ಸಾಮಾಜಿಕ ನೈತಿಕತೆಯೂ ರಾಜಕೀಯ ಮಾಲಿನ್ಯವೂ

ನಾಗರಿಕ ಪ್ರಪಂಚದಲ್ಲಿ ರಾಜಕಾರಣವು ಸಮಾಜದ ಪ್ರತಿಫಲನವಾಗಿರುವುದು ಆರೋಗ್ಯಕರ

– ನಾ ದಿವಾಕರ

ಬದಲಾಗುತ್ತಿರುವ ಭಾರತದಲ್ಲಿ ಅತ್ಯಂತ ನಿರ್ಲಕ್ಷ್ಯಕ್ಕೊಳಗಾಗಿರುವ ವಿಚಾರ ಎಂದರೆ ವ್ಯಕ್ತಿಗತ ನೆಲೆಯ ಹಾಗೂ ಸಾಂಸ್ಥಿಕ-ಸಾಂಘಿಕ ನೆಲೆಯ ಪ್ರಾಮಾಣಿಕತೆ, ನೈತಿಕ ನಡವಳಿಕೆ ಮತ್ತು ಜೀವನ ನಿಷ್ಠೆಯ ಪಾತಾಳ ಕುಸಿತ ಹಾಗೂ ಅದರಿಂದಾಗುತ್ತಿರುವ ಅಪಾಯಗಳು. ಕಳೆದ 75 ವರ್ಷಗಳ ಸ್ವತಂತ್ರ ಆಳ್ವಿಕೆಯಲ್ಲಿ ಆಗಿಹೋಗಿರುವ ಅನೇಕ ರಾಜಕೀಯ-ಸಾಂಸ್ಕೃತಿಕ ನಾಯಕರಲ್ಲಿ ಕೆಲವರಾದರೂ ಬಿಟ್ಟುಹೋಗಿರುವ ಸಾರ್ವಜನಿಕ ನೈತಿಕ ಪ್ರಜ್ಞೆ ಹಾಗೂ ಸಾಮಾಜಿಕ ನಿಷ್ಠೆ, ವರ್ತಮಾನ ಭಾರತದ ಅಧಿಕಾರ ರಾಜಕಾರಣದ ಅಂಗಳದಲ್ಲಿ ಸಂಪೂರ್ಣ ಬೆತ್ತಲಾಗಿ ನಿಂತಿದೆ. ವ್ಯಕ್ತಿಗತ ನಿಷ್ಠೆ ಮತ್ತು ಬದ್ಧತೆಗಳನ್ನು ಆದಷ್ಟೂ ಸಂಕುಚಿತಗೊಳಿಸಿ ನಾಯಕತ್ವದ ಅಥವಾ ಪಕ್ಷರಾಜಕಾರಣದ ಹೊಸ್ತಿಲಲ್ಲಿರಿಸಲಾಗಿರುವ ಈ ಹೊತ್ತಿನಲ್ಲಿ ʼ ರಾಜಕಾರಣ ʼ ಎಂಬ ವಿದ್ಯಮಾನವೇ ವಿಶಾಲ ಸಮಾಜದ ಹಿಡಿತಕ್ಕೆ ನಿಲುಕದ ಹಾಗೆ ತನ್ನದೇ ಆದ ಕ್ಷುದ್ರ ಜಗತ್ತನ್ನು ಸೃಷ್ಟಿಸಿಕೊಂಡಿದೆ.

“ ನೀವು ಆಯ್ಕೆ ಮಾಡುವ ಸರ್ಕಾರವು ನಿಮ್ಮ ಅರ್ಹತೆಗೆ ತಕ್ಕುದಾಗಿರುತ್ತದೆ ”, ಅಮೆರಿಕದ ಮಾಜಿ ಅಧ್ಯಕ್ಷ ಥಾಮಸ್‌ ಜೆಫರ್‌ಸನ್‌ ಅವರ ಈ ಚಾರಿತ್ರಿಕ ಅಭಿವ್ಯಕ್ತಿಯನ್ನು 21ನೆಯ ನವ ಭಾರತದ ನ್ಯಾಯತಕ್ಕಡಿಯಲ್ಲಿಟ್ಟು ನೋಡಿದಾಗ, ಭಾರತದ ಪ್ರಜೆಗಳಾದ ನಾವು ಆಯ್ಕೆ ಮಾಡುತ್ತಿರುವ ಸರ್ಕಾರಗಳು, ಪ್ರತಿನಿಧಿಗಳು ನಮ್ಮ ಅರ್ಹತೆಗೆ ತಕ್ಕಂತೆ ಇರುವುದೇ ಅನುಮಾನಸ್ಪದವಾಗಿ ಕಾಣುತ್ತದೆ. ಅಥವಾ ಬದಲಾಗುತ್ತಿರುವ ನವ ಭಾರತದಲ್ಲಿ ಸಮಾಜವೇ ತನ್ನ ನೈತಿಕ ಅರ್ಹತೆಯನ್ನು ಕಳೆದುಕೊಂಡಿದೆಯೇ ಎಂಬ ಜಿಜ್ಞಾಸೆಯೂ ಮೂಡುತ್ತದೆ. ಮಣಿಪುರದ ಘಟನೆ, ಉತ್ತರ ಪ್ರದೇಶದ ಉನ್ನಾವೋ, ಕುಸ್ತಿಪಟುಗಳ ಮೇಲಿನ ದೌರ್ಜನ್ಯ ಮತ್ತು ಇತ್ತೀಚಿನ ಹಾಸನದ ಪೆನಡ್ರೈವ್‌ ಹಗರಣಗಳನ್ನು ಗಮನಿಸಿದಾಗ ಭಾರತದ ಮತದಾರರು ತಮ್ಮ ಅರ್ಹತೆಗೆ ತಕ್ಕಂತೆ ಆಳ್ವಿಕೆಯನ್ನು ಆಯ್ಕೆ ಮಾಡುತ್ತಿದ್ದಾರೋ ಅಥವಾ ಆಳ್ವಿಕೆಯ ಸಮ್ಮೋಹನಕ್ಕೆ ಬಲಿಯಾಗಿ ತಮ್ಮ ಸ್ವ ಪ್ರಜ್ಞೆಯನ್ನೂ ಕಳೆದುಕೊಂಡಿದ್ದಾರೋ ಎಂಬ ಅನುಮಾನವೂ ಮೂಡುತ್ತದೆ.

ಸ್ವಚ್ಛ ರಾಜಕಾರಣದ ಕೊರತೆ

ಶುಭ್ರ ಶ್ವೇತ ವಸ್ತ್ರದ ರಾಜಕಾರಣಿ ಎಂದರೆ ಸಮಾಜದ ನಡುವೆ ಪ್ರಜ್ವಲಿಸಬೇಕಾದ ಒಂದು ವ್ಯಕ್ತಿತ್ವವಾಗಿರಬೇಕು ಎಂಬ ನಂಬಿಕೆ ನಮ್ಮಲ್ಲಿತ್ತು ಎನ್ನುವುದು ಬಹುಶಃ ಮುಂದಿನ ಪೀಳಿಗೆಗಳಿಗೆ ಪಂಚತಂತ್ರ ಕತೆಯಂತೆ ಕೇಳಿಸಬಹುದು. ವಸ್ತುಸ್ಥಿತಿಯನ್ನು ಗಮನಿಸುತ್ತಿದ್ದರೆ ವರ್ತಮಾನ ಭಾರತದಲ್ಲೇ ಇಂತಹ ಕಥನಗಳು ಕಾಗಕ್ಕ-ಗೂಬಕ್ಕ ಕತೆಗಳಂತೆ ಕಾಣಬಹುದು. ತಳಮಟ್ಟದ ಸಾಮಾಜಿಕ-ಆರ್ಥಿಕ ಸ್ತರದಿಂದ ಅತ್ಯಾಧುನಿಕ ಸುಶಿಕ್ಷಿತ ಉನ್ನತ ಹಂತದವರೆಗೆ ವಿಸ್ತರಿಸುವ ʼ ವಿಶಾಲ ಸಮಾಜʼವು,  ತನ್ನ ನಡೆನುಡಿಗಳನ್ನು, ಚಟುವಟಿಕೆಗಳನ್ನು, ಬೌದ್ಧಿಕ ಕ್ರಿಯೆಯನ್ನು ಹಾಗೂ ಸಾಂಸ್ಕೃತಿಕ ಕ್ರಿಯೆಗಳನ್ನು ನಿರ್ದೇಶಿಸುವ-ನಿಯಂತ್ರಿಸುವ ಮತ್ತು ಕೆಲವೊಮ್ಮೆ ನಿರ್ವಹಿಸುವ ಒಂದು ಸಾಂಸ್ಥಿಕ ಭೂಮಿಕೆಯನ್ನು ಸಹಜವಾಗಿಯೇ ಬಯಸುತ್ತದೆ. ಈ ಭೂಮಿಕೆಯನ್ನು ಪರಿಪೂರ್ಣವಾಗಿಸುವ ನಿಟ್ಟಿನಲ್ಲಿ ದೇಶದ ಆಳ್ವಿಕೆ ಅಥವಾ ಚುನಾಯಿತ ಸರ್ಕಾರಗಳು ಪ್ರಧಾನ ಪಾತ್ರ ವಹಿಸಬೇಕಾಗುತ್ತದೆ.

60ಕ್ಕೂ ಹೆಚ್ಚು ಪ್ರತಿಶತ ಜನರು ಆಧುನಿಕತೆಯ ಚೌಕಟ್ಟಿನಿಂದ ಹೊರಗಿರುವ ಭಾರತದಂತಹ ಸಾಂಪ್ರದಾಯಿಕ-ಶ್ರೇಣೀಕೃತ ಸಮಾಜದಲ್ಲಿ, ವ್ಯಕ್ತಿಗತ ನೆಲೆಯಲ್ಲಿ ಸಾಮಾನ್ಯ ಜನತೆ ರೂಢಿಸಿಕೊಳ್ಳಬೇಕಾದ ಜೀವನ ನಿಷ್ಠೆ, ಮನುಜ ಸೂಕ್ಷ್ಮತೆ, ಲಿಂಗ ಸಂವೇದನೆ ಹಾಗೂ ಮಾನವೀಯತೆಯ ಲಕ್ಷಣಗಳನ್ನು ನಿರ್ದೇಶಿಸುವಂತಹ ಸಾಂಸ್ಥಿಕ ಶಕ್ತಿ ಅತ್ಯವಶ್ಯವಾಗಿರುತ್ತದೆ. ಶಿಕ್ಷಣ, ಅಧ್ಯಾತ್ಮ ಹಾಗೂ ಇನ್ನಿತರ ಬೌದ್ಧಿಕ ಚಟುವಟಿಕೆಗಳ ಮೂಲಕ ಈ ಮೌಲ್ಯಗಳನ್ನು ಬಿತ್ತುವ ಪ್ರಕ್ರಿಯೆಗೆ ಕ್ರಿಯಾಶೀಲತೆಯನ್ನು ಒದಗಿಸುವ ಚಾಲನಾಶಕ್ತಿಯೊಂದು ಬೇಕಾಗಿರುತ್ತದೆ. 21ನೆಯ ಶತಮಾನದ ಭಾರತದ ದುರಂತ ಎಂದರೆ ಈ ಚಾಲನಾಶಕ್ತಿಗಳೆಲ್ಲವೂ ಅಧಿಕಾರ ರಾಜಕಾರಣದ ಬಾಹುಗಳಲ್ಲಿ ಸಿಲುಕಿ ತಮ್ಮ ಸ್ವಂತಿಕೆಯನ್ನು ಕಳೆದುಕೊಂಡಿವೆ. ನವ ಉದಾರವಾದಿ ಆರ್ಥಿಕತೆಯು ಈ ಮೂರೂ ನೆಲೆಗಳ ಅಭಿವ್ಯಕ್ತಿ ಮಾದರಿಗಳನ್ನು ಸರಕೀಕರಣಗೊಳಿಸುವ (Commodification) ಮೂಲಕ ತಳಮಟ್ಟದವರೆಗಿನ ಜೀವನಾವಶ್ಯ ಮೌಲ್ಯಗಳನ್ನೂ ಕಲುಷಿತಗೊಳಿಸಿಬಿಟ್ಟಿದೆ.

ಸಾಂಸ್ಥಿಕ ಮೌಲ್ಯಗಳ ಕುಸಿತ

ತಮ್ಮ ಆಧ್ಯಾತ್ಮಿಕ ಪೊರೆ ಕಳಚಿಕೊಂಡು, ವಾಣಿಜ್ಯ ಸಾಮ್ರಾಜ್ಯಗಳನ್ನು ವಿಸ್ತರಿಸುತ್ತಿರುವ ದೇಶದ ಅಧ್ಯಾತ್ಮ ಕೇಂದ್ರಗಳು ಅಧಿಕಾರ ರಾಜಕಾರಣದ ಕೇಂದ್ರಗಳಾಗಿರುವುದೇ ಅಲ್ಲದೆ, ಕಾರ್ಪೋರೇಟ್‌ ಮಾರುಕಟ್ಟೆಯನ್ನು ಪೋಷಿಸುವ ಶಕ್ತಿ ಕೇಂದ್ರಗಳಾಗಿಯೂ ಬೆಳೆದುನಿಂತಿವೆ. ರಾಜಕೀಯ ಪ್ರಕ್ರಿಯೆಯು ಸಮಾಜದ ಕೆಳಸ್ತರದವರೆಗೂ ನಿಲುಕುವಂತೆ ಮಾಡಲು ಅಗತ್ಯವಾದ ಅಧ್ಯಾತ್ಮದ ಸರಕುಗಳೆಲ್ಲವನ್ನೂ ಮಾರುಕಟ್ಟೆಯ ವಿಲೇವಾರಿಗೆ ಮುಕ್ತವಾಗಿಸುವ ಮೂಲಕ, ಭಾರತದ ರಾಜಕಾರಣವೂ ತನ್ನ ಆಧ್ಯಾತ್ಮಿಕ ಸ್ಪರ್ಶವನ್ನು ಕಳೆದುಕೊಂಡು ಕೊಡು-ಕೊಳ್ಳುವಿಕೆಯ ಹರಾಜು ಮಾರುಕಟ್ಟೆಯಂತಾಗಿದೆ. ಎರಡು ದಶಕಗಳ ಹಿಂದೆ ಅಲ್ಪಮಟ್ಟದಲ್ಲಾದರೂ ಅಲ್ಲಲ್ಲಿ ಗುರುತಿಸಬಹುದಾಗಿದ್ದ ಆಧ್ಯಾತ್ಮಿಕತೆ ಇಂದು ನಿಶ್ಶೇಷವಾಗಿದ್ದು, ʼರಾಜಕಾರಣʼ ಎಂದರೆ ಲೋಭ, ಮತ್ಸರ, ದ್ವೇಷ, ಅಸೂಯೆ ಹಾಗೂ ಸ್ವಾರ್ಥಪರತೆಯ ಆಡುಂಬೊಲವಾಗಿದೆ. ಈ ರಾಜಕಾರಣವನ್ನೇ ಅವಲಂಬಿಸಿ, ಪೋಷಿಸಿ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುವ ಅಧ್ಯಾತ್ಮ ಕೇಂದ್ರಗಳು ಸ್ವತಃ ಅನೈತಿಕತೆಯ ಕೂಪಗಳಾಗಿರುವುದನ್ನು ಹಲವು ಪ್ರಸಂಗಗಳಲ್ಲಿ ಗಮನಿಸಿದ್ದೇವೆ.

ತನ್ನ ಸಾಂಸ್ಥಿಕ ಮೌಲ್ಯಗಳನ್ನು ಮಾರುಕಟ್ಟೆಯ ಜಗುಲಿಯಲ್ಲಿಟ್ಟು ಚುನಾಯಿತ ಪ್ರತಿನಿಧಿಗಳನ್ನು, ಸರ್ಕಾರಗಳನ್ನು ವಿನಿಮಯ ವಸ್ತುಗಳನ್ನಾಗಿಸಿರುವ ನವ ಭಾರತದ ರಾಜಕೀಯ ವ್ಯವಸ್ಥೆಯು ಆಯ್ಕೆದಾರರ ದೃಷ್ಟಿಯಲ್ಲಿ ಕೇವಲ ಸಾಂವಿಧಾನಿಕ ಅನಿವಾರ್ಯತೆಯ ಸೃಷ್ಟಿಯಂತಾಗಿದೆ. ಸಾಂವಿಧಾನಿಕ ಉತ್ತರದಾಯಿತ್ವ, ಸಾಮಾಜಿಕ ಬದ್ಧತೆ ಹಾಗೂ ಸಾಂಸ್ಕೃತಿಕ ಪ್ರಾಮಾಣಿಕತೆಯಿಂದ ಪೂರ್ಣ ಮುಕ್ತವಾಗಿರುವ ಅಧಿಕಾರ ರಾಜಕಾರಣದ ಕೇಂದ್ರಗಳು , ಚುನಾಯಿತ ಜನಪ್ರತಿನಿಧಿಗಳ ಸ್ವೇಚ್ಛಾಚಾರಗಳಿಗೆ ಆಶ್ರಯತಾಣಗಳಾಗಿ ಪರಿಣಮಿಸಿವೆ. ಇಲ್ಲಿ ಆಳ್ವಿಕೆಯ ಒಂದು ಭಾಗವಾಗಿರುವ ಅಧಿಕಾರಶಾಹಿಯು ಆಡಳಿತ ವ್ಯವಸ್ಥೆಯ ಪ್ರತಿಯೊಂದು ಹಂತದಲ್ಲೂ ರಾಜಕೀಯ ಪ್ರಭಾವಕ್ಕೊಳಗಾಗಿರುವುದರಿಂದ, ಕಾರ್ಯಾಂಗದಲ್ಲಿ ಅಪೇಕ್ಷಿಸಬಹುದಾದ ಜನಪರ ಕಾಳಜಿ ಅಥವಾ ಉತ್ತರದಾಯಿತ್ವ ಸಂಪೂರ್ಣ ನಶಿಸಿಹೋಗಿದೆ. ಶಾಸಕಾಂಗ ಹಾಗೂ ಕಾರ್ಯಾಂಗವನ್ನು ಪ್ರತಿನಿಧಿಸುವ ವ್ಯಕ್ತಿಗಳಲ್ಲಿ ವ್ಯಕ್ತಿಗತ ಸಾಮಾಜಿಕ ಬದ್ಧತೆ ಮತ್ತು ಸಾಂಸ್ಕೃತಿಕ ನೈತಿಕತೆ ಇಲ್ಲದಿರುವುದರಿಂದಲೇ  ಹಾಸನದಂತಹ ಪ್ರಕರಣಗಳು ಸಂಭವಿಸುತ್ತವೆ.

ವ್ಯಕ್ತಿಗತ ನೆಲೆಯಲ್ಲಿನ ಗಂಡು-ಹೆಣ್ಣು ಸಂಬಂಧಗಳಿಂದಾಚೆ ನಿಂತು ನೋಡಿದಾಗ, ಭಾರತೀಯ ಸಮಾಜವನ್ನು ನಿರ್ದೇಶಿಸಿ ನಿಯಂತ್ರಿಸುವ ಪಿತೃಪ್ರಧಾನ ಯಜಮಾನಿಕೆಯ ಸಂಸ್ಕೃತಿಯಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾಗುವ ಹೆಣ್ಣು ಸಹ ಸಾಮಾಜಿಕ ಒತ್ತಡಗಳಿಗೆ ಮಣಿದು ತನ್ನೊಳಗಿನ ನೋವನ್ನು ಅದುಮಿಟ್ಟುಕೊಳ್ಳುವುದು ಸಾಮಾನ್ಯ ಸಂಗತಿ. ಹಳ್ಳಿಗಾಡಿನಿಂದ ಮೆಟ್ರೋಪಾಲಿಟನ್‌ ನಗರಗಳವರೆಗೆ ವ್ಯಾಪಿಸಿರುವ ಗಂಡಾಳ್ವಿಕೆಯ ಆಡಳಿತ ವ್ಯವಸ್ಥೆ ಹಾಗೂ ಸಾಂಸ್ಕೃತಿಕ ವಲಯವು ಮಹಿಳಾ ಸಂಕುಲದ ಈ ಅಸಹಾಯಕತೆಯನ್ನೇ ಬಳಸಿಕೊಂಡು ತನ್ನ ಪುರುಷಾಧಿಪತ್ಯವನ್ನು ಸಾಧಿಸಲು ಪ್ರಯತ್ನಿಸುತ್ತದೆ. ಸಾರ್ವಜನಿಕ ಬದುಕಿನಲ್ಲಿ ತಾನು ಎದುರಿಸಬೇಕಾದ ಕಳಂಕ, ಅಪಮಾನಗಳಿಗೆ ಹೆದರಿ ದೌರ್ಜನ್ಯಗಳನ್ನು ಸಹಿಸಿಕೊಳ್ಳುವ ಹೆಣ್ಣು ಮಕ್ಕಳು ಯಾವುದೋ ಒಂದು ಸಂದರ್ಭದಲ್ಲಿ ತಾವು ಅನುಭವಿಸಿದ ಯಾತನೆಯನ್ನು ಬಹಿರಂಗಪಡಿಸಿದ ಕೂಡಲೇ, ಸಮಾಜವನ್ನು ನಿಯಂತ್ರಿಸುವ ರಾಜಕೀಯ-ಸಾಂಸ್ಕೃತಿಕ-ಬೌದ್ಧಿಕ ವಲಯಗಳು ಪುರುಷಾಧಿಪತ್ಯವನ್ನು ರಕ್ಷಿಸುವ ಭದ್ರಕವಚಗಳಾಗಿಬಿಡುತ್ತವೆ.

ದುರಂತ ಎಂದರೆ ಈ ಭದ್ರಕವಚವನ್ನು ಮತ್ತಷ್ಟು ವರ್ಣರಂಜಿತವಾಗಿ ಬಿಂಬಿಸುವ ಕೆಲಸವನ್ನು ಹಾಗೂ ಅದರೊಳಗಿನ ವಿಕೃತ ಸಮಾಜವನ್ನು ಕಾಪಾಡುವ ಜವಾಬ್ದಾರಿಯನ್ನು ನವ ಭಾರತದ ಮಾಧ್ಯಮಗಳು ವಹಿಸಿಕೊಳ್ಳುತ್ತವೆ (ಕೆಲವು ಅಪವಾದಗಳನ್ನು ಹೊರತುಪಡಿಸಿ). ಪ್ರಜಾಪ್ರಭುತ್ವದ ನಾಲ್ಕನೆಯ ಆಯಾಮ ಅಥವಾ ಸ್ತಂಭ ಎಂದೆನಿಸಿಕೊಂಡಿರುವ ಮಾಧ್ಯಮ ವಲಯವು ಸಮಾಜದಲ್ಲಿ ನಶಿಸುತ್ತಿರುವ ನೈತಿಕ ಮೌಲ್ಯಗಳನ್ನು ಗುರುತಿಸಿ, ಈ ಅಪಮೌಲ್ಯೀಕರಣಕ್ಕೆ ತುತ್ತಾಗುವ ದುರ್ಬಲ ವರ್ಗಗಳಲ್ಲಿ ಸ್ವಾಭಿಮಾನವನ್ನು ಬೆಳೆಸುವ ನಿಟ್ಟಿನಲ್ಲಿ ಕೆಲವು ಹೆಜ್ಜೆಗಳನ್ನಾದರೂ ಇರಿಸಿದರೆ ಬಹುಶಃ ನೈತಿಕ ಅಧಃಪತನದತ್ತ ಸಾಗುತ್ತಿರುವ ಸಮಾಜವನ್ನು ಹಿಡಿದೆತ್ತಲು ಸಾಧ್ಯವಾಗಬಹುದು. ಆದರೆ ಮಾರುಕಟ್ಟೆ ಆರ್ಥಿಕತೆ ಸರಕೀಕರಣಗೊಳಿಸುವ (Commodification) ಸಾಮಾಜಿಕ-ಸಾಂಸ್ಕೃತಿಕ ಮೌಲ್ಯಗಳನ್ನೇ ತಮ್ಮ ಬಂಡವಾಳವಾಗಿ ಮಾಡಿಕೊಳ್ಳುವ ಮಾಧ್ಯಮಗಳು ತಮ್ಮ ಈ ಜವಾಬ್ದಾರಿಯಿಂದ ವಿಮುಖವಾಗುತ್ತಿವೆ. ಇದಕ್ಕೆ ಕಾರಣ ಮಾಧ್ಯಮಗಳ ಮೇಲಿನ ಅಧಿಕಾರ ರಾಜಕಾರಣದ ಪ್ರಭಾವ ಮತ್ತು ಹಿಡಿತ.

ಇದನ್ನು ಓದಿ : ಸಣ್ಣ ಮಳೆ ನಡುವೆ, ಕರ್ನಾಟಕದ ಕೆಲವು ಭಾಗಗಳಲ್ಲಿ ಬಿಸಿಗಾಳಿ ಪರಿಸ್ಥಿತಿಗಳು ಇರುತ್ತವೆ: ಐಎಂಡಿ

ಬೌದ್ಧಿಕ ವಲಯದ ನಿಷ್ಕ್ರಿಯತೆ

ಸಾಮಾಜಿಕ ನೈತಿಕತೆಯ ಈ ಪಾತಾಳ ಕುಸಿತವನ್ನು ತಡೆಗಟ್ಟುವ ಅಥವಾ ಹೋಗಲಾಡಿಸುವ ಬಹುದೊಡ್ಡ ಜವಾಬ್ದಾರಿ ನಮ್ಮ ಶೈಕ್ಷಣಿಕ-ಬೌದ್ಧಿಕ ವಲಯದ ಮೇಲಿದೆ. ಗ್ರಾಮೀಣ ಶಾಲೆಯಿಂದ ವಿಶ್ವವಿದ್ಯಾಲಯದವರೆಗೆ ವ್ಯಾಪಿಸಿರುವ ವಾಣಿಜ್ಯಾಸಕ್ತಿ, ಕಾರ್ಪೋರೇಟೀಕರಣ ಹಾಗೂ ರಾಜಕೀಯ ಪ್ರಭಾವವು ಇಡೀ ಶೈಕ್ಷಣಿಕ ವಲಯವನ್ನು ಸಾಮಾಜಿಕ ನೈತಿಕತೆಯಿಂದ ವಿಮುಖಗೊಳಿಸಿದೆ. ಮಕ್ಕಳಲ್ಲಿ ನೈತಿಕತೆಯನ್ನು ಬೋಧಿಸಬೇಕಾದ ವಲಯದಲ್ಲಿ ಸ್ವಜನಪಕ್ಷಪಾತ, ಭ್ರಷ್ಟಾಚಾರ, ಅಪ್ರಾಮಾಣಿಕತೆ ಇವೆಲ್ಲವೂ ತಾಂಡವವಾಡುತ್ತಿರುವಂತೆಯೇ ಮನುಜ ಸಂಬಂಧಗಳೂ ವ್ಯಾವಹಾರಿಕವಾಗುತ್ತಿದೆ. ಪಾರದರ್ಶಕತೆಯನ್ನೇ ಕಳೆದುಕೊಂಡಿರುವ ಬೌದ್ಧಿಕ ವಲಯವು ತನ್ನೊಳಗೇ ಕ್ಷೀಣಿಸುತ್ತಿರುವ ಮನುಜ ಮೌಲ್ಯಗಳಿಗೆ ಕುರುಡಾಗಿರುವುದು, ಸಮಾಜದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿರುವುದನ್ನು ಗಮನಿಸಬಹುದು. ಈ ನೈತಿಕ ಪಾತಾಳ ಕುಸಿತಕ್ಕೆ ಹೊಣೆ ಯಾರು ? ಎಂದು ಯೋಚಿಸಿದಾಗ, ಪುನಃ ಇಲ್ಲಿಯೂ ತನ್ನ ಬಾಹುಗಳನ್ನು ಚಾಚಿರುವ ಆಳ್ವಿಕೆಯ ಕೇಂದ್ರಗಳು ಗೋಚರಿಸುತ್ತವೆ. ಪಾರದರ್ಶಕತೆ/ನೈತಿಕತೆಯನ್ನು ಕಳೆದುಕೊಂಡಿರುವ ರಾಜಕೀಯ ವ್ಯವಸ್ಥೆಗೆ ಈ ನೈತಿಕ ಕುಸಿತವೂ ಸಹ ಸಮಾಜವನ್ನು ನಿಯಂತ್ರಿಸಲು ನೆರವಾಗುವ ಅಸ್ತ್ರವಾಗಿಬಿಡುತ್ತದೆ.

ಇದನ್ನು ಸರಿಪಡಿಸುವ ಹೊಣೆಗಾರಿಕೆ ಯಾರದು ? ಬಾಹ್ಯ ಸಮಾಜದ ಸಾಂಸ್ಕೃತಿಕ ನೆಲೆಗಳಲ್ಲಿ ಸಾಹಿತ್ಯ, ಕಲೆ ಮತ್ತು ರಂಗಭೂಮಿಯಂತಹ ವೇದಿಕೆಗಳು ಈ ದೊಡ್ಡ ಜವಾಬ್ದಾರಿಯನ್ನು ಹೊರಬೇಕಿದೆ. ಆದರೆ ಭಾರತದ ರಾಜಕಾರಣವು ತನ್ನ ಮೌಲ್ಯಾಧಾರಿತ ನೆಲೆಯನ್ನು ಕಳೆದುಕೊಂಡು, ಮಾರುಕಟ್ಟೆಯ ಮೌಲ್ಯಾಂಕನದ ಜಗುಲಿಯಾಗಿರುವ ಹೊತ್ತಿನಲ್ಲಿ ಈ ವೇದಿಕೆಗಳೂ ಸಹ ಹಂತಹಂತವಾಗಿ ಕಲುಷಿತವಾಗುತ್ತಿವೆ ಅಥವಾ ಸ್ವಾಯತ್ತವಾಗಿ ತಮ್ಮ ಅಭಿವ್ಯಕ್ತಿಯ ಹಕ್ಕು ಪ್ರತಿಪಾದಿಸುವ ಸಾಂಸ್ಕೃತಿಕ ಧ್ವನಿಗಳನ್ನು ವ್ಯವಸ್ಥಿತವಾಗಿ ಹತ್ತಿಕ್ಕಿ ನಿಷ್ಕ್ರಿಯಗೊಳಿಸಲಾಗುತ್ತಿದೆ. ಈ ಸಾಂಸ್ಕೃತಿಕ ವಲಯವನ್ನು ಪ್ರತಿನಿಧಿಸುವ ಕಲಾವಿದರು, ಸಾಹಿತಿಗಳು ಹಾಗೂ ಸಾವಯವ ಬುದ್ಧಿಜೀವಿಗಳು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಅರಿತು ಕ್ರಿಯಾಶೀಲವಾಗುವ ಅಗತ್ಯತೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಆಳುವ ವರ್ಗಗಳ ಆಧುನಿಕ ಆಡಳಿತ ಪರಿಭಾಷೆಯಲ್ಲಿ ವಿಕೃತವಾಗಿ ವ್ಯಾಖ್ಯಾನಿಸಲ್ಪಡುವ ಈ ಧ್ವನಿಗಳೇ ಸಾಮಾಜಿಕ ನೈತಿಕತೆಯ ಪಾತಾಳ ಕುಸಿತವನ್ನು ತಡೆಗಟ್ಟುವ ಬೃಹತ್‌ ಶಕ್ತಿಯಾಗಿದೆ.

ರಾಜಕೀಯ ಠಕ್ಕುತನ

ರಾಜಕೀಯ ಕಾರಣಗಳಿಗಾಗಿ ನಾರಿ ಶಕ್ತಿ, ಮಾತೆಯರ ಗೌರವ ಮುಂತಾದ ಉದಾತ್ತ ಪರಿಭಾಷೆಯನ್ನು ಬಳಸುವ ರಾಜಕೀಯ ನಾಯಕರಿಗೆ ಮಹಿಳಾ ದೌರ್ಜನ್ಯಗಳೆಲ್ಲವೂ ಅಧಿಕಾರ ರಾಜಕಾರಣದ ಸರಕುಗಳಾಗಿಯೇ ಕಾಣುತ್ತವೆ. ರಾಜಕೀಯ ನಾಯಕರ ಉದ್ದೇಶಪೂರ್ವಕ ಮೌನ ಅಥವಾ ಉದ್ರೇಕಕಾರಿ ಅಬ್ಬರಗಳ ನಡುವೆ ಮಣಿಪುರದಿಂದ ಹಾಸನದವರೆಗೆ ಇಂತಹ ಪ್ರಕರಣಗಳು ಬಿಂಬಿಸುವ ಸಾಮಾಜಿಕ ನೈತಿಕತೆಯ ಅವನತಿಯಾಗಲೀ, ಅದರ ಹಿಂದಿನ ಸಾಮಾಜಿಕ-ಸಾಂಸ್ಕೃತಿಕ ಯಜಮಾನಿಕೆಯ ನೆಲೆಗಳಾಗಲೀ ಸದ್ದಿಲ್ಲದೆ ನೇಪಥ್ಯಕ್ಕೆ ಸರಿದುಬಿಡುತ್ತವೆ. ಕಾಲಕ್ರಮೇಣ ಸಾರ್ವಜನಿಕ ನೆನಪಿನಲ್ಲೂ ಉಳಿಯದೆ ವಿಸ್ಮೃತಿಗೆ ಜಾರಿಬಿಡುತ್ತವೆ. ಸಮಾಜದ ನೈತಿಕತೆಯನ್ನು ಹಾಗೂ ಸಾಂಸ್ಕೃತಿಕ ಪ್ರಾಮಾಣಿಕತೆಯನ್ನು ಆರೋಗ್ಯಕರ ಸ್ಥಿತಿಯಲ್ಲಿರಿಸಿ ಮುಂದೊಯ್ಯಲು ಬೇಕಾದ ಬೌದ್ಧಿಕ ಉಪಕರಣಗಳನ್ನು ಭಾರತದ ರಾಜಕಾರಣ ಕಳೆದುಕೊಂಡಿದೆ. ಹಾಗಾಗಿಯೇ ಅಪಮಾನಕ್ಕೊಳಗಾಗುವ ಅಸಹಾಯಕ ಮಹಿಳೆಯರು ಅಥವಾ ಶೋಷಿತ ಸಮುದಾಯಗಳು ಈ ರಾಜಕಾರಣದ ಅಂಗಳದಲ್ಲಿ ವಿನಿಮಯ ವಸ್ತುಗಳಾಗಿ ಮಾತ್ರ ಕಾಣುತ್ತಾರೆ.

ಅಧಿಕಾರ , ಬಂಡವಾಳ , ಸಾಂಸ್ಥಿಕ ಆಧಿಪತ್ಯ , ಸಾಮಾಜಿಕ ಪ್ರಾಬಲ್ಯ ಹಾಗೂ ವ್ಯಕ್ತಿಗತ ಏಳಿಗೆಯನ್ನೇ ಪ್ರಧಾನವಾಗಿ ಮೈಗೂಡಿಸಿಕೊಂಡಿರುವ ಭಾರತದ ರಾಜಕೀಯ ವ್ಯವಸ್ಥೆಯನ್ನು ಈ ಮಾಲಿನ್ಯಗಳಿಂದ ಮುಕ್ತಗೊಳಿಸಬೇಕಿದೆ. ಎತ್ತ ನೋಡಿದರೂ ಕಾಣಬಹುದಾದ ಸಾಮಾಜಿಕ ನೈತಿಕತೆಯ ಕುಸಿತವನ್ನು ತಡೆಗಟ್ಟಬೇಕಾದರೆ, ಇಡೀ ವ್ಯವಸ್ಥೆಯನ್ನು ನಿಯಂತ್ರಿಸುವ, ನಿರ್ವಹಿಸುವ , ನಿರ್ದೇಶಿಸುವ ರಾಜಕೀಯ ಅಧಿಕಾರ ಕೇಂದ್ರಗಳನ್ನು ಸ್ವಚ್ಚಗೊಳಿಸಬೇಕಿದೆ. ಥಾಮಸ್‌ ಜೆಫರ್‌ಸನ್‌ ಅವರ ಮಾತುಗಳನ್ನೇ ಪುನರುಚ್ಛರಿಸುವುದಾದರೆ, ಸಮಾಜವು ತನ್ನ ಅರ್ಹತೆಗೆ ತಕ್ಕಂತಹ ಆಳ್ವಿಕೆಯನ್ನೇ ಆಯ್ಕೆ ಮಾಡುತ್ತದೆ. ಈಗಿನ ಅಧಿಕಾರ ರಾಜಕಾರಣದ ಚಹರೆಯನ್ನು ಗಮನಿಸಿದರೆ, ಭಾರತೀಯ ಸಮಾಜವೇ ತನ್ನ ನೈತಿಕ ಅರ್ಹತೆಯನ್ನು ಪುನರ್‌ ವಿಮರ್ಶೆಗೊಳಪಡಿಸಿಕೊಳ್ಳಬೇಕಿದೆ. ಅಥವಾ ನಮ್ಮ ಸುಶಿಕ್ಷಿತ, ಆಧುನಿಕ, ನಾಗರಿಕ ಸಮಾಜವು ನೈತಿಕತೆ ಮತ್ತು ಪ್ರಾಮಾಣಿಕತೆಯನ್ನು ಉಳಿಸಿಕೊಂಡಿದೆ ಎಂಬ ಭರವಸೆ ಇದ್ದರೆ, ನಮ್ಮ ಅರ್ಹತೆಗೆ ತಕ್ಕಂತಹ ಸರ್ಕಾರವನ್ನು ಆಯ್ಕೆ ಮಾಡಬೇಕಿದೆ.

ಆಯ್ಕೆ ನಮ್ಮ ಮುಂದಿದೆ, ಸಮಾಜದ ಭವಿಷ್ಯವೂ ಈ ಆಯ್ಕೆಯನ್ನು ಅವಲಂಬಿಸಿದೆ.

ಇದನ್ನು ನೋಡಿ : ಮೇ ದಿನ : ಕಾರ್ಮಿಕ ವರ್ಗಕ್ಕೆ ಹಕ್ಕು ಮತ್ತು ಶಕ್ತಿ ತುಂಬಿದ ದಿನ Janashakthi Media

Donate Janashakthi Media

Leave a Reply

Your email address will not be published. Required fields are marked *