ಬಳ್ಳಾರಿ: ರಾಜಕೀಯ ಗುರುವಿನ ವಿರುದ್ದ ಶಿಷ್ಯ ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲೆ ಕೈ ಶಾಸಕನ ಹತ್ಯೆಗೆ ಸಂಚು ರೂಪಿಸಿದ್ದ ವಿಚಾರ ಈಗ ಬಯಲಿಗೆ ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.
ಸಚಿವ ಶ್ರೀರಾಮುಲರನ್ನ ಸೋಲಿಸಿ ಗೆಲುವಿನ ಸಂಭ್ರಮದಲ್ಲಿದ್ದ ಕಾಂಗ್ರೆಸ್ ಶಾಸಕ ಬಿ. ನಾಗೇಂದ್ರ ಮೆರವಣಿಗೆಯಲ್ಲಿದ್ದಾಗಲೇ ಮಚ್ಚು ಬೀಸಲು ಬಂದವರಿಂದ ಜಸ್ಟ್ ಮಿಸ್ ಆಗಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಾಗೇಂದ್ರ ಬೆಂಬಲಿಗರು ಹಾಗೂ ಕಾಂಗ್ರೆಸ್’ನ ಹಿರಿಯ ಮುಖಂಡರು ಘಟನೆಯನ್ನು ಖಂಡಿಸಿತ್ತು. ಅಲ್ಲದೆ. ಹೊಸದಾಗಿ ಆಯ್ಕೆಯಾದ ಎಲ್ಲಾ ಕಾಂಗ್ರೆಸ್ ಶಾಸಕರಿಗೆ ಹೆಚ್ಚಿನ ಭದ್ರತೆ ಒದಗಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಈ ಭಾರಿಯ ಚುನಾವಣೆ ತೀವ್ರ ಪ್ರತಿಷ್ಠೆ ಪೈಪೋಟಿಗೆ ಕಾರಣವಾಗಿತ್ತು. ರಾಜಕೀಯ ಗುರುವಿನ ವಿರುದ್ದ ಶಿಷ್ಯ ಸ್ಪರ್ಧೆ ಮಾಡಿದ್ದು, ಸಾಕಷ್ಟು ಕುತೂಹಲದ ಹಣಾಹಣಿಗೆ ಕಾರಣವಾಗಿತ್ತು. ಬಿಜೆಪಿ ಅಭ್ಯರ್ಥಿ, ಸಚಿವ ಶ್ರೀರಾಮುಲು ವಿರುದ್ದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿ ನಾಗೇಂದ್ರ ಅವರು ಭರ್ಜರಿ ಗೆಲುವು ಸಾಧಿಸಿ ಗ್ರಾಮೀಣ ಕ್ಷೇತ್ರದಿಂದ ಸತತವಾಗಿ 2ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ : ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ, ಅಧಿಕೃತ ಘೋಷಣೆಯಷ್ಟೇ ಬಾಕಿ!
ನಾಗೇಂದ್ರ ಅವರು ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಿರಿಯ ನಾಯಕ ಬಿ ಶ್ರೀರಾಮುಲು ಅವರನ್ನು ಸುಮಾರು 29,000 ಮತಗಳಿಂದ ಸೋಲಿಸಿದ್ದರು. ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಬಳ್ಳಾರಿಗೆ ನಾಗೇಂದ್ರ ಅವರು ಆಗಮಿಸಿದ್ದರು. ಈ ವೇಳೆ ವಿಷ್ಣು ವೆಂಕಟೇಶ್ ರಾಮಾಂಜೆನೇಯಲು (27), ರಮೇಶ್ ಕೆ (31), ರಮ್ಯಾ (30) ಮತ್ತು ಹನುಮೇಶ್ (29) ಎಂಬ ನಾಲ್ವರು ನಾಗೇಂದ್ರ ಅವರ ಮೇಲೆ ಹಲ್ಲೆಗೆ ಯತ್ನಿಸಿದರು. ಈ ವೇಳೆ ನಾಗೇಂದ್ರ ಅವರ ಭದ್ರತಾಪಡೆಗಳು ರಮ್ಮಾ ಹಾಗೂ ವೆಂಕಟೇಶ್ ಅವರನ್ನು ಹಿಡಿದು, ಥಳಿಸಿ ಪೊಲೀಸರ ವಶಕ್ಕೆ ನೀಡಿದ್ದರು. ಆದರೆ, ಇನ್ನಿಬ್ಬರು ರಮೇಶ್ ಹಾಗೂ ಹನುಮೇಶ್ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಇದೀಗ ಇಬ್ಬರೂ ತಲೆಮರೆಸಿಕೊಂಡಿದ್ದು, ಇಬ್ಬರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಬಳ್ಳಾರಿಯ ದೇವಿನಗರದ ವಿಷ್ಣು ವೆಂಕಟೇಶ & ಬಸನವಕುಂಟೆ ಪ್ರದೇಶದ ರಮೇಶ ಬಿಜೆಪಿ ಕಾರ್ಯಕರ್ತರು. ಬಳ್ಳಾರಿ ನಗರ ಶಾಸಕರಾಗಿದ್ದ ಜಿ ಸೋಮಶೇಖರೆಡ್ಡಿ ಬೆಂಬಲಿಗನಾದ ರಮೇಶ. ಮಾಜಿ ಶಾಸಕ ಸುರೇಶಬಾಬು ಬೆಂಬಲಿಗನಾದ ವಿಷ್ಣು ವೆಂಕಟೇಶ ಇಬ್ಬರು ಬಿಜೆಪಿಯ ಸೋಲಿನಿಂದ ಹತಾಶರಾಗಿ ಶಾಸಕ ನಾಗೇಂದ್ರಗೆ ಬೆದರಿಕೆಯೊಡ್ಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ತಲೆಮರೆಸಿಕೊಂಡಿರುವ ಇಬ್ಬರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದರು