ಚಿಂತಾಮಣಿ: ಇಂದಿನ ಯುವ ಸಮುದಾಯವು ಹಿಂದಿನ ಕಾಲದ ಪಾರಂಪಾರಿಕ ಆಹಾರ ಪದ್ಧತಿಯ ಕಡೆಗೆ ಮರಳದಿದ್ದಲ್ಲಿ ಅಪಾಯವು ಕಟ್ಟಿಟ್ಟ ಬುತ್ತಿ ಎಂದು ಕುರಬೂರು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಹಾಗೂ ಹಿರಿಯ ವಿಜ್ಞಾನಿಗಳಾದ ಡಾ.ಪಾಪಿರೆಡ್ಡಿ ಅವರು ಅಭಿಪ್ರಾಯಪಟ್ಟಿದ್ದಾರೆ.
ನಗರದ ಎನ್ ಕೆ ಕಾಲೇಜಿನಲ್ಲಿ ಚಿಂತನಾ ಫೌಂಡೇಷನ್ ಹಾಗೂ ಜನಪರ ಫೌಂಡೇಷನ್ ನ ಯುವಯಾನ ಬಳಗದ ವತಿಯಿಂದ ಸಿರಿಧಾನ್ಯ ವರ್ಷ – 2023 ರ ಅಂಗವಾಗಿ ಸಿರಿಧಾನ್ಯ ಆಹಾರ ಜಾಗೃತಿ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ಸಿರಿಧಾನ್ಯಗಳು ಹಾಗೂ ಸೊಪ್ಪು, ತರಕಾರಿಗಳನ್ನು ಯಥೇಚ್ಛವಾಗಿ ಸೇವನೆ ಮಾಡುತ್ತಿದ್ದರು. ಈ ಆಹಾರದಲ್ಲಿ ಮನುಷ್ಯರ ಬೆಳವಣಿಗೆಗೆ ಪೂರಕದ ಎಲ್ಲ ಪೋಷಕಾಂಶಗಳು ಸಿಗುತ್ತಿದ್ದವು ಎಂದು ಹೇಳಿದರು.
ಇದನ್ನು ಓದಿ: ಜನ ಪರ್ಯಾಯ ಬಜೆಟ್ ಅಧಿವೇಶನ: ಜನಪರವಾದ ಹಲವು ನಿರ್ಣಯಗಳು ಅಂಗೀಕಾರ
ಹಿಂದಿನ ಕಾಲದಲ್ಲಿ ಬಹಳಷ್ಟು ಶಕ್ತಿಯುತವಾಗಿ ಜೀವಿಸುತ್ತಿದ್ದರು. ಮಧುಮೇಹ, ರಕ್ತದೊತ್ತಡ, ಅಪೌಷ್ಠಿಕತೆ, ಹೃದಯಾಘಾತ ಇಂತಹ ರೋಗಗಳು ಕಡಿಮೆಯಿದ್ದವು. ಆದರೆ, ಪ್ರಸ್ತುತ ಸಂದರ್ಭದಲ್ಲಿ 25 ವರ್ಷದ ಯುವಕರೇ ಹೃದಯಾಘಾತದಿಂದ ಸಾಯುತ್ತಿದ್ದಾರೆ. ಅನೇಕರು ಬೇರೆ ಬೇರೆ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇದೆಲ್ಲದಕ್ಕೂ ಮೂಲ ನಮ್ಮ ಆಹಾರ ಪದ್ಧತಿ ಕಾರಣವಾಗಿದೆ ಎಂಬುದು ಸಂಶೋಧನೆಗಳಿಂದ ತಿಳಿದುಬಂದಿದೆ. ಹೀಗಾಗಿ, ಯುವಜನರು ಮೊದಲಿಗೆ ತಮ್ಮ ಆಹಾರ ಪದ್ಧತಿಯನ್ನು ಬದಲಾಯಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಸಿರಿಧಾನ್ಯಗಳು ಈಗ ಏಕಾಏಕಿ ಹುಟ್ಟಿಕೊಂಡಿರುವ ಧಾನ್ಯಗಳು ಅಲ್ಲ. ಸಾವಿರಾರು ವರ್ಷಗಳ ಹಿಂದೆಯೇ ಸಿರಿಧಾನ್ಯಗಳನ್ನು ಬೆಳೆಸಿ, ಆಹಾರವಾಗಿ ಬಳಕೆ ಮಾಡಿದ್ದಾರೆ. ಇವೆಲ್ಲವೂ ಬಡವರ ಧಾನ್ಯಗಳಾಗಿದ್ದವು ಎಂದ ಅವರು, ಈಗಲೂ ಸಹ ಹಳ್ಳಿಗಳಲ್ಲಿ ಹಿರಿಯರನ್ನು ಕೇಳಿದರೆ ಸಿರಿಧಾನ್ಯಗಳ ಬಗ್ಗೆ ಹೇಳುತ್ತಾರೆ. ಆದರೆ, ಅವು ಕಾಲಕ್ರಮೇಣವಾಗಿ ಮರೆಗೆ ಸರಿದಿದೆ. ಅದನ್ನು ಸಿರಿಧಾನ್ಯ ವರ್ಷದ ಅಂಗವಾಗಿ ಆದರೂ, ಮುನ್ನೆಲೆಗೆ ತರಬೇಕಿದೆ ಎಂದು ನುಡಿದರು.
ಇದನ್ನು ಓದಿ: ಶ್ರೀಲಂಕಾದ ಆಹಾರ ಬಿಕ್ಕಟ್ಟು, ಆರ್ಥಿಕ ತುರ್ತು ಪರಿಸ್ಥಿತಿ ಮತ್ತು ‘ಪೂರ್ಣ ಸಾವಯವ ಕೃಷಿ’ಯ ‘ಪರಿಸರ-ಉಗ್ರವಾದ’
ನಮ್ಮ ಹಿರಿಯರು ಭತ್ತವನ್ನು ಕುಟ್ಟಿ ಅಕ್ಕಿ ಮಾಡಿ ಅದರ ಅನ್ನವನ್ನು ತಿನ್ನುತ್ತಿದ್ದರು. ಆದರೆ, ಈಗ ಎಲ್ಲವೂ ಪಾಲೀಶ್ ಅಕ್ಕಿಯನ್ನು ಸೇವಿಸುತ್ತಿದ್ದೇವೆ. ಹೀಗೆ ಆದರೆ, ಮನುಷ್ಯರ ಆಯುಷ್ಯ ಸಹ ಕಡಿಮೆಯಾಗುತ್ತದೆ. ನಾವು ಆರೋಗ್ಯಕರವಾಗಿ ಇರಬೇಕು ಅಂದರೆ, ನಾವು ತಿನ್ನುವ ಆಹಾರವು ಬದಲಾಗಬೇಕು. ಆಗ ನಾವುಗಳು, ಆಸ್ಪತ್ರೆಗಳ ಹಿಂದೆ ಸುತ್ತಾಡುವುದು ತಪ್ಪಲಿದೆ ಎಂದ ಅವರು, ಬಲಿಷ್ಠ ಹಾಗೂ ಸದೃಢ ಆರೋಗ್ಯಕ್ಕಾಗಿ ಸಿರಿಧಾನ್ಯ ಆಹಾರ ಉಪಯುಕ್ತಕಾರಿ ಎಂದರು.
ಕೃಷಿ ವಿಜ್ಞಾನ ಕೇಂದ್ರದ ಗೃಹ ವಿಜ್ಞಾನಿ ಅಕ್ಷತಾ ಅವರು ಮಾತನಾಡಿ, ನಮ್ಮ ಆಧುನಿಕ ಜೀವನ ಶೈಲಿಯ ಪರಿಣಾಮದಿಂದಾಗಿ ಜನರು ಹಲವಾರು ತರಹದ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇನ್ನೊಂದು ಕಡೆ ಸರಿಯಾದ ದೈಹಿಕ ಶ್ರಮವಿಲ್ಲದ ಕಾರಣವೂ ಆರೋಗ್ಯ ಹದಗೆಡಲು ಒಂದು ಕಾರಣವಾಗಿದೆ ಎಂದು ಹೇಳಿದರು.
ಇದನ್ನು ಓದಿ: ಸಮಾಜದ ಪುರುಷ ಪ್ರಾಧಾನ್ಯತೆಯ ತಣ್ಣಗಿನ ಕ್ರೌರ್ಯವನ್ನು ರಾಚುವ “ದಿ ಗ್ರೇಟ್ ಇಂಡಿಯನ್ ಕಿಚನ್”
ನಮ್ಮ ಹಿರಿಯರು 80 ವರ್ಷ ವಯಸ್ಸಾದರೂ ಸಹ ಇಂದಿಗೂ ಯುವ ಚೈತನ್ಯದೊಂದಿಗೆ ದುಡಿಯುತ್ತಾರೆ. ಅಂದರೆ, ಆಗ ಅವರು ಸೇವಿಸಿದ ಆಹಾರ ಪದ್ಧತಿಯು ಇದಕ್ಕೆ ಪ್ರಮುಖ ಕಾರಣವಾಗಿದೆ. ಆದರೆ, ಇಂದಿನ ಯುವ ಸಮೂಹ ಜಂಕ್ ಫುಡ್, ಬೇಕರಿ ಆಹಾರ ಪದಾರ್ಥಗಳಿಗೆ ಅಡಿಟ್ ಆಗುತ್ತಿದ್ದಾರೆ. ಇದರಿಂದ ಅನಾರೋಗ್ಯವು ತಲೆದೂರಲು ಒಂದು ಪ್ರಮುಖ ಕಾರಣವಾಗಿದೆ ಎಂದು ಹೇಳಿದರು.
ಕಾಲಕ್ಕೆ ತಕ್ಕಂತೆ ಮಾರುಕಟ್ಟೆಯು ಸುಧಾರಣೆಗೊಂಡಿದೆ. ಅನೇಕ ಕಡೆಗಳಲ್ಲಿ ಸಿರಿಧಾನ್ಯಗಳಿಂದ ಮಾಡಿದ ಉತ್ಪನ್ನಗಳು ಸಿಗುತ್ತವೆ. ಅದನ್ನು ಎಲ್ಲರೂ ಬಳಕೆ ಮಾಡುವಂತಾಗಬೇಕು. ಯಾವುದೇ ರಾಸಾಯನಿಕಗಳನ್ನು ಬಳಕೆ ಮಾಡದೆಯೂ ಬೆಳೆ ಬರುವಂತಹ ಸಿರಿಧಾನ್ಯಗಳನ್ನು ನಾವೆಲ್ಲರೂ ಬಳಸುವಂತಾಗಬೇಕು ಎಂದು ಸಲಹೆ ನೀಡಿದರು.
ಜನಪರ ಫೌಂಡೇಷನ್ ನ ಶಶಿರಾಜ್ ಹರತಲೆ ಅವರು ಮಾತನಾಡಿ, ವಿಶ್ವ ಸಂಸ್ಥೆಯು 2023 ಅನ್ನು ಸಿರಿಧಾನ್ಯ ವರ್ಷ ಎಂದು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಯುವಜನರಲ್ಲಿ ಸಿರಿಧಾನ್ಯ ಆಹಾರದ ಕುರಿತು ಹಾಗೂ ಸಿರಿಧಾನ್ಯಗಳ ಮಹತ್ವದ ಕುರಿತು ಜಾಗೃತಿ ಮೂಡಿಸಲು ಅಭಿಯಾನ ಕೈಗೊಳ್ಳಲಾಗಿದೆ. ಇದು ಚಿಂತಾಮಣಿ ಸೇರಿದಂತೆ ಜಿಲ್ಲೆಯಾದ್ಯಂತ ಬೇರೆ ಬೇರೆ ಕಡೆಗಳಲ್ಲಿ ನಡೆಯಲಿದೆ ಎಂದರು.
ಇದನ್ನು ಓದಿ: ಹೆಚ್ಚುತ್ತಿರುವ ಹಸಿವು ಮತ್ತು ಬೆಳೆಯುತ್ತಿರುವ ಬಡತನ
ಇಂದಿನ ನಮ್ಮ ಆಹಾರ ಪದ್ಧತಿಯಲ್ಲಿ ಮನುಷ್ಯರ ದೇಹಕ್ಕೆ ಪೋಷಕಾಂಶ ನೀಡುವ ಯಾವುದೇ ಆಹಾರ ಸೇರುತ್ತಿಲ್ಲ. ಅಕ್ಕಿಯನ್ನು ಬೆಳೆದು, ಅದನ್ನು ಪಾಲೀಶ್ ಮಾಡುತ್ತೇವೆ. ಮನುಷ್ಯರು ತಿನ್ನಬೇಕಾದದ್ದನ್ನು ದನ-ಕರುಗಳಿಗೆ ನೀಡುತ್ತಿದ್ದೇವೆ. ಅಲ್ಲದೆ, ದಿನಕ್ಕೊಂದು ಬಣ್ಣ ಬಣ್ಣದ ಆಹಾರ ಪದ್ಧತಿಗೆ ಜೋತು ಬಿದ್ದಿದ್ದೇವೆ. ಹೀಗಾಗಿ, ನಮ್ಮ ಪೂರ್ವ ಕಾಲದ ಆಹಾರ ಪದ್ಧತಿಗೆ ಮರಳಬೇಕಿದೆ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಎನ್ ಕೆ ಕಾಲೇಜಿನ ಪ್ರಾಂಶುಪಾಲರಾದ ಮುನಿರಾಜು, ಜನಪರ ಫೌಂಡೇಷನ್ ನ ಬಾಬುರೆಡ್ಡಿ, ಬೇರು ಬೆವರು ಕಲಾ ಬಳಗದ ಸೋರಪ್ಪಲ್ಲಿ ಚಂದ್ರಶೇಖರ್, ನಾರಾಮಾಕಲಹಳ್ಳಿ ಚಲಪತಿ, ಯುವಯಾನ ಬಳಗದ ಯೂತ್ ಲೀಡರ್ಸ್ ಆದ ಮುಸ್ಕಾನ್, ಮದಿಹಾ, ಮನೋಹರ, ತಸ್ಲಿಮಾ, ಸರ್ವಮಂಗಳ, ನಂದಿನಿ, ಅಕ್ಷಯ್, ನಾನಿ, ಕೀರ್ತಿ, ಅಕ್ಷತಾ, ಅಕ್ಷಯ, ಅನುಪ್ರಿಯ, ತ್ರಿಷಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ