ಮಾಜಿ ಮುಖ್ಯಮಂತ್ರಿ ಎಸ್​ಎಂ ಕೃಷ್ಣ ನಿಧನ

ಬೆಂಗಳೂರು : ಕರ್ನಾಟಕ ರಾಜಕೀಯದ ಹಿರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು ಮಂಗಳವಾರ ಮುಂಜಾನೆ ನಿಧನರಾದರು.

92 ವರ್ಷದ ಎಸ್ ಎಸ್ ಎಂ ಕೃಷ್ಣ ಅವರು ಬೆಂಗಳೂರಿನ ತಮ್ಮ ಸ್ವಗೃಹದಲ್ಲಿ ಬೆಳಗಿನ ಜಾವ 3 ಗಂಟೆ ಸುಮಾರಿಗೆ ನಿಧನರಾಗಿದ್ದಾರೆ.

ಮಂಡ್ಯ ಜಿಲ್ಲೆಯ ಸೋಮನಹಳ್ಳಿಯಲ್ಲಿ ಜನಿಸಿದ ಕೃಷ್ಣ 60 ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ವಿಧಾನಸಭೆ, ಲೋಕಸಭೆ, ರಾಜ್ಯಸಭೆ ಸದಸ್ಯರಾಗಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸ್ಪೀಕರ್, ಕೇಂದ್ರ ಸಚಿವರಾಗಿ ಮತ್ತು ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ.

ಎಸ್​ಎಂ ಕೃಷ್ಣ ಅವರು ಕರ್ನಾಟಕದ ಹಿರಿಯ ರಾಜಕಾರಣಿಗಳಲ್ಲೊಬ್ಬರು. ಡಿಸೆಂಬರ್ 1989 ರಿಂದ ಜನವರಿ 1993 ರವರೆಗೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದರು. 1971 ರಿಂದ 2014 ರವರೆಗೆ ವಿವಿಧ ಸಮಯಗಳಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರಾಗಿದ್ದರು. 1999 ರಿಂದ 2004ರವರೆಗೆ ಕರ್ನಾಟಕದ 16 ನೇ ಸಿಎಂ ಆಗಿದ್ದರು. ಬಳಿಕ 2004 ರಿಂದ 2008 ರವರೆಗೆ ಮಹಾರಾಷ್ಟ್ರದ 19ನೇ ರಾಜ್ಯದ ಮಾಜಿ ರಾಜ್ಯಪಾಲರಾಗಿ ಮತ್ತು ಕೇಂದ್ರ ವಿದೇಶಾಂಗ ಸಚಿವರಾಗಿಯೂ ಸಹ ಕಾರ್ಯ ನಿರ್ವಹಿಸಿದ್ದಾರೆ.

ಇವರು ಸಿಎಂ ಆಗಿದ್ದ ವೇಳೆ ರಾಜ್ಯದಲ್ಲಿ ಎರಡು ಘಟನೆಗಳು ದೊಡ್ಡ ಮಟ್ಟದ ಚರ್ಚೆ ಉಂಟಾಯಿತು. ಡಾ. ರಾಜ್‌ಕುಮಾರ್ ಅವರನ್ನು ವೀರಪ್ಪನ್ ಮೂರು ತಿಂಗಳ ಕಾಲ ಅಪಹರಣ ಮಾಡಿದ್ದ. ಆಗ ರಾಜ್ಯದ್ಯಾಂತ ಸರಕಾರದ ವಿರುದ್ಧ ಹೋರಾಟಗಳು ನಡೆದವು. ಬಳಿಕ ಕೃಷ್ಣ ಅವರು ಅಂದಿನ ತಮಿಳುನಾಡು ಸಿಎಂ ಜಯಲಲಿತ ಅವರೊಂದಿಗೆ ಮಾತುಕತೆ ನಡೆಸಿ, ಬಳಿಕ ವೀರಪ್ಪನ್ ಸಂಪರ್ಕ ಮಾಡಿ ರಾಜ್‌ಕುಮಾರ್ ಅವರನ್ನು ಕ್ಷೇಮವಾಗಿ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಬರಗಾಲದ ಸಂದರ್ಭದಲ್ಲಿ ವೈಜ್ಞಾನಿಕವಾಗಿ ಮೋಡ ಬಿತ್ತನೆ ಮಾಡಿದ್ದರು. ಆದರೆ ಆ ಯೋಜನೆ ಯಶಸ್ವಿಯಾಗಿರಲಿಲ್ಲ. ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿದ್ದು, ಸರಕಾರಿ ಶಾಲೆ ಮಕ್ಕಳಿಗೆ ಬಿಸಿಯೂಟ, ಯಶಸ್ವಿನಿ ಯೋಜನೆ, ಬೆಂ-ಮೈ ಹೆದ್ದಾರಿ, ಐಟಿ ಬಿಟಿಯಲ್ಲಿ ಸುಧಾರಣೆ ಸೇರಿದಂತೆ ಹತ್ತಾರು ಅಭಿವೃದ್ಧಿ ಕೆಲಸಗಳಿಗೆ ಪ್ರಯತ್ನಿಸಿದ್ದರು.

ಎಸ್​ಎಂ ಕೃಷ್ಣ ಬಹುಕಾಲ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದರು. ಬಳಿಕ ರಾಜಕೀಯ ತಿರುವುಗಳಿಂದಾಗಿ ಅವರು ಬಿಜೆಪಿ ಸೇರ್ಪಡೆಗೊಂಡರು. 2017 ರಂದು ಕಾಂಗ್ರೆಸ್ ಸದಸ್ಯತ್ವಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ ಎಸ್​ಎಂ ಕೃಷ್ಣ 2017 ರಲ್ಲೇ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. 2022 ಜನವರಿ 7 ರಂದು ಎಸ್‌ಎಂ ಕೃಷ್ಣ ತಮ್ಮ 60 ವರ್ಷಗಳ ಸುದೀರ್ಘ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದರು. ಇವರಿಗೆ 2023 ಸಾಲಿನ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿತ್ತು.

ಡಿಸೆಂಬರ್ 11ಕ್ಕೆ ರಜೆ :ರಾಜ್ಯ ಸರ್ಕಾರವು ಮೂರು ದಿನಗಳ ಶೋಕಾಚರಣೆ ಘೋಷಿಸಿದೆ. ಇದೇ ವೇಳೆ ಡಿಸೆಂಬರ್ 11ರಂದು (ಬುಧವಾರ) ಸರ್ಕಾರಿ ರಜೆ ಘೋಷಿಸಲಾಗಿದೆ. ಎಸ್​ಎಂ ಕೃಷ್ಣ ಅವರ ಅಂತ್ಯಕ್ರಿಯೆ ಮದ್ದೂರಿನ ಸೋಮನಹಳ್ಳಿಯಲ್ಲಿ ನಡೆಯಲಿದೆ.

 

Donate Janashakthi Media

Leave a Reply

Your email address will not be published. Required fields are marked *