ಬೆಂಗಳೂರು: ಪದವಿಯಲ್ಲಿ ಕನ್ನಡವನ್ನು ಸಹ ಒಂದು ವಿಷಯವಾಗಿ ಕಲಿಯದ ವ್ಯಕ್ತಿ ಕನ್ನಡ ಪಠ್ಯಪುಸ್ತಕಗಳನ್ನು ಹೇಗೆ ಪರಿಷ್ಕರಿಸುತ್ತಾರೆ’ ಬಿಎಸ್ಸಿ ಪದವಿಯನ್ನಷ್ಟೇ ಪಡೆದಿರುವ ವ್ಯಕ್ತಿ ಶಾಲಾ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷರಾಗಬಹುದೆ? ಸ್ನಾತಕೋತ್ತರ ಪದವಿಯನ್ನೂ ಪಡೆಯದೆ, ಶಿಕ್ಷಕನಾಗಿ ಬೋಧಿಸದ ವ್ಯಕ್ತಿ ಇಂತಹ ಸಮಿತಿಯ ನೇತೃತ್ವ ವಹಿಸಲು ಅರ್ಹರೆ’ ಎಂದು ವೈದ್ಯ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಪ್ರಶ್ನಿಸಿದ್ದಾರೆ.
ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ರೋಹಿತ್ ಚಕ್ರತೀರ್ಥ ಬಿಎಸ್ಸಿ ಪದವಿ ಪಡೆದಿರುವ ಮಾಹಿತಿ ಇದೆ. ಪದವಿಯಲ್ಲಿ ಗಣಿತ, ಭೌತವಿಜ್ಞಾನ, ಕಂಪ್ಯೂಟರ್ ವಿಜ್ಞಾನ, ಸಂಸ್ಕೃತವನ್ನು ಎರಡನೇ ಭಾಷೆಯಾಗಿ ಕಲಿತಿರುವ ಮಾಹಿತಿ ಸಿಕ್ಕಿದೆ ಎಂದು ಡಾ. ಶ್ರೀನಿವಾಸ ಕಕ್ಕಿಲ್ಲಾಯ ತಿಳಿಸಿದ್ದಾರೆ.
‘ಈ ಹಿಂದಿನ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಅವರು ದಾಖಲಾತಿಯೊಂದಿಗೆ ಚರ್ಚೆಗೆ ಬಂದರೆ ಉತ್ತರಿಸುತ್ತೇನೆ. ಉಳಿದವರ ಆರೋಪಕ್ಕೆ ಪ್ರತಿಕ್ರಿಯೆ ನೀಡಲಾರೆ. ನನ್ನ ಶೈಕ್ಷಣಿಕ ಅರ್ಹತೆ ಬಗ್ಗೆಯೂ ಉತ್ತರಿಸುವ ಅಗತ್ಯವಿಲ್ಲ. ಸಮಿತಿಯನ್ನು ಸರ್ಕಾರ ರಚನೆ ಮಾಡಿದೆ. ಎಲ್ಲ ಆಯಾಮಗಳಿಂದಲೂ ನೋಡಿ, ನೇಮಕ ಮಾಡಲಾಗಿದೆ. ನಾನು ಐಐಟಿ–ಸಿಇಟಿ ಪ್ರಾಧ್ಯಾಪಕ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ’ ಎಂದು ರೋಹಿತ್ ಚಕ್ರತೀರ್ಥ ಪ್ರತಿಕ್ರಿಯಿಸಿದ್ದರು.