ಕಾನೂನು ವಿರೋಧಿ ಕೃತ್ಯಗಳನ್ನು ತಡೆಯಲು ಪ್ರಾಮಾಣಿಕ ಪ್ರಯತ್ನ:ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಸರಣಿ ಹತ್ಯೆಗಳು ನಡೆಯುತ್ತಿವೆ ಎಂದು ಆರೋಪಿಸಿರುವ ಬಿಜೆಪಿ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಕಿಡಿಕಾರಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದ ಪೊಲೀಸ್‌ ಇಲಾಖೆ ಸಮರ್ಥವಾಗಿದೆ. ಕಾನೂನು ವಿರೋಧಿ ಕೃತ್ಯಗಳು ನಡೆಯದಂತೆ ತಡೆಯಲು ನಾವು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇವೆ ಎಂದಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿಗಳ ಕಚೇರಿಯಿಂದ ಟ್ವೀಟ್‌ ಮಾಡಿದ್ದು, ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ದುಡ್ಡಿನ ವ್ಯವಹಾರದ ಕಾರಣಕ್ಕಾಗಿ ನಡೆದಿದೆ ಎನ್ನಲಾದ ಜೈನಮುನಿ ಕಾಮಕುಮಾರ ನಂದಿ ಮಹರಾಜರ ಹತ್ಯೆಯ ಆರೋಪಿಗಳನ್ನು ಕೊಲೆ ನಡೆದ 6 ಗಂಟೆಗಳ ಒಳಗೆ ಬಂಧಿಸಲಾಗಿದೆ. ವೈಯಕ್ತಿಕ ದ್ವೇಷದ ಕಾರಣಕ್ಕಾಗಿ ಟಿ. ನರಸೀಪುರದ ವೇಣುಗೋಪಾಲ್ ಅವರನ್ನು ಹತ್ಯೆಗೈದ ಆರೋಪಿಗಳನ್ನು ಕೊಲೆ ನಡೆದ 24 ಗಂಟೆಯೊಳಗೆ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ನಾವೆಲ್ಲರೂ ಮನುಷ್ಯರು ಪರಸ್ಪರ ಪ್ರೀತಿಯಿಂದ ಇರಬೇಕು: ಸಿಎಂ

ಬೆಂಗಳೂರಿನ ಏರೋನಿಕ್ಸ್ ಸಂಸ್ಥೆಯ ಎಂಡಿ ಹಾಗೂ ಸಿಇಒ ಹತ್ಯೆಯ ಆರೋಪಿಗಳನ್ನು ಕೊಲೆ ನಡೆದ 24 ಗಂಟೆಗಳೊಳಗೆ ಬಂಧಿಸಲಾಗಿದೆ ಎಂದಿರುವ ಸಿದ್ದರಾಮಯ್ಯ, ಪ್ರಕರಣವನ್ನು ಕೂಲಂಕುಷವಾಗಿ ತನಿಖೆ ನಡೆಸಿ, ಅಪರಾಧಿಗಳಿಗೆ ಗರಿಷ್ಠ ಶಿಕ್ಷೆಯಾಗುವಂತೆ ಕ್ರಮವಹಿಸಲು ರಾಜ್ಯದ ಪೊಲೀಸ್ ಇಲಾಖೆ ಸಮರ್ಥವಾಗಿದೆ. ಈ ಬಗ್ಗೆ ಯಾವ ಸಂದೇಹವೂ ಬೇಡ ಎಂದು ಟ್ವೀಟ್‌ನಲ್ಲಿ ಹೇಳಲಾಗಿದೆ.

ಹತ್ಯೆ, ಅಪಹರಣ ಮುಂತಾದ ಅಪರಾಧ ಕೃತ್ಯಗಳು ದುರದೃಷ್ಟಕರ. ಆದರೆ, ಒಂದು ಸರ್ಕಾರವಾಗಿ ಇಂಥ ಕಾನೂನು ವಿರೋಧಿ ಕೃತ್ಯಗಳು ನಡೆಯದಂತೆ ತಡೆಯಲು ನಾವು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇವೆ. ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ನೆಲೆಗೊಳಿಸುವುದು ನಮ್ಮ ಮೊದಲ ಆದ್ಯತೆ. ಇದಕ್ಕಾಗಿ ಕಾನೂನಿನ ಕೈಗಳಿಗೆ ಇನ್ನಷ್ಟು ಬಲ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *