ನವದೆಹಲಿ : ಉತ್ತರಪ್ರದೇಶದ ಲಖಿಮ್‍ಪುರ ಖೇರಿ ಎಂಬಲ್ಲಿ ಅಕ್ಟೋಬರ್ 3ರಂದು ಕೇಂದ್ರ ಗೃಹ ರಾಜ್ಯಮಂತ್ರಿ ಅಜಯ್ ಮಿಶ್ರ ತೇನಿ ಮತ್ತು ಉತ್ತರಪ್ರದೇಶದ ಉಪಮುಖ್ಯಮಂತ್ರಿಗಳ ಭೇಟಿಯ ಸಂದರ್ಭದಲ್ಲಿ ಶಾಂತಿಯುತ ಪ್ರತಿಭಟನೆಯಲ್ಲಿ ಭಾಗವಹಿಸಲು ಬಂದಿದ್ದ ರೈತರ ಮೇಲೆ ಬಿಜೆಪಿ ಮಂದಿಯ ಹಲ್ಲೆಯಲ್ಲಿ ಎಂಟು ರೈತರ ಸಾವು ಉಂಟಾಗಿದ್ದು, ಈ ಪ್ರದೇಶದ ಕಿಸಾನ್ ಮೋರ್ಚಾ ಮುಖಂಡ ತಜಿಂದರ್ ಸಿಂಗ್ ವಿರ್ಕ್ ಸೇರಿದಂತೆ 12ರಿಂದ 15 ರೈತರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಪ್ರತಿಭಟನೆ ಮುಗಿಸಿ ಹಿಂತಿರುಗಲಾರಂಭಿಸಿದ ರೈತರ ಮೇಲೆ ಕೇಂದ್ರ ಮಂತ್ರಿಯ ಮಗ ಆಶಿಷ್ ಮಿಶ್ರ ತೇನಿಯ ನೇತೃತ್ವದಲ್ಲಿ ಮೂರು ಕಾರುಗಳಲ್ಲಿ ಬಂದ ಬಿಜೆಪಿ ಮಂದಿ ರಸ್ತೆಯ ಪಕ್ಕದಲ್ಲಿ ಸಾಗುತ್ತಿದ್ದ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿ, ಕಾರು ಹತ್ತಿಸಿದ್ದಾರೆ ಎಂದು ತಿಳಿದು ಬಂದಿದೆ. ಗುಂಡೇಟಿಗೆ ಒಬ್ಬರ ಸಾವು ಸ್ಥಳದಲ್ಲೇ ಸಂಭವಿಸಿದ್ದು, ಇನ್ನಿಬ್ಬರ ಮೇಲೆ ಕಾರು ಹತ್ತಿದ್ದರಿಂದ ಸಾವು ಉಂಟಾಗಿದೆ, ಮತ್ತೊಬ್ಬರು ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ಅಸು ನೀಗಿದ್ದಾರೆ ಎನ್ನಲಾಗಿದೆ. ಹಲ್ಲೆಕೋರರ ಒಂದು ಕಾರು ಈ ಪ್ರಕ್ರಿಯೆಯಲ್ಲಿ ಪಲ್ಲಟಿ ಹೊಡೆದು ಒಬ್ಬರ ಸಾವು ಸಂಭವಿಸಿದೆ ಎಂದೂ ವರದಿಯಾಗಿದೆ.
ಈ ಕುರಿತು ಇಂಟರ್ನೆಟ್ ಮೂಲಕ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಸಂಯುಕ್ತ ಕಿಸಾನ್ ಮೋರ್ಚಾದ ಸಮನ್ವಯ ಸಮಿತಿಯ ಮುಖಂಡರು ನೀಡಿರುವ ಮಾಹಿತಿ ಪ್ರಕಾರ ನಾಲ್ಕು ರೈತರ ಹೆಸರುಗಳು ಹೀಗಿವೆ: ಲವಪ್ರೀತ್ ಸಿಂಗ್(20 ವರ್ಷ), ದಲ್ಜೀತ್ ಸಿಂಗ್(35). ನಚತ್ತರ್ ಸಿಂಗ್(60) ಮತ್ತು ಗುರ್ವಿಂದರ್ ಸಿಂಗ್(19).
ಈ ಪ್ರದೇಶದ ಸಂಸತ್ ಸದಸ್ಯನಾಗಿರುವ ಈ ಕೇಂದ್ರಮಂತ್ರಿ ಇತ್ತೀಚೆಗೆ ಹೋರಾಟನಿರತ ರೈತರ ಬಗ್ಗೆ ಬಹಳ ಕೆಟ್ಟದಾಗಿ ಟಿಪ್ಪಣಿ ಮಾಡಿದ್ದು ಈ ಕುರಿತ ವೀಡಿಯೋ ಸಾರ್ವಜನಿಕವಾಗಿ ಲಭ್ಯವಿದೆ. . ಈ ಭಾಗದ ರೈತರಲ್ಲಿ ಇದು ಆಕ್ರೋಶ ಉಂಟು ಮಾಡಿತ್ತು. ಆದ್ದರಿಂದಲೇ ಸುತ್ತಮುತ್ತಲ ಪ್ರದೇಶಗಳಿಂದ ರೈತರು ಈ ಪ್ರತಿಭಟನೆಯಲ್ಲಿ ಭಾಗವಹಿಸಲು ಬಂದಿದ್ದರು ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡರು ಹೇಳಿದ್ದಾರೆ.
ಈ ಹೀನ ಕೃತ್ಯ ನಡೆಯುತ್ತಿದ್ದ ಸಂದರ್ಭದಲ್ಲೇ ಹರ್ಯಾಣದ ಮುಖ್ಯಮಂತ್ರಿ ಕೂಡ ಬಿಜೆಪಿ ಕಾರ್ಯಕರ್ತರಿಗೆ ಕೈಯಲ್ಲಿ ಲಾಟಿ ಹಿಡಿದು ಪ್ರತಿಭಟನಾಕಾರರಿಗೆ ತಕ್ಕ ಶಾಸ್ತಿ ಮಾಡಿ, ಅದಕ್ಕಾಗಿ ನೀವು ಜೈಲಿಗೆ ಹೋದರೂ, ಮುಖಂಡರುಗಳಾಗಿ ಜೈಲಿನಿಂದ ಹೊರಗೆ ಬರುತ್ತೀರಿ ಎಂದು ಹೇಳಿರುವುದಾಗಿಯೂ ವರದಿಯಾಗಿದೆ.
ಅಂದರೆ ಹತಾಶ ಬಿಜೆಪಿ ಮುಖಂಡರು ಈಗ ಜನರನ್ನು ಉದ್ರೇಕಿಸುವ ಕೆಲಸಕ್ಕೆ ಕೈಹಾಕಿದ್ದಾರೆ ಎಂದಿರುವ ಸಂಯುಕ್ತ ಕಿಸಾನ್ ಮೋರ್ಚಾದ ಸಮನ್ವಯ ಸಮಿತಿ ಈ ಕೆಳಗಿನ ಬೇಡಿಕೆಗಳಿಗೆ ಆಗ್ರಹಿಸಿದೆ.
1. ಈ ಜಘನ್ಯ ಘಟನೆಗೆ ಕಾರಣರಾದ ಕೇಂದ್ರ ಗೃಹ ವ್ಯವಹಾರಗಳ ರಾಜ್ಯಮಂತ್ರಿ ಅಜಯ್ ಮಿಶ್ರ ತೇನಿಯವರನ್ನು ಕೂಡಲೇ ಕೇಂದ್ರ ಸಂಪುಟದಿಂದ ವಜಾ ಮಾಡಬೇಕು.
2. ಆಶಿಷ್ ಮಿಶ್ರ ಮತ್ತಿತರರ ಮೇಲೆ ತಕ್ಷಣವೇ ಕೊಲೆ ಕೇಸುಗಳನ್ನು ಹಾಕಬೇಕು.
3.ಹಾಲಿ ಸುಪ್ರಿಂ ಕೋರ್ಟ್ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಬೇಕು.
4. ಹರ್ಯಾಣದ ಮುಖ್ಯಮಂತ್ರಿ ಕ್ಷಮೆ ಕೋರಬೇಕು ಮತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದೆ.
ಈ ಆಗ್ರಹಗಳ ಮೇಲೆ ಅಕ್ಟೋಬರ್ 4ರಂದು ದೇಶಾದ್ಯಂತ ಡಿ.ಸಿ. ಕಚೇರಿಗಳ ಮುಂದೆ ಮತಪ್ರದರ್ಶನ ನಡೆಸಲು ಸಂಯುಕ್ತ ಕಿಸಾನ್ ಮೋರ್ಚಾ ತನ್ನೆಲ್ಲ ಘಟಕಗಳಿಗೆ ಕರೆ ನೀಡಿದೆ.
ಬಿಜೆಪಿ-ಆರೆಸ್ಸೆಸ್ ಮಂದಿ ಕಳೆದ ಹತ್ತುತಿಂಗಳಿಂದ ಶಾಂತಿಯುತವಾಗಿ ನಡೆದುಕೊಂಡು ಬಂದಿರುವ ರೈತರ ಹೋರಾಟವನ್ನು ಹೇಗಾದರೂ ಮಾಡಿ ಒಡೆಯಲು ವಿವಿಧ ಹೊಲಸು ತಂತ್ರಗಳನ್ನು ಅನುಸರಿಸುತ್ತಿರುವುದು ಸ್ಪಷ್ಟವಾಗುತ್ತಿದೆ. ಆದರೂ ರೈತರು ಇದರಿಂದ ಉದ್ವೇಗಕ್ಕೆ ಒಳಗಾಗದೆ ಹೋರಾಟವನ್ನು ಶಾಂತಿಯುತವಾಗಿ , ಅಹಿಂಸಾತ್ಮಕವಾಗಿಯೇ ಮುಂದುವರೆಸುತ್ತಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಸಮನ್ವಯ ಸಮಿತಿಯ ಮುಖಂಡರು ಹೇಳಿದ್ದಾರೆ.