಶನಗಳನ್ನು ಸ್ಪಷ್ಟಪಡಿಸುವುದನ್ನು ಹೊರತುಪಡಿಸಿ, ಈ ಬಗ್ಗೆ ನಾವು ಇಲ್ಲಿ ಚರ್ಚೆಗೆ ಇಳಿಯುವುದಿಲ್ಲ. ಭಾರತದ ಮುಖ್ಯ ನ್ಯಾಯಾಧೀಶರು ಸಮಾನ ಅವಕಾಶಗಳಿಗೆ ಬದ್ಧತೆ ವ್ಯಕ್ತಪಡಿಸಿದ್ದಾರೆ. ಸರ್ವೋಚ್ಚ ನ್ಯಾಯಾಲಯ, ಇದಕ್ಕೆ ಮತ್ತು ಸಮಾನ ಅವಕಾಶಗಳಿರುವ ಒಂದು ಸಮಾಜವು ಹೇಗಿರಬೇಕು ಎಂಬುದನ್ನು ಪರಿಶೀಲಿಸಲು ಬದ್ಧವಾಗಿರಬೇಕು ಎಂದಷ್ಟೇ ನಾವು ಒತ್ತಾಯಿಸುತ್ತೇವೆ.

ಇದು ಮುಖ್ಯವಾಗುತ್ತದೆ. ಏಕೆಂದರೆ, ಒಂದೆಡೆಯಲ್ಲಿ ಹೆಚ್ಚುತ್ತಿರುವ ಸಂಪತ್ತಿನ ಕೇಂದ್ರೀಕರಣವನ್ನು ಮತ್ತು ಇನ್ನೊಂದೆಡೆಯಲ್ಲಿ ಬೆಳೆಯುತ್ತಿರುವ ನಿರುದ್ಯೋಗ ಮತ್ತು ಪೌಷ್ಟಿಕಾಂಶದ ಬಡತನವನ್ನು ಕಾಣುತ್ತಿರುವ ಈಗಿನ ಭಾರತದ ಸಮಾಜವು ಸಮಾನ ಅವಕಾಶಗಳನ್ನು ಖಚಿತಪಡಿಸುವ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ವಾದಿಸುವುದು ಯಾರಿಗೂ ಸಾಧ್ಯವಿಲ್ಲ. ಹಾಗಾಗಿ, ಅವಕಾಶಗಳ ಸಮಾನತೆಯತ್ತ ಸಾಗುವ ಚಲನೆಯ ಗುರುತುಗಳು ಯಾವುವು ಎಂಬ ಪ್ರಶ್ನೆ ಉದ್ಭವಿಸುತ್ತದೆ.

ನಿರುದ್ಯೋಗ ಇರುವ ಜಗತ್ತಿನಲ್ಲಿ ಅಥವಾ ಮಾರ್ಕ್ಸ್ ಏನನ್ನು ಶ್ರಮಿಕರ ಮೀಸಲು ಪಡೆ ಎಂದು ಕರೆದಿದ್ದಾರೋ ಅಂತಹ ಜಗತ್ತಿನಲ್ಲಿ ಅವಕಾಶಗಳ ಸಮಾನತೆ ಇರುವುದಿಲ್ಲ ಎಂಬುದು ಸ್ಪಷ್ಟವೇ. ನಿರುದ್ಯೋಗಿಗಳ ವರಮಾನವು, ಅವರು ನಿರುದ್ಯೋಗ ಭತ್ಯೆಯನ್ನು ಪಡೆದರೂಸಹ, ಉದ್ಯೋಗದಲ್ಲಿರುವವರಿಗಿಂತ ಕಡಿಮೆಯಿರುತ್ತದೆ. ಆದ್ದರಿಂದ, ನಿರುದ್ಯೋಗಿಗಳ ಮಕ್ಕಳು ವಿವಿಧ ರೀತಿಯ ಅಭಾವಗಳಿಂದ ಬಳಲುತ್ತಾರೆ. ಇದು ನಿರುದ್ಯೋಗಿಗಳ ಮಕ್ಕಳು ಮತ್ತು ಉದ್ಯೋಗದಲ್ಲಿರುವವರ ಮಕ್ಕಳ ನಡುವೆ ಸಮಾನತೆಯನ್ನು ಅಸಾಧ್ಯವಾಗಿಸುತ್ತದೆ.

ನಿರುದ್ಯೋಗದಿಂದ ಉಂಟಾಗುವ ಆರ್ಥಿಕ ಅಸಮಾನತೆಯ ಹೊರತಾಗಿ, ನಿರುದ್ಯೋಗಿ ಎಂಬ ಒಂದು ಕಳಂಕವೂ ಅಂಟಿಕೊಳ್ಳುತ್ತದೆ. ನಿರುದ್ಯೋಗಿಗಳ ಸ್ವಮೌಲ್ಯದ ನಾಶವು ಅವರ ಸಂತತಿಯ ಬಾಲ್ಯವನ್ನು ಅಗತ್ಯವಾಗಿ ಆಘಾತಕಾರಿಯಾಗಿಸುತ್ತದೆ. ನಿರುದ್ಯೋಗವನ್ನು ತೊಡೆದು ಹಾಕಿದಾಗ ಮಾತ್ರ ಅಂತಹ ಆಘಾತವನ್ನು ತೊಡೆದುಹಾಕಬಹುದು. ಅವಕಾಶಗಳ ಸಮಾನತೆಗಾಗಿ ಅವಶ್ಯವಾಗಿ ಇದನ್ನು ಮಾಡಲೇಬೇಕಾಗುತ್ತದೆ.

ಸಮಾನ ಅವಕಾಶ ಮತ್ತು ಖಾಸಗಿ ಉದ್ಯಮ

ನಿರುದ್ಯೋಗದಿಂದ ಉಂಟಾಗುವ ಆರ್ಥಿಕ ಮುಗ್ಗಟ್ಟನ್ನು ನಿವಾರಿಸುವ ಒಂದು ಮಾರ್ಗವೆಂದರೆ ನಿರುದ್ಯೋಗಿಗಳೂ ಸಹ ಉದ್ಯೋಗಿಗಳಂತೆಯೇ ಅದೇ ದರ ದವೇತನವನ್ನು ಪಡೆಯುವುದು. ಅಂದರೆ ನಿರುದ್ಯೋಗಭತ್ಯೆಯನ್ನು ವೇತನ ದರಕ್ಕೆ ಸಮನಾಗಿ ಇಡಬೇಕಾಗುತ್ತದೆ. ಆದರೆ, ಇದು ಖಾಸಗಿ ಉದ್ದಿಮೆಗಳನ್ನು ಹೊಂದಿರುವ ಅರ್ಥವ್ಯವಸ್ಥೆಯಲ್ಲಿ ಸಾಧ್ಯವಿಲ್ಲ. ನಿರುದ್ಯೋಗದ ಅಸ್ತಿತ್ವವು ಬಂಡವಾಳಶಾಹಿಯ ಅಡಿಯಲ್ಲಿ ಮಾತ್ರವಲ್ಲ, ಖಾಸಗಿವಲಯದ ಗಾತ್ರವು ಗಮನಾರ್ಹ ಮಟ್ಟದಲ್ಲಿರುವ ಯಾವುದೇ ಅರ್ಥ ವ್ಯವಸ್ಥೆಯಲ್ಲಿ ಕಾರ್ಮಿಕರನ್ನು ಶಿಸ್ತಿಗೊಳಪಡಿಸುವ ಒಂದು ಸಾಧನವಾಗಿ ಕೆಲಸಮಾಡುತ್ತದೆ.

ಬೇರೆ ರೀತಿಯಲ್ಲಿ ಹೇಳುವುದಾದರೆ, ನಿರುದ್ಯೋಗ ಭತ್ಯೆಯು ವೇತನ ದರ ದಷ್ಟಿರುವುದನ್ನು ಇಂತಹ ಅರ್ಥ ವ್ಯವಸ್ಥೆ ಒಪ್ಪುವುದಿಲ್ಲ. ಏಕೆಂದರೆ ಆಗ ಅದು ಶಿಸ್ತಿನ ಒಂದು ಸಾಧನವನ್ನು ಇಲ್ಲವಾಗಿಸುತ್ತದೆ. ಆಗ ‘ವಜಾ’ ಎಂಬುದು ನಿಜವಾದ ಪೂರ್ಣ ಉದ್ಯೋಗವಿದ್ದರೆ ಹೇಗಿರುತ್ತದೋ, ಹಾಗೆಯೇ ತನ್ನೆಲ್ಲಾ ಶಿಕ್ಷಿಸುವ ಶಕ್ತಿಯನ್ನುಕಳಕೊಳ್ಳುತ್ತದೆ.

ಒಂದು ಕಡೆಯಲ್ಲಿ ಸಮಾನ ಅವಕಾಶಗಳು ಮತ್ತು ಇನ್ನೊಂದು ಕಡೆಯಲ್ಲಿ ಖಾಸಗಿ ಉದ್ಯಮ ಇವುಗಳ ನಡುವಿನ ಮೊದಲ ವೈರುಧ್ಯವು ನಿರುದ್ಯೋಗ ಪ್ರಶ್ನೆಯ ಸಂಬಂಧವಾಗಿ ಉದ್ಭವಿಸುತ್ತದೆ. ಅದನ್ನು ಭಾರತದ ಮುಖ್ಯನ್ಯಾಯಾಧೀಶರು ಒಪ್ಪುತ್ತಾರೋ ಇಲ್ಲವೋ, ಕನಿಷ್ಠ ಪಕ್ಷ ಅವರು ನಿರುದ್ಯೋಗ ಪರಿಸ್ಥಿತಿಯು ಸಮಾನ ಅವಕಾಶಗಳನ್ನು ಖಚಿತ ಪಡಿಸಲು ಅಡ್ಡಿಯಾಗುತ್ತದೆ ಎಂಬದನ್ನಾದರೂ ಗುರುತಿಸಬೇಕಾಗುತ್ತದೆ.

ಇದನ್ನೂ ಓದಿ: ಅದಾನಿ ವಿವಾದ | ಸಂಸತ್ತಿನ ಹೊರಗಡೆ ಕಾಂಗ್ರೆಸ್ ಪ್ರತಿಭಟನೆ

ಸಮಾನ ಅವಕಾಶಗಳನ್ನು ಒದಗಿಸಲು ಎರಡನೆಯ ಸ್ಪಷ್ಟ ಅವಶ್ಯಕತೆಯೆಂದರೆ ಸಂಪತ್ತನ್ನು ಆನುವಂಶಿಕವಾಗಿ ಪಡೆಯುವ ಅವಕಾಶವನ್ನು ಸಂಪೂರ್ಣವಾಗಿ ತೆಗೆದುಹಾಕುವುದು ಅಥವಾ ಕನಿಷ್ಠಪಕ್ಷ ಅಂಥಹ ಅವಕಾಶವನ್ನು ಗಣನೀಯವಾಗಿ ಕುಗ್ಗಿಸುವುದು. ಒಬ್ಬಬ ಹುಕೋಟ್ಯಾಧಿಪತಿಯ ಮಗ ಮತ್ತು ಒಬ್ಬ ಕಾರ್ಮಿಕ ನಮಗ ಇವರ ಸಂದರ್ಭದಲ್ಲಿ, ತನ್ನ ತಂದೆಯ ಶತ ಕೋಟಿಗಳನ್ನು ಆನುವಂಶಿಕವಾಗಿ ಪಡೆಯುವವನಿಗೂ ಮತ್ತು ಒಬ್ಬ ಕಾರ್ಮಿಕನ ಮಗನಿಗೂ ದೊರಕುವ ಅವಕಾಶವು ಸಮಾನವಾಗಿದೆ ಎಂದು ಹೇಳುವುದು ಸಾಧ್ಯವಿಲ್ಲ.

ಬಂಡವಾಳಗಾರರು ಗಳಿಸುವ ಲಾಭ ಮತ್ತು ಆ ಮೂಲಕ ಅವರು ಗಳಿಸುವ ಸಂಪತ್ತಿನ ಶ್ರೇಯಸ್ಸು ಅವರಿಗೆ ಇತರರು ಹೊಂದಿರದ ಕೆಲವು ವಿಶೇಷ ಗುಣಗಳು ಇರುವುದರಿಂದಾಗಿ ಎಂದು ಹೇಳುವ ಬೂರ್ಜ್ವಾ ಅರ್ಥಶಾಸ್ತ್ರವೂ ಸಹ ಸಂಪತ್ತಿನ ಆನುವಂಶಿಕತೆಯನ್ನು ಸಮರ್ಥಿಸುವುದು ಸಾಧ್ಯವಿಲ್ಲ. ಇದು “ಸಂಪತ್ತು-ಗಳಿಕೆ ಕೆಲವು-ವಿಶೇಷ ಗುಣಗಳಿಂದಾಗಿ” ಎಂಬ ವಾದಕ್ಕೆ ವಿರುದ್ಧವಾಗಿದೆ. ಈ ಕಾರಣದಿಂದಾಗಿಯೇ ಅನೇಕ ಬಂಡವಾಳಶಾಹಿ ದೇಶಗಳು ಹೆಚ್ಚಿನ ಮಟ್ಟದ ಉತ್ತರಾಧಿಕಾರ ತೆರಿಗೆಯನ್ನು ವಿಧಿಸುತ್ತವೆ. ಜಪಾನ್‌ನಲ್ಲಿ ಈ ದರವು ಶೇ. 55, ಮತ್ತು ಇತರ ಪ್ರಮುಖ ದೇಶಗಳಲ್ಲಿ ಸುಮಾರು ಶೇ. 40ರಷ್ಟಿದೆ. ಭಾರತದಲ್ಲಿ ಉತ್ತರಾಧಿಕಾರ ತೆರಿಗೆಯೇ ಇಲ್ಲ. ಇದು ಒಂದು ಆಶ್ಚರ್ಯವೇ ಸರಿ ಮತ್ತು ಇದು ಸಮಾನ ಅವಕಾಶಗಳಿರಬೇಕೆಂಬ ವಿಚಾರದ ಮುಖಕ್ಕೆ ರಾಚುತ್ತದೆ.

ಸಂಪತ್ತಿನ ಅಸಮಾನತೆ

ಅವಕಾಶಗಳಲ್ಲಿ ಸಮಾನತೆಯ ಮೂರನೇ ಅಗತ್ಯವೆಂದರೆ, ಸಂಪತ್ತನ್ನು ಆನುವಂಶಿಕವಾಗಿ ಪಡೆಯುವುದನ್ನು ನಿಷೇಧಿಸುವುದಷ್ಟೇ ಅಲ್ಲ, ಸಂಪತ್ತಿನ ಅಂತರಗಳನ್ನು ಸಹ ಇಳಿಸಬೇಕು. ಸಂಪತ್ತು, ಸಾಮಾಜಿಕ ಸ್ಥಾನಮಾನವೂ ಸೇರಿದಂತೆ ರಾಜಕೀಯ ಬಲವನ್ನು ಮತ್ತು ಅಧಿಕಾರವನ್ನೂ ತರುತ್ತದೆ. ಅಧಿಕಾರವನ್ನು ಅಸಮಾನವಾಗಿ ಹಂಚುವ ಒಂದು ಸಮಾಜವು ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡುತ್ತದೆ ಎಂದು ಹೇಳಲಾಗದು. ಆದ್ದರಿಂದ ಸಂಪತ್ತನ್ನು ಮಕ್ಕಳಿಗೆ ಆನುವಂಶಿಕವಾಗಿ ವರ್ಗಾಯಿಸಲು ಬಿಡಬಾರದು ಮಾತ್ರವಲ್ಲ, ಪೋಷಕರ ಜೀವಿತಾವಧಿಯಲ್ಲಿ ಮಕ್ಕಳಿಗೆ ಸಂಪತ್ತಿನ ಪರಿಣಾಮವಾಗಿ ಒದಗುವಸಲ್ಲದ ಅನುಕೂಲಗಳನ್ನು ಕೂಡ ತಡೆಯಬೇಕು. ಅದಕ್ಕಾಗಿ ಸಂಪತ್ತಿನ ಅಂತರಗಳನ್ನು ಕನಿಷ್ಟಗೊಳಿಸಬೇಕು. ಅದೇ ರೀತಿಯಲ್ಲಿ, ಸಮಾನ ಅವಕಾಶಗಳನ್ನು ಖಚಿತ ಪಡಿಸಬೇಕು ಎಂದಾದರೆ, ವರಮಾನದ ಅಂತರಗಳಿಗೂ ಸಹ ಕಡಿವಾಣ ಹಾಕಬೇಕು.

ನಾಲ್ಕನೆಯ ಸ್ಪಷ್ಟವಾದ ಅಗತ್ಯವೆಂದರೆ, ಆರ್ಥಿಕ ಅಸಮಾನತೆಯು ಸಂತತಿಯ ಶೈಕ್ಷಣಿಕ ಅರ್ಹತೆಯನ್ನಾಗಲಿ ಅಥವಾ ಕೌಶಲ್ಯ ಹೊಂದುವ ಮಟ್ಟವನ್ನಾಗಲಿ ತಡೆಯಲು ಬಿಡಬಾರದು. ಅದಕ್ಕಾಗಿ ಶಿಕ್ಷಣ ಪಡೆಯುವ ಮತ್ತು ಕೌಶಲ್ಯ ಹೊಂದುವ ಅವಕಾಶಗಳು ಎಲ್ಲರಿಗೂ ಸಮನಾಗಿರಬೇಕು. ಈ ಅವಕಾಶವನ್ನು, ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಮೂಲಕ ಉಚಿತವಾಗಿ ಅಥವಾ ಎಲ್ಲರಿಗೂ ಕೈಗೆಟುಕುವಷ್ಟು ಕಡಿಮೆ ಶುಲ್ಕದಲ್ಲಿ ಉತ್ತಮ ಗುಣಮಟ್ಟದ ತರಬೇತಿಯನ್ನು ಒದಗಿಸಬೇಕು.

ನವ ಉದಾರವಾದದ ಆಳ್ವಿಕೆಯಲ್ಲಿ ನಮ್ಮ ದೇಶದಲ್ಲಿ ಮಾತ್ರವಲ್ಲ ಇತರ ಹಲವಾರು ದೇಶಗಳಲ್ಲಿಯೂ ಸಹ ಶಿಕ್ಷಣ ಕ್ಷೇತ್ರದಲ್ಲಿ ಜರುಗುತ್ತಿರುವ ಖಾಸಗೀಕರಣವು ಅಪಾರ ಸಂಖ್ಯೆಯ ವಿದ್ಯಾರ್ಥಿಗಳನ್ನು ಶಿಕ್ಷಣದ ವ್ಯಾಪ್ತಿಯಿಂದ ಹೊರಗಿಡುತ್ತದೆ. ಈ ಕ್ರಮವು ಅವಕಾಶಗಳ ಸಮಾನತೆಯ ಒಂದು ವಿಡಂಬನೆಯಾಗುತ್ತದೆ. ಆದ್ದರಿಂದ, ಉತ್ತಮ ಗುಣಮಟ್ಟದ ಮತ್ತು ಎಲ್ಲರಿಗೂ ಕೈಗೆಟುಕುವ ಸಾರ್ವಜನಿಕ ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸಬೇಕು. ಅಂತಹ ಒಂದು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯು ವಾಸ್ತವವಾಗಿ ಇರುವಾಗಲೂ, ದುಬಾರಿ ಶುಲ್ಕ ವಿಧಿಸುವ ಖಾಸಗಿ ಶಿಕ್ಷಣ ಸಂಸ್ಥೆಗಳು ಇರುವವರೆಗೆ, ಅವುಗಳಿಗೆ ಒಂದು ಹುಸಿ ಪ್ರತಿಷ್ಠೆ ಅಂಟಿಕೊಂಡಿರುತ್ತದೆ.

ನೇಮಕಾತಿಗಳನ್ನುಇಂತಹ ದುಬಾರಿ ಶುಲ್ಕದ ಸಂಸ್ಥೆಗಳಿಂದ ಮಾಡಿಕೊಳ್ಳುವ ಒಲವು ಇರುವುದರಿಂದಾಗಿ ಇದು ಸಮಾನ ಅವಕಾಶಗಳನ್ನು ದುರ್ಬಲಗೊಳಿಸುತ್ತದೆ. ಸಾರ್ವಜನಿಕ ಶಿಕ್ಷಣ ಸಂಸ್ಥೆಗಳಿಗಿಂತ ಹೆಚ್ಚಿನ ಶುಲ್ಕವನ್ನು ಅವು ವಿಧಿಸುವಂತಿಲ್ಲ ಎಂದು ನಿಯಂತ್ರಿಸುವ ಮೂಲಕ ಅವುಗಳನ್ನು ಎದುರಿಸಬೇಕಾಗುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಅವು ದತ್ತಿ ಸಂಸ್ಥೆಗಳು ಮಾತ್ರವೇ ಆಗಿರಬಹುದು.

ಐದನೇ ಅಗತ್ಯವು ಆರೋಗ್ಯ ರಕ್ಷಣೆಗೆ ಸಂಬಂಧಿಸುತ್ತದೆ. ಇಲ್ಲಿಯೂ ಸಹ ಅದೇ ಪರಿಗಣನೆಗಳು ನಿಖರವಾಗಿ ಅನ್ವಯಿಸುತ್ತವೆ. ಸರ್ಕಾರದ ಆಶ್ರಯದಲ್ಲಿ ಪೂರ್ಣ ಉಚಿತವಾಗಿ ಅಥವಾ ಎಲ್ಲರಿಗೂ ಕೈಗೆಟುಕುವ ಮತ್ತು ಹೆಸರಿಗಷ್ಟೆ ಶುಲ್ಕ ಎನ್ನುವ ಒಂದು ಉತ್ತಮ-ಗುಣಮಟ್ಟದ ರಾಷ್ಟ್ರೀಯ ಆರೋಗ್ಯ ಸೇವೆಯನ್ನು ಸಾರ್ವತ್ರಿಕವಾಗಿ ಒದಗಿಸುವುದು ಅವಕಾಶಗಳ ಸಮಾನತೆಗೆ ಒಂದು ಅತ್ಯಗತ್ಯ ಸ್ಥಿತಿಯಾಗುತ್ತದೆ.

ವರ್ಗ ವೈಷಮ್ಯಗಳಿರದ ಸಮಾಜದಲ್ಲಿ ಮಾತ್ರ

ಸಮಾನ ಅವಕಾಶಗಳು ಒದಗುವಂತೆ ಖಚಿತಪಡಿಸಿಕೊಳ್ಳಲು ಇವು ಸ್ಪಷ್ಟವಾದ ಮತ್ತು ಕನಿಷ್ಠವಾದ ಕೆಲವು ಅವಶ್ಯಕತೆಗಳಾಗಿವೆ. ಮುಂದುವರೆದ ಬಂಡವಾಳಶಾಹಿ ದೇಶಗಳಲ್ಲಿ ಕಲ್ಯಾಣ ಪ್ರಭುತ್ವವನ್ನು ನಿರ್ಮಿಸಿದ ಯುದ್ಧಾ ನಂತರದ ಸಾಮಾಜಿಕ ಪ್ರಜಾಪ್ರಭುತ್ವವು ನಿರುದ್ಯೋಗವನ್ನು ಕನಿಷ್ಠ ಮಟ್ಟಕ್ಕೆ (1960ರ ದಶಕದ ಆರಂಭದಲ್ಲಿ ಬ್ರಿಟನ್‌ನಲ್ಲಿ ನಿರುದ್ಯೋಗವು ಸುಮಾರು ಶೇ. 2ರಷ್ಟು ಕೆಳಗಿತ್ತು) ತರುವಲ್ಲಿ ಕೀನ್ಸ್ ಅವರ ಬೇಡಿಕೆ-ನಿರ್ವಹಣೆ ವಿಧಾನವನ್ನು ಬಳಸಿಕೊಂಡಿತು.

ಆದರೂ ಅದು ನೈಜ ಸಮಾನ ಅವಕಾಶಗಳನ್ನು ಸಾಧಿಸುವಲ್ಲಿಯೂ ಯಶಸ್ವಿಯಾಗಲಿಲ್ಲ ಅಥವಾ ಸುದೀರ್ಘ ಬಾಳಿಕೆಯ ಸಾಧನೆಯೂ ಆಗಲಿಲ್ಲ (ಅರವತ್ತರ ದಶಕದ ಕೊನೆಯಲ್ಲಿ ಮತ್ತು ಎಪ್ಪತ್ತರ ದಶಕದ ಆರಂಭದಲ್ಲಿ ಉಂಟಾದ ಹಣ ದುಬ್ಬರದ ಬಿಕ್ಕಟ್ಟಿನಿಂದ ಅದು ಕುಸಿದು ಬಿತ್ತು) ಎಂಬ ಅಂಶವು ಮಹತ್ವದ್ದಾಗಿದೆ: ಇದು ವರ್ಗದ ಆಧಾರದಲ್ಲಿ ವಿಭಜನೆ ಮುಂದು ವರೆಯುತ್ತಿರುವ ಸಮಾಜದಲ್ಲಿ ಅವಕಾಶಗಳಲ್ಲಿ ಸಮಾನತೆಯನ್ನು ಸಾಧಿಸುವುದು ಅಸಾಧ್ಯ“ಎಂಬುದನ್ನು ತೋರಿಸುತ್ತದೆ.

ಕಲ್ಯಾಣ ಪ್ರಭುತ್ವವನ್ನು ನುಂಗಿಹಾಕಿದ ಹಣ ದುಬ್ಬರದ ಬಿಕ್ಕಟ್ಟು ಉನ್ನತ ಉದ್ಯೋಗ ದರದ ಪರಿಣಾಮವಾಗಿತ್ತು ಮತ್ತು ಮುಂದುವರೆದ ಈ ದೇಶಗಳು ಈ ಹಿಂದೆ ವಸಾಹತು ಶಾಹಿ ಅಡಿಯಲ್ಲಿ ತಮಗೆ ಒದಗುತ್ತಿದ್ದ ದೂರದ ದೇಶಗಳ ಪ್ರಾಥಮಿಕ ಸರಕು ಉತ್ಪಾದಕರ ಮೇಲಿನ ನಿಯಂತ್ರಣವನ್ನು ಸಂಪೂರ್ಣವಾಗಿ ಕಳೆದು ಕೊಂಡದ್ದರ ಪರಿಣಾಮವಾಗಿತ್ತು; ಈ ಬೆಳವಣಿಗೆಗಳು ವರ್ಗ ಸಂಘರ್ಷವನ್ನು ತೀವ್ರಗೊಳಿಸಿದವು ಮತ್ತು ಅದರ ಪರಿಣಾಮವೇ ಆ ಹಣ ದುಬ್ಬರ. ಉತ್ಪಾದನಾ ಸಾಧನಗಳ ಸಾಮಾಜಿಕ ಒಡೆತನದ ಕಾರಣದಿಂದ ವರ್ಗ ವೈಷಮ್ಯಗಳು ಇರದ ಒಂದು ಸಮಾಜದಲ್ಲಿ ಮಾತ್ರ ಅವಕಾಶಗಳಲ್ಲಿ ನಿಜವಾದ ಸಮಾನತೆ ಇರುವುದು ಸಾಧ್ಯ.

ಇರಲಿ. ಈ ಬಗ್ಗೆ ವಾದವನ್ನು ಮುಂದುವರೆಸುವುದು ಬೇಡ. ಸಮಾನತೆಯಿರುವ ಒಂದು ಕಲ್ಯಾಣ ಪ್ರಭುತ್ವವನ್ನು ಒದಗಿಸುವುದಕ್ಕೆ ಸುಪ್ರೀಂಕೋರ್ಟ್ ಭದ್ಧವಾಗಿರಲಿ.

ಇದನ್ನೂ ನೋಡಿ: Karnataka legislative assembly Day 01 Live. 16ನೇ ವಿಧಾನಸಭೆಯ ಚಳಿಗಾಲದ ಅಧಿವೇಶನದ ನೇರ ಪ್ರಸಾರ

Donate Janashakthi Media

Leave a Reply

Your email address will not be published. Required fields are marked *