ಆನ್ಲೈನ್ ಮೂಲಕ ಉದ್ಘಾಟನೆಗೊಂಡ ಚಿತ್ರಸಂತೆ
ಬೆಂಗಳೂರು, ಜ.4 : ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಚಿತ್ರಕಲಾಪರಿಷತ್ತು ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದ್ದು, ಈ ಸಂದರ್ಭದಲ್ಲಿ ಅವರನ್ನು ನೆನಪು ಮಾಡಿಕೊಳ್ಳದಿದ್ದರೆ ಅದು ಪಾಪದ ಕೆಲಸವಾಗುತ್ತದೆ ಎಂದು ಬಿಜೆಪಿ ಮುಖಂಡ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನುಡಿದರು.
ರವಿವಾರ ನಗರದ ಚಿತ್ರಕಲಾ ಪರಿಷತ್ತು ಆವರಣದಲ್ಲಿ ಆನ್‍ಲೈನ್ ಚಿತ್ರಸಂತೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಚಿತ್ರಕಲಾಪರಿಷತ್ತು ಅಭಿವೃದ್ಧಿಗೆ 2 ಕೋಟಿ ರೂ. ನೀಡಿದರು. ಈ ಹಣದಿಂದ ಹಲವು ಪ್ರಗತಿ ಕಾರ್ಯಕಗಳು ಪರಿಷತ್ತಿನಲ್ಲಿ ಜರುಗಿದವು ಎಂದರು.
ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಈಗ ಚಿತ್ರಕಲಾಪರಿಷತ್ತು ಇರುವ ಜಾಗವನ್ನು ಸರಕಾರಿ ವಾಹನ ಚಾಲಕರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಮುಂದಾಗಿದ್ದರು. ನಂತರ, ಏನಾದರೂ ನೆನಪಿನಲ್ಲಿ ಉಳಿಯುವಂತಹ ಕಾರ್ಯ ಆಗಬೇಕು ಎಂಬ ಉದ್ದೇಶದಿಂದ ಪರಿಷತ್ತು ನಿರ್ಮಾಣ ಮಾಡಲಾಯಿತು ಎಂದು ಅವರು ನೆನಪು ಮಾಡಿಕೊಂಡರು.
ವಿಶೇಷತೆಯಿಂದ ಕೂಡಿದೆ ಆನ್ಲೈನ್ ಚಿತ್ರಸಂತೆ: ‘ಕೊರೊನಾ ಹಿನ್ನೆಲೆಯಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ 18ನೇ ಚಿತ್ರಸಂತೆಯನ್ನು ಆನ್‌ಲೈನ್ ಮೂಲಕ ನಡೆಸುತ್ತಿದೆ, ಇದು ಹಲವು ವಿಶೇಷಗಳಿಂದ ಕೂಡಿದೆ. ಅಲ್ಲದೆ ಚಿತ್ರಕಲಾ ಪರಿಷತ್ತು 60 ವರ್ಷಗಳನ್ನು ಪೂರೈಸಿದ್ದು, ವಜ್ರಮಹೋತ್ಸವದ ವರ್ಷಾಚರಣೆ ಅಂಗವಾಗಿ ನಾನಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಈವರೆಗೆ 1,223 ಕಲಾವಿದರಿಂದ ಅರ್ಜಿಗಳು ಬಂದಿವೆ. ಕಳೆದ ಚಿತ್ರಸಂತೆಯಲ್ಲಿ ಭಾಗವಹಿಸಲು ಅವಕಾಶ ಸಿಗದ 513 ಮಂದಿ ಕಲಾವಿದರಿದ್ದಾರೆ. ಈ ಪೈಕಿ ಒಂದು ಸಾವಿರಕ್ಕೂ ಹೆಚ್ಚು ಕಲಾವಿದರಿಗೆ ಅವಕಾಶ ನೀಡಲಾಗುವುದು,” ಎಂದು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಡಾ. ಬಿ.ಎಲ್.ಶಂಕರ್ ತಿಳಿಸಿದ್ದಾರೆ.
ಚಿತ್ರಕಲಾ ಪರಿಷತ್ ನ ಯೂಟ್ಯೂಬ್, ಫೇಸ್ಬುಕ್ ಪೇಜ್, ಇನ್ಸ್ಟಾಗ್ರಾಂ ಮೂಲಕ ಕಾರ್ಯಕ್ರಮವನ್ನು ವೀಕ್ಷಿಸಬಹುದಾಗಿದೆ.