ವಿನೋದ ಶ್ರೀರಾಮಪುರ
ಲಖಿಂಪುರ ಖೇರಿಯಲ್ಲಿ ಸಂಭವಿಸಿದ ದುರ್ಘಟನೆ ಹಿನ್ನಲೆಯಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರನ್ನು ಕೇಂದ್ರ ಸಚಿವ ಸ್ಥಾನದಿಂದ ಕೈಬಿಡಬೇಕು ಹಾಗೂ ಅವರನ್ನು ಬಂಧಿಸಬೇಕೆಂದು ರೈತಪರ ಸಂಘಟನೆಗಳು ಇಂದು ದೇಶದ ಹಲವು ಭಾಗಗಲ್ಲಿ ಶಾಂತಿಯುತ ರೈಲು ತಡೆ ಚಳವಳಿ ನಡೆಸಿದರು.
ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಕರ್ನಾಟಕ, ಉತ್ತರಾಖಂಡ, ಜಾರ್ಖಂಡ್ ಸೇರಿದಂತೆ ದೇಶದ ಹಲವೆಡೆ ಬೆಳಗ್ಗೆಯಿಂದಲೇ ಚಳವಳಿ ಆರಂಭವಾಗಿದೆ.
ಸಂಯುಕ್ತ ಕಿಸಾನ್ ಮೋರ್ಚಾ ಒಕ್ಕೂಟದ ಪದಾಕಾರಿಗಳು ಉತ್ತರಪ್ರದೇಶದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ರವರೆಗೆ ರೈಲುಗಳನ್ನು ತಡೆದು ಶಾಂತಿಯುತ ಪ್ರತಿಭಟನೆ ನಡೆಸಿದ್ದಾರೆ. ರೈಲ್ವೆ ಆಸ್ತಿಗೆ ಯಾವುದೇ ಹಾನಿಯಾಗದಂತೆ ಶಾಂತಿಯುತ ರೀತಿಯಲ್ಲಿ ಪ್ರತಿಭಟನೆ ನಡೆಸುವಂತೆ ಪ್ರತಿಭಟನಾಕಾರರಿಗೆ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿತ್ತು.
ಪಂಜಾಬ್ ರಾಜ್ಯದಲ್ಲಿಯೂ ರೈತರು ರೈಲ್ವೆ ಹಳಿಗಳ ಮೇಲೆ ಕುಳಿತು ಆರು ಗಂಟೆಗಳ ರೈಲು ತಡೆ ಪ್ರತಿಭಟನೆ ನಡೆಸಿದ್ದಾರೆ. ಫಿರೋಜ್‌ಪುರ್ ವಿಭಾಗದ ನಾಲ್ಕು ವಲಯಗಳನ್ನು ಪ್ರತಿಭಟನಾಕಾರರು ನಿರ್ಬಂಧಿಸಿರುವುದಾಗಿ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಫಿರೋಜ್‌ಪುರ್–ಫಜಿಲ್ಕಾ ಹಾಗೂ ಫಿರೋಜ್‌ಪುರ್–ಲೂಧಿಯಾನಾ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಹರಿಯಾಣ ರಾಜ್ಯದ ಸೋನಿಪತ್ ರೈಲ್ವೇ ನಿಲ್ದಾಣದಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆ ನಿಯೋಜಿಸಿ ರೈತರ ಪ್ರತಿಭಟನೆಯನ್ನು ತಡೆಯಲು ಹೆಚ್ಚಿನ ಸಂಖ್ಯೆ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರೂ ಹರಿಯಣ ಸರ್ಕಾರ ಪ್ರತಿಭಟನಾ ಸ್ಥಳಗಳಲ್ಲಿ ಕ್ಷಿಪ್ರ ಕಾರ್ಯಾಚರಣೆಯನ್ನು ನಿಯೋಜನೆ ಮಾಡಿರುವುದರ ವಿರುದ್ಧ ಆಕ್ಷೇಪ ಕೇಳಿ ಬಂದಿದೆ. ರೈತರ ಪ್ರತಿಭಟನೆ ಶಾಂತಿಯುತವಾಗಿರುತ್ತದೆ, ಆದರೂ ಏಕೆ ಮನೋಹರ್ ಲಾಲ್ ಖಟ್ಟರ್ ಸರ್ಕಾರ ಗೊಂದಲದ ವಾತಾವರಣವನ್ನು ಸೃಷ್ಟಿಸುತ್ತಿದೆ? ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ.
ಕೇಂದ್ರದ ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕೆಂದು ಕಳೆದೊಂದು ವರ್ಷದಿಂದ ಪ್ರತಿನಿತ್ಯ ಪ್ರತಿಭಟನೆ ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ ರೈತ ಸಂಘಟನೆಗಳ ಒಕ್ಕೂಟವು ‘ಲಖಿಂಪುರ ಖೇರಿ ಪ್ರಕರಣದಲ್ಲಿ ನ್ಯಾಯ ಸಿಗುವವರೆಗೂ ಹೋರಾಟದ ತೀವ್ರತೆ ಹೆಚ್ಚಿಸಲಾಗುತ್ತದೆ’ ಎಂದು ಹೇಳಿದೆ.
ಸಂಯುಕ್ತ ಕಿಸಾನ್ ಮೋರ್ಚಾ ನಾಯಕ ರಾಕೇಶ್ ಟಿಕಾಯತ್ ಮಾತನಾಡಿ ದೇಶದ ಹಲವು ಭಾಗಗಲ್ಲಿ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆಗಳು ವಿಭಿನ್ನವಾಗಿರುತ್ತವೆ. ನಾವು ರೈಲುಗಳನ್ನು ನಿಲ್ಲಿಸಬೇಕೆಂದು ದೇಶಾದ್ಯಂತ ಜನರಿಗೆ ತಿಳಿದಿದೆ. ಕೃಷಿ ಕಾಯ್ದೆಗಳಿಗೆ ಸಂಬಂಧಿಸಿದಂತೆ ಕೇಂದ್ರದ ಬಿಜೆಪಿ ಸರ್ಕಾರವು ಇನ್ನೂ ನಮ್ಮೊಂದಿಗೆ ಮಾತನಾಡಿಲ್ಲ ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ. ಸಿಂಘು ಗಡಿಯಲ್ಲಿ ಪ್ರತಿಭಟನೆಯ ಸಂದರ್ಭದಲ್ಲಿ ಶುಕ್ರವಾರ ಸಂಭವಿಸಿದ ಘಟನೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕೇಂದ್ರವು ರೈತರ ಪ್ರತಿಭಟನೆಯನ್ನು ಮುರಿಯಲು ಒಳಸಂಚುಗಳ ಮೂಲಕ ಹಲವು ಪ್ರಯತ್ನಗಳನ್ನು ಮಾಡುತ್ತಿದೆ ಎಂದರು.
ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರನ್ನು ಅಲ್ಲಿಂದ ವಜಾಗೊಳಿಸವವರೆಗೂ ನಮಗೆ ನ್ಯಾಯ ಸಿಗುವುದಿಲ್ಲ. ಅವರು ತಮ್ಮ ದ್ವೇಷ, ಶತ್ರುತ್ವ, ಕೋಮು ಸೌಹಾರ್ದತೆ ಕದಡುವ ರೀತಿಯಲ್ಲಿ ಭಾಷಣ ಮಾಡಿದ್ದಾರೆ. ಹಿಂದೂ-ಸಿಖ್ರ ನಡುವೆ ದ್ವೇಷ ಹುಟ್ಟುಹಾಕುವಂತೆ ಮಾತನಾಡಿದ್ದಾರೆ. ಹಾಗೇ, ಪ್ರತಿಭಟನಾನಿರತ ಗುಂಪಿಗೆ ಡಿಕ್ಕಿ ಹೊಡೆಯಲು ಅವರ ವಾಹನ ಬಳಕೆಯಾಗಿದೆ ಮತ್ತು ಅವರ ಪುತ್ರ ಆಶೀಶ್ ಮಿಶ್ರಾ ರೈತರ ಹತ್ಯೆಯಲ್ಲಿ ನೇರ ಭಾಗೀದಾರನಾಗಿದ್ದಾನೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ತಮ್ಮ ಹೇಳಿಕೆಯಲ್ಲಿ ತಿಳಿಸಿದೆ.
ಪಂಜಾಬ್ ರಾಜ್ಯದಲ್ಲಿಯೂ 11 ಜಿಲ್ಲೆಗಳಲ್ಲಿ 20 ಕಡೆ ಸಮಿತಿಯು ಪ್ರತಿಭಟನೆ ನಡೆಸಲು ಎಲ್ಲಾ ರೀತಿಯ ಸಿದ್ಧತೆಗಳು ನಡೆದಿವೆ ಹಲವು ಕಡೆಗಳಲ್ಲಿ ನೂರಾರು ಜನರು ರೈಲು ತಡೆ ಚಳುವಳಿಯಲ್ಲಿ ಭಾಗಿಯಾಗಲಿದ್ದಾರೆ ಎಂದು ಕಿಸಾನ್ ಮಜದೂರ್ ಸಂಘರ್ಷ ಸಮಿತಿಯ ಪ್ರಧಾನ ಕಾರ್ಯದರ್ಶಿ ಸರ್ವನ್ ಸಿಂಗ್ ಪಂಧೇರ್ ಇಂದು ಬೆಳಿಗ್ಗೆ ಮಾಧ್ಯಮಗಳಿಗೆ ಹೇಳಿದ್ದರು.
ರೈತರ ರೈಲ್ ರೋಕೋ ಚಳವಳಿಯಿಂದ ಈಗಾಗಲೇ ಭಾರತದಾದ್ಯಂತ ಸುಮಾರು 160 ಪ್ಯಾಸೆಂಜರ್ ರೈಲುಗಳನ್ನು ಇಂದು ರದ್ದುಗೊಳಿಸಲಾಗಿದೆ. ನೂರಾರು ಗೂಡ್ಸ್ ರೈಲುಗಳು ಸಹ ಸ್ಥಗಿತಗೊಂಡಿವೆ ಎಂದು ತಿಳಿದುಬಂದಿದೆ.
ಅಕ್ಟೋಬರ್ 3ರಂದು ಲಖಿಂಪುರ ಖೇರಿ ಹಿಂಸಾಚಾರದಲ್ಲಿ ಮೃತಪಟ್ಟ 8 ಜನರ ಪೈಕಿ ನಾಲ್ವರು ರೈತರು. ಬಿಜೆಪಿ ಕಾರ್ಯಕರ್ತರಿದ್ದ ವಾಹನಗಳು ರೈತರ ಮೇಲೆ ಹರಿದು ನಾಲ್ವರು ರೈತರು ಸಾವಿಗೀಡಾದರು. ಅನಂತರ ಆಕ್ರೋಶಗೊಂಡ ಪ್ರತಿಭಟನಾಕಾರರು ವಾಹನದಲ್ಲಿದ್ದವರ ಮೇಲೆ ಹಲ್ಲೆ ಮಾಡಿದರು. ಆ ಹಿಂಸಾಚಾರದಲ್ಲಿ ಒಬ್ಬ ಪತ್ರಕರ್ತ ಮತ್ತು ಇಬ್ಬರು ಬಿಜೆಪಿ ಕಾರ್ಯಕರ್ತರು ಸೇರಿದಂತೆ ಅವರ ವಾಹನ ಚಾಲಕ ಸಹ ಮೃತಪಟ್ಟರು.
ಆದರೆ ಅಜಯ್ ಮಿಶ್ರಾ ತೇನಿ ಈಗಲೂ ಹಿಂಸಾಚಾರ ಸಂಭವಿಸಿದ ಸಂದರ್ಭದಲ್ಲಿ ತನ್ನ ಪುತ್ರ ಅಲ್ಲಿರಲಿಲ್ಲ ಎಂದೇ ಪ್ರತಿಪಾದಿಸುತ್ತಿದ್ದಾರೆ. ಇನ್ನು ಈ ಮಧ್ಯೆ ಸಂಯುಕ್ತ ಕಿಸಾನ್ ಮೋರ್ಚಾ ನಾಯಕ ರಾಕೇಶ್ ಟಿಕಾಯತ್ ಲಖಿಂಪುರ ಖೇರಿ ಹಿಂಸಾಚಾರ ತನಿಖೆ ಬಗ್ಗೆ ಕೆಲವು ಅಸಮಾಧಾನ ಹೊರಹಾಕಿದ್ದಾರೆ. ಅಜಯ್ ಮಿಶ್ರಾ ತೇನಿಯನ್ನು ಸ್ಥಾನದಿಂದ ತೆಗೆಯುವವರೆಗೂ ನ್ಯಾಯಸಮ್ಮತ ತನಿಖೆ ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.
ಅಕ್ಟೋಬರ್ 12ರಂದು ಸಹ ದೇಶದ ಹಲವು ರಾಜ್ಯಗಳಲ್ಲಿ ರೈತ ಸಂಘಟನೆಗಳು ಮತ್ತು ಕಾರ್ಮಿಕ ಸಂಘಟನೆಗಳು ಸೇರಿದಂತೆ ವಿವಿಧ ಜನಪರ ಸಂಘಟನೆಗಳು ಲಖಿಂಪುರ ಘಟನೆಯಲ್ಲಿ ದುರ್ಮರಣ ಹೊಂದಿದವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ರೈತರ ಹತ್ಯೆಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಆಗ್ರಹಿಸಿದ್ದರು.