ಕೃಷಿಯ ಮೇಲೆ ಕಾರ್ಪೊರೇಟ್ ನಿಯಂತ್ರಣದ ವಿರುದ್ಧ ಬೃಹತ್‌ ಪ್ರತಿಭಟನೆಗೆ ಎಸ್‍ಕೆಎಂ ಕರೆ

ಬೆಂಗಳೂರು : ಸಾಲದ ಸುಳಿಯಲ್ಲಿ ಸಿಲುಕಿರುವ ಮೋದಿ ಸರ್ಕಾರ ಕೃಷಿ ಕ್ಷೇತ್ರ, ಕೃಷಿ ಭೂಮಿ, ಅರಣ್ಯ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಕಾರ್ಪೊರೇಟ್ ಲಾಭಕೋರರಿಗೆ ಮಾರಾಟ ಮಾಡುತ್ತಿ ರುವುದನ್ನು ಖಂಡಿಸಿ ಇದರ ವಿರುದ್ಧ ರೈತರನ್ನು ಸಜ್ಜುಗೊಳಿಸುವ ಸಲುವಾಗಿ ಸಂಯುಕ್ತ ಕಿಸಾನ್‍ ಮೋರ್ಚಾವು ಮತ್ತೊಂದು ಬೃಹತ್‌ ಪ್ರತಿಭಟನೆಗೆ ಕರೆ ನೀಡಿದೆ.


ದೆಹಲಿಯ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ಇಂದು ನಡೆದ ಬೃಹತ್‍ ಕಿಸಾನ್ ಮಹಾಪಂಚಾಯತ್‌ನಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ(ಎಸ್‍ಕೆಎಂ) ದ ಕರೆಯ ಮೇರೆಗೆ ನಡೆದ ಈ ಸಭೆಯಲ್ಲಿ 50 ಕ್ಕೂ ಹೆಚ್ಚು ಭಾಷಣಕಾರರು ಕೃಷಿ ಮೇಲಿನ ಕಾರ್ಪೊರೇಟ್ ನಿಯಂತ್ರಣ ಮತ್ತು ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳ ವಿರುದ್ಧ ಎಸ್‌ಕೆಎಂ ತನ್ನ ಪ್ರತಿಭಟನೆಯನ್ನು ಮುಂದುವರೆಸುತ್ತದೆ ಎಂದು ಒತ್ತಿ ಹೇಳಿದ್ದಾರೆ.


ರೈತರನ್ನು ಸಜ್ಜುಗೊಳಿಸಲು ಎಸ್‌ಕೆಎಂ ತಕ್ಷಣವೇ  ರಾಜ್ಯ ಸಮಾವೇಶಗಳು, ಯಾತ್ರೆಗಳು ಇತ್ಯಾದಿಗಳನ್ನು ಪ್ರಾರಂಭಿಸುವುದಾಗಿ ಸಭೆಯಲ್ಲಿ ಘೋಷಿಸಲಾಯಿತು. ನಂತರ ಎಸ್‍ಕೆಎಂನ 15 ಸದಸ್ಯರ ನಿಯೋಗವು ಕೃಷಿ ಭವನದಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರನ್ನು ಭೇಟಿ ಮಾಡಿ 2 ಜ್ಞಾಪಕ ಪತ್ರಗಳನ್ನು ಸಲ್ಲಿಸಿತು. ಸರಕಾರ ಈಡೇರಿಸದೇ ಬಾಕಿ ಇರುವ ಎಲ್ಲ ಆಶ್ವಾಸನೆಗಳನ್ನು ಪರಿಹರಿಸಬೇಕು ಮತ್ತು ತಕ್ಷಣವೇ ಕನಿಷ್ಟ ಬೆಂಬಲ ಬೆಲೆಗಳನ್ನು ಖಚಿತ ಪಡಿಸುವ ಕಾನೂನನ್ನು ಜಾರಿಗೆ ತರಬೇಕು ಎಂದು ಅವರು ಆಗ್ರಹಿಸಿದರು. ಎಸ್‌ಕೆಎಂ ಜೊತೆ ಮಾತುಕತೆ ನಡೆಸಲು ಸರ್ಕಾರ ಒಪ್ಪಿದ್ದು, ಕಾಲಮಿತಿಯಲ್ಲಿ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಮುಂದಿನ ಪ್ರತಿಭಟನೆ ಮತ್ತು ಆಂದೋಲನಗಳನ್ನು ಎಸ್‌ಕೆಎಂ ಘೋಷಿಸಲಿದೆ ಎಂದು ಸಚಿವರಿಗೆ ತಿಳಿಸಿರುವುದಾಗಿ ಸಂಯುಕ್ತ ಕಿಸಾನ್‍ ಮೋರ್ಚಾ ತಿಳಿಸಿದೆ.

ಇದನ್ನೂ ಓದಿ : ಎಂಎಸ್‌ಪಿ ಕಾನೂನು ಮಾಡುವ ಅಜೆಂಡಾವೇ ಇಲ್ಲದ ಸರಕಾರೀ ನಿಷ್ಠಾವಂತರ ಸಮಿತಿ ನೇಮಕ-ಎಸ್‌ಕೆಎಂ ತಿರಸ್ಕಾರ

ʼಕಿಸಾನ್‌ ಆಂದೋಲನ-2.0ʼ ಸನ್ನಿಹಿತ :
ಮೂರು ವಿವಾದಿತ ಕೃಷಿ ಕಾನೂನು ವಿರೋಧಿಸಿದಂತೆ ಮತ್ತೊಮ್ಮೆ ‘ಕಿಸಾನ್‌ ಆಂದೋಲನ-2.0’ ಆರಂಭ ಮಾಡುವ ಕಾಲ ಸನ್ನಿಹಿತವಾಗಿದೆ. ಏಪ್ರಿಲ್‌ 30ರಂದು ಸಭೆ ನಡೆಸಿ ಮುಂದಿನ ಹೋರಾಅಟದ ರೂಪುರೇಷ ಸಿದ್ಧಪಡಿಸಲಾಗುವುದು ಎಂದು ಟಿಕಾಯತ್‌ ಘೋಷಿಸಿದರು. ‘ಏಪ್ರಿಲ್‌ 30ರ ರೈತರ ಸಭೆ ಬೆಂಬಲಿಸಿ ಎಲ್ಲಾ ರಾಜ್ಯಗಳಲ್ಲೂ ರೈತ ಸಂಘಟನೆಗಳು ಪ್ರತಿಭಟನಾ ರಾಲಿ, ಸಭೆ ನಡೆಸಬೇಕು,’ ಎಂದು ರೈತ ಮುಖಂಡರಿಗೆ ಸೂಚನೆ ನೀಡಲಾಯಿತು.

Donate Janashakthi Media

Leave a Reply

Your email address will not be published. Required fields are marked *