ಬೆಂಗಳೂರು : ಸತ್ಯನಾರಾಯಣರವರ ನಿಧನದಿಂದಾಗಿ ತೆರುವಾಗಿರುವ ಶಿರಾ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆ ನವೆಂಬರ್ 3 ರಂದು ನಡೆಯಲಿದೆ. ಈ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಶುಕ್ರವಾರ ಕೊನೆಯ ದಿನವಾದ ಹಿನ್ನೆಲೆ ಈ ಕ್ಷೇತ್ರಕ್ಕೆ ಕ್ರಾಂಗ್ರೆಸ್, ಬಿಜೆಪಿ, ಜೆಡಿಎಸ್, ಸಿಪಿಐ ಪಕ್ಷದಿಂದ ನಾಮಪತ್ರ ಸಲ್ಲಿಕೆ ಹಂತ ಪೂರ್ಣಗೊಂಡಿದೆ.
ಕ್ರಾಂಗ್ರೆಸ್ ಅಭ್ಯರ್ಥಿಯಾದ ಟಿ.ಬಿ.ಜಯಚಂದ್ರ ಗುರುವಾರ ಚುನಾವಣಾಧಿಕಾರಿ ಡಾ.ನಂದಿನಿದೇವಿ ಅವರಿಗೆ ಎರಡನೇ ಬಾರಿ ಉಮೇದಾರಿಕೆ ಸಲ್ಲಿಸಿದ್ದಾರೆ. ಆಡಳಿತಾರೂಢ ಬಿಜೆಪಿಯ ಅಭ್ಯರ್ಥಿಯಾಗಿ ರಾಜೇಶ್ ಗೌಡ ನಾಮಪತ್ರ ಸಲ್ಲಿಸಿದ್ದಾರೆ.
ಜೆಡಿಎಸ್ ನಿಂದ ಅಮ್ಮಾಜಮ್ಮಗೆ ಟಿಕೆಟ್ ಘೋಷಣೆಯಾಗಿದ್ದು, ಅವರೇ ಪಕ್ಷದ ಅಭ್ಯರ್ಥಿ ಎಂದು ಈಗಾಗಲೇ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಘೋಷಣೆ ಮಾಡಿದ್ದರು. ಅಮ್ಮಾಜಮ್ಮಗೆ ಕೋರೊನಾ ಸೋಂಕು ದೃಢಪಟ್ಟಿದ್ದು, ಇವರ ಪರವಾಗಿ ಎಚ್.ಡಿ ರೇವಣ್ಣ ನಾಮಪತ್ರ ಸಲ್ಲಿಸಿದ್ದಾರೆ. ಇನ್ನು ಸಿಪಿಐ ಪಕ್ಷದ ಅಭ್ಯರ್ಥಿಯಾಗಿ ಗಿರೀಶ್ ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಹಿಂಪಡೆಯಲು ಅ.19ಕೊನೆಯ ದಿನವಾಗಿದ್ದು, ನವೆಂಬರ್ 3 ರಂದು ಮತದಾನ ನಡೆಯಲಿದೆ. ನ. 10ಕ್ಕೆ ಎಣಿಕೆ ಕಾರ್ಯ ನಡೆಯಲಿದ್ದು ಆ ದಿನವೇ ಫಲಿತಾಂಶ ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.