ಜೈನ್‌ ವಿವಿಯಲ್ಲಿ ಅಂಬೇಡ್ಕರ್‌ಗೆ ಅವಮಾನ: ವಿದ್ಯಾರ್ಥಿಗಳ ಅಮಾನತು; ಪ್ರಕರಣ ದಾಖಲು

ಬೆಂಗಳೂರು: ದಲಿತರು ಮತ್ತು ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರನ್ನು ಅಪಮಾನ ಮಾಡಲಾದ ಕಿರುನಾಟಕವೊಂದನ್ನು ಪ್ರದರ್ಶಿಸಿದ ನಗರದ ಜೈನ್‌ ವಿಶ್ವವಿದ್ಯಾಲಯದ ಆರು ವಿದ್ಯಾರ್ಥಿಗಳು ಮತ್ತು ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಾಗಿದೆ. ಅಲ್ಲದೆ, ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ.

ಫೆಬ್ರವರಿ 6ರಂದು ವಿಶ್ವವಿದ್ಯಾಲಯದ ಸಿಎಂಎಸ್‌ (ಸೆಂಟರ್‌ ಫಾರ್‌ ಮ್ಯಾನೇಜ್‌ಮೆಂಟ್‌ ಸ್ಟಡೀಸ್‌) ವಿಭಾಗದಲ್ಲಿ ನಡೆದ ‘ಯುವಜನೋತ್ಸವ’ ಕಾರ್ಯಕ್ರಮದಲ್ಲಿ ಪ್ರದರ್ಶನಗೊಂಡ ಕಿರುನಾಟಕದಲ್ಲಿ ಅಭಿನಯಿಸಿದ ವಿದ್ಯಾರ್ಥಿಗಳು ಹಾಗೂ ಆಡಳಿತ ಮಂಡಳಿ ವಿರುದ್ಧ ಪ್ರಕರಣಗಳು ದಾಖಲಾಗಿವೆ.

ಇದನ್ನು ಓದಿ: ವಿದ್ಯಾರ್ಥಿಗಳು ಪ್ರದರ್ಶಿಸಿದ ಕಾರ್ಯಕ್ರಮದಲ್ಲಿ ಜಾತಿ ನಿಂದನೆ: ತನಿಖೆಗೆ ಆದೇಶಿಸಿದ ಜೈನ್ ವಿಶ್ವವಿದ್ಯಾಲಯ

ಕಾಲೇಜಿನಲ್ಲಿ ಪ್ರದರ್ಶಿಸಲಾದ ಕಾರ್ಯಕ್ರಮದಲ್ಲಿ ಮೀಸಲಾತಿ, ದಲಿತರು ಹಾಗೂ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್‌ ಅವರ ವಿರುದ್ಧ ತೀವ್ರ ಅವಹೇಳನಕಾರಿ ಪದಗಳನ್ನು ಬಳಸಿ ಮಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

ವಿದ್ಯಾರ್ಥಿಗಳು ಮತ್ತು ಆಡಳಿತ ಮಂಡಳಿ ವಿರುದ್ಧ ದೂರು ದಾಖಲಾಗಿರುವ ಬಗ್ಗೆ ಬೆಂಗಳೂರು ಪೊಲೀಸರು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ವಿಶ್ವವಿದ್ಯಾನಿಲಯದ ಅಧಿಕಾರಿಗಳು ಕ್ಷಮೆಯಾಚಿಸಿದ್ದು, ಈ ವಿಷಯದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ದೇಶದಲ್ಲಿರುವ ಜಾತಿ ವಿರೋಧಿ ವ್ಯವಸ್ಥೆಯನ್ನು ಎತ್ತಿ ತೋರಿಸುವುದು ಕಾರ್ಯಕ್ರಮದ ಉದ್ದೇಶವಾಗಿತ್ತು. ಆದಾಗ್ಯೂ, ವಿದ್ಯಾರ್ಥಿಗಳು ತಮ್ಮ ಪ್ರಸ್ತುತಿಯಲ್ಲಿ ಸ್ವಲ್ಪ ಮಿತಿಮೀರಿದರು. ಈ ಕಾರ್ಯಕ್ರಮ ಆಕ್ಷೇಪಾರ್ಹ ಎಂದು ತಿಳಿದ ತಕ್ಷಣ ನಾವು ತಕ್ಷಣ ಹುಡುಗರನ್ನು ಅಮಾನತುಗೊಳಿಸಿದ್ದೇವೆ ಎಂದಿದ್ದಾರೆ.

ದಸಂಸ ಮುಖಂಡರು ರಾಜ್ಯದ ಹಲವು ಠಾಣೆಗಳಿಗೆ ದೂರು ನೀಡಿದ್ದಾರೆ. ದೂರಿನೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೊ ನೀಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸಿದ್ದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು,  ವಿಶ್ವವಿದ್ಯಾಲಯದ ಪ್ರಾಂಶುಪಾಲ, ವಿಭಾಗದ ಮುಖ್ಯಸ್ಥ, ಕಾರ್ಯಕ್ರಮ ಸಂಘಟಕ, ಕಿರುನಾಟಕದ ರಚನೆಕಾರ, ಅಭಿನಯಿಸಿದ ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಾಗಿದೆ. ಎಸ್‌ಸಿ, ಎಸ್‌ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್‌ 3(1)(r), 3(1)(s), 3(1)(v) ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 153A, 149, 295A ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

14ಕ್ಕೆ ಬೆಂಗಳೂರು ವಿ.ವಿ. ಬಂದ್‌

‘ಅಂಬೇಡ್ಕರ್‌ ಹಾಗೂ ದಲಿತರಿಗೆ ಅವಮಾನ ಮಾಡಲಾಗಿದ್ದು, ಇದನ್ನು ಖಂಡಿಸಿ, ಫೆಬ್ರವರಿ 14ರಂದು ಬೆಂಗಳೂರು ವಿಶ್ವವಿದ್ಯಾಲಯದ ಬಂದ್‌ಗೆ ಹಲವು ಸಂಘಟನೆಗಳು ಕರೆ ನೀಡಿವೆ. ರಾಜ್ಯದ ಇತರೆ ಜಿಲ್ಲೆಗಳಿಂದಲೂ ಪ್ರತಿಭಟನಕಾರರು ಬರಲಿದ್ದಾರೆ. ಜೈನ್‌ ವಿಶ್ವವಿದ್ಯಾಲಯದ ಎದುರೂ ಪ್ರತಿಭಟನೆ ನಡೆಸಲಾಗುವುದು’ ಎಂದು ದಲಿತ ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *